ವಿದೇಶಿಯರನ್ನು ಗುರಿಯಾಗಿಸಿಕೊಂಡು ಬಾಂಗ್ಲಾದಲ್ಲಿ ಉಗ್ರದಾಳಿ, ಒತ್ತೆಯಾಳುಗಳನ್ನು ರಕ್ಷಣೆ, 20 ನಾಗರಿಕರ ಸಾವು

ಡಿಜಿಟಲ್ ಕನ್ನಡ ಟೀಮ್:

ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ದಾಳಿ ನಡೆಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 13ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಅಲ್ಲಿನ ಭದ್ರತಾ ಪಡೆ ಯಶಸ್ವಿಯಾಗಿದೆ.

ಆದರೆ ಸುಮಾರು 20 ನಾಗರಿಕರು ಪ್ರಾಣ ತೆತ್ತಿರುವುದು, ನಂತರದ ಪರಿಶೀಲನೆಯಲ್ಲಿ ದೃಢಪಟ್ಟಿದೆ.

ಈ ಕಾರ್ಯಾಚರಣೆಯಲ್ಲಿ ಆರು ಉಗ್ರರು ಮೃತರಾಗಿದ್ದು, ಇಬ್ಬರು ಪೋಲೀಸರೂ ಪ್ರಾಣ ತೆತ್ತಿದ್ದಾರೆ. ಐ ಎಸ್ ಐ ಎಸ್ ದಾಳಿಯ ಹೊಣೆ ಹೊತ್ತುಕೊಂಡಿದೆಯಾದರೂ ಬಾಂಗ್ಲಾದ ಇನ್ನೂ ಕೆಲವು ಉಗ್ರ ಸಂಘಟನೆಗಳು ಸಹ ಇದು ತಮ್ಮದೇ ಕೃತ್ಯ ಎನ್ನುತ್ತಿರುವ ಕಾರಣ ಆ ಗೊಂದಲ ಮುಂದುವರಿದಿದೆ.

ಗುಲ್ಶನ್ ನ ಹೋಲಿ ಆರ್ಟಿಸಾನ್ ಬೇಕರಿ ಕೆಫೆಗೆ ಉಗ್ರರು ಶುಕ್ರವಾರ ರಾತ್ರಿ 9.30ರ ಸುಮಾರಿಗೆ ನುಗ್ಗಿ ‘ಅಲ್ಲಾಹು ಅಕ್ಬರ್’ ಎನ್ನುತ್ತ ಈ ಕೃತ್ಯ ಎಸಗಿದ್ದರು. ಈ ಸ್ಥಳವು ಢಾಕಾದ ಶ್ರೀಮಂತರು ಕಲೆಯುವ ತಾಣವಾಗಿದ್ದು, ರಾಯಭಾರ ಕಚೇರಿಗಳ ಸಮುಚ್ಛಯಕ್ಕೆ ತಾಗಿಕೊಂಡಿದೆ. ಸುಮಾರು ಹತ್ತು ತಾಸುಗಳ ಕಾರ್ಯಾಚರಣೆಯಲ್ಲಿ ಅಲ್ಲಿನ ತುರ್ತು ಕಾರ್ಯಾಚರಣೆ ಪಡೆ, ಎಲ್ಲ ಒತ್ತೆಯಾಳುಗಳನ್ನು ಬಿಡಿಸುವುದರಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ, ಇಟಲಿ, ಜಪಾನ್ ಗಳಿಗೆ ಸೇರಿದವರೆಲ್ಲ ಒತ್ತೆಯಾಳಾಗಿದ್ದರು. ಅವರೆಲ್ಲರನ್ನೂ ಪಾರು ಮಾಡಲಾಗಿದೆ.

ಸ್ಫೋಟಕಗಳು ಹಾಗೂ ಶಸ್ತ್ರಗಳನ್ನು ಹೊಂದಿದ್ದ ಉಗ್ರರನ್ನು ಮಣಿಸುವುದು ಸವಾಲಿನ ಕೆಲಸವೇ ಆಗಿತ್ತು. ಶನಿವಾರ ಬೆಳಗಿನ ಹೊತ್ತಿಗೆ ಕಾರ್ಯಾಚರಣೆ ಕೊನೆಗೊಂಡಿದ್ದು, ತಪ್ಪಿಸಿಕೊಂಡಿರಬಹುದಾದ ಯೋಧರಿಗೆ ಹುಡುಕಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶದ ಭದ್ರತಾ ಪಡೆಯ ಹಲವರು ಗಾಯಗೊಂಡಿದ್ದಾರೆ.

ಸ್ಥಳೀಯ ಜಮಾತೆ ಇಸ್ಲಾಮಿನ ಉಗ್ರಕೃತ್ಯಗಳಿಗೆ ಬಾಂಗ್ಲಾದೇಶ ಅದಾಗಲೇ ತಲ್ಲಣಿಸುತ್ತಿದೆ. ಈಗ ಐ ಎಸ್ ಐಎಸ್ ನಂಥ ಸಂಘಟನೆಯೂ ಕೈಜೋಡಿಸಿರುವುದು ತೀರ ಆತಂಕದ ಬೆಳವಣಿಗೆ. ಜಮಾತೆಯ ಮತೀಯ ಮೂಲಭೂತವಾದಕ್ಕೆ ಬಾಂಗ್ಲಾ ಹಿಂದುಗಳು ಹತ್ಯೆಗೀಡಾಗುತ್ತಿದ್ದಾರೆ. ಶುಕ್ರವಾರವಷ್ಟೇ ಹಿಂದು ದೇವಾಲಯದ ಅರ್ಚಕರನ್ನು ಕೊಲ್ಲಲಾಗಿತ್ತು. ಈ ಎಲ್ಲ ಹತ್ಯೆಗಳ ಉತ್ತರದಾಯಿತ್ವಕ್ಕೆ ಧ್ವನಿ ಗಟ್ಟಿಯಾಗಿದ್ದರಿಂದ ಅಲ್ಲಿನ ಹಸೀನಾ ಸರ್ಕಾರವು ಕಳೆದ ತಿಂಗಳು ತೀವ್ರವಾದಿ ಸಂಘಟನೆಗಳಿಗೆ ಸೇರಿದ ಸುಮಾರು 11 ಸಾವಿರ ಜನರನ್ನು ದೇಶಾದ್ಯಂತ ಬಂಧಿಸಿತ್ತು. ಆದರೆ, ಇದೇ ಅವಕಾಶ ಉಪಯೋಗಿಸಿಕೊಂಡು ರಾಜಕೀಯ ವಿರೋಧಿಗಳನ್ನು ಹಸೀನಾ ಸರ್ಕಾರ ಹಣಿಯುತ್ತಿದೆ ಎಂಬ ಆರೋಪಗಳೂ ಎದ್ದಿವೆ. ಹೀಗೆಲ್ಲ ಗೊಂದಲ- ಆತಂಕಗಳ ಗೂಡಾಗುತ್ತಿದೆ ಭಾರತದ ಮಗ್ಗುಲಲ್ಲಿರುವ ಬಾಂಗ್ಲಾದೇಶ.

ಹಳೆಓದು-ಮರುಓದು: ಪಾಕ್ ವಿಷಯ ಹಾಗಿರಲಿ, ಬಾಂಗ್ಲಾದೇಶದಲ್ಲಿ ದಿನಾ ಬೀಳುತ್ತಿದೆ ಹಿಂದು-ಜಿಹಾದೇತರರ ಹೆಣ!

Leave a Reply