ಬ್ರೆಕ್ಸಿಟ್: ವಿಜ್ಞಾನ ಸಮುದಾಯಕ್ಕೆ ಮುನಿಸು – ಭಗ್ನವಾಗಿದೆ ಸಂಶೋಧನೆಯ ಕನಸು

author-ananthramuಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂಬ ಒತ್ತಡ ಹೆಚ್ಚುವ ಮೊದಲೇ ಬ್ರಿಟನ್ನಿನ ವಿಜ್ಞಾನ ಸಮುದಾಯ ಬೆಚ್ಚಿತ್ತು. ಸದ್ಯದಲ್ಲಿ ಯೂರೋಪಿಯನ್ ಒಕ್ಕೂಟದ ನೆರವಿಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಬ್ರಿಟನ್ ಒಂದು ಹೆಜ್ಜೆಯನ್ನೂ ಮುಂದಿಡುವ ಸ್ಥಿತಿಯಲ್ಲಿಲ್ಲ. ವಿಜ್ಞಾನಿ ಎಂದೂ ಅರ್ಥಶಾಸ್ತ್ರಜ್ಞನ ಹೆಗಲ ಮೇಲೆ ನಿಂತಿರುತ್ತಾನೆ. ಈ ಸಾರ್ವತ್ರಿಕ ಸತ್ಯ ಬ್ರಿಟನ್‍ಗೂ ಗೊತ್ತು. ಜಗತ್ತಿನ ಅತಿ ಶ್ರೇಷ್ಠ ಭೌತವಿಜ್ಞಾನಿಗಳಲ್ಲಿ ಒಬ್ಬರೆಂದು ಪ್ರಸಿದ್ಧರಾಗಿರುವ, ವೀಲ್ ಚೇರ್‍ನಲ್ಲೇ ಕೂತು ವಿಶ್ವದ ಉಗಮ, ವಿಕಾಸ, ಅಂತ್ಯ ಕುರಿತು ಗಂಟಲಲ್ಲಿ ಮಾತನಾಡದಿದ್ದರೂ, ಧ್ವನಿ ಸಾಧನದಿಂದ ಶಬ್ದಗಳನ್ನು ರೂಪಿಸಿ ಜಗತ್ತಿಗೆ ಸಾರುವ ಸ್ಟೀಫನ್ ಹಾಕಿಂಗ್‍ಗೆ ಎಲ್ಲರಿಗಿಂತಲೂ ಹೆಚ್ಚಿನ ಶಾಕ್ ಅನ್ನುವುದಕ್ಕಿಂತ ನಿರಾಶೆ ಆಗಿತ್ತು. ಲಂಡನ್ನಿನ ರಾಯಲ್ ಸೊಸೈಟಿಯ 150 ವಿಜ್ಞಾನಿಗಳ ಸಹಿಪಡೆದು ‘ಟೈಮ್ಸ್’ ಪತ್ರಿಕೆಗೆ ಅಭಿಪ್ರಾಯವನ್ನು ರವಾನಿಸಿದ ಹಾಕಿಂಗ್‍ನ ಮಾತುಗಳಲ್ಲಿ ಎಚ್ಚರಿಕೆ ಇತ್ತು. ಯೂರೋಪಿಯನ್ ಒಕ್ಕೂಟದ ಎಲ್ಲ ದೇಶಗಳಿಗಿಂತ ಬ್ರಿಟನ್ ಮುನ್ನಡೆ ಸಾಧಿಸಲು ಆಗಿರುವುದು ಯೂರೋಪಿಯನ್ ಒಕ್ಕೂಟದ ದೊಡ್ಡ ಫಂಡಿಂಗ್‍ನಿಂದ ಮಾತ್ರ; ದೊಡ್ಡ ಷೇರನ್ನು ಬ್ರಿಟನ್ ಪಡೆಯುತ್ತಿರುವುದರಿಂದ. ದೊಡ್ಡ ಟ್ಯಾಲೆಂಟ್‍ಗಳ ಬಳಗವನ್ನು ಆಕರ್ಷಿಸಲು ಸಾಧ್ಯವಾಗಿರುವುದು ಬ್ರಿಟನ್ನಿಗೆ ಮಾತ್ರ. ಬ್ರಿಟನ್ ವೈಜ್ಞಾನಿಕವಾಗಿ ಇನ್ನಷ್ಟು ಔನತ್ಯಕ್ಕೆ ಏರಬೇಕೆಂದು ಬಯಸುವವರು ಈ ವಿಚಾರವನ್ನು ಗಮನಿಸಿರಲಿ ಎಂದಿದ್ದರು ಹಾಕಿಂಗ್. ಕಾಲದ ಬಗ್ಗೆ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಂ’ ಎಂಬ ವಿಖ್ಯಾತ ಕೃತಿ ಬರೆದು ಪ್ರಸಿದ್ಧರಾಗಿರುವ ಹಾಕಿಂಗ್, ಬ್ರಿಟನ್‍ಗೆ ಇಂಥ ‘ಕೆಟ್ಟ ಕಾಲ’ ಬರುತ್ತದೆಂದು ಊಹಿಸಿರಲಿಲ್ಲವಂತೆ.

ಜಗತ್ತಿನ ಅತಿ ಪ್ರಸಿದ್ಧ ವಿಜ್ಞಾನ ಪತ್ರಿಕೆ ಎಂದು ಹೆಸರುಗಳಿಸಿ, ತಾಜಾ ವಿಜ್ಞಾನ ಸಂಶೋಧನೆಗಳನ್ನು ಪಟಪಟ ಎಂದು ಪ್ರಕಟಿಸುವ ‘ನೇಚರ್’ ಎಂಬ ವಾರಪತ್ರಿಕೆ (ಸ್ಥಾಪನೆ 1869) ಈ ವರ್ಷದ ಮಾರ್ಚ್ ತಿಂಗಳಲ್ಲೇ ಬ್ರಿಟನ್ನಿನ ಬೇರೆ ಬೇರೆ ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ 2,000 ಮಂದಿ ವಿಜ್ಞಾನಿ, ಸಂಶೋಧಕರು, ವೈದ್ಯರು, ಎಂಜಿನಿಯರ್‍ಗಳನ್ನು ನೇರವಾಗಿ ಸಂದರ್ಶನ ಮಾಡಿ ‘ನೀವು ಯಾವ ಕಡೆ ವಾಲುತ್ತೀರಿ’ ಎಂದು ಕೇಳಿದಾಗ, ಅದು ಪತ್ರಿಕೆಗೂ ಗೊತ್ತಿತ್ತು, ಶೇ.83 ಮಂದಿ ‘ಯು.ಕೆ. ಯಿಂದ ಹೊರಗಿದ್ದರೆ ನಮಗೆ ಉಳಿಗಾಲವಿಲ್ಲ’ ಎಂದು ನುಡಿದಿದ್ದರು. ಶೇ. 17 ಮಂದಿ ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ‘ಹೇಗಿದ್ದರೂ ಪರವಾಗಿಲ್ಲ’ ಎಂದು ಉಡಾಫೆ ಮಾತನಾಡಿದ್ದರು.

ಸ್ಟೀಫನ್ ಹಾಕಿಂಗ್ ಟೈಮ್ಸ್ ಪತ್ರಿಕೆಯಲ್ಲಿ ‘ಒಕ್ಕೂಟದಲ್ಲಿ ಉಳಿಯಲಿ’ ಎಂದು ಸಮರ್ಥಿಸಿಕೊಂಡು ಬರೆದಾಗ ಪ್ರತ್ಯೇಕತೆಯ ಕ್ರಾಂತಿಯ ಮುಂದಾಳತ್ವ ವಹಿಸಿದ್ದ ಬೋರಿಸ್ ಜಾನ್ಸನ್‍ನ ಬೆಂಬಲಿಗನೊಬ್ಬ ಹೀಗೆ ಉತ್ತರಿಸಿದ: ‘ಸ್ಟೀಫನ್ ಹಾಕಿಂಗ್ ಮಹಾಶಯರೇ, ನೀವು ಜೀನಿಯಸ್. ಒಪ್ಪುತ್ತೇನೆ. ವಿಶ್ವದ ಬಗ್ಗೆ ನಿಮಗಿರುವ ಅಗಾಧ ಜ್ಞಾನವನ್ನೂ ಮೆಚ್ಚುತ್ತೇನೆ. ನೀವು ನನ್ನನ್ನು ಭಿನ್ನಮತೀಯನೆಂದರೂ ನನಗೇನೂ ಬೇಸರವಿಲ್ಲ. ಬುದ್ಧಿವಂತ ಬ್ರಿಟಿಷ್ ಪ್ರಜೆ ಒಕ್ಕೂಟದಿಂದ ಹೊರಗುಳಿಯಬಯಸುತ್ತಾನೆ. ಕ್ಷಮಿಸಿ, ನಿಮಗೆ ಪಾಲಿಟಿಕ್ಸ್ ಅರ್ಥವಾಗುವುದಿಲ್ಲ’ ಎಂದಿದ್ದ.

ವಸ್ತುಸ್ಥಿತಿ ಏನು? ಬ್ರಿಟನ್ನಿನ ವಿಜ್ಞಾನಲೋಕ ಈ ಪ್ರತ್ಯೇಕತೆಯಿಂದ ಬೆಚ್ಚಿರುವುದಂತೂ ದಿಟ. ರಾಯಲ್ ಕಾಲೇಜಿನ ಮನೋವಿಜ್ಞಾನಿಯೊಬ್ಬ ಬ್ರಿಟನ್ನಿನ ಈ ನಿರ್ಧಾರದಿಂದ ಬೇಸತ್ತು ‘ನನಗೆ ಝ್ಯೂರಿಚ್‍ಗೆ ಒನ್ ವೇ ಟಿಕೆಟ್ ಕೊಡಿ. ನಾನು ಮತ್ತೆ ಹಿಂತಿರುಗುವುದಿಲ್ಲ’ ಎಂದು ಹೇಳಿದ್ದನ್ನು ವಿಜ್ಞಾನ ಕ್ಷೇತ್ರದಲ್ಲಿ ಲಘುವಾಗಿ ಪರಿಗಣಿಸಬಾರದು ಎನ್ನುತ್ತಿದ್ದಾರೆ ಬ್ರಿಟನ್ನಿನ ವಿಜ್ಞಾನಿಗಳು. ಅದು ವಿಜ್ಞಾನಿಗಳ ಹತಾಶೆಯ ದ್ಯೋತಕ ಎಂಬ ಮಾತನ್ನು ಅವರು ಆಡುತ್ತಿದ್ದಾರೆ. ‘ವಿಜ್ಞಾನ ನಿಂತಿರುವುದೇ ಐಡಿಯಾಗಳ ಒಳಹರಿವಿನಿಂದಾಗಿ. ಬುದ್ಧಿವಂತರನ್ನು ಆ ಕ್ಷೇತ್ರಕ್ಕೆ ಎಳೆಯುವ ವಾತಾವರಣವಿದ್ದಾಗ ಮಾತ್ರ ವಿಜ್ಞಾನ ಬೆಳೆಯಬಲ್ಲದು. ಇಂದಿನ ದಿನಮಾನಗಳಲ್ಲಿ ಏನಿದ್ದರೂ ತಂಡದ ಸಾಧನೆ ಪ್ರಮುಖವಾಗುತ್ತದೆ. ಪ್ರತ್ಯೇಕ ಬ್ರಿಟನ್ ಎಂದರೆ ಅದು ವಿಜ್ಞಾನಕ್ಕೂ ಹಿನ್ನಡೆ ಎನ್ನುವುದು ಈಗ ವಿಜ್ಞಾನಿಗಳ ಒಮ್ಮತವಾಗಿ ರೂಪುಗೊಂಡಿದೆ.

ಬ್ರಿಟನ್ನಿನಲ್ಲಿರುವ ಶೇ. 5 ಮಂದಿ ವಿದ್ಯಾರ್ಥಿಗಳು ಬಂದಿರುವುದು ಯೂರೋಪಿಯನ್ ಒಕ್ಕೂಟದಿಂದ. ತರುಣರಿಗೆ ಬ್ರಿಟಿಷ್ ವಿಶ್ವವಿದ್ಯಾಲಯಗಳ ಆಕರ್ಷಣೆ ಮತ್ತು ಅವರು ಕಟ್ಟುವ ಕನಸು ದೊಡ್ಡದು. ಬ್ರಿಟನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶೇ. 23 ಮಂದಿ ಸಂಶೋಧಕರು ಯೂರೋಪಿಯನ್ ಒಕ್ಕೂಟದಿಂದ ಬಂದವರು. ಬ್ರಿಟನ್ ಒಳಗೊಂಡಂತೆ ಸದ್ಯ  ಯೂರೋಪಿಯನ್ ಒಕ್ಕೂಟದಲ್ಲಿ ವಿಜ್ಞಾನದ ಸಂಶೋಧನೆಗಾಗಿ ವಾರ್ಷಿಕ 18.6 ಬಿಲಿಯನ್ ಯೂರೋ ಲಭ್ಯವಿದೆ. ಅದರಲ್ಲೂ ಬ್ರಿಟನ್‍ಗೆ ವಿಜ್ಞಾನ ಸಂಶೋಧನೆಗಾಗಿ 1.4 ಬಿಲಿಯನ್ ಯೂರೋ ಸಿಕ್ಕುತ್ತಿದೆ. ಈಗ ತನ್ನ ನಿಲುವಿನಿಂದಾಗಿ ಬ್ರಿಟನ್ ಮರಳಲಾಗದ ಸ್ಥಿತಿಗೆ ತಲಪಿದೆ. ಅಂದರೆ ಒಕ್ಕೂಟದಿಂದ ಫಂಡ್ ಖೋತಾ ಆಗಲಿದೆ. ಈ ಚಿಂತೆಗೂ ಒಂದು ಅರ್ಥವಿದೆ. ಜಾಗತಿಕ ಮಟ್ಟದಲ್ಲಿ ಸಂಶೋಧನ ಕ್ಷೇತ್ರದ ಶೇ. 15 ಪಾಲು ಬ್ರಿಟನ್ನಿನಿಂದ ಬರುತ್ತಿದೆ. 2007ರಿಂದ 2013ರವರೆಗೆ ಬ್ರಿಟನ್ನಿಗೆ 7.6 ಬಿಲಿಯನ್ ಯೂರೋ ನೀಡಿ ಬ್ರಿಟನ್ನಿನ ವಿಜ್ಞಾನವನ್ನು ಬೆಳೆಸಿದೆ. ಅಷ್ಟೇ ಅಲ್ಲ, ಇಡೀ ಬ್ರಿಟನ್ನಿಗೆ ನೀಡುವ ಕಾಲುಭಾಗದ ಫಂಡ್ ಕೆಂಬ್ರಿಡ್ಜ್ ಯೂನಿವರ್ಸಿಟಿಯ ಸಂಶೋಧನೆಗೆ ಹೋಗುತ್ತದೆ. ವಿಜ್ಞಾನ ಸಂಶೋಧನೆಯಲ್ಲಿ ಬ್ರಿಟನ್ ಇತರ ಯೂರೋಪ್ ದೇಶಗಳಿಗಿಂತಲೂ ಮುಂದಿದೆ. ಇನ್ನೂ ಒಂದು ಅಂಶವೂ ನಿಜ. ಬ್ರಿಟನ್ನಿನಿಂದ ಹೊರಬರುತ್ತಿರುವ ಶೇ. 50 ಸಂಶೋಧನ ಲೇಖನಗಳಿಗೆ ಯೂರೋಪ್ ಒಕ್ಕೂಟದ ವಿಜ್ಞಾನಿಗಳು ಸಹಲೇಖಕರಾಗಿದ್ದಾರೆ.

ಬ್ರಿಟನ್ನಿನ ಬಯೋ ಇನ್‍ಫರ್ಮೆಟಿಕ್ಸ್ ಸಂಸ್ಥೆ ವಸ್ತುಶಃ ಗಾಸಿಯಾಗಿಬಿಟ್ಟಿದೆ. ‘ವಿದೇಶದಿಂದ ಬ್ರಿಟನ್ನಿಗೆ ಬರುವವರ ವಲಸೆ ತಡೆಯುವುದೇ ಪ್ರತ್ಯೇಕವಾದಿಗಳ ಮೂಲಮಂತ್ರವಾಗಿದ್ದರೆ, ಈಗ ನಾವು ಬದಲಾಗದ ಪರಿಸ್ಥಿತಿಯಲ್ಲಿ ಬ್ರಿಟನ್ನಿನಿಂದ ಹೊರಹೋಗುವ `ಬ್ರೈನ್ ಡ್ರೈನ್’ ಕುರಿತು ಯೋಚಿಸಬೇಕಲ್ಲ?  ಬ್ರಿಟನ್ ಜಗತ್ತಿನ ಜನಸಂಖ್ಯೆ ಶೇ. ಒಂದು ಭಾಗ ಮಾತ್ರ. ಆದರೆ ಜಗತ್ತಿನ ಶೇ. 4 ಭಾಗದ ಸಂಶೋಧನೆ ಆಗುತ್ತಿರುವುದು ಇಲ್ಲಿಯೇ. ಫಂಡ್ ಕೊರತೆಯಾದರೆ ನಮ್ಮ ಸ್ಥಿತಿ ಎಲ್ಲಿ ನಿಲ್ಲುತ್ತದೆ? ಪರರ ಕೈಯೊಡ್ಡಬೇಕಾಗುತ್ತದೆಯಲ್ಲ?’ ಎನ್ನುತ್ತಿದೆ.

‘ಅಂತಾರಾಷ್ಟ್ರೀಯ ಸಹಯೋಗವಿಲ್ಲದಿದ್ದರೆ ಹಿಗ್ಸ ಬೋಸಾನ್ ಕಣದ ಇರುವಿಕೆಯ ಸಾಧ್ಯತೆಯನ್ನು ನಾನಾದರೂ ಹೇಗೆ ಮಾಡಲು ಸಾಧ್ಯವಾಗುತ್ತಿತ್ತು. ಅದನ್ನು ಸಂಶೋಧಿಸಿ ಇದೆ ಎಂದು ಸಾಬೀತು ಪಡಿಸಿದ್ದು ‘ಸರ್ನ್’ (European Organisation for Nuclear Research) ಇಂಥವು  ರಾಜಕೀಯ ವ್ಯಕ್ತಿಗಳಿಗೆ ಅರ್ಥವಾಗುವುದಿಲ್ಲ’ ಎಂದು ಸಂದರ್ಶನವೊಂದರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ಹೇಳಿದ್ದಾರೆ. ಬ್ರಿಟನ್ ಹೊರನಡೆಯುವುದು ಒಂದು ದುಬಾರಿ ಹೆಜ್ಜೆ, ಯಾವ ದೃಷ್ಟಿಯಿಂದಲೂ ವಿಜ್ಞಾನಕ್ಕೆ ಇದು ಪೂರಕವಲ್ಲ ಎಂದಿದ್ದಾರೆ.

BREXIT 5

ಬ್ರಿಟನ್ನಿನ ಕ್ಯಾನ್ಸರ್ ಸಂಶೋಧನ ಸಂಸ್ಥೆಗಳಿಗೆ ‘ಬ್ರೆಕ್ಸಿಟ್’ ನಿಜಕ್ಕೂ ಕ್ಯಾನ್ಸರ್ ತಂದಿದೆ. ಏಕೆಂದರೆ ಉಳಿದ ವಿಜ್ಞಾನ ಸಂಸ್ಥೆಗಳಿಗಿಂತ ಯೂರೋಪಿಯನ್ ಒಕ್ಕೂಟ ಹೆಚ್ಚು ಧನಸಹಾಯ ನೀಡುತ್ತಿರುವುದು ಕ್ಯಾನ್ಸರ್ ಸಂಶೋಧನ ಸಂಸ್ಥೆಗಳಿಗೆ. ಖೇದವೆಂದರೆ ಬ್ರಿಟನ್ನಿನ ಶೇ.50 ಪ್ರಜೆಗಳು ವಯಸ್ಸಾದಂತೆ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ ಎಂಬ ಸಂಶೋಧನ ವರದಿಯೂ ಗಾಬರಿ ಹುಟ್ಟಿಸುತ್ತಿದೆ. ವಾರ್ಷಿಕ 1.5 ಬಿಲಿಯನ್ ಯೂರೋ ನೀಡಿ ಯೂರೋಪಿಯನ್ ಒಕ್ಕೂಟ ಬ್ರಿಟನ್ನಿನ ಈ ಸಂಶೋಧನೆಯನ್ನು ಬೆಂಬಲಿಸುತ್ತಿದೆ. ನಮ್ಮ ಸಂಸ್ಥೆಗಳ ಗತಿಯೇನು ಎಂಬುದು ನಿರಾಶ್ರಿತರ ಸ್ಥಿತಿಯನ್ನು ನೆನಪಿಸುತ್ತದೆ. ನಾಟಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಸಸ್ಯಗಳ ಬೇರಿನ ಬೆಳವಣಿಗೆಯ ಬಗ್ಗೆ ಸಂಶೋಧೆನ ನಡೆಸಲು ಒಂಬತ್ತು ತಿಂಗಳ ಹಿಂದೆ ಬಂದ ಒಬ್ಬ ಸಂಶೋಧಕಿ ‘ನನಗೆ ಬ್ರಿಟನ್ನಿನ ಈ ನಿರ್ಣಯದಿಂದ ಅಭದ್ರತೆ ಕಾಡುತ್ತಿದೆ. ಆದರೆ ನನ್ನ ಬೇರುಗಳನ್ನು ಎಲ್ಲಿ ಊರಲಿ ಎನ್ನುವುದೇ ನನ್ನ ಸದ್ಯದ ಕಳವಳ’ ಎಂದಿದ್ದಾಳೆ. ಲಂಡನ್ ಇಂಪೀರಿಯಲ್ ಕಾಲೇಜಿನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಹಿಂದಿನ ದಿನವಷ್ಟೇ ಬಂದ ಯೂರೋಪಿಯನ್ ಯೂನಿಯನ್ ಒಕ್ಕೂಟದ ಸಂಶೋಧಕಿ ಕೇವಲ 24 ಗಂಟೆಗಳಲ್ಲಿ ನನ್ನ ಭವಿಷ್ಯವೇ ಬದಲಾಗುತ್ತಿದೆ ಎನ್ನುತ್ತಿದ್ದಾಳೆ.

ಆಸ್ಟ್ರಿಯದ ಸೈನ್ಸ್ ಅಕಾಡೆಮಿಗೆ ಸೌರಜ್ವಾಲೆಗಳ ಬಗ್ಗೆ ಸಂಶೋಧನೆ ಮಾಡಲು ದೊಡ್ಡ ಮೊತ್ತವನ್ನು ಒಕ್ಕೂಟ ನೀಡಿದೆ. ಆದರೆ ಸಂಶೋಧನೆಯ ಗೈಡ್ ಬ್ರಿಟನ್ನಿನವರು. ನಾವು ಹೇಗೆ ಮುಂದುವರಿಯುವುದು ಎನ್ನುತ್ತಿದೆ ಅಕಾಡೆಮಿ. ಭಾರತೀಯ ಸಂಜಾತ, ರಸಾಯನ ವಿಜ್ಞಾನದಲ್ಲಿ 2009ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸರ್. ವೆಂಕಟರಾಮನ್ ರಾಮಕೃಷ್ಣನ್ ದೊಡ್ಡ ಧ್ವನಿ ಎತ್ತಿದ್ದಾರೆ. ಅವರೀಗ ಬ್ರಿಟನ್ನಿನ ರಾಯಲ್ ಸೊಸೈಟಿಗೆ ಅಧ್ಯಕ್ಷರು. ‘ಈಗ ಬ್ರಿಟನ್ನಿನಲ್ಲಿ ಯೂರೋಪಿಯನ್ ಒಕ್ಕೂಟದಿಂದ ಬಂದ 30,000 ವಿಜ್ಞಾನಿಗಳು ಕೆಲಸಮಾಡುತ್ತಿದ್ದಾರೆ. ಅವರಿಗೆಲ್ಲ ಅಭದ್ರತೆ ಕಾಡುತ್ತಿದೆ. ಬ್ರಿಟನ್ ಮೊದಲು ಮಾಡಬೇಕಾದ ಕೆಲಸವೆಂದರೆ ಬ್ರಿಟನ್ನಿನಲ್ಲೇ ಅವರನ್ನು ಉಳಿಸಿಕೊಳ್ಳುವುದು ಮತ್ತು ಅವರ ಸಂಶೋಧನೆಗೆ ಯುಕ್ತ ಪರಿಸರವನ್ನು ಒದಗಿಸುವುದು. ಇದು ಆದ್ಯತೆಯಾಗಬೇಕು.’ ಎಂದು ಸಂದೇಶ ಕಳಿಸಿದ್ದಾರೆ.

ಅನಿಶ್ಚಿತತೆಯಲ್ಲಿ ಯಾವ ವಿಜ್ಞಾನ ತಂತ್ರಜ್ಞಾನವೂ ಅರಳುವುದಿಲ್ಲ. ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ಬೀಗುತ್ತಿದ್ದ ಬ್ರಿಟನ್‍ಗೆ ಈಗ ಸೂರ್ಯ ಅಸ್ತಂಗತನಾಗುತ್ತಾನೆ ಎಂಬ ಸತ್ಯವು ಗೊತ್ತಾಗಿದೆ.  ರಾಜಕೀಯ ನಡೆ ಬ್ರಿಟನ್ನನ್ನು ಎತ್ತ ನಡೆಸುತ್ತದೋ ಎಂದು ಜಗತ್ತು ಅತ್ತ ನೋಡುತ್ತಿದೆ..

Leave a Reply