ಎನ್ಎಸ್ಜಿ ಸದಸ್ಯತ್ವ ಹಾಗಿರಲಿ, ಸುಸ್ಥಿರ ಭವಿಷ್ಯದ ಮುನ್ನುಡಿಯಾಗಿರುವ ಈ ಸೌರ ಹೆಜ್ಜೆಗಳಿಗೆ ಬೇಡವೇ ಪ್ರಶಂಸೆ?

ಡಿಜಿಟಲ್ ಕನ್ನಡ ವಿಶೇಷ:

ಎನ್ಎಸ್ಜಿ ಸದಸ್ಯತ್ವ ಭಾರತಕ್ಕೆ ಸಿಗಲಿಲ್ಲ.. ಇದಕ್ಕೆ ಚೀನಾನೇ ಕಾರಣ.. ಈ ಬಗ್ಗೆ ಚೀನಾ ಹಾಗೂ ಅಮೆರಿಕದ ವಾದಗಳೇನು.. ಎಂಬುದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಎನ್ ಎಸ್ಜಿ ಸದಸ್ಯತ್ವ ಸಿಕ್ಕರೆ ಅಣು ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನಗಳು ಭಾರತಕ್ಕೆ ಲಭಿಸಿ ನಮ್ಮ ಇಂಧನ ಕ್ಷಮತೆ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಆ ಕುರಿತು ಅತಿ ಉತ್ಸುಕತೆ ಬೆಳೆಸಿಕೊಂಡಿರುವ ನಾವು, ಸೌರ ವಿದ್ಯುತ್ತಿನ ಸುಸ್ಥಿರ ಮಾದರಿಯಲ್ಲಾಗುತ್ತಿರುವ ತ್ವರಿತ ಬೆಳವಣಿಗೆಗಳನ್ನು ಅಷ್ಟಾಗಿ ಗಮನಿಸುತ್ತಲೇ ಇಲ್ಲ. ಇದೂ ಭಾರತದ ಶಕ್ತಿ ವರ್ಧನೆಗೆ ಸಹಕಾರಿಯೇ ತಾನೇ?

ದೇಶದಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳಾಗುತ್ತಿವೆ. ಕಚ್ಚಾ ಇಂಧನಗಳ ಬಳಕೆ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ನೈಸರ್ಗಿಕವಾಗಿ ಸಿಗುವ ಸೌರಶಕ್ತಿಯನ್ನು ಬಳಸಿಕೊಳ್ಳುವತ್ತ ಭಾರತ ಗಮನಹರಿಸಿದೆ. ಇದರಿಂದ ಹವಾಮಾನ ವೈಪರಿತ್ಯ ಹಾಗೂ ಓಜೋನ್ ಪದರದ ರಂಧ್ರದಂತಹ ಜಾಗತಿಕ ಸಮಸ್ಯೆ ಪ್ರಮಾಣ ಕಡಿಮೆ ಮಾಡುವುದು ಪ್ರಮುಖ ಗುರಿ.

ಸೌರವಿದ್ಯುತ್ ಉತ್ಪಾದನೆಗೆ ವಿಶ್ವ ಬ್ಯಾಂಕ್ ನಿಂದ 1 ಬಿಲಿಯನ್ ಅಮೆರಿಕನ್ ಡಾಲರ್ ಸಾಲದ ನೆರವು ಸಿಕ್ಕಿರುವುದು ಹೊಸ ಸುದ್ದಿ. ಇದಕ್ಕೂ ಮೊದಲು ಹಾಗೂ ಈ ಘೋಷಣೆ ಬೆನ್ನಲ್ಲಿ ಭಾರತದಲ್ಲಿ ಸೌರವಿದ್ಯುತ್ ಗೆ ಸಂಬಂಧಿಸಿದಂತೆ ರೂಪಿಸಲಾಗುತ್ತಿರುವ ಹಲವು ಯೋಜನೆಗಳನ್ನು ಗಮನಿಸಬೇಕಿದೆ. ಆ ಪೈಕಿ ಐದು ವರ್ಷಗಳಲ್ಲಿ ಸುಮಾರು 25 ದೊಡ್ಡ ಪ್ರಮಾಣದ ಸೌರವಿದ್ಯುತ್ ಘಟಕಗಳ ಸ್ಥಾಪನೆಯೂ ಒಂದು. 500 ಮೆಗಾವ್ಯಾಟ್ಸ್ ನಿಂದ 1000 ಮೆಗಾವ್ಯಾಟ್ಸ್ ಸೌರವಿದ್ಯುತ್ ಉತ್ಪಾದನೆಯ 25 ಸೌರ ವಿದ್ಯುತ್ ಘಟಕ ಸ್ಥಾಪಿಸಿ ರಾಜ್ಯಗಳಲ್ಲಿನ ವಿದ್ಯುತ್ ಕೊರತೆ ಬಗೆಹರಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶ.

ಜೂನ್ 13 ರಿಂದ ಕಾರ್ಯಾರಂಭ ಮಾಡಿರುವ ತಮಿಳುನಾಡಿನ ಸೌರವಿದ್ಯುತ್ ಘಟಕವೂ ಈ ದೊಡ್ಡ ಪ್ರಮಾಣದ ಸೌರವಿದ್ಯುತ್ ಘಟಕಗಳಲ್ಲಿ ಒಂದು.

ಗುಜರಾತ್ ಮೂಲದ ಅದಾನಿ ಸಮೂಹ ತ.ನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ₹ 4536 ಕೋಟಿ ವೆಚ್ಚದಲ್ಲಿ ರಾಮನಾಥಪುರಂ ಜಿಲ್ಲೆಯಲ್ಲಿ ಈ ಘಟಕ ಆರಂಭಿಸಿದೆ. ಭಾರತದಲ್ಲಿ ಸದ್ಯಕ್ಕೆ ಕಾರ್ಯಾರಂಭ ಮಾಡಿರುವ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಖ್ಯಾತಿಗೂ ಭಾಜನವಾಗಿದೆ. 648 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಈ ಘಟಕ ಸದ್ಯಕ್ಕೆ 360 ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದಿಸುತ್ತಿದೆ. ಈ ಘಟಕ ಪೂರ್ಣ ಪ್ರಮಾಣದ ಕಾರ್ಯಾರಂಭ ಮಾಡಿದ ನಂತರ ಏಳು ಗಿಗಾವ್ಯಾಟ್ಸ್ ವಿದ್ಯುತ್ ಉತ್ಪಾದಿಸಲಿದ್ದು, ಪ್ರತಿ ವರ್ಷ ಸ್ಥಳೀಯ 1.50 ಲಕ್ಷ ಮನೆಗಳಿಗೂ ವಿದ್ಯುತ್ ಸಂಪರ್ಕ ದೊರೆಯಲಿದೆ. ಇನ್ನು ಗುಜರಾತ್ ನ ಚರಂಕಾ ಜಿಲ್ಲೆಯ ಘಟಕ (345 ಮೆಗಾವ್ಯಾಟ್ಸ್) ದ್ವಿತೀಯ ಸ್ಥಾನ ಪಡೆದಿದೆ.

ಇದು ಸೌರವಿದ್ಯುತ್ ಘಟಕದ ಕಥೆ. ಮತ್ತೊಂದೆಡೆ ಭಾರತ-ಅಮೆರಿಕ ಜತಗೆ ಇಂಧನ ಒಪ್ಪಂದ ಭಾರತದ ಸೌರಶಕ್ತಿ ಉತ್ಪಾದನೆಗೆ ಹೆಚ್ಚಿನ ಶಕ್ತಿ ತುಂಬಿದೆ. ಈ ಒಪ್ಪಂದದ ಮೂಲಕ ಭಾರತ 2022ರ ವೇಳೆಗೆ 100 ಗಿಗಾವ್ಯಾಟ್ಸ್ ಸೌರ ವಿದ್ಯುತ್ ಬಳಕೆಯ ಗುರಿ ಹೊಂದಿದೆ.

ಸೌರವಿದ್ಯುತ್ ಅಳವಡಿಕೆಗೆ ಸಂಬಂಧಿಸಿದಂತೆ ಭಾರತದ ಮತ್ತೊಂದು ಮಹತ್ವಾಕಾಂಕ್ಷಿ ಪ್ರಯೋಗ ಅಂದ್ರೆ, ಪುರಾತನ ಸ್ಮಾರಕ ಹಾಗೂ ಕಟ್ಟಡಗಳ ಮೇಲೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಸ್ವಾಮ್ಯದಲ್ಲಿ ಬರುವ ಪ್ರಮುಖ ಸ್ಮಾರಕಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ. ಇದರ ಪ್ರಮುಖ ಉದ್ದೇಶ ಅಂದ್ರೆ, ಇಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ರಾತ್ರಿ ವೇಳೆ ಬಳಸಿ, ರಾತ್ರಿ ವೇಳೆಯಲ್ಲೂ ಪ್ರವಾಸಿಗರು ಈ ಸೌಂದರ್ಯವನ್ನು ಆನಂದಿಸಲು ಅವಕಾಶ ಮಾಡಿಕೊಡುವುದು. ಅಷ್ಟೇ ಅಲ್ಲದೆ, ಈ ಕಟ್ಟಡಗಳಿಗೆ ಅಗತ್ಯ ವಿದ್ಯುತ್ ಅನ್ನು ಅಲ್ಲಿಯೇ ಉತ್ಪಾದಿಸಿಕೊಂಡು ವಿದ್ಯುತ್ ಬೇಡಿಕೆ ಹಾಗೂ ಖರ್ಚು ತಗ್ಗಿಸುವುದು.

ಇದಕ್ಕೆ ಕೇಂದ್ರ ಸಂಸ್ಕೃತಿ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಜುಲೈ ಅಥವಾ ಆಗಸ್ಟ್ ತಿಂಗಳಿಂದ ಈ ಸ್ಥಳಗಳಲ್ಲಿ ಸೌರವಿದ್ಯುತ್ ಉತ್ಪಾದನೆ ವ್ಯವಸ್ಥೆ ಅಳವಡಿಕೆ ಆರಂಭವಾಗಲಿದೆ. ಆರಂಭದಲ್ಲಿ 2 ಮೆಗಾವ್ಯಾಟ್ಸ್ ನಿಂದ 25 ಮೆಗಾವ್ಯಾಟ್ಸ್ ಉತ್ಪಾದನಾ ಸಾಮರ್ಥ್ಯದ ವ್ಯವಸ್ಥೆ ಅಳವಡಿಸಲಾಗುವುದು. ನಂತರ ಅಲ್ಲಿನ ಬೇಡಿಕೆಗೆ ಅನುಗುಣವಾಗಿ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವಿದೆ.

ಈ ಹಿಂದೆ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ದುಬಾರಿ ಹಣ ಹೂಡಬೇಕೆ ಎಂದು ಮೀನಾಮೇಷ ಎಣಿಸಲಾಗುತ್ತಿತ್ತು. ಕಾರಣ, ಉತ್ಪಾದನೆಯಾದ ಸೌರವಿದ್ಯುತ್ ಅನ್ನು ಗ್ರಿಡ್ ಗಳ ಮೂಲಕ ಸರಬರಾಜು ಮಾಡುವಾಗ ಹೆಚ್ಚು ಶಕ್ತಿ ಪೋಲಾಗುತ್ತಿತ್ತು. ಈ ರೀತಿ ಪೋಲಾಗುತ್ತಿದ್ದ ಪ್ರಮಾಣ ವಿಶ್ವದ ಇತರೆ ಕಡೆಗಳಿಗಿಂತ ಭಾರತದಲ್ಲಿ ಹೆಚ್ಚಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿನ ಅನ್ವೇಷಣೆಯಿಂದ ಈ ವಿದ್ಯುತ್ ಪೋಲಾಗುವ ಪ್ರಮಾಣ ಕಡಿಮೆಯಾಗಿದ್ದು, ಸೌರ ವಿದ್ಯುತ್ ಅನ್ನು ಅಳವಡಿಸಿಕೊಳ್ಳುವತ್ತ ಭಾರತ ಮುಂದಾಗಿದೆ. ಈ ಬಗ್ಗೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳು ಭಾರತದ ಭವಿಷ್ಯ ಬೆಳಗಲಿರುವಂತೆ ಗೋಚರವಾಗುತ್ತಿವೆ.

Leave a Reply