ಆರು ಭಾಷೆಗಳಲ್ಲಿ ಬಿ.ಬಿ.ಎಮ್.ಪಿ ಸಹಾಯವಾಣಿ ಬೆಂಗಳೂರನ್ನು ಒಡೆಯುವತ್ತ ಮೊದಲ ಹೆಜ್ಜೆ

ಸಾಂದರ್ಭಿಕ ಚಿತ್ರ

vasant shetty

ವಸಂತ ಶೆಟ್ಟಿ

ಬೆಂಗಳೂರಿನಲ್ಲಿ ವಾಸಿಸುವವರನ್ನು ಕಾಡುವ ಮೂರು ಮುಖ್ಯ ಸಮಸ್ಯೆಗಳೇನು ಎಂದು ಯಾರನ್ನಾದರೂ ಕೇಳಿದರೆ ಹೆಚ್ಚು ಯೋಚಿಸದೇ ಎಲ್ಲರೂ ಕೊಡುವ ಉತ್ತರಗಳು: ಕೆಟ್ಟ ರಸ್ತೆ, ಟ್ರಾಫಿಕ್ ಜಾಮ್ ಮತ್ತು ಕಸದ ಸಮಸ್ಯೆ. ಈ ಮೂರು ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳ ಮೂಲದಲ್ಲಿವೆ. ಈ ಮೂರು ಸಮಸ್ಯೆಗಳು ಕೈ ಮೀರಿ ಬೆಳೆಯುವಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಬೆಂಗಳೂರಿಗೆ ಆಗಿರುವ ಅಳತೆ ಮೀರಿದ ವಲಸೆ ಎಷ್ಟು ಕಾರಣವೋ ಅಷ್ಟೇ ಕಾರಣ ಬೆಂಗಳೂರು ಪಾಲಿಕೆಯ ವೈಫಲ್ಯ. ಬೆಂಗಳೂರನ್ನು ಹಂತ ಹಂತವಾಗಿ ಬದುಕಲು ಯೋಗ್ಯವಲ್ಲದ ಊರಾಗಿಸುತ್ತಿರುವ ಈ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತ ಗಮನ ಹರಿಸುವುದನ್ನು ಬಿಟ್ಟು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವವರು ಆರು ಭಾಷೆಯಲ್ಲಿ ಪಾಲಿಕೆಯ ಸಹಾಯವಾಣಿ ಆರಂಭಿಸುತ್ತೇವೆ ಎಂದು ಹೊರಟಿರುವುದು ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕೇ ಕೊಡಲಿಯೇಟು ನೀಡುವಂತಹ ಹುಚ್ಚುತನ ಅನ್ನುವುದನ್ನು ನಾವೀಗ ಮನಗಾಣಬೇಕಿದೆ.

ಬೆಂಗಳೂರಿನಲ್ಲಿ ಪರಭಾಷಿಕರು ಸಾಕಷ್ಟು ನೆಲೆಸಿದ್ದಾರೆ, ಅವರ ಅನುಕೂಲಕ್ಕೆ ಕನ್ನಡ, ಇಂಗ್ಲಿಷಿನ ಜೊತೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹಾಯವಾಣಿ ಕೊಟ್ಟರೆ ಏನು ತಪ್ಪು? ನಮಗೆ ಇಷ್ಟೊಂದು ಅಭದ್ರತೆ ಏಕೆ ಅನ್ನುವ ಪ್ರಶ್ನೆ ಕೆಲವರದ್ದು. ಆದರೆ ಇದು ಕೇವಲ ಒಂದು ಸಹಾಯವಾಣಿಗೆ ಸೀಮಿತವಾದ ಸರಳ ಪ್ರಶ್ನೆಯಲ್ಲ. ಇದರ ಹಿಂದೆ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಕೊನೆ ಹಾಡುವ ಮತ್ತು ಬೆಂಗಳೂರಿನ ಆಡಳಿತವನ್ನು ಕಾಸ್ಮೊಪಾಲಿಟಿನ್ ಸ್ವರೂಪದಲ್ಲಿ ಮರುರೂಪಿಸಿ ಕನ್ನಡೇತರರ ಕೈಗೊಪ್ಪಿಸುವ ಭಾಷಾ ಅಲ್ಪಸಂಖ್ಯಾತರ ಒಲೈಕೆ ರಾಜಕಾರಣದ ದಟ್ಟ ಕರಿನೆರಳಿದೆ.

ಬೆಂಗಳೂರಿಗೆ ವಲಸೆ ಬಹಳ ಹಿಂದಿನಿಂದಲೂ ನಡೆಯುತ್ತಿದ್ದರೂ ತೊಂಬತ್ತರ ದಶಕದವರೆಗೆ ಬರುತ್ತಿದ್ದ ವಲಸಿಗರು ಕೆಲ ಕಾಲದಲ್ಲಿ ಕನ್ನಡ ಕಲಿತು ಇಲ್ಲಿಯವರೇ ಆಗುತ್ತಿದ್ದರು. ಇದಕ್ಕೆ ಸ್ವಲ್ಪ ಮಟ್ಟಿಗಿನ ಪ್ರತಿರೋಧ ತೋರುತ್ತಿದ್ದ ತಮಿಳರು ತೊಂಬತ್ತರ ಕಾವೇರಿ ಗಲಭೆಯ ನಂತರ ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯಲಾರಂಭಿಸಿದರು. ಆದರೆ ಕಳೆದ ಎರಡು ದಶಕಗಳಲ್ಲಿ ಐಟಿ ಉದ್ಯಮದ ದೆಸೆಯಿಂದ ಬಂದ ವಲಸಿಗರಲ್ಲಿ ಬಹುತೇಕರಲ್ಲಿ ‘ತಮ್ಮಿಂದಲೇ ಬೆಂಗಳೂರು ಉದ್ಧಾರ ಆಗ್ತಿರೋದು’ ಅನ್ನುವ ಅಹಮ್ಮಿನ ಮನಸ್ಥಿತಿಯಿದೆ. ಈ ಮನಸ್ಥಿತಿ ಸಾಮಾನ್ಯ ವಲಸಿಗರಿಗಿಂತ ಹೆಚ್ಚಾಗಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೋಟಿಗಟ್ಟಲೆ ಸಂಪಾದಿಸಿ ಬೆಂಗಳೂರಲ್ಲಿ ನೆಲೆಸಿರುವ ಗಣ್ಯ ಉದ್ಯಮಿಗಳಲ್ಲಿದೆ. ನಮ್ಮಿಂದಲೇ ಬೆಂಗಳೂರು, ಹೀಗಾಗಿ ಬೆಂಗಳೂರು ಹೇಗಿರಬೇಕು, ಹೇಗಿರಬಾರದು ಅನ್ನುವುದನ್ನು ನಿರ್ಧರಿಸುವ ಹಕ್ಕು ಎಲ್ಲರಿಗಿಂತ ತಮಗೆ ಹೆಚ್ಚಿದೆ ಅನ್ನುವ ಒಂದು ರೀತಿಯ entitlement ಮನಸ್ಥಿತಿ ಈ ಜನರಲ್ಲಿದೆ. ಇಂತಹ ಜನರೇ ಆಗಾಗ ‘ಬೆಂಗಳೂರು ಗಬ್ಬೆದ್ದಿದೆ, ಸರಿ ಮಾಡಲಿಲ್ಲ ಅಂದ್ರೆ ನಾವು ಬೇರೆ ಊರಿಗೆ ನಮ್ಮ ಉದ್ಯಮವನ್ನು ಸಾಗಿಸುತ್ತೇವೆ’ ಎಂದು ಸರ್ಕಾರಗಳನ್ನು ಬೆದರಿಸುತ್ತ, ಸರ್ಕಾರ ತಮ್ಮ ಮುಂದೆ ಮಂಡಿಯೂರಿ ತಮಗೆ ಬೇಕಾದ ಯೋಜನೆಗಳನ್ನು ರೂಪಿಸುವಂತೆ ಮಾಡುತ್ತ ಬಂದಿದ್ದಾರೆ. ಸರ್ಕಾರದಲ್ಲಿರುವವರು ತಾವು ಅಭಿವೃದ್ಧಿ ಪರ, ಬೆಂಗಳೂರಿನ ಪರ ಎಂದು ಕಾಣಿಸಿಕೊಳ್ಳಲು ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತ, ಈ ಜನರ ಪೆಟ್ ಪ್ರಾಜೆಕ್ಟುಗಳಿಗೆ ಸಂಪನ್ಮೂಲ ಸುರಿಯುತ್ತಿದ್ದಾರೆ.

ಅಜೆಂಡಾ ಟಾಸ್ಕ್ ಫೋರ್ಸ್, ವಿಶನ್ ಗ್ರೂಪ್ ಇತ್ಯಾದಿ ಹೆಸರಿನಲ್ಲಿ ಜನರಿಂದ ಆಯ್ಕೆಯಾಗದೇ  ಸರ್ಕಾರವನ್ನು ನಿಯಂತ್ರಿಸುವ ಇವರ ಕಾರ್ಯ ಯೋಜನೆಗಳಿಗೆ ಬೆಂಗಳೂರಿನ ರಾಜಕಾರಣದಲ್ಲಿರುವ ಕೆಲವು ಕನ್ನಡೇತರ ರಾಜಕಾರಣಿಗಳ ಬೆಂಬಲ, ಕುಮ್ಮಕ್ಕು ಎರಡೂ ಇದೆ. ಇಂತಹದೊಂದು ‘ನೀ ನನಗೆ, ನಾ ನಿನಗೆ’ ಅನ್ನುವ ‘ಸಹಕಾರದ ವ್ಯವಸ್ಥೆ’ ಆರು ತಿಂಗಳ ಹಿಂದೆ ಬೆಂಗಳೂರಿನ ಪಾಲಿಕೆಯ ಸಹಾಯವಾಣಿಯಲ್ಲಿ ಹಿಂದಿ ಭಾಷೆಯನ್ನು ತೂರಿಸುವ ಪ್ರಯತ್ನ ಮಾಡಿತ್ತು. ಇದರ ಹಿಂದೆ ವೈಟ್ ಫೀಲ್ಡ್ ಭಾಗದಲ್ಲಿ ಹಿಂದಿ ಭಾಷಿಕರನ್ನು ಸಂಘಟಿಸುತ್ತ, ಮುಂದೊಂದು ದಿನ ಬಿ.ಬಿ.ಎಂ.ಪಿಯನ್ನು ಒಡೆದು ವೈಟ್ ಫೀಲ್ಡ್ ಭಾಗದಲ್ಲಿ ರಾಜಕಾರಣದ ಚುಕ್ಕಾಣಿ ಹಿಡಿಯುವ ಕನಸು ಹೊತ್ತಿರುವ, ಅರ್ಬನ್ ಪ್ಲಾನರ್ ಹೆಸರಿನಲ್ಲಿ ಚಲಾವಣೆಯಲ್ಲಿರುವ ಹಿಂದಿ ಭಾಷಿಕರೊಬ್ಬರ ಕುಮ್ಮಕ್ಕಿತ್ತು. ಹಿಂದಿ ಹೇರಿಕೆಯ ಪ್ರಯತ್ನಗಳಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲ ಕಾಲ ತಣ್ಣಗಾದ ಈ ವಿವಾದ ಈಗ ಆರು ಭಾಷೆಗಳ ರೂಪದಲ್ಲಿ ಮತ್ತೊಂದು ಪ್ರಯತ್ನ ಆರಂಭಿಸಿದೆ. ತಮಿಳು, ತೆಲುಗು, ಮಲಯಾಳಂ ಅನ್ನು ಮುಂದಿರಿಸಿಕೊಂಡು ಹಿಂದಿ ಭಾಷೆಯನ್ನು ಹಿಂಬಾಗಿಲಿನಿಂದ ತೂರಿಸುವ ಪ್ರಯತ್ನದಂತೆಯೂ ಇದು ಕಾಣುತ್ತಿದೆ. ಒಮ್ಮೆ ಇದು ಜಾರಿಯಾದರೆ, ಬೆಂಗಳೂರಿನ ಆಡಳಿತದಲ್ಲಿದ್ದ ಕನ್ನಡದ ಸಾರ್ವಭೌಮತ್ವ ಕೊನೆಗಾಣಲಿದೆ. ಅದರ ಬೆನ್ನಲ್ಲೇ, ಇದನ್ನು ಬೆಂಗಳೂರಿನ ಆಡಳಿತ ನಿರ್ವಹಿಸುವ ಇತರ ಸಂಸ್ಥೆಗಳಾದ ಬೆಸ್ಕಾಂ, ಜಲಮಂಡಳಿ, ಬಿಡಿಎ, ನಮ್ಮ ಮೆಟ್ರೋ (ಅಲ್ಲಿ ಈಗಾಗಲೇ ಸರ್ಕಾರದ ಆದೇಶವೇ ಇರದೇ ಹಿಂದಿ ಭಾಷೆಯನ್ನು ಹೇರುವ ಕೆಲಸ ನಡೆದಿದೆ), ಬಿ.ಎಂ.ಟಿ.ಸಿಗೂ ವಿಸ್ತರಿಸಲು ಹೆಚ್ಚು ದಿನ ಬೇಡ. ಇದರ ಹಿಂದೆಯೇ, ಬಿ.ಬಿ.ಎಮ್.ಪಿಯನ್ನು ಒಡೆದು ನಾಲ್ಕರಿಂದ ಆರು ಭಾಗವಾಗಿಸುವ ಪ್ರಕ್ರಿಯೆ ಶುರುವಾಗಲಿದೆ. ಅಲ್ಲಿಗೆ ಬೆಂಗಳೂರನ್ನು ಭಾಷಾ ಅಲ್ಪಸಂಖ್ಯಾತರಿಗೆ ಬರೆದು ಕೊಟ್ಟು ಬೆಂಗಳೂರನ್ನು ಕನ್ನಡಿಗರ ಕೈಯಿಂದಲೇ ಮುಕ್ತವಾಗಿಸುವ ಕೆಲಸ ಶುರುವಾಗಲಿದೆ. ಕೊನೆಯಲ್ಲಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನುವ ಈ ಜನರ ಬೇಡಿಕೆಗೆ ಇದು ವೇದಿಕೆ ಸಜ್ಜು ಮಾಡಿಕೊಡಲಿದೆ. ಇದೆಲ್ಲವೂ ಊಹೆಯಲ್ಲ, ಮೇಲೆ ಪ್ರಸ್ತಾಪಿಸಿರುವ ಪ್ರತಿಯೊಂದು ಅಂಶವೂ ಈ ಸಹಕಾರದ ವ್ಯವಸ್ಥೆಯ ಅಜೆಂಡಾದಲ್ಲಿದೆ ಅನ್ನುವುದನ್ನು ಕಳೆದ ಹತ್ತು ವರ್ಷಗಳ ಬೆಂಗಳೂರಿನ ರಾಜಕಾರಣ ಗಮನಿಸಿದವರೆಲ್ಲರಿಗೂ ತಿಳಿದಿದೆ.

ಬೆಂಗಳೂರಿನ ಆಡಳಿತಕ್ಕೆ ಕನ್ನಡ ಮತ್ತು ಇಂಗ್ಲಿಷ್ ಇರುವ ಇವತ್ತಿನ ವ್ಯವಸ್ಥೆಯೇ ಸಾಕು. ಪರಭಾಷಿಕರು ಕನ್ನಡ ಕಲಿಯುವ ಒಂದು ಸಣ್ಣ ಒತ್ತಡ ಇಂದು ಇದ್ದರೆ ಅದಕ್ಕೆ ಕಾರಣ ಬೆಂಗಳೂರಿನ ಆಡಳಿತ ಭಾಷೆ ಕನ್ನಡ ಎನ್ನುವುದು. ಅಂತಹದೊಂದು ಸಣ್ಣ ಅವಕಾಶವನ್ನು ತೆಗೆದು ಹಾಕಿದರೆ ಊರ ತುಂಬಾ ಗೇಟೆಡ್ ಕಮ್ಯೂನಿಟಿಗಳದ್ದೇ ಸಾಮ್ರಾಜ್ಯವಾಗಲಿದೆ. ಬೆಂಗಳೂರಿನ ಎಫ್.ಎಂ ರೇಡಿಯೋ ಕೇಳುಗರ ಸಂಖ್ಯೆ ಅಳೆಯುವ RAM ರೇಟಿಂಗ್ಸ್ ಪ್ರಕಾರ ಪ್ರತಿ ನಿತ್ಯ ಬೆಂಗಳೂರಿನಲ್ಲಿ ಎಫ್.ಎಮ್ ಕೇಳುವವವರಲ್ಲಿ 70% ಜನರು ಕೇಳುವುದು ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು. ಪತ್ರಿಕಾ ಓದುಗರ ಪ್ರಮಾಣ ಅಳೆಯುವ ಐ.ಆರ್.ಎಸ್ ವರದಿಯ ಪ್ರಕಾರವೂ  ಬೆಂಗಳೂರಿನಲ್ಲಿ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಶೇಕಡಾ 70ರಷ್ಟಿದೆ. ಬೆಂಗಳೂರಿನಲ್ಲಿ ಕನ್ನಡ ತಾಯ್ನುಡಿ ಹೊಂದಿರುವವರ ಜೊತೆ ಕನ್ನಡ ಬಲ್ಲ ತುಳು, ಕೊಡವ, ಕೊಂಕಣಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷಿಕ ಕನ್ನಡಿಗರನ್ನು ಸೇರಿಸಿದರೆ ನಗರದ ಮುಕ್ಕಾಲು ಪಾಲು ಜನರಿಗೆ ಕನ್ನಡ ಗೊತ್ತು. ಹೀಗೆ ಕನ್ನಡದ ಮುಖ್ಯವಾಹಿನಿಯಲ್ಲಿ ಈಗಾಗಲೇ ಬೆರೆತ ಜನರನ್ನು ಆರು ಭಾಷೆಯ ಸಹಾಯವಾಣಿಯಂತಹ ಯೋಜನೆಗಳ ಮೂಲಕ ಒಡೆದು ದೂರಾಗಿಸುವುದು ಭಾಷಾ ಅಲ್ಪಸಂಖ್ಯಾತರ ಒಲೈಕೆ ರಾಜಕಾರಣವೆನ್ನದೇ ವಿಧಿಯಿಲ್ಲ. ಇದನ್ನು ಕನ್ನಡಿಗರು ವಿರೋಧಿಸದೇ ಹೋದರೆ ಮುಂಬೈನಲ್ಲಿ ಮರಾಠಿಗಾದ ಪರಿಸ್ಥಿತಿಯೇ ಕನ್ನಡಿಗರಿಗೆ ಎದುರಾಗಲಿದೆ. ಅಲ್ಲಿ ಕೊನೆಯ ಪಕ್ಷ ಮರಾಠಿ ಪರ ದನಿ ಎತ್ತಲು ಎಂ.ಎನ್.ಎಸ್/ಶಿವಸೇನೆಯಂತಹ ಎರಡು ಸ್ಥಳೀಯ ರಾಜಕೀಯ ಪಕ್ಷಗಳಾದರೂ ಇವೆ. ರಾಜಕೀಯವಾಗಿ ಅಂತಹ ಧ್ವನಿ ಹೊಂದಿರದ ನಮ್ಮ ಪಾಡು ಏನಾಗಲಿದೆ ಅನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.

(ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುತ್ತಿರುವ ಲೇಖಕರು, ಕನ್ನಡ ಹಿತಾಸಕ್ತಿಯ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಅಂಕಣಕಾರರು. ನಾಡು-ನುಡಿಗಳ ಕಾಳಜಿಗೆ ರೂಪಿಸಬೇಕಾದ ಕಾರ್ಯಯೋಜನೆಗಳನ್ನೇ ಇವರ ಹೆಚ್ಚಿನ ಬರಹಗಳು ಪ್ರತಿಪಾದಿಸುತ್ತವೆ.)

Leave a Reply