ರಸಗೊಬ್ಬರ ಬೆಲೆ ಇಳಿಕೆ ಪ್ರಕಟಿಸಿದ ಅನಂತಕುಮಾರ್, ಅರುಣ್ ಜೇಟ್ಲಿ ಆಸ್ತಿ ಮೌಲ್ಯದಲ್ಲಿ ಕುಸಿತ, ಶಂಕಿತ ಉಗ್ರರಿಗೆ ಒವೈಸಿ ಕಾನೂನು ನೆರವು

ಗಾಂಧಿ ನಗರದಲ್ಲಿ  ಪೋಸ್ಟರ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್. ಬಿ ಪ್ಯಾಕ್ ಸಂಸ್ಥೆಯೂ ಈ ಅಭಿಯಾನದಲ್ಲಿ ಭಾಗವಹಿಸಿತ್ತು.

ಡಿಜಿಟಲ್ ಕನ್ನಡ ಟೀಮ್:

ರಸಗೊಬ್ಬರ ಬೆಲೆ ಇಳಿಸ್ತಿವಿ ಅಂದ್ರು ಅಂನತಕುಮಾರ್

‘ರಸಗೊಬ್ಬರಗಳ ಬೆಲೆ ಕಡಿಮೆ ಮಾಡ್ತೀವಿ.. ಪ್ರತಿ ಟನ್ ಗೆ ₹2 ಸಾವಿರದಿಂದ ₹4 ಸಾವಿರದಷ್ಟು ಇಳಿಕೆಯಾಗಲಿದ್ದು, ಪರಿಷ್ಕೃತ ದರ ಜುಲೈ 4ರಿಂದಲೇ ಜಾರಿಯಾಗಲಿದೆ’ ಎಂದಿದ್ದಾರೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್.

ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಅನಂತಕುಮಾರ್ ಹೇಳಿದಿಷ್ಟು:

‘ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಧಾನಿಯವರು ರಸಗೊಬ್ಬರ ಬೆಲೆ ಇಳಿಕೆ ಮಾಡುವಂತೆ ಸೂಚಿಸಿದ್ದಾರೆ. ಡಿಎಪಿ ರಸಗೊಬ್ಬರ ಪ್ರತಿ ಟನ್ನಿಗೆ ₹ 2 ಸಾವಿರ, ಎಂಓಪಿ ಹಾಗೂ ಎಂಕೆಪಿ ರಸಗೊಬ್ಬರಗಳ ಬೆಲೆ ₹ 4 ಸಾವಿರ ಇಳಿಕೆಯಾಗಲಿದೆ. ಇದರಿಂದ ಪ್ರತಿ ಚೀಲಕ್ಕೆ ಡಿಎಪಿ ₹ 100 ರಿಂದ ₹ 150 ಹಾಗೂ ಎಂಓಪಿ ಮತ್ತು ಎಂಕೆಪಿ ಪ್ರತಿ ಚೀಲಕ್ಕೆ ₹ 300 ರಿಂದ ₹ 400 ಕಡಿಮೆಯಾಗಲಿದೆ. ಕಳೆದ 15 ವರ್ಷಗಳಲ್ಲಿ ಯಾವುದೇ ಸರ್ಕಾರ ರಸಗೊಬ್ಬರ ಬೆಲೆಯನ್ನು ಇಳಿಕೆ ಮಾಡಿರಲಿಲ್ಲ. ಕರ್ನಾಟಕ ಸರ್ಕಾರದಿಂದ ಎಷ್ಟೇ ಬೇಡಿಕೆ ಬಂದರೂ ರಸಗೊಬ್ಬರ ನೀಡಲು ಸಿದ್ಧ. ಈಗಾಗಲೇ ಹತ್ತು ಲಕ್ಷ ಟನ್ ಗೊಬ್ಬರ ಇಲ್ಲಿಯೇ ಶೇಖರಿಸಿಡಲಾಗಿದೆ. ರಾಜ್ಯದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕವಾಗಿ ಎರಡು ರಸಗೊಬ್ಬರ ಕಾರ್ಖಾನೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. ಆದ್ರೆ, ರಾಜ್ಯ ಸರ್ಕಾರ ಈ ಕಾರ್ಖಾನೆಗಳಿಗೆ ಅಗತ್ಯ ಭೂಮಿ ಮತ್ತು ಇತರೆ ಮೂಲ ಸೌಕರ್ಯ ನೀಡುತ್ತಿಲ್ಲ.’

ಶೀಘ್ರವೇ ಅರ್ಹ ರೈತರಿಗೆ ಬಗರ್ ಹುಕುಂ ಭೂಮಿ

ರಾಜ್ಯಾದ್ಯಂತ ಐದು ಲಕ್ಷ ಮಂದಿ ಬಗರ್ ಹುಕುಂ ಸಾಗುವಳಿ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದು, 6 ಲಕ್ಷ ಎಕರೆ ಅರಣ್ಯ ಭೂಮಿ ಕೇಳಿದ್ದಾರೆ. ಇದೇ ವರ್ಷ ಡಿಸೆಂಬರ್ ಒಳಗಾಗಿ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಈ ಜಮೀನು ನೀಡಲಾಗುವುದು ಎಂದಿದ್ದಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ಅಷ್ಟೇ ಅಲ್ಲದೆ, ಸರ್ವೇಯರ್ ಗಳು, ಗ್ರಾಮಲೆಕ್ಕಿಗರು ಹಾಗೂ ತಹಸೀಲ್ದಾರ್ ಸೇರಿದಂತೆ 3000 ಕ್ಕೂ ಅಧಿಕ ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದರು.

ಅರುಣ್ ಜೇಟ್ಲಿ ಆಸ್ತಿ ಮೌಲ್ಯದಲ್ಲಿ ಕುಸಿತ

ಕಳೆದ ಆರ್ಥಿಕ ವರ್ಷಕ್ಕಿಂತ ಈ ವರ್ಷದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆಸ್ತಿ ಮೌಲ್ಯ ಶೇ. 8.9 ರಷ್ಟು ಕುಸಿತ ಕಂಡಿದೆ. 2014-15ನೇ ಸಾಲಿನಲ್ಲಿ ₹ 67.01 ಕೋಟಿಯಷ್ಟಿದ್ದ ಜೇಟ್ಲಿ ಅವರ ಆಸ್ತಿ ಮೌಲ್ಯ, 2015-16ನೇ ಸಾಲಿಗೆ ₹ 60.99 ಕೋಟಿಯಷ್ಟು ಇಳಿದಿದೆ. ಇನ್ನು ಜೇಟ್ಲಿ ಅವರ ಬಳಿ ಇದ್ದ 5.6 ಕೆ.ಜಿ ಚಿನ್ನದ ಮೌಲ್ಯ 2015ರಲ್ಲಿ ₹ 1.25 ಕೋಟಿಯಷ್ಟಿತ್ತು. ಈ ವರ್ಷ ಅದು ₹ 1.35 ಕೋಟಿಯಷ್ಟಾಗಿದೆ. ಪ್ರಧಾನಿ ಅವರ ವೆಬ್ ಸೈಟ್ ನಲ್ಲಿ ಈ ಬಗ್ಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಮೌಲ್ಯ ₹ 15 ಲಕ್ಷದಷ್ಟು ಹೆಚ್ಚಾಗಿದೆ. 2013-14 ರಲ್ಲಿ ₹ 1.26 ಕೋಟಿಯಷ್ಟಿದ್ದ ಆಸ್ತಿ ಮೌಲ್ಯ 2014-15ರ ವೇಳೆಗೆ 1.41 ಕೋಟಿಯಷ್ಟು ಹೆಚ್ಚಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಕಟ್ಟಡಗಳ ಚಾವಣಿ ಮೇಲೆ ಸೌರ ವಿದ್ಯುತ್ ಅಳವಡಿಕೆಗೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ನಡುವೆ ಒಪ್ಪಂದವಾಗಿದೆ. ಇದರೊಂದಿಗೆ ಎಸ್ ಬಿ ಐಗೆ 625 ಮಿಲಿಯನ್ ಅಮೆರಿಕನ್ ಡಾಲರ್ (₹ 4200 ಕೋಟಿಯಷ್ಟು) ವಿಶ್ವಬ್ಯಾಂಕ್ ನಿಂದ ಬಂದಿದೆ. ಎಸ್ ಬಿ ಐ ಮುಂದಿನ ದಿನಗಳಲ್ಲಿ ದೇಶದಲ್ಲಿ ವಾಣಿಜ್ಯ, ಕೈಗಾರಿಕ ಮತ್ತು ಸಂಘ ಸಂಸ್ಥೆಗಳ ಕಟ್ಟಡದ ಮೇಲೆ ಈ ವ್ಯವಸ್ಥೆ ಅಳವಡಿಕೆಗೆ ಅಗತ್ಯ ಸಾಲ ನೀಡಲಿದೆ. ಇದರಿಂದಾಗಿ ಭಾರತದಲ್ಲಿ ಸುಮಾರು 400 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯ ಗುರಿ ಇದೆ.
  • ಜೈಪುರದಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಎಂಡಬ್ಲ್ಯು ಕಾರು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು ಐವರಿಗೆ ಗಾಯವಾಗಿದೆ. ಈ ಪ್ರಕರಣದಲ್ಲಿ ಸಿಕರ್ ಕ್ಷೇತ್ರದ ಶಾಸಕ ನಂದ ಕಿಶೋರ್ ಮೆಹ್ರಿಯಾ ಅವರ ಪುತ್ರ ಸಿದ್ಧಾರ್ಥ್ ಮೆಹ್ರಿಯಾ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ಧಾರ್ಥ್, ‘ಕಾರನ್ನು ನಾನು ಓಡಿಸುತ್ತಿರಲಿಲ್ಲ ಬದಲಾಗಿ ಡ್ರೈವರ್ ಓಡಿಸುತ್ತಿದ್ದ’ ಎಂದು ತನ್ನ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾನೆ.
  • ಹೈದರಾಬಾದ್ ನಲ್ಲಿ ಬಂಧಿತರಾಗಿರುವ ಐವರು ಶಂಕಿತ ಐಎಸ್ಐಎಸ್ ಉಗ್ರರಿಗೆ ಕಾನೂನಿನ ನೆರವು ನೀಡುವುದಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಈ ಬಗ್ಗೆ ಓವೈಸಿ ಹೇಳಿರುವುದಿಷ್ಟು: ‘ಕೆಲವು ಉಗ್ರ ಸಂಘಟನೆಗಳು ಮಾಡುವ ಕೃತ್ಯಕ್ಕೆ, ಇಡೀ ಮುಸ್ಲಿಂ ಸಮುದಾಯವನ್ನೇ ಸಾಮಾನ್ಯೀಕರಿಸುವುದು ಸರಿಯಲ್ಲ. ಹೈದರಾಬಾದ್ ನಲ್ಲಿ ಶಂಕಿತ ಉಗ್ರರು ಬಂಧನವಾದರೆ ಇಡೀ ಹೈದರಾಬಾದ್ ನಲ್ಲಿರುವ ಮುಸ್ಲಿಂ ಸಮುದಾಯವನ್ನೇ ಅನುಮಾನದಿಂದ ನೋಡುವುದು ತಪ್ಪು. ಅವರ ವಿರುದ್ಧ ಕೇವಲ ಆರೋಪಗಳಿವೆ. ಇಂಥಹ ಸಂದರ್ಭದಲ್ಲಿ ಕಾನೂನು ನೆರವು ನೀಡುವುದರಲ್ಲಿ ತಪ್ಪಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಒಂದು ವೇಳೆ ನಾವು ನೆರವು ನೀಡದಿದ್ದರೇ ನ್ಯಾಯಾಲಯವೇ ಅವರಿಗೆ ಕಾನೂನು ನೆರವು ನೀಡಲಿದೆ. ಈಗ ಕಾನೂನು ನೆರವು ನೀಡುತ್ತುರುವುದು ವಿವಾದವಾಗುತ್ತಿದೆ. ಆದರೆ, ಹಿಂದೆ ಐಎಸ್ಐಎಸ್ ಸಂಘಟನೆಯ ಕೃತ್ಯಗಳನ್ನು ಖಂಡಿಸಿದ್ದೇನೆ. ಆ ಬಗ್ಗೆ ಯಾರೂ ಚರ್ಚೆ ಮಾಡಲ್ಲ.’

Leave a Reply