ಬ್ರೆಕ್ಸಿಟ್: ಆರ್ಥಿಕ ತಲ್ಲಣ ಹಾಗಿರಲಿ, ಕುಟುಂಬಗಳನ್ನೇ ಒಡೆಯುತ್ತಿರುವ ಕಂಪನಗಳೇನಿವೆ ಗೊತ್ತಾ?

authors-rangaswamyಬ್ರಿಕ್ಸಿಟ್ ಈಗಾಗಲೇ ಹಳಸಲು ಪದ. ಅದೆಷ್ಟು ಸಲ ಈ ಪದ ಬಳಕೆಯಾಗಿರಬಹುದು? ಎನ್ನುವುದು ಯಾರಾದರೂ ನಿಖರ ಲೆಕ್ಕ ಕೊಟ್ಟರೆ ಅದು ಬಿಲಿಯನ್ ನಲ್ಲಿ ಇರುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ. ಇರಲಿ ಬ್ರಿಟನ್ ಯೂರೋಪಿನ ಒಕ್ಕೂಟದಿಂದ ಹೊರ ಹೋಗಬೇಕು ಎನ್ನುವ ಜನಾದೇಶ ಬಂದಿರುವುದು ಕೂಡ ವಾರದ ಹಳೆಯ ನ್ಯೂಸ್! ಮತ್ತೇನು ಹೊಸತು ಎಂದಿರಾ…?  ಬನ್ನಿ ಬ್ರಿಕ್ಸಿಟ್ ಜನಾದೇಶದ ನಂತರ ಒಂದು ವಾರ ಹೇಗೆ ಕಳೆದಿದೆ, ಯೂರೋಪಿನ ಇತರ ದೇಶದಲ್ಲಿ ವಾಸಿಸುತ್ತಿರುವ ಬ್ರಿಟಿಷರ ಬದುಕು, ಬ್ರಿಟನ್ ನಲ್ಲೇ ವಾಸಿಸುತ್ತಿರುವ ಬ್ರಿಟಿಷರ ಬದುಕು ಎತ್ತ ಸಾಗಿದೆ, ಏನೆಲ್ಲಾ ಬದಲಾವಣೆ ಆಗಿದೆ ನೋಡೋಣ.

  • ಎಲ್ಲರೂ ತಿಳಿದಿರುವಂತೆ ಜನಾದೇಶ ಯೂರೋಪಿನ ಒಕ್ಕೂಟದಿಂದ ಹೊರಹೋಗಬೇಕೆನ್ನುವುದು ನಿಜ. ಆದರೆ ಅದನ್ನ ಬ್ರುಸ್ಸೆಲ್ಸ್ ಗೆ ಅಧಿಕೃತವಾಗಿ ತಿಳಿಸಬೇಕಾಗಿದೆ. 2009 ರಲ್ಲಿ ಜಾರಿಗೆ ಬಂದ ಪರಿಚ್ಚೇದ 50 (ಆರ್ಟಿಕಲ್ 5೦) ನ್ನು ಲಾಗೂ ಮಾಡಬೇಕು. ಆ ಮೂಲಕ  ‘ನಾವು ಒಕ್ಕೂಟದಿಂದ ಹೊರ ಹೋಗುತ್ತಿದ್ದೇವೆ’ ಎಂದು ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ. ಇಲ್ಲಿಯ ತನಕ ಪರಿಚ್ಚೇದ 50 ಪ್ರಚೋದಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಹಾಗೊಮ್ಮೆ ಪರಿಚ್ಚೇದ 5೦ ಜಾರಿಗೆ ತಂದಲ್ಲಿ ಬ್ರಿಟನ್ ಮತ್ತು ಒಕ್ಕೂಟದ ಬಳಿ ಎರಡು ವರ್ಷಗಳ ಕಾಲಾವಧಿ ಇರುತ್ತದೆ ಎಲ್ಲಾ ವ್ಯವಹಾರಗಳಲ್ಲಿ ಹೊಸ ಭಾಷ್ಯ ಬರೆಯಲು. 1೦ ರಿಂದ 12 ಪ್ರತಿಶತ ಕುಸಿತ ಕಂಡಿರುವ ಪೌಂಡ್, ಪರಿಚ್ಚೇದ 50 ಅನುಮೋದನೆ ಗೊಂಡರೆ ಇನ್ನು 10 ಪ್ರತಿಶತ ಕುಸಿತ ಕಾಣುವ ಎಲ್ಲಾ ಲಕ್ಷಣಗಳು ಇವೆ.
  • ಬ್ರಿಟನ್ ಎಂದಿನಿಂದಲೂ ಜನಾಂಗೀಯ ದ್ವೇಷ (ರೇಸಿಸಂ) ಕ್ಕೆ ಪ್ರಸಿದ್ದಿ ಪಡೆದಿದೆ. ಸೌತ್ ಏಷ್ಯಾ, ಆಫ್ರಿಕನ್ನರನ್ನು ಅವರು ನೋಡುವ ದೃಷ್ಟಿ, ಮಾಡುವ ಬೇಧ ಅಲ್ಲಿಗೆ ಪ್ರವಾಸಕ್ಕೆ ಎಂದು ಹೋದ ಜನರ ಅರಿವಿಗೂ ಬಂದಿರುತ್ತೆ . ಹೊಸತೇನು ಅಂದರೆ  ಏಷ್ಯನ್ನರು, ಆಫ್ರಿಕನ್ನರ  ಜೊತೆಗೆ  ಪೋಲ್ಯಾಂಡ್ ದೇಶದಿಂದ ಬ್ರಿಟನ್ ದೇಶಕ್ಕೆ ವಲಸೆ ಹೋದವರ ಸಂಖ್ಯೆ ಬಹಳ ಹೆಚ್ಚು. ಹೀಗಾಗಿ ಪೋಲಿಷ್ ಜನರನ್ನ ಕಂಡರೆ ಬ್ರಿಟಿಷರಿಗೆ ಒಂಥರಾ ಅಸಹ್ಯ, ಅಸಡ್ಡೆ, ಸಿಟ್ಟು. ಇತರ ಯೂರೋಪಿಯನ್ ದೇಶದ ವಲಸಿಗರಿಗಿಂತ ಪೋಲಿಷ್ ಜನ ಹೆಚ್ಚು ಜನಾಂಗೀಯ ದ್ವೇಷಕ್ಕೆ ಇಲ್ಲಿ ತುತ್ತಾಗಿದ್ದಾರೆ. ಜೂನ್ 23 ರ ಜನಾದೇಶದ ನಂತರ ಜನಾಂಗೀಯ ದ್ವೇಷಕ್ಕೆ ಸಂಬಂಧ ಪಟ್ಟ ಅಪರಾಧ 57 ಪ್ರತಿಶತ ಹೆಚ್ಚಿದೆ ಎನ್ನುವ ಆಘಾತಕಾರಿ ವಿಷಯವನ್ನ ಬ್ರಿಟನ್ ದೇಶದ ‘ನ್ಯಾಷನಲ್ ಪೊಲೀಸ್ ಚೀಫ್ ಕೌನ್ಸಿಲ್’ ತನ್ನ ವರದಿಯಲ್ಲಿ ಬಿಡುಗಡೆ ಮಾಡಿದೆ. ಲಂಡನ್ ನಗರದ ಅಲ್ಲಲ್ಲಿ ಗೋಡೆಗಳ ಮೇಲೆ ‘ಗ್ರಾಫಿಟಿ’  ಹೇಳಿಕೆಗಳು ನಿಮ್ಮ ಸಮಯ ಮುಗಿಯಿತು ನಿಮ್ಮ ದೇಶಕ್ಕೆ ತೊಲಗಿ ಎಂದು ಪೋಲಿಷ್ ಜನರ ಕುರಿತು ಬರೆಯಲಾಗಿದೆ .
  • ಲಂಡನ್ ನಗರದ ಮೇಯರ್ ಸಾದಿಕ್ ಖಾನ್ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರನ್ನ ಇನ್ನಷ್ಟು ಕ್ಷಮತೆಯಿಂದ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ನಮ್ಮದು ಉನ್ನತ ನಗರ ಇಲ್ಲಿನ ಘನತೆ ಕುಂದದ ಹಾಗೆ ನಾವು ಬದುಕಬೇಕಿದೆ. ಒಟ್ಟಾಗಿ ಬಾಳಬೇಕಿದೆ. ಎನ್ನುವ ಹೇಳಿಕೆ ನೀಡಿದ್ದಾರೆ.
  • ಜೂನ್ 24, ಬ್ರಿಕ್ಸಿಟ್ ಜನಾದೇಶದ ಮರು ದಿನ facebook ನಲ್ಲಿ unfriend ಮಾಡುವರ ಸಂಖ್ಯೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ ಎಂದು ಫೇಸ್ಬುಕ್ ಹೇಳಿಕೆ ನೀಡಿದೆ. ಹಲವು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದವರು ಜನಾದೇಶದ ಪರ- ವಿರೋಧದ ಅಲೆಯಲ್ಲಿ ಬಿನ್ನಾಭಿಪ್ರಾಯ ಹೊಂದಿ ಅದರ ಬಿಸಿಯಲ್ಲಿ ತಮ್ಮ ನಿಲುವಿಗೆ ವಿರುದ್ಧ ಇದ್ದ ಸ್ನೇಹಿತರನ್ನು ಪಟ್ಟಿಯಿಂದ ಹೊರಹಾಕುವ ಕೆಲಸ ಬರದಿಂದ ಮಾಡುತ್ತಿದ್ದಾರೆ. ಭಾವನೆಯ ಅಬ್ಬರ ಸ್ನೇಹ ಸಂಬಂಧ ಮಂಕಾಗಿಸಿದೆ ಎನ್ನುವ ವರದಿ ಇಂಗ್ಲಿಷ್ ನ ಒಂದು ಹಳೆ ಗಾದೆ ನೆನಪಿಗೆ ತರುತ್ತದೆ ‘ಯುದ್ಧವನ್ನು ಹೇಗೋ ಕಷ್ಟದಿಂದ ಗೆಲ್ಲಬಹುದು, ಆದರೆ ಶಾಂತಿ ಹೇಗೆ ತರುವಿರಿ’ ಎನ್ನತ್ತದೆ ಆ ಗಾದೆ. ಬ್ರಿಕ್ಸಿಟ್ ಪರ ಇದ್ದವರು ತಮ್ಮ ನಿಲುವು ಗೆದ್ದಿತು ಎಂದು ಬೀಗುವ ಹಾಗಿಲ್ಲ. ಮನೆ ಮನೆಯಲ್ಲಿ ತಂದೆ, ತಾಯಿ, ಮಗ, ಅಕ್ಕ, ತಂಗಿ, ಅಳಿಯ, ಸೊಸೆ, ಸ್ನೇಹಿತರ ನಡುವೆ ಭಿನ್ನಾಭಿಪ್ರಾಯದ  ಫಲ ಬ್ರಿಟನ್ ದೇಶ ಒಡೆದ ಮನೆಯಾಗಿದೆ.
  • ಇಂಗ್ಲೆಂಡ್ ನ ಪ್ರಸಿದ್ಧ ಪತ್ರಿಕೆ ‘ದಿ ಡೈಲಿ ಟೆಲಿಗ್ರಾಫ್’ ನಲ್ಲಿ ಹತ್ತಾರು ಪ್ರಸಿದ್ಧ ವ್ಯಕ್ತಿಗಳು ತಮ್ಮ ಬದುಕು ಒಂದು ದಿನದಲ್ಲಿ ಹೇಗೆ ಬದಲಾಯಿತು ಎನ್ನುವ ಬಗ್ಗೆ ಮನಬಿಚ್ಚಿ ಹೇಳಿಕೆ ನೀಡಿದ್ದಾರೆ. ಜೆನ್ನಾ ಶಾರ್ಪ್ 33 ವರ್ಷದ ನಟಿ. ರೇಡಿಂಗ್ ಎನ್ನುವ ಜಾಗದಲ್ಲಿ ವಾಸಿಸುವ ಈಕೆ ಟೆಲಿಗ್ರಾಫ್ ಗೆ ಹೇಳಿಕೆ ನೀಡುತ್ತಾ  ‘ನಾನು ಬ್ರೆಕ್ಸಿಟ್ ಪರ ಮತ ಚಲಾಯಿಸಿದ್ದೆ, ಇದು ನನ್ನ ಆಪ್ತ ಸ್ನೇಹಿತರಿಗೆ ತಿಳಿದಿತ್ತು, ಫಲಿತಾಂಶದ ನಂತರ ಕರೆ ಮಾಡಿ ನೀನು ರೇಸಿಸ್ಟ್  ಎಂದನಾತ’ ಎಂದಿದ್ದಾಳೆ.
    ಎಮಿಲೀ ಟೊಂಬ್ಸ್ 28 ರ ಹರಯದ ದೇವೊನ್ ನಗರದಲ್ಲಿ ವಾಸಿಸುತ್ತಿರುವ ಲೇಖಕಿ. ಆಕೆ ಹೇಳುತ್ತಾಳೆ ‘ನನ್ನ ಹದಿಹರಯದ ದಿನಗಳಲ್ಲಿ ನನ್ನ ತಾಯಿಯೊಂದಿಗಿನ ಸಂಬಂಧ ಅಷ್ಟಕಷ್ಟೇ. ಆ ದಿನಗಳೇ ಹಾಗೆ, ಜರ್ನಲಿಸಂ ಮಾಡಲು ಯೂನಿವರ್ಸಿಟಿ ಸೇರಿದ ನಂತರ ನಮ್ಮ ಭಾಂದವ್ಯ ಅಮ್ಮ – ಮಗಳಿಗಿಂತ ಉತ್ತಮ ಸ್ನೇಹಿತರಂತೆ ಇತ್ತು. ನಾನು ಒಕ್ಕೂಟದಲ್ಲಿ ಇರಲು ಬಯಸಿದ್ದೆ. ಅಮ್ಮ ಹೊರಹೋಗಲು ಮತ ಚಲಾಯಿಸಿದಳು. ಫಲಿತಾಂಶದ ನಂತರ ಆಕೆಯೊಂದಿಗೆ ಮಾತನ್ನೇ ಆಡಿಲ್ಲ’  ಮುಂದುವರಿದು.. ‘ನನಗೆ ಗೊತ್ತು ನಾನು ಒಂಟಿಯಲ್ಲ ನನ್ನಂತೆ ಲಕ್ಷ ಲಕ್ಷ ಮಕ್ಕಳು ಇಂದು ಬ್ರಿಟನ್ ಪೂರಾ ಇದ್ದಾರೆ.’
  • ಮಾಹಿತಿ ಪ್ರಕಾರ 18 ರಿಂದ 24 ವರ್ಷದ ಯುವ ಜನತೆ ಯೂರೋಪಿನಲ್ಲಿ ಉಳಿಯಲು ಬಯಸಿದ್ದರು. ಈ ವಯೋಮಾನದವರಲ್ಲಿ 84 ಪ್ರತಿಶತ ಒಕ್ಕೂಟದಲ್ಲಿ ಇರಬೇಕೆಂದು ಮತ ಚಲಾಯಿಸಿದ್ದರು. ಖೇದದ ಸಂಗತಿಯೆಂದರೆ ಈ ವಯೋಮಾನದವರಲ್ಲಿ ಮತಚಲಾವಣೆಗೆ ಬಂದವರು ಪ್ರತಿಶತ 36! ಅಕಸ್ಮಾತ್ ಇವರಲ್ಲಿ ಮತದಾನದ ಸಂಖ್ಯೆ ಹೆಚ್ಚಾಗಿದ್ದರೆ ಒಕ್ಕೂಟದಲ್ಲಿ ಇರಬೇಕು ಎನ್ನುವ ಕೂಗಿಗೆ ಗೆಲುವು ಸಿಗುತಿತ್ತು ಎನ್ನುತ್ತದೆ ಅಂಕಿ ಅಂಶ.
  • ಮರು ಜನಾದೇಶ ಕೇಳಿ ಎನ್ನುವ ಕೂಗು ಕೂಡ ದಿನೇ ದಿನೇ ಹೆಚ್ಚು ಪ್ರಬಲವಾಗುತ್ತಿದೆ. ಇದನ್ನ ಒತ್ತಾಯಿಸಿ ಅಭಿಯಾನ ಶುರುವಾಗಿದೆ. ಇದನ್ನ ಸಮರ್ಥಿಸಿ ಲಕ್ಷಗಟ್ಟಲೆ ಸಹಿ ಆಗಲೇ ಸಂಗ್ರಹವಾಗಿದೆ.

ಇಷ್ಟೆಲ್ಲಾ ಆಗು ಹೋಗುಗಳ ನಡುವೆ ಭವಿಷ್ಯ ಕುರಿತು ಜನರ ಮನದಲ್ಲಿ ಮುಸುಕಿರುವ ಕಾರ್ಮೋಡ, ಬ್ರಿಟನ್ ನಗರವನ್ನ ವರ್ಷಪೂರ್ತಿ ಆವರಿಸಿರುವ ಮೋಡಗಳ ಅಣಕಿಸುವಂತೆ ಕಾಣುತ್ತಿದೆ.

1 COMMENT

Leave a Reply