ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಸ್ವಾತಿ ಹತ್ಯೆಗೈದಿದ್ದ ಕೊಲೆಗಾರ ಸಿಕ್ಕ, ಈ ದಾರುಣ ಪ್ರಕರಣದ ಪಾಠವೇನು?

ಡಿಜಿಟಲ್ ಕನ್ನಡ ಟೀಮ್:

ರೈಲ್ವೇ ನಿಲ್ದಾಣದಲ್ಲಿ ಚೆನ್ನೈ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣ ಒಂದು ವಾರಗಳ ನಂತರ ಸ್ಪಷ್ಟ ಚಿತ್ರಣ ಪಡೆದಿದೆ. ಶುಕ್ರವಾರ ಈ ಪ್ರಕರಣದ ಪ್ರಮುಖ ಆರೋಪಿ ರಾಮ್ ಕುಮಾರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಯಾದ ಹಲವು ದಿನಗಳ ನಂತರವೂ ಪೊಲೀಸರಿಗೆ ಈ ಕೊಲೆಯ ಹಿಂದಿನ ಉದ್ದೇಶ ತಿಳಿಯದೇ ಗೊಂದಲ ಸೃಷ್ಟಿಸಿತ್ತು. ಈಗ ಆರೋಪಿ ಬಂಧನದ ನಂತರ ಪೊಲೀಸರು ಹತ್ಯೆಯ ಕಾರಣ ಪ್ರಕಟಿಸಿದ್ದಾರೆ. ಅದೇನಂದ್ರೆ, ಸ್ವಾತಿಯ ಮನೆ ಬಳಿಯೇ ವಾಸವಾಗಿದ್ದ ರಾಮ್ ಕುಮಾರ್, ಆಕೆಯ ಮೇಲೆ ಮೋಹ ಹೊಂದಿದ್ದ. ತನ್ನ ಪ್ರೀತಿಯ ಬಗ್ಗೆ ಸ್ವಾತಿಯೊಂದಿಗೆ ಹಂಚಿಕೊಂಡ. ಆದರೆ, ಸ್ವಾತಿ ಈತನ ಪ್ರೀತಿ ನಿರಾಕರಿಸಿದ ಕಾರಣ, ರಾಮ್ ಕುಮಾರ್ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಆತ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೂ ಪ್ರಯತ್ನಿಸಿದ್ದ. ಆಗ ಪೊಲೀಸ್ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ದು ರಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಪೊಲೀಸರು.

ಈ ಎಲ್ಲದರ ನಡುವೆ ಪ್ರಕರಣದಲ್ಲಿ ನಮ್ಮನ್ನು ಕಾಡುವುದು ಎರಡು ಸಂಗತಿಗಳು. ಈಗಿನ ಯುವ ಪೀಳಿಗೆ ಪ್ರೀತಿ ನಿವೇದನೆ ತಿರಸ್ಕರಿಸಿದರೆ, ಪ್ರಾಣವನ್ನೇ ತೆಗೆಯುವ ಕ್ರೂರ ನಿರ್ಧಾರಕ್ಕೆ ಬರುತ್ತಿರುವುದು. ಮತ್ತೊಂದು, ರೈಲ್ವೆ ನಿಲ್ದಾಣದಲ್ಲಿ ಸ್ವಾತಿ ಮೇಲೆ ಹಲ್ಲೆ ನಡೆದ ನಂತರ ಎರಡು ತಾಸುಗಳಾದರೂ ಆಕೆಯ ದೇಹ ದಿಕ್ಕಿಲ್ಲದೇ ಬಿದ್ದದ್ದು ಹಾಗೂ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ರೈಲು ಹತ್ತಿ ತೆರಳಿದ್ದು!

ತಾವು ಪ್ರೀತಿಸಿದವರು ನಮ್ಮನ್ನು ಪ್ರೀತಿಸಲೇ ಬೇಕು ಎಂಬ ಭ್ರಮೆ ಯುವ ಪೀಳಿಗೆಯಲ್ಲಿ ಆವರಿಸುತ್ತಿದೆ. ಆಗಾಗ್ಗೆ ಇಂಥಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಪ್ರೇಮವೇ ಜೀವನ, ಅದಿಲ್ಲದಿದ್ದರೆ ಜೀವನ ಮುಗಿಯಿತು ಎಂಬ ನಿರ್ಧಾರಕ್ಕೆ ಬರುವಷ್ಟು ಯುವಕರು ದುರ್ಬಲ ಮನಸ್ಥಿತಿಗೆ ಬರುತ್ತಿರುವುದು ದೌರ್ಭಾಗ್ಯ. ಇನ್ನು ನಮ್ಮ ಸುತ್ತ ಯಾರಿಗೆ ಏನೇ ಆದರು ಅದನ್ನು ನೋಡಿ ಸುಮ್ಮನಾಗುತ್ತೀವೆ ಹೊರತು, ಇಲ್ಲದ ಉಸಾಬರಿ ನಮಗೇಕೆ ಎಂಬ ನಿರ್ಲಕ್ಷ್ಯ ಮನೋಭಾವವೇ ಅಂತಿಮವಾಗುತ್ತದೆ.

ಸ್ವಾತಿ ಹತ್ಯೆ ಸಾರುತ್ತಿರುವ ಎರಡು ಆತಂಕದ ವಾಸ್ತವಗಳಿವು.

Leave a Reply