ನಾಯಕತ್ವದ ವಿರುದ್ಧ ಉಸಿರೆತ್ತಿದ್ರೆ ಹುಷಾರ್ ಅಂತ ಹೆದರಿಸಿದ ಯಡಿಯೂರಪ್ಪಗೆ ಬ್ರೇಕ್ ಹಾಕಿದ್ರು ಮುರಳೀಧರರಾವ್

ಡಿಜಿಟಲ್ ಕನ್ನಡ ಟೀಮ್:

ಹೆದರಿಸಿಯೇ ರಾಜಕೀಯ ಮಾಡಬೇಕು ಎಂದು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಮುರಳೀಧರರಾವ್ ಬ್ರೇಕ್ ಹಾಕಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟಿಸುವಂತೆ ಕಿವಿಮಾತು ಹೇಳಿದ್ದಾರೆ.

ಪದಾಧಿಕಾರಿಗಳ ನೇಮಕ ಹಿನ್ನೆಲೆಯ ಅತೃಪ್ತಿ ಮುಖ್ಯವಾಗಿಟ್ಟುಕೊಂಡು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕರೆದಿದ್ದ ಪದಾಧಿಕಾರಿಗಳು, ಸಂಸದರು ಮತ್ತು ಶಾಸಕರ ಸಭೆಯಲ್ಲಿ ಪ್ರಾಸ್ತಾವಿಕ ಮಾತಾಡಿದ ಯಡಿಯೂರಪ್ಪನವರು, ನಾಯಕತ್ವದ ವಿರುದ್ಧ ಮಾತಾಡುವವರನ್ನು ಸಹಿಸಲಾಗುವುದಿಲ್ಲ. ಅವರು ಎಷ್ಟೇ ದೊಡ್ಡವರಿದ್ದರೂ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ದಮಕಿ ಹಾಕಿದರು.

ಆದರೆ ಸಭೆಯ ಮುಕ್ತಾಯ ಹಂತದಲ್ಲಿ ಮಾತಾಡಿದ ಮುರಳೀಧರರಾವ್, ಕಾರ್ಯಕರ್ತರು ಪಕ್ಷದ ಆಸ್ತಿ. ಅವರ ಅಭಿಪ್ರಾಯಕ್ಕೆ ಯಾವತ್ತೂ ಮನ್ನಣೆ ನೀಡಬೇಕು. ಸಮೂಹ ಚರ್ಚೆ ಸಮಾಜಮುಖಿ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸಾಮೂಹಿಕ ನಾಯಕತ್ವ ಪಕ್ಷದ ಬಲವರ್ಧನೆ ಮಾಡುತ್ತದೆ. ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಬೇಕು ಎಂದು ಹೇಳುವ ಮೂಲಕ ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಿದ್ದಾರೆ. ಅಷ್ಟೇ ಅಲ್ಲದೆ ತಾವೇ ಖುದ್ದು ಪ್ರತಿಯೊಂದು ಜಿಲ್ಲೆಗೆ ಬಂದು ಅಲ್ಲಿನ ನಾಯಕರು ಮತ್ತು ಕಾರ್ಯಕರ್ತರ ಅಹವಾಲು ಆಲಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಈ ಮಧ್ಯೆ, ಇವತ್ತಿನ ಸಭೆಯನ್ನು ಬಹಿಷ್ಕರಿಸಿದ್ದ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದ ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ ಜೋಷಿ ಅವರು ದಿಲ್ಲಿಗೆ ತೆರಳಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರನ್ನು ಭೇಟಿ ಮಾಡಲಿದ್ದಾರೆ. ಮೊದಲ ವಾರದಲ್ಲಿ ನಡೆಯುವ ಕೇಂದ್ರ ಸಂಪುಟ ಪುನಾರಚನೆ ನಂತರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಂಡಾಯ ನಾಯಕರು ನಿರ್ಧರಿಸಿದ್ದಾರೆ.

ಇಂದಿನ ಸಭೆಯಲ್ಲಿ ನಿರೀಕ್ಷೆಯಂತೆ ಭಿನ್ನಮತವೇ ಆದ್ಯತೆಯ ಚರ್ಚೆ ವಿಚಾರವಾಗಿತ್ತು. ನೂತನ ಅಧ್ಯಕ್ಷರು ತಮ್ಮ ಅಹವಾಲು ಆಲಿಸುತ್ತಾರೆ, ಕೊಡು-ಕೊಳ್ಳುವಿಕೆ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರೆ ಎಂಬುದು ಇತರ ನಾಯಕರ ಆಶಯವಾಗಿತ್ತು. ಆದರೆ ಆಗಿದ್ದೇ ಬೇರೆ. ಯಾವುದೇ ಕಾರಣಕ್ಕೂ ಪದಾಧಿಕಾರಿಗಳ ಪಟ್ಟಿ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದ ಯಡಿಯೂರಪ್ಪನವರು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಹಾಗೂ ಅದಕ್ಕಾಗಿ ಶಿಸ್ತುಸಮಿತಿ ರಚನೆ ಮಾಡುವುದಾಗಿ ಹೇಳುವ ಮೂಲಕ ಬಂಡಾಯ ನಾಯಕರ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಜತೆಗೆ ಇನ್ನು ಮುಂದೆ ಯಾರೂ ಮಾಧ್ಯಮದ ಬಳಿ ಮಾತಾಡುವಂತಿಲ್ಲ ಎಂದೂ ಕಟ್ಟಪ್ಪಣೆ ಮಾಡಿದ್ದಾರೆ.

ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ, ಅದನ್ನು ಬಿಟ್ಟು ಮಾಧ್ಯಮಗಳ ಬಳಿ ಹೋಗೋದು ಬೇಡ. ಮಾಧ್ಯಮಗಳು ಸಣ್ಣದನ್ನು ದೊಡ್ಡದು ಮಾಡುತ್ತವೆ ಎಂದು ಹೇಳಿದ ಯಡಿಯೂರಪ್ಪನವರಿಗೆ, ಅದೇ ಪಕ್ಷದ ವೇದಿಕೆಯಲ್ಲಿ ನಾಲ್ಕು ದಿನಗಳ ಮೊದಲು ಇತರ ನಾಯಕರು ಸಮಾಲೋಚನೆ ಮಾಡಿ ಏಕಪಕ್ಷೀಯ ನೇಮಕದ ಪದಾಧಿಕಾರಿಗಳ ಪಟ್ಟಿ ಬದಲಿಸಬೇಕು, ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಪಕ್ಷ ನಿಷ್ಠರಿಗೆ ಸ್ಥಾನ ಕಲ್ಪಿಸಬೇಕು ಎಂದು ಕೇಳಿದ್ದು ನೆನಪಿಗೆ ಬರಲಿಲ್ಲ. ಯಡಿಯೂರಪ್ಪನವರ ಮಾತುಗಳು ಭಿನ್ನರನ್ನು ಕೆರಳಿಸಿತಾದರೂ, ಅದಕ್ಕೆ ಖುದ್ದು ಮುರಳೀಧರರಾವ್ ಅವರೇ ಸಾಕ್ಷಿಯಾಗಿ ಅಲ್ಲಿದ್ದುದರಿಂದ ಪರಿಸ್ಥಿತಿ ಕೈಗೆತ್ತಿಕೊಳ್ಳಲು ಹೋಗಲಿಲ್ಲ. ಸಭೆಯ ನಡಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮುರಳೀಧರರಾವ್ ಕೊನೆಯಲ್ಲಾಡಿದ ಮಾತುಗಳು ಭಿನ್ನರಿಗೊಂದಷ್ಟು ಸಾಂತ್ವನ ತಂದವು.

ಮಧ್ಯಾಹ್ನದ ನಂತರ ಮಂಡನೆಯಾದ ಜಿಲ್ಲಾವಾರು ವರದಿಯಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನವನ್ನು ವಿಜೃಂಭಣೆಯಿಂದ ಆಚರಿಸಿದ್ದರ ಬಗ್ಗೆ ಮಹಾಶಯರೊಬ್ಬರು ಅತ್ಯುತ್ಸಾಹದಿಂದ ಮಾಹಿತಿ ನೀಡಿದರೆ, ಈ ತುರ್ತು ಪರಿಸ್ಥಿತಿ ಜಾರಿಗೆ ತಂದ ಕಾಂಗ್ರೆಸ್ಸಿನ ಸಂಸದರಾಗಿದ್ದ ಬಸವರಾಜ್ ಅವರ ಪುತ್ರ ಜ್ಯೋತಿ ಗಣೇಶ್ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅಲ್ಲಿದ್ದುದು ಪರಿಸ್ಥಿತಿಯ ಅಣಕದಂತಿತ್ತು. ಎಂತೆಂಥವರು ಪದಾಧಿಕಾರಿಗಳಾಗಿದ್ದಾರೆ, ಭಿನ್ನಮತ ಏಕೆ ಸೃಷ್ಟಿಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿರಲಿಲ್ಲ.

Leave a Reply