ಹಸೀನಾ ಸರ್ಕಾರದ ಮೇಲೆ ಸಿಟ್ಟಾದರೆ ಫಲವಿಲ್ಲ, ಬಾಂಗ್ಲಾದೇಶಕ್ಕೆ ಬೇರಾವ ಆಯ್ಕೆಯೂ ಇಲ್ಲ!

ಚೈತನ್ಯ ಹೆಗಡೆ

‘ರಂಜಾನ್ ಸಂದರ್ಭದಲ್ಲಿ ಮನುಷ್ಯರನ್ನೇ ಹತ್ಯೆ ಮಾಡುತ್ತಿರುವ ಇವರೆಲ್ಲಾ ಎಂಥಾ ಮುಸ್ಲಿಮರು? ಬಾಂಗ್ಲಾದೇಶದ ನೆಲದಲ್ಲಿ ಉಗ್ರವಾದಕ್ಕೆ ಅವಕಾಶವಿಲ್ಲ. ಇದನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಸಿದ್ಧ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಕಾರ್ಯ ಪ್ರಶಂಸನೀಯ.’ ಉಗ್ರದಾಳಿಯಲ್ಲಿ ಒತ್ತೆಯಾಳುಗಳಾಗಿ ಇದ್ದವರನ್ನು ಬಾಂಗ್ಲಾದೇಶದ ಭದ್ರತಾ ಪಡೆಗಳು ರಕ್ಷಿಸಿದ ನಂತರ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ಇದಾಗಿತ್ತು.

ಹೀಗಂದುಬಿಟ್ಟರಾಯಿತೇ? ವಿದೇಶಿಯರು ಸೇರಿದಂತೆ 20 ಮಂದಿ ಸತ್ತಿರುವ ಮಾಹಿತಿಗಳು ಬರುತ್ತಿವೆ. ಈಮಟ್ಟಿಗೆ ಇಸ್ಲಾಂ ಉಗ್ರವಾದ ಬೆಳೆಯಲು ಬಿಟ್ಟಿದ್ದೇಕೆ? ಬಾಂಗ್ಲಾದಲ್ಲಿ ಹಿಂದುಗಳನ್ನು- ಇಸ್ಲಾಂ ಮೂಲಭೂತವಾದ ಪ್ರಶ್ನಿಸುವ ಬ್ಲಾಗರ್ ಗಳನ್ನು ಈ ಪರಿ ಹತ್ಯೆ ಮಾಡುತ್ತಿರುವಾಗ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಅರೇ, ರಂಜಾನ್ ನಂತರ ದಾಳಿ ಮಾಡಿದ್ದರೆ ಸರಿ ಅನ್ತಿದ್ರಾ ಎಂಬ ಕುಹಕಗಳೂ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗಿವೆ. ಇತಿಹಾಸ ತಿಳಿದಿರದೇ ಆ ಕ್ಷಣಕ್ಕೆ ಪ್ರತಿಕ್ರಿಯಿಸುವಾಗ ಇಂಥ ಆಕ್ರೋಶಗಳು ಸಹಜ.

‘ದಾಳಿಗೆ ಐ ಎಸ್ ಐಎಸ್ ಹೊಣೆ ಹೊತ್ತಿರುವಾಗಲೂ ಹಸೀನಾ ನಮ್ಮ ನೆಲದಲ್ಲಿ ಉಗ್ರವಾದ ಇಲ್ಲ ಅಂತಿದ್ದಾರಲ್ಲಾ’ ಅಂತ ಬಾಂಗ್ಲಾ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ. ಅಲ್ಲಾಹು ಅಕ್ಬರ್ ಅಂತ ಕೂಗುತ್ತಲೇ ದಾಳಿ ಮಾಡಿದ ಉಗ್ರರನ್ನು ಬಂಧೂಕುಧಾರಿಗಳೆಂದು ಸಂಬೋಧಿಸಬೇಡಿ, ಇಸ್ಲಾಮಿಕ್ ಉಗ್ರರೆನ್ನಿ ಎಂಬುದೂ ಅವರ ಆಗ್ರಹ.

taslima

ಇವೇನೇ ಇದ್ದರೂ…

ಮತೀಯ ಮೂಲಭೂತವಾದಕ್ಕೆ ಹೆಚ್ಚು-ಕಡಿಮೆ ಬಹಿರಂಗವಾಗಿಯೇ ಬೆಂಬಲಿಸಿಕೊಂಡಿರುವ ಖಲೀದಾ ಜಿಯಾ ಎಂಬ ಇನ್ನೊಂದು ಆಯ್ಕೆಯನ್ನು ಗಮನಿಸಿದರೆ, ಶೇಖ್ ಹಸೀನಾ ಸಾವಿರ ಪಾಲು ಉತ್ತಮ ಎನಿಸುತ್ತದೆ. ಇದು ಬಿಟ್ಟರೆ ಬಾಂಗ್ಲಾಕ್ಕೆ ಬೇರೆ ಆಯ್ಕೆ ಇಲ್ಲ. ಜಮಾತೆ ಉಗ್ರರನ್ನು ಗಲ್ಲಿಗೇರಿಸುವಾಗ, ಇದು ರಾಜಕೀಯ ಪ್ರೇರಿತ ಅಂತ ಗಲಾಟೆ ಎಬ್ಬಿಸಿದ್ದು ಖಲೀದಾ ಜಿಯಾರ ಬಿ ಎನ್ ಪಿ.

1996ರಲ್ಲಿ ಮೊದಲ ಬಾರಿ ಪ್ರಧಾನಿ ಗಾದಿ ಏರಿದ್ದ ಹಸೀನಾ ಜೀವನ ಸಂಘರ್ಷಗಳನ್ನೇ ಹೊದ್ದಿದೆ. ಬಾಂಗ್ಲಾ ಸ್ವತಂತ್ರವಾಗುತ್ತಲೇ ಈಕೆಯ ತಂದೆ ಮುಜಿಬುರ್ ರೆಹ್ಮಾನ್ ಪ್ರಧಾನಿಯಾಗಿದ್ದರು. 1973-74ರಲ್ಲಿ ಆ ದೇಶ ಭೀಕರ ಕ್ಷಾಮ ಎದುರಿಸುತ್ತಲೇ ಉಳಿದೆಲ್ಲ ಪಕ್ಷಗಳ ಅಸ್ತಿತ್ವ ರದ್ದು ಮಾಡಿ ಆವಾಮಿ ಲೀಗ್ ಒಂದನ್ನೇ ಅಧಿಕೃತವಾಗಿಸಿದರು. ಅಲ್ಲಿಂದಲೇ ಅವರ ವಿರುದ್ಧ ವಿರೋಧಿಗಳು ಗುಂಪುಗಟ್ಟತೊಡಗಿದರು. ಆಗಸ್ಟ್ 15, 1975ರಲ್ಲಿ ಮಿಲಿಟರಿ ಮಂದಿಯಿಂದ ಮುಜಿಬುರ್ ರೆಹಮಾನ್ ಮತ್ತವರ ಕುಟುಂಬದ ಹೆಚ್ಚಿನ ಸದಸ್ಯರ ಹತ್ಯೆ ನಡೆದುಹೋಯಿತು. ನಂತರ ಬಾಂಗ್ಲಾದೇಶ ಮಿಲಿಟರಿ ಆಡಳಿತದ ಅಸ್ಥಿರತೆ ಅಧ್ಯಾಯ. ಲೆಫ್ಟಿನೆಂಟ್ ಜಿಯಾವುರ್ ರೆಹಮಾನ್ ‘ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ’ ಹುಟ್ಟುಹಾಕಿ ಅಧ್ಯಕ್ಷರಾದರು. ಅವರದ್ದೂ ಹತ್ಯೆಯಾಗಿಹೋಯಿತು. ನಂತರ ಲೆಫ್ಟಿನೆಂಟ್ ಜನರಲ್ ಹುಸೇನ್ ಮಹಮದ್ ಇರ್ಷದ್ ಆಳ್ವಿಕೆ. 1991ರಲ್ಲಿ ಜಿಯಾರ ವಿಧವೆ, ಬಿಎನ್‌ಪಿಯ ಖಲೀದಾ ಜಿಯಾ ಚುನಾವಣೆ ಗೆದ್ದು ಬಾಂಗ್ಲಾದ ಪ್ರಥಮ ಮಹಿಳಾ ಪ್ರಧಾನಿ ಎನಿಸಿಕೊಂಡರು.

ಬಾಂಗ್ಲಾದೇಶದ ಅಧಿಕಾರದಾಟವೇನಿದ್ದರೂ ಶೇಖ್ ಹಸೀನಾ ಮತ್ತು ಖಲೀದಾ ಜಿಯಾ ನಡುವೆಯೇ. ಅಯ್ಯೋ, ಬಾಂಗ್ಲಾದಲ್ಲಿ ಈ ಹಸೀನಾ ಆಡಳಿತದಲ್ಲೇ ಈ ಪರಿ ಹಿಂದುಗಳ ಹತ್ಯೆ, ಉಗ್ರವಾದಿಗಳ ಉಪಟಳ ಶುರುವಾಗಿದೆಯಲ್ಲ, ಇವಳೇಕೆ ಅಧಿಕಾರದಲ್ಲಿರಬೇಕು ಅಂತ ಆಶಿಸಿದರೆ, ತೆರೆದುಕೊಳ್ಳುವ ಇನ್ನೊಂದು ಆಯ್ಕೆ ಮತ್ತೂ ಭೀಕರವಾಗಿದೆ!

1971ರ ಪಾಕ್ ಹಿಂಸಾಚಾರದಲ್ಲಿ ಪ್ರಾಣತೆತ್ತ ಬಂಗಾಳಿಗಳ ಸಂಖ್ಯೆ ಸುಮಾರು 3-5 ಲಕ್ಷ. ಮಹಿಳೆಯರ ಮೇಲಿನ ಅತ್ಯಾಚಾರ ಲೆಕ್ಕಕ್ಕೆ ಸಿಗದಂತೆ ನಡೆಯಿತು. ಹೀಗೆ ಕೊಲೆ- ಅತ್ಯಾಚಾರ ಎಸಗಿದವರಿಗೆ ಖಲೀದಾ ಜಿಯಾ ಅಧಿಕಾರವಧಿಯಲ್ಲಿ ಕೂದಲೂ ಕೊಂಕಿರಲಿಲ್ಲ. ಆ ಹಿಂಸಾಚಾರಕ್ಕೆ ಖುದ್ದು ಸಾಕ್ಷಿಯಾಗಿದ್ದ ಶೇಖ್ ಹಸೀನಾ, ಯುದ್ಧಾಪರಾಧ ವಿಚಾರಣೆಯ ಟ್ರಿಬ್ಯೂನಲ್ ರಚಿಸಿದ್ದರ ಫಲವಾಗಿ ಹಲವರಿಗೆ ಕಟುಶಿಕ್ಷೆಯಾಗಿದೆ. ಬಿಎನ್‌ಪಿಯ ಮಿತ್ರಪಕ್ಷ ಜಮಾತೆ ಇಸ್ಲಾಮಿ 1971ರ ಸಂದರ್ಭದಲ್ಲಿ ನೇರವಾಗಿ ಪಾಕ್ ಜತೆ ಗುರುತಿಸಿಕೊಂಡು ರಕ್ತಪಾತದಲ್ಲಿ ಭಾಗವಹಿಸಿತ್ತು. ಆ ಪಾಳಯದ ಅಬ್ದುಲ್ ಕಾದರ್ ಮುಲ್ಲಾಗೆ ಅಲ್ಲಿನ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿತು. ಬಿಎನ್‌ಪಿಯ ಸಂಸದ ಸಲಾಹುದ್ದೀನ್ ಕ್ವಾದರ್ ಚೌಧುರಿಗೂ ಮರಣದಂಡನೆಯಾಗಿದೆ.

ಇವ್ಯಾವ ಕ್ರಮಗಳನ್ನೂ ಖಲೀದಾ ಜಿಯಾರಿಂದ ನಿರೀಕ್ಷಿಸುವುದಕ್ಕೆ ಸಾಧ್ಯವಿರಲಿಲ್ಲ. ಬಿ ಎನ್ ಪಿ ಮುಖಂಡೆ ಖಲೀದಾ ಜಿಯಾ ಅದೆಂಥ ಅಸಾಮಿ ಎಂದರೆ ಶಾಲಾ ದಾಖಲೆಗಳ ಪ್ರಕಾರ ಆಕೆಯ ಜನ್ಮದಿನ ಆಗಸ್ಟ್ 9 ಆಗಿದ್ದರೂ ಆಗಸ್ಟ್ 15ರಂದು ಬರ್ತ್‌ಡೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾಳೆ. ಅದು ಹಸೀನಾ ತಂದೆ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯಾದ ದಿನ!

ಹಸೀನಾ ಸರ್ಕಾರ ಉಗ್ರವಾದ ಹತ್ತಿಕ್ಕುವಲ್ಲಿ, ದಿನಕ್ಕೊಬ್ಬರಂತೆ ಹತ್ಯೆಯಾಗುತ್ತಿರುವ ಅಲ್ಲಿನ ಹಿಂದುಗಳು, ಬ್ಲಾಗರ್ ಗಳ ವಿಷಯದಲ್ಲಿ ಇನ್ನಷ್ಟು ತ್ವರಿತ ಕ್ರಮ ಕೈಗೊಳ್ಳುವಲ್ಲಿ ಹಿಂದೆ ಬೀಳುತ್ತಿದೆ ಅಂತ ಅನಿಸಿದರೆ ತಪ್ಪಲ್ಲ. ಆದರೇನು ಮಾಡೋದು? ಈಕೆಯ ಬದಲು ಖಲೀದಾ ಜಿಯಾ ಅವತರಿಸಿದರೆ ಜಿಹಾದಿಗಳಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.

ಹಸೀನಾ ಶೇಖ್ ಯಾವತ್ತೂ ಭಾರತ ಸ್ನೇಹಿ ಎಂಬ ವ್ಯಾಖ್ಯಾನಕ್ಕೇ ಒಳಗಾದವರು. ಅದಕ್ಕೂ ಕಾರಣವಿದೆ. 1971ರ ಡಿಸೆಂಬರ್ ಎರಡನೇ ವಾರದಲ್ಲಿ ಪಾಕಿಸ್ತಾನವು ಬಾಂಗ್ಲಾ ಯುದ್ಧವನ್ನೇನೋ ಸೋತಿತ್ತು. ಆದರೆ ಮುಜಿಬುರ್ ಕುಟುಂಬವನ್ನು ಧನಮಂಡಿಯ ಮನೆಯೊಂದರಲ್ಲಿ ಒತ್ತೆಯಿಡಲಾಗಿತ್ತು. ಹಸೀನಾ ಸೇರಿದಂತೆ ಎಲ್ಲರನ್ನೂ ಮುಗಿಸಿಬಿಡಬೇಕೆಂಬ ಸಂದೇಶ ಆಗಲೇ ರವಾನೆ ಆಗಿತ್ತು. ಅದನ್ನು ಪಾಕ್ ಯೋಧರು ಇನ್ನೇನು ಅನುಷ್ಠಾನಕ್ಕೆ ತರುವಷ್ಟರಲ್ಲೇ ಅಲ್ಲಿಗೆ ತಲುಪಿದ್ದ ಭಾರತೀಯ ಸೇನೆಯ ಮೇಜರ್ ಅಶೋಕ್ ತಾರಾ, ಆ ಅಳಿದುಳಿದ ಸೈನಿಕರಿಗೆ ಪಾಕಿಸ್ತಾನವು ಶರಣಾಗಿರುವ ಸುದ್ದಿ ತಿಳಿಸಿ, ಬಂದ ಕಾರ್ಯವನ್ನು ಅಲ್ಲಿಗೇ ಬಿಟ್ಟು ತೆರಳಿದರೆ ನಿಮಗೆ ಬೇರೆ ಯುದ್ಧಾಪರಾಧಿಗಳ ಜತೆ ಶಿಕ್ಷೆ ಆಗುವುದಿಲ್ಲ ಅಂತ ಎಚ್ಚರಿಸಿ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಹಾಗವತ್ತು ಮುಜಿಬುರ್ ರೆಹಮಾನ್ ಕುಟುಂಬವನ್ನು ರಕ್ಷಿಸಿ, ಮುಂದಿನ ಬಾಂಗ್ಲಾ ರಾಜಕೀಯ ನೇತಾರಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಹಸಿಯಾಗಿಟ್ಟ ಶ್ರೇಯಸ್ಸು ಭಾರತಕ್ಕೇ ಸಲ್ಲುತ್ತದೆ. ಅವತ್ತು ಭಾರತೀಯ ಸೇನಾ ಸಮವಸ್ತ್ರದಲ್ಲಿರುವರ ಆಗಮನವಾಗುತ್ತಲೇ ಜೀವ ಖಾತ್ರಿಯಾಗಿ, ಹರ್ಷೋದ್ವೇಗಕ್ಕೆ ಒಳಗಾದ ಮುಜಿಬುರ್ ರೆಹಮಾನ್ ಪತ್ನಿ ಬೇಗಂ ಮುಜಿಬುರ್, ಆ ಮನೆಯ ಟೆರೇಸ್ ಹತ್ತಿ ಅಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಸೆಳೆದು ಕಾಲಡಿ ತುಳಿದು, ‘ಜೊಯ್ ಬಾಂಗ್ಲಾ’ ಎಂದು ಕೂಗುತ್ತಾಳೆ. ನೀನು ನನ್ನ ಮಗನೇ ಕಣಪ್ಪಾ ಅಂತ ಮೇಜರ್ ಅಶೋಕ್ ತಾರಾರನ್ನು ಆಲಂಗಿಸಿಕೊಂಡ ಆ ತಾಯಿ, ಮುಜಿಬುರ್ ರೆಹಮಾನ್ ಪಾಕಿಸ್ತಾನದ ಜೈಲಿನಿಂದ ವಾಪಸಾಗುವವರೆಗೆ ತಮ್ಮ ಜತೆಯೇ ಇರತಕ್ಕದು ಎಂದು ಪ್ರೀತಿಯ ತಾಕೀತು ಹೊರಡಿಸುತ್ತಾಳೆ…

ಮತ್ತೆ ಜರ್ಜರಿತವಾಗುತ್ತಿರುವ ಬಾಂಗ್ಲಾದೇಶದ ಚಿತ್ರಣ ನೋಡುತ್ತ ಈ ಇತಿಹಾಸ ಚಿತ್ರಗಳೆಲ್ಲ ಸುರುಳಿ ಬಿಚ್ಚಿಕೊಳ್ಳುತ್ತಿವೆ.

Leave a Reply