ಸಮಾನ ನಾಗರೀಕ ಸಂಹಿತೆಗೆ ಮುನ್ನುಡಿ, ಪರಮೇಶ್ವರ್ ಹರವಿಟ್ಟ ಯೋಜನೆಗಳೇನು?, ಉತ್ತರಾಖಂಡದಲ್ಲಿ ಮೇಘಸ್ಫೋಟಕ್ಕೆ 30 ಬಲಿ, ನೌಗಟ್…

ಅನಿಲ್ ಕುಂಬ್ಳೆ ಕೋಚ್ ಆದ ನಂತರ ಭಾರತೀಯ ಕ್ರಿಕೆಟ್ ತಂಡದ ಮೊದಲ ತಾಲೀಮು, ಬೆಂಗಳೂರಿನಲ್ಲಿ

ಡಿಜಿಟಲ್ ಕನ್ನಡ ಟೀಮ್:

ಸಮಾನ ನಾಗರೀಕ ಸಂಹಿತೆ ಜಾರಿಯ ಕುರಿತಂತೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಕಾನೂನು ಸಮಿತಿಗೆ ಸೂಚಿಸಿದೆ. ಇದರೊಂದಿಗೆ ತನ್ನ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿರುವ ಈ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಎಲ್ಲ ಪ್ರಯತ್ನಕ್ಕೆ ಮುಂದಾಗಿದೆ.

ಕಳೆದ ವರ್ಷ ಮುಸ್ಲಿಂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಕ್ಕೆ ಅಂತ್ಯ ಕಾಣಿಸಲು ಸಮಾನ ನಾಗರೀಕ ಸಂಹಿತೆ ಜಾರಿಗೊಳಿಸಲು ಸಂಸತ್ತಿಗೆ ಸೂಚನೆ ನೀಡುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಬಗ್ಗೆ ನಿರ್ದೇಶನ ನೀಡಲು ಸುಪ್ರಿಂ ಕೋರ್ಟ್ ಗೆ ಸಾಧ್ಯವಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೇವಲ ಸಂಸತ್ತಿಗಿದೆ ಎಂದು ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ತಿಳಿಸಿದ್ರು.

ಈ ಸಂಹಿತೆ ಕುರಿತಂತೆ ಇತರೆ ಪಕ್ಷಗಳು ಪ್ರತಿಕ್ರಿಯೆ ನೀಡಿರುವುದು ಹೀಗೆ:

‘ಈ ಸಂಹಿತೆ ಬಗ್ಗೆ ಪಕ್ಷ ಚಿಂತನೆ ನಡೆಸಿ ನಂತರ ತೀರ್ಮಾನಕ್ಕೆ ಬರಬೇಕಿದೆ. ಈ ಬಗ್ಗೆ ಏನೇ ಆದರೂ ದೊಡ್ಡ ಮಟ್ಟದ ಸಲಹೆಯನ್ನು ಪಡೆಯುವುದು ಅಗತ್ಯ’ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಶಿದ್.

‘ಸಮಾನ ನಾಗರೀಕ ಸಂಹಿತೆ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಎಲ್ಲರೂ ಚರ್ಚೆ ನಡೆಸಲು ಅವಕಾಶ ನೀಡಬೇಕು. ಆದರೆ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು’ ಎಂದಿದ್ದಾರೆ ಸಿಪಿಐ ನ ಡಿ.ರಾಜಾ.

 

ಪರಮೇಶ್ವರ್ ಪರಿಷತ್ ಸಭಾನಾಯಕ

ವಿಧಾನಪರಿಷತ್ ಸಭಾನಾಯಕರಾಗಿ ಹಿರಿಯ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ನೇಮಕ ಮಾಡಲಾಗಿದೆ.

ಮೇಲ್ಮನೆಯಲ್ಲಿ ಸಭಾನಾಯಕರಾಗಿದ್ದ ಎಸ್.ಆರ್.ಪಾಟೀಲ್ ಅವರಿಂದ ತೆರವಾಗಿದ್ದ ಸ್ಥಾನವಿದು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದರು.

ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ಪುತ್ರನನ್ನು ಪೊಲೀಸರು ಭುಜದ ಮೇಲಿರಿಸಿಕೊಂಡು ಮೆರವಣಿಗೆ ಮಾಡಿದ ಪ್ರಕರಣದ ಬಗ್ಗೆ ವರದಿ ತರಿಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದರು ಗೃಹ ಸಚಿವರು.

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಯೂರೋಪ್ ಮಾದರಿ ವ್ಯವಸ್ಥೆ ಆಳವಡಿಸಿಕೊಳ್ಳಲಾಗುವುದು. ಉಡುಪಿಯಲ್ಲಿ 25 ಎಕರೆ ಪ್ರದೇಶದಲ್ಲಿ ಕರಾವಳಿ ಪಡೆ ತರಬೇತಿ ಅಕಾಡೆಮಿ ಸ್ಥಾಪಿಸಲಾಗವುದು. ಕೇಂದ್ರ ಸರ್ಕಾರದ 100 ಕೋಟಿ ರೂ. ಅನುದಾನದೊಂದಿಗೆ ಸಾಗರ ಮಾರ್ಗದಲ್ಲಿ ನಡೆಯುವ ವಿಧ್ವಂಸಕ ಕೃತ್ಯ ತಡೆಗಟ್ಟಲು ಬೋಟ್ ಕಾಲರ್ ಕೋಡಿಂಗ್ ವ್ಯವಸ್ಥೆ, ಅಟೋಮ್ಯಾಟಿಕ್ ಐಡಿಂಟಿಫಿಕೇಷನ್ ಸಿಸ್ಟಮ್, ಡಿಸ್ಟ್ರೆಸ್ ರೋಮಿಂಗ್ ಸಿಸ್ಟಮ್ ಇವನ್ನೆಲ್ಲ ಅನುಷ್ಠಾನಗೊಳಿಸುವುದಾಗಿಯೂ ಹೇಳಿದರು.

ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಪೊಲೀಸ್ ಸಿಬ್ಬಂದಿ ಕೆಲಸ ಮಾಡುವ ಆರ್ಡರ್ಲಿ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಲು ನಿರ್ಧರಿಸಲಾಗಿದ್ದು ಸಂಪುಟ ಸಭೆಯಲ್ಲಿ ಪ್ರಸ್ತಾಪ ಇಡಲಾಗುವುದು. ಆರ್ಡರ್ಲಿ ಬದಲು ಹೊರಗುತ್ತಿಗೆ ಅಧಾರದ ಮೇಲೆ ಸಿಬ್ಬಂದಿ ನೇಮಕಕ್ಕೆ ಅವಕಾಶ ಮಾಡಿಕೊಟ್ಟು ಅವರಿಗೆ ವೇತನ ಇಲಾಖೆ ನಿಗದಿ ಮಾಡಲಿದೆ ಎಂದ ಸಚಿವರು ತಮ್ಮ ಜರ್ಮನಿ ಪ್ರವಾಸದ ಬಗ್ಗೆ ಹೇಳಿಕೊಂಡರು. ಜರ್ಮನಿಯ ಬವೇರಿಯಾ ರಾಜ್ಯದ ಅಹ್ವಾನದ ಮೇರೆಗೆ ಡಿಜಿಪಿ, ಎಡಿಜಿಪಿ, ಡಿಐಜಿ, ಎಸ್‍ಪಿ ಅವರನ್ನೊಳಗೊಂಡ ನಿಯೋಗದೊಂದಿಗೆ ಪ್ರವಾಸ ಕೈಗೊಂಡಿದ್ದಾಗಿ ಹೇಳಿದರು. ಕರ್ನಾಟಕ ಬವೇರಿಯಾ ನಡುವೆ 2007 ರಲ್ಲೇ ವಾಣಿಜ್ಯ, ಕೈಗಾರಿಕೆ ವ್ಯಾಪಾರ ಸಂಬಂಧ ಒಪ್ಪಂದವಿದೆ. ಇದೀಗ ಪೊಲೀಸ್ ಹಾಗೂ ಸಂಚಾರ ವ್ಯವಸ್ಥೆ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು. ಅಲ್ಲಿನ ಪೋಲೀಸರು ಶಾಲೆಗಳಿಗೆ ತೆರಳಿ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ, ಇಂಥದೇ ಮಾದರಿಗಳನ್ನು ಇಲ್ಲೂ ಅಳವಡಿಸಿಕೊಳ್ಳುವ ಯೋಚನೆ ಇದೆ ಎಂದರು.

ಆಕ್ಷೇಪಾರ್ಹ ಪಟ್ಟಿ

ಕೇಂದ್ರ ಪಠ್ಯಕ್ರಮದ ಆರನೇ ತರಗತಿ ಪುಸ್ತಕದಲ್ಲಿ ಸ್ವಾತಂತ್ರ ಸೇನಾನಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದಿರುವ ವಿವಾದದ ಬಗ್ಗೆ ಸೋಮವಾರದಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರ ಗಮನಕ್ಕೆ ತರುವುದಾಗಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ.

ಜುಲೈ 4 ಸೋಮವಾರದಿಂದ ವಿಧಾನ ಮಂಡಲದ ಮುಂದುವರೆದ ಬಜೆಟ್ ಅಧಿವೇಶನ ನಡೆಯಲಿದ್ದು, 20 ದಿನಗಳ ಕಾಲ ನಡೆಯಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದರು. ನಿನ್ನೆಯಿಂದ ನೂತನ ಮೇಲ್ಮನೆ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ನೀಡುತ್ತಿದ್ದು, ಸದನದಲ್ಲಿ ಯಾವ ತರಹ ನಡೆದುಕೊಳ್ಳಬೇಕೆಂಬುದನ್ನು ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್ ವಿ.ಆರ್. ಸುದರ್ಶನ್,  ಹಾಗೂ ಹಿರಿಯ ಶಾಸಕ ಎಂ.ಸಿ. ನಾಣಯ್ಯ, ಅವರು ಹೇಳಿದ್ದಾರೆ. ಆದರೆ ಕಡ್ಡಾಯವಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ನೂತನ ಸದಸ್ಯರಲ್ಲಿ ಬಹುತೇಕರು ಗೈರು ಹಾಜರಾಗಿದ್ದಾರೆ ಎಂದೂ ಖೇದ ವ್ಯಕ್ತಪಡಿಸಿದ್ದರು.

ಉತ್ತರಾಖಂಡ ಮೇಘಸ್ಫೋಟಕ್ಕೆ 30 ಜನರ ಬಲಿ

ಉತ್ತರಾಖಂಡ ಭಾರಿ ಮಳೆಗೆ ತತ್ತರಿಸಿದೆ. ಚಮೋಲಿ ಜಿಲ್ಲೆಯೊಂದರಲ್ಲೇ ಮೇಘಸ್ಫೋಟದ ಪರಿಣಾಮ 30 ಮಂದಿ ಸಾವನ್ನಪ್ಪಿದ್ದಾರೆ. ಭೂ ಕುಸಿತದ ಪರಿಣಾಮ ರಸ್ತೆಗಳ ಸಂಪರ್ಕ ಮುರಿದಿದೆ. ಪರಿಣಾಮ ಇಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ಎನ್ ಡಿ ಆರ್ ಎಫ್ ಅಧಿಕಾರಿಗಳಿಗೆ ಸವಾಲಾಗಿದೆ. ರಿಶಿಕೇಶ- ಬದರಿನಾಥ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-58) ಸಂಪರ್ಕ ಹಾಳಾಗಿದೆ. ಇನ್ನು ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಇದೇ ವೇಳೆ ಉತ್ತರಾಖಂಡದ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

chennai-killer

  • ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಇನ್ಫೋಸಿಸ್ ಟೆಕಿ ಸ್ವಾತಿ ಹತ್ಯೆ ಪ್ರಕರಣದ ಉದ್ದೇಶ ತಿಳಿಯುವಲ್ಲಿ ಪೋಲೀಸರು ವಿಫಲರಾಗಿದ್ದಾರೆ. ಹೀಗಾಗಿ ಆರೋಪಿಯ ಉತ್ತಮ ಗುಣಮಟ್ಟದ ಚಿತ್ರವನ್ನು ಗುರುವಾರ ಪೊಲೀಸರು ಬಿಡುಗಡೆ ಮಾಡಿದ್ದರು. ಈ ಮಧ್ಯೆ ಕೊಲೆಯಾಗುವ ಹಿಂದಿನ ದಿನ ರೈಲ್ವೇ ನಿಲ್ಧಾಣದಲ್ಲಿ ಆತ ಸ್ವಾತಿಯ ಕೆನ್ನೆಗೆ ಹೊಡೆದಿದ್ದ ಎಂದು ಖಾಸಗಿ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಕರೆತಂದರೆ ಆತನನ್ನು ಪತ್ತೆ ಹಚ್ಚುವುದಾಗಿಯು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿನ ದೃಶ್ಯಗಳಲ್ಲಿ ಆರೋಪಿಯ ಮುಖ ಅಸ್ಪಷ್ಟವಾಗಿರುವುದರಿಂದ ಪೊಲೀಸರಿಗೆ ಕಷ್ಟವಾಗಿದೆ ಎಂದು ಹೇಳಲಾಗ್ತಿದೆ.
  • ಆ್ಯಂಡ್ರಾಯ್ಡ್ ನ ಮುಂದಿನ ಆವೃತ್ತಿಗೆ ಹೆಸರು ಫಿಕ್ಸ್ ಆಗಿದೆ. ಅದೇನಂದ್ರೆ, ‘ನೌಗಟ್’. ಇದರೊಂದಿಗೆ ನುಟೆಲ್ಲಾ ಅಥವಾ ನೆಯಪ್ಪಮ್ ಹೆಸರಿಡಬೇಕು ಎಂಬ ನಿರೀಕ್ಷೆ ಹುಸಿಯಾಗಿದೆ. ಹಲವು ವಿಶೇಷ ಸವಲತ್ತುಗಳನ್ನು ಹೊತ್ತು ತರುತ್ತಿರುವ ಹೊಸ ಆವೃತ್ತಿಗೆ ಗೂಗಲ್ ಈ ಅಂತಿಮ ಹೆಸರನ್ನು ಪ್ರಕಟಿಸಿದ್ದು, ಇದನ್ನು ಆ್ಯಂಡ್ರಾಯ್ಡ್ 7.0 ನೌಗಟ್ ಎಂದು ಕರೆಯಲಾಗುವುದು.
  • ಟೀಂ ಇಂಡಿಯಾ ಕೋಚ್ ಸ್ಥಾನ ಕೈತಪ್ಪಿದ ಬೇಸರದಲ್ಲಿರುವ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ ಈಗ ಐಸಿಸಿಯ ಪ್ರತಿಷ್ಠಿತ ಕ್ರಿಕೆಟ್ ಸಮಿತಿ ಮಾಧ್ಯಮ ಪ್ರತಿನಿಧಿ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಶಾಸ್ತ್ರಿ ಪ್ರತಿಕ್ರಿಯಿಸಿರುವುದು ಹೀಗೆ: ‘ನಾನು ಈಗಾಗಲೇ ರಾಜೀನಾಮೆ ಪತ್ರ ನೀಡಿದ್ದೇನೆ. ಕಳೆದ 6 ವರ್ಷಗಳಿಂದ ಈ ಸಮಿತಿಯಲ್ಲಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ರಾಜಿನಾಮೆ ನೀಡುತ್ತಿದ್ದೆನೆ.’

Potholes filled with Rain water, making it difficult for Pedestr

ಮಳೆಗಾಲ ಶುರುವಾಯಿತೆಂದರೆ ಬೆಂಗಳೂರಿನ ಪಾಡಿದು. ಕಲಾಸಿಪಾಳ್ಯದ ದೃಶ್ಯ

Leave a Reply