ಕುರ್ಬಾನಿ ಅಂದ್ರೆ ಕುರಿ ಕಡಿಯೋದಲ್ಲ ಎಂಬ ಇರ್ಫಾನ್ ಖಾನ್ ಹೇಳಿಕೆಯಲ್ಲಿ ತಪ್ಪೇನಿದೆ?

ಡಿಜಿಟಲ್ ಕನ್ನಡ ಟೀಮ್:

ವಿಶ್ವದಾದ್ಯಂತ ಮುಸ್ಲಿಂ ಭಾಂದವರು ರಂಜಾನ್ ನ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್, ಜನರು ಇಸ್ಲಾಂ ಆಚರಣೆಗಳ ಮೂಲ ಹಿನ್ನಲೆ ಮರೆತಿರುವುದನ್ನು ಪ್ರಶ್ನಿಸಿರುವುದು ವಿವಾದ ಸೃಷ್ಟಿಸಿದೆ. ಇರ್ಫಾನ್ ಖಾನ್ ಅವರ ಈ ಹೇಳಿಕೆಯನ್ನು ಕೆಲವು ಮುಸ್ಲಿಂ ನಾಯಕರು ಪ್ರಶ್ನಿಸಿದ್ದಾರೆ.

ತಮ್ಮ ನೂತನ ಚಿತ್ರ ‘ಮದಾರಿ’ ಯ ಪ್ರಚಾರ ಸಂದರ್ಭದಲ್ಲಿ ಇರ್ಫಾನ್ ಖಾನ್ ಹೇಳಿದಿಷ್ಟು:

‘ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಉಪವಾಸ ಮಾಡುವ ಬದಲು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇನ್ನು ಮೊಹರಂನಂತಹ ಮರುಕ ಪಡುವ ಪದ್ಧತಿಯನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ. ಕುರ್ಬಾನಿ ಅಂದರೆ ತ್ಯಾಗ. ತ್ಯಾಗ ಎಂದರೆ ತಮ್ಮ ಮನಸಿಗೆ ಹತ್ತಿರವಾದ ಅಥವಾ ಭಾವನಾತ್ಮಕವಾಗಿ ಸಂಬಂಧ ಹೊಂದಿರುವುದನ್ನು ಬಿಡಬೇಕು. ಮಾರುಕಟ್ಟೆಯಿಂದ ಕುರಿ ಅಥವಾ ಮೇಕೆ ತಂದು ಕಡಿದರೆ ಅದು ತ್ಯಾಗವಾಗುವುದಿಲ್ಲ. ಅದನ್ನು ತ್ಯಾಗ ಮಾಡುವ ಮುನ್ನ ಅದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳು ಅದರ ಮೂಲ ಉದ್ದೇಶವನ್ನೇ ಕಳೆದುಕೊಳ್ಳುತ್ತಿವೆ. ಅಲ್ಲದೆ ಪದ್ಧತಿಯ ಮೂಲ ಅಂಶ ತಿಳಿಯದೇ ಆಚರಣೆ ಮಾಡುವುದು ಹೆಚ್ಚಾಗಿತ್ತಿದೆ.’

ಇರ್ಫಾನ್ ಖಾನ್ ಅವರ ಹೇಳಿಕೆಗೆ ಕೆಲವು ಮುಸ್ಲಿಂ ನಾಯಕರು ಟೀಕೆ ಮಾಡಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಜಫರ್ಯಾಬ್ ಗಿಲಾನಿ ಟೀಕಿಸಿರುವುದು ಹೀಗೆ: ‘ಇರ್ಫಾನ್ ಖಾನ್ ಧಾರ್ಮಿಕ ಮುಖಂಡ ಹಾಗೂ ಧಾರ್ಮಿಕ ಪಂಡಿತನಲ್ಲ. ಧಾರ್ಮಿಕವಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಅವರಿಂದ ಸಲಹೆ ನಮಗೆ ಬೇಕಿಲ್ಲ.’ ಇನ್ನು ಈ ಬಗ್ಗೆ ಜಮಾತ್ ಇ ಉಲೆಮಾ ಇ ಹಿಂದ್ ನ ಕಾರ್ಯದರ್ಶಿ ಮೌಲಾನಾ ಖತ್ರಿ ಹೇಳಿರುವುದು ಹೀಗೆ: ‘ಇರ್ಫಾನ್ ಖಾನ್ ತಮ್ಮ ವೃತ್ತಿಜೀವನದ ಬಗ್ಗೆ ಗಮನ ಹರಿಸಬೇಕು. ಈ ರೀತಿಯಾದ ಹೇಳಿಕೆಗಳು ಮಾಡಬಾರದು.’

ಇಲ್ಲಿ ಇರ್ಫಾನ್ ಖಾನ್ ಹೇಳಿರುವುದರಲ್ಲಿ ತಪ್ಪೇನಿದೆ? ತನ್ನ ಧರ್ಮದ ಆಚರಣೆಯ ಮೂಲ ಉದ್ದೇಶ ಮರೆತಿರುವುದನ್ನು ಪ್ರಶ್ನಿಸಲಾಗಿದೆಯೇ ಹೊರತು, ಆ ಆಚರಣೆಯೇ ತಪ್ಪು, ಅದನ್ನು ನಿಲ್ಲಿಸಬೇಕು ಎಂದು ಹೇಳಿಲ್ಲ. ಹಿಂದುಗಳಲ್ಲೂ ಕಾಶಿಗೆ ಹೋದರೆ ತಮಗೆ ಇಷ್ಟವಾದ ವಸ್ತುವನ್ನು ಬಿಟ್ಟುಬರಬೇಕು ಎಂಬ ಒಂದು ವಾಡಿಕೆ ಇದೆ. ಹೀಗೆ ಪ್ರತಿ ಧರ್ಮದಲ್ಲೂ ಒಂದೊಂದು ಆಚರಣೆ ಒಂದೊಂದು ಹಿನ್ನೆಲೆ ಹೊಂದಿರುತ್ತದೆ. ಆ ಹಿನ್ನೆಲೆ ಮರೆಯದೇ ಆಚರಣೆ ಅನುಸರಿಸಿದರೆ ಅರ್ಥಪೂರ್ಣವಾಗಿರುತ್ತದೆ. ಹೀಗಾಗಿ ಮೂಲ ಉದ್ದೇಶ ಮರೆತಿರುವುದನ್ನು ಇರ್ಫಾನ್ ಪ್ರಶ್ನಿಸಿರುವುದರಲ್ಲಿ ಕೆಲವು ನಾಯಕರಿಗೆ ತಪ್ಪೆನಿಸಿರುವುದು ದುರಾದೃಷ್ಟಕರ.

ಅಷ್ಟೇ ಅಲ್ಲ, ಭಯೋತ್ಪಾದನೆ ಬಗ್ಗೆ ಮುಸ್ಲಿಂ ನಾಯಕರು ಮಾತನಾಡದಿರುವ ಬಗ್ಗೆ ಇರ್ಫಾನ್ ಖಾನ್ ಟೀಕಿಸಿದ್ದಾರೆ. ‘ಮುಸಲ್ಮಾನರು ಭಯೋತ್ಪಾದನೆ ಬಗ್ಗೆ ಮೌನ ವಹಿಸಬಾರದು. ಜನರು ಈ ಬಗ್ಗೆ ರಾಜಕೀಯ ನಾಯಕರನ್ನು ಪ್ರಶ್ನಿಸಬೇಕು.’ ಎಂದಿದ್ದಾರೆ ಇರ್ಫಾನ್.

Leave a Reply