ತೇಜಸ್ ಎಂಬ ಸ್ವದೇಶಿ ಯುದ್ಧ ವಿಮಾನದ ವಿಶೇಷತೆಗಳೇನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ (ಎಲ್ ಸಿ ಎ) ‘ತೇಜಸ್’ ಅಧಿಕೃತವಾಗಿ ಭಾರತೀಯ ವಾಯು ಸೇನೆಗೆ ಸೇರ್ಪಡೆಗೊಂಡಿದ್ದು, ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇದರೊಂದಿಗೆ ಸತತ ಮೂರು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಭಾರತೀಯ ವಾಯು ಸೇನೆ  ದೇಶಿ ನಿರ್ಮಿತ ಎಲ್ ಸಿ ಎಯನ್ನು ತನ್ನ ಬತ್ತಳಿಕೆಯಲ್ಲಿ ಇರಿಸಿಕೊಂಡಿದೆ. ಈ ಹಿಂದಿನ ದೇಶಿ ಯುದ್ಧ ವಿಮಾನ ಮಾರುತ್, 1990ರಲ್ಲಾಗಲೇ ನಿವೃತ್ತಿ ಪಡೆದಿತ್ತು.

ಬೆಂಗಳೂರಿನಲ್ಲಿರುವ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್) ಎರಡು ಯುದ್ಧ ವಿಮಾನಗಳನ್ನು ವಾಯು ಸೇನೆಗೆ ಹಸ್ತಾಂತರಿಸಿದೆ. ಏಕ ವ್ಯಕ್ತಿ ಹಾಗೂ ಏಕ ಯಂತ್ರ ಚಾಲಿತ ತೇಜಸ್ ಯುದ್ಧ ವಿಮಾನ, ಮುಂದಿನ ದಿನಗಳಲ್ಲಿ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಮತ್ತು ಎಚ್ಎಎಲ್ ಸಹಯೋಗದಲ್ಲಿ ತಯಾರಾಗಿದ್ದ ‘ಮಿಗ್- 21’ ಸರಣಿ ಯುದ್ಧ ವಿಮಾನದ ಸ್ಥಾನವನ್ನು ತುಂಬಲಿದೆ.

ಈ ತೇಜಸ್ ಭಾರತೀಯ ವಾಯು ಸೇನೆಯನ್ನು ಸೇರುವಲ್ಲಿ ತೀರಾ ವಿಳಂಬವಾಗಿದ್ದರೂ, ಇದರ ಗುಣಮಟ್ಟ ವಿಶ್ವದರ್ಜೆಯಲ್ಲಿರುವುದು ತೃಪ್ತಿ ತಂದಿದೆ. ವಾಯು ಸೇನೆ ಈ ಯುದ್ಧ ವಿಮಾನದ ಕಾರ್ಯಕ್ಷಮತೆಯನ್ನು ಆಗಾಗ್ಗೆ ಬದಲಾಯಿಸಿದ್ದರಿಂದ ತಡವಾಗಿ ನಿರ್ಮಾಣವಾಗಿದೆ ಎಂಬುದು ಎಚ್ಎಎಲ್ ಸ್ಪಷ್ಟನೆ.

ಸ್ವದೇಶಿ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ತೇಜಸ್ ನ ಪ್ರಯೋಜನಗಳು ಹೀಗಿವೆ..

ಈ ವಿಮಾನದಲ್ಲಿ ‘ಕ್ವಾಡ್ರುಪ್ಲೆಕ್ಸ್ ಡಿಜಿಟಲ್ ಫೈ ಬೈ ಫ್ಲೈಟ್ ಕಂಟ್ರೋಲ್’ ವ್ಯವಸ್ಥೆಯನ್ನು ಹೊಂದಿದ್ದು, ಪೈಲೆಟ್ ಗಳಿಗೆ ಇದರ ನಿಯಂತ್ರಣ ಸುಲಭ. ಇದರಲ್ಲಿನ ‘ಗ್ಲಾಸ್ ಕಾಕ್ಪಿಟ್’ ವ್ಯವಸ್ಥೆಯಿಂದ ಪೈಲೆಟ್ ಗಳಿಗೆ ಮಾಹಿತಿ ಸೂಕ್ತ ಸಮಯದಲ್ಲಿ ತಲುಪುತ್ತದೆ. ತೇಜಸ್ ಯುದ್ಧ ವಿಮಾನವನ್ನು ಪಾಕಿಸ್ತಾನ ಮತ್ತು ಚೀನಾ ಸಹಯೋಗದಲ್ಲಿ ನಿರ್ಮಿಸಲಾಗಿರುವ ‘ಜೆಎಫ್ 17’ ಜತೆ ಹೋಲಿಕೆ ಮಾಡಲಾಗಿದ್ದು, ಜೆಎಫ್-17 ಯುದ್ಧ ವಿಮಾನಕ್ಕಿಂತ ತೇಜಸ್ ಹೆಚ್ಚು ಕ್ಷಮತೆಯನ್ನು ಹೊಂದಿದೆ. ಜೆಎಫ್-17 ಯುದ್ಧ ವಿಮಾನ ವಿಭಿನ್ನ ಉದ್ದೇಶಕ್ಕೆ ನಿರ್ಮಿಸಿದ್ದರೂ ಈ ಎರಡು ವಿಮಾನಗಳ ನಿರ್ಮಾಣದ ಕಾಲಘಟ್ಟ ಒಂದೇ ಆಗಿದೆ.

ಸದ್ಯ ಭಾರತೀಯ ಸೇನೆಯಲ್ಲಿ ಬಳಕೆಯಾಗುತ್ತಿರುವ ಮಿಗ್-21 ಯುದ್ಧ ವಿಮಾನಕ್ಕಿಂತ ಇದು ಉನ್ನತ ತಲೆಮಾರಿನ ತಂತ್ರಜ್ಞಾನ ಹೊಂದಿದೆ. ಮಿಗ್-21 ಗಿಂತ ತೇಜಸ್ ಹಗುರವಾಗಿದ್ದು, ಕಾರ್ಬನ್ ಕಾಂಪೊಸಿಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಸದ್ಯ ಭಾರತದ ಪ್ರಮುಖ ಅಸ್ತ್ರವಾಗಿರುವ ಸುಕೋಯ್ -30 ಯುದ್ಧ ವಿಮಾನ ನಿರ್ವಹಣೆ ಅತ್ಯಂತ ದುಬಾರಿಯಾಗಿದೆ. ಅಲ್ಲದೆ ಕಾರ್ಯಾಚರಣೆ ವೇಳೆ ಸುಕೋಯ್ ಶೇ.60 ಕ್ಕಿಂತ ಕಡಿಮೆಯಷ್ಟು ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಇದು ಭಾರತೀಯ ವಾಯು ಸೇನೆಗೆ ದೊಡ್ಡ ಸಮಸ್ಯೆ. ಹೀಗಾಗಿ ಶೇ.70ಕ್ಕೂ ಹೆಚ್ಚಿನ ಪ್ರಮಾಣದ ಬಳಕೆ ಹಾಗೂ ಶೇ.80 ರಷ್ಟು ಯಶಸ್ವಿ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ತೇಜಸ್ ಭಾರತೀಯ ಸೇನೆಯ ಬಲ ಹೆಚ್ಚಿಸಿದೆ.

ಇವಿಷ್ಟು ತೇಜಸ್ ಯುದ್ಧವಿಮಾನದ ಪ್ಲಸ್ ಪಾಯಿಂಟ್ ಆದ್ರೆ, ಇದರ ಮಿತಿಗಳು ಇಂತಿವೆ..

ಗಾತ್ರ ಮತ್ತು ಕಾರ್ಬನ್ ಕಾಪೊಸಿಟ್ ಬಳಕೆ ಪ್ರಮಾಣ ಕಡಿಮೆ ಇರುವುದರಿಂದ ರಾಡರ್ ಕ್ರಾಸ್ ವಿಭಾಗದ ಕ್ಷಮತೆ ಮಿಗ್-29 ಮತ್ತು ಎಫ್-16 ಗಿಂತ ಕಡಿಮೆ ಇದೆ. ಸುಮಾರು 400 ಕಿ.ಮೀ ವ್ಯಾಪ್ತಿ ಸಾಗುವ ಸಾಮರ್ಥ್ಯವನ್ನಷ್ಟೇ ತೇಜಸ್ ಹೊಂದಿದ್ದು, ತೀರಾ ಹತ್ತಿರದ ಕಾರ್ಯಾಚರಣೆಗಳ ಬಳಕೆಗೆ ಸೀಮಿತ. ಎದುರಾಳಿಗಳ ಪ್ರದೇಶದ ಒಳಗೆ ನುಗ್ಗಿ ಆಕ್ರಮಣ ನಡೆಸಲು ತೇಜಸ್ ನಿಂದ ಸಾಧ್ಯವಿಲ್ಲದ ಕಾರಣ, ರಷ್ಯಾ ಮೂಲದ ಸುಕೋಯ್-30 ಎಂಕೆಐಎಸ್ ಅಥವಾ ರಾಫೆಲ್ ಯುದ್ಧ ವಿಮಾನಗಳನ್ನು ಅವಲಂಬಿಸಬೇಕು. ಹಗುರ ಯುದ್ಧ ವಿಮಾನವಾಗಿರುವುದರಿಂದ ತೇಜಸ್ ಅನ್ನು ಮಧ್ಯಮ ಬಹುಪಯೋಗಿ ಯುದ್ಧವಿಮಾನ ಅಥವಾ ಭಾರಿ ಗಾತ್ರದ ಯುದ್ಧ ವಿಮಾನದ ಬದಲಿಗೆ ಬಳಸಲು ಸಾಧ್ಯವಿಲ್ಲ.

ತೇಜಸ್ 10 ವರ್ಷ ಹಿಂದಿನ ಅಗತ್ಯಕ್ಕೆ ತಕ್ಕಂತೆ ನಿರ್ಮಾಣಗೊಂಡಿದೆ. ಆದ್ರೆ ಈ ಸ್ವದೇಶಿ ಯುದ್ಧ ವಿಮಾನವನ್ನು ಮಿಗ್-21 ಬದಲಿಯಾಗಿ ಉಪಯೋಗಿಸುತ್ತಿರುವುದು ತೃಪ್ತಿದಾಯಕ.

Leave a Reply