
ಡಿಜಿಟಲ್ ಕನ್ನಡ ಟೀಮ್:
ನಾಳೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಕರ್ನಾಟಕದಿಂದ ರಮೇಶ್ ಜಿಗಜಿಣಗಿ ಸಚಿವ ಸ್ಥಾನ ಅಲಂಕರಿಸುವ ಮಾತುಗಳು ಕೇಳಿಬಂದಿವೆ. ಇನ್ನು ಕಾನೂನು ಸಚಿವ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡುವ ವದಂತಿ ತಣ್ಣಗಾಗಿದ್ದು, ಅವರಿಗೆ ಯಾವುದೇ ಆತಂಕವಿಲ್ಲ ಎಂಬುದು ರಾಜ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಚಿತ್ರಣ.
ಇಷ್ಟಕ್ಕೂ ಈ ಬಾರಿಯ ಸಚಿವ ಸಂಪುಟ ಪುನಾರಚನೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಅಥವಾ ಬೇರ್ಯಾವ ರಾಜ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರಣ, ಕೇಂದ್ರದ ಚಿತ್ತ ಸಂಪೂರ್ಣವಾಗಿ ನೆಟ್ಟಿರುವುದು ಉತ್ತರಪ್ರದೇಶದ ಕಡೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ದಲಿತ ಕಾರ್ಡ್ ಪ್ರಯೋಗ ನಡೆಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಉತ್ತರ ಪ್ರದೇಶ ಸಂಸದರು ಸಚಿವ ಸಂಪುಟದಲ್ಲಿ ಹೆಚ್ಚಾಗಿ ಸ್ಥಾನ ಗಳಿಸುವ ಸಾಧ್ಯತೆ ಇದೆ.
ಸಚಿವ ಸಂಪುಟ ಪುನಾರಚನೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಮಂತ್ರಿ ಸೇರಿದಂತೆ 64 ಸಚಿವರಿದ್ದು, ಈ ಸಂಖ್ಯೆಯನ್ನು 82ರವರೆಗೂ ಏರಿಸುವ ಅವಕಾಶಗಳಿವೆ. ಕ್ರೀಡಾ ಸಚಿವರಾಗಿದ್ದ ಸರ್ಬಾನಂದ ಸೊನೊವಾಲ್ ಅಸ್ಸಾಂ ಮುಖ್ಯಮಂತ್ರಿಯಾದ ನಂತರ ಆ ಸ್ಥಾನ ತೆರವಾಗಿದೆ. ಇನ್ನು ಇತರೆ ಸಚಿವರಿಗೆ ಗೇಟ್ ಪಾಸ್ ನೀಡುವ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. ಈ ಮಧ್ಯೆ ಯಾರೆಲ್ಲಾ ಹೊಸಬರು ಸಚಿವ ಸ್ಥಾನ ಪಡೆಯಬಹುದು ಎಂಬ ಅಂಶ ಗಮನ ಸೆಳೆದಿದೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಾಯಕ ರಾಮ್ದಾಸ್ ಅಠವಾಳೆ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ‘ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಖಚಿತವಾಗಿದ್ದು, ನಾಳೆ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ನನಗೆ ಈ ಅವಕಾಶ ನೀಡಿರುವ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂಬುದು ಭೇಟಿ ನಂತರ ರಾಮ್ದಾಸ್ ಆಡಿದ ಮಾತುಗಳು. ಇದರೊಂದಿಗೆ ಸಂಪುಟ ಪುನಾರಚನೆಯಲ್ಲಿ ದಲಿತರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗೋದು ಸ್ಪಷ್ಟವಾಗ್ತಿದೆ.
ಉಳಿದಂತೆ ಯಾರೆಲ್ಲಾ ಸಂಪುಟದಲ್ಲಿ ಕಾಣಿಸಿಕೊಳ್ಳಬಹುದು ಎಂದು ನೋಡುವುದಾದ್ರೆ, ಉತ್ತರ ಪ್ರದೇಶದ ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್, ಬಿಜೆಪಿಯ ದಲಿತ ಸಂಸದರಾದ ಮಹೇಂದ್ರನಾಥ್ ಪಾಂಡೆ, ಕೃಷನ್ ರಾಜ್, ಬಿಜೆಪಿಯ ಇತರೆ ರಾಜ್ಯಗಳ ದಲಿತ ಸಂಸದರಾದ ರಾಜಸ್ಥಾನದ ಪಿ.ಪಿ. ಚೌಧರಿ, ಉತ್ತರಾಖಂಡದ ಅಜಯ್ ತಮ್ತಾ ಜತೆಗೆ ಎಸ್.ಎಸ್ ಅಹ್ಲುವಾಲಿಯಾ, ರಾಜ್ಯಸಭೆ ಸದಸ್ಯರಾದ ವಿಜಯ್ ಗೋಯೆಲ್, ಪುರುಶೋತ್ತಮ್ ರೂಪಾಲ ಅವರ ಹೆಸರುಗಳು ಕೇಳಿಬರ್ತಿವೆ. ಇನ್ನು ಉತ್ತರ ಪ್ರದೇಶದಲ್ಲಿ ದ್ವೇಷದ ಭಾಷಣದಿಂದ ಕುಖ್ಯಾತಿ ಪಡೆದಿರುವ ಯೋಗಿ ಆದಿತ್ಯನಾಥ ಅವರ ಹೆಸರು ಸಹ ಸಚಿವ ಸ್ಥಾನದ ರೇಸ್ ನಲ್ಲಿ ಕಾಣಿಸಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಹೇಳಿರುವುದಿಷ್ಟು:
‘ಸಂಪುಟ ಪುನಾರಚನೆ ಯೋಗ್ಯತೆ ಹಾಗೂ ಕಾರ್ಯದ ಆಧಾರವಾಗಿರಬೇಕು. ಕೆಲವು ಸಚಿವರ ಕಾರ್ಯದಲ್ಲಿ ಪ್ರಗತಿ ಕಾಣಬೇಕಿದೆ. ಪ್ರಧಾನಿ ಆ ಬಗ್ಗೆ ಯೋಚಿಸಬೇಕೇ ಹೊರತು, ಸಂಪುಟವನ್ನು ಶೃಂಗಾರಗೊಳಿಸುವ ಕಾರಣಕ್ಕೆ ಪುನಾರಚನೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ.’