‘ಅಲ್ಲಾಹು ಅಕ್ಬರ್’ ಎನ್ನುತ್ತಲೇ 20 ವಿದೇಶಿಗರನ್ನು ಕೊಂದ ಉಗ್ರರು, ಮೃತರಲ್ಲೊಬ್ಬಳು ಭಾರತೀಯಳು

ಡಿಜಿಟಲ್ ಕನ್ನಡ ಟೀಮ್:

ಒತ್ತೆಯಾಳುಗಳೆಲ್ಲ ಸುರಕ್ಷಿತ, ಉಗ್ರರು ಹತ ಎಂದಷ್ಟೇ ವರದಿಯಾಗುತ್ತಿದ್ದ ಢಾಕಾ ಉಗ್ರದಾಳಿಯ ಸಂಪೂರ್ಣ ವಿವರಗಳು ಇದೀಗ ತೆರೆದುಕೊಳ್ಳುತ್ತಿವೆ.

ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಗುಲ್ಶನ್ ನ ಹೋಲಿ ಆರ್ಟಿಸಾನ್ ಬೇಕರಿಗೆ ನುಗ್ಗಿದ ಐ ಎಸ್ ಐ ಎಸ್ ಉಗ್ರರು 20 ವಿದೇಶಿಯರನ್ನು ಚೂಪಾದ ಆಯುಧಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿರುವಂತೆ, ತರುಷಿ ಜೈನ್ ಎಂಬ ಭಾರತೀಯ ಯುವತಿಯೂ ಮೃತಳಾಗಿದ್ದಾಳೆ. 19ರ ಹರೆಯದ ಈಕೆ, ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆಯ ತಂದೆ-ತಾಯಿಗೆ ಜತೆ ಮಾತನಾಡಿ ವೀಸಾ ವ್ಯವಸ್ಥೆ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

sushma tweet

ಈ ಸ್ಥಳವು ಢಾಕಾದ ಶ್ರೀಮಂತರು ಕಲೆಯುವ ತಾಣವಾಗಿದ್ದು, ರಾಯಭಾರ ಕಚೇರಿಗಳ ಸಮುಚ್ಛಯಕ್ಕೆ ತಾಗಿಕೊಂಡಿದೆ. ಹೀಗಾಗಿ ದಾಳಿಯ ಉದ್ದೇಶ ಸ್ಪಷ್ಟವಾಗಿತ್ತು. ಈ ದಾಳಿಯಲ್ಲಿ 20 ವಿದೇಶಿಗರ ಹತ್ಯೆಯಾಗಿದೆ ಎಂಬುದು ಬಾಂಗ್ಲಾ ಸರ್ಕಾರ ನೀಡುತ್ತಿರುವ ಅಂಕಿ ಅಂಶ. ಆದ್ರೆ, ಈ ಕೃತ್ಯದ ಜವಾಬ್ದಾರಿ ಹೊತ್ತಿರುವ ಐ ಎಸ್ ಐ ಎಸ್ ಮಾತ್ರ, 24 ಮಂದಿಯನ್ನು ಹತ್ಯೆ ಮಾಡಲಾಗಿದ್ದು 40 ಕ್ಕೂ ಹೆಚ್ಚು ಮಂದಿ ಗುಂಡಿನ ಪೆಟ್ಟು ತಿಂದಿದ್ದಾರೆ ಎಂದಿದೆ. ದಾಳಿಯ ಕುರಿತ ಚಿತ್ರಗಳನ್ನು ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದೆ. ಈ ಚಿತ್ರಗಳಲ್ಲಿ ಒತ್ತೆಯಾಳುಗಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತಿಳಿಯುತ್ತದೆ.

bangla bakery

ಈ ದಾಳಿಯಲ್ಲಿ ಭಾಗಿಯಾಗಿದ್ದ 6 ಉಗ್ರರನ್ನು ಬಾಂಗ್ಲಾ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿ 13 ಜನರನ್ನು ರಕ್ಷಿಸಿದ್ದಾರೆ. ರೈಫಲ್, ಮೊನಚಾದ ಮಾರಕ ಅಸ್ತ್ರ ಮತ್ತು ಸ್ಫೋಟಕಗಳೊಂದಿಗೆ ಈ ಕಟ್ಟಡದೊಳಗೆ ನುಗ್ಗಿದ ಉಗ್ರರು ಹೆಚ್ಚಿನ ಪ್ರಮಾಣದ ವಿದೇಶಿಗರು ಸೇರಿದಂತೆ 30 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು. ಸುಮಾರು 100 ಹಿರಿಯ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿ, ಸುದೀರ್ಘ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಣ ಬಿಟ್ಟಿದ್ದಾರೆ.

ಈ ದಾಳಿಯ ವೇಳೆ ಈ ರೆಸ್ಟೊರೆಂಟ್ ನ ಸಿಬ್ಬಂದಿ ಸುಮೊನ್ ರೀಜಾ ಪಾರಾಗಿದ್ದು, ದಾಳಿಯನ್ನು ವಿವರಿಸಿದ್ದು ಹೀಗೆ:

‘ಆರಂಭದಲ್ಲಿ ಕೆಲವು ಸ್ಫೋಟಕ ಸಿಡಿಸುವ ಮೂಲಕ ಎಲ್ಲರಲ್ಲೂ ಗಾಬರಿ ಸೃಷ್ಟಿಸಿದರು. ಈ ಗೊಂದಲದ ಮಧ್ಯೆ ನಾನು ಅಲ್ಲಿಂದ ಪಾರಾಗುವಲ್ಲಿ ಯಶಸ್ವಿಯಾದೆ. ಬಂದೂಕು ಕತ್ತಿ ಮತ್ತು ಬಾಂಬ್ ಗಳೊಂದಿಗೆ ದಾಳಿ ಮಾಡಿದ ಉಗ್ರರು, ಬಾಂಬ್ ಸ್ಫೋಟಿಸುವ ಮುನ್ನ ಅಲ್ಲಾಹು ಅಕ್ಬರ್ ಎಂದು ಕೂಗಿದರು.’

ಇನ್ನು ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ಪ್ರಕಾರ, 26 ಜನರು ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. 6 ಮಂದಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿದೆ. ಈ ಗಾಯಾಳುಗಳಲ್ಲಿ ಕೆಲವರಿಗೆ ಗುಂಡೇಟು ಬಿದ್ದರೆ ಕೆಲವರ ಮೂಳೆ ಮುರಿದಿದೆ ಎನ್ನಲಾಗಿದೆ.

ಈ ದಾಳಿಯ ಬಗ್ಗೆ ಜಪಾನ್ ಸರ್ಕಾರದ ವಕ್ತಾರ ಪ್ರತಿಕ್ರಿಯಿಸಿದ್ದು, ಈ ದಾಳಿಯ ವೇಳೆ 8 ಜಪಾನಿ ಪ್ರಜೆಗಳು ರೆಸ್ಟೊರೆಂಟ್ ನಲ್ಲಿದ್ದರು. ಆ ಪೈಕಿ ಓರ್ವ ಜಪಾನಿ ಪ್ರಜೆಯನ್ನು ರಕ್ಷಿಸಲಾಗಿದ್ದು, ಮಿಕ್ಕ 7 ಮಂದಿ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

Leave a Reply