ಷರೀಫ್ ಸಾಹೇಬ್ರೇ.. ಕೈಗೆ ಬಂದ ಅವಕಾಶನಾ ಕಾಲಲ್ಲೊದ್ದ ಖರ್ಗೆ ಅಂಥವರಿಂದ ದಲಿತ ಸಿಎಂ ಕನಸು ಹೆಂಗ್ರೀ ನನಸಾಗ್ತದೇ?

author-thyagarajಇದೆಲ್ಲ ಹೇಳೋಕೆ ಮತ್ತು ಕೇಳೋಕೆ ಚೆನ್ನಾಗಿರುತ್ತದೆ ಅಷ್ಟೇ!

ಏನಾದರೂ ಆಗಲಿ ದಲಿತರು ಸಿಎಂ ಆಗಲೇಬೇಕು ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಮೇಲಿಂದ ಮೇಲೆ ಹೇಳ್ತಾನೆ ಬಂದಿದ್ದಾರೆ. ಅವರ ಇಂಗಿತ ಮಲ್ಲಿಕಾರ್ಜುನ ಖರ್ಗೆ. ಈಗ ಮಂತ್ರಿ ಮಂಡಲದಿಂದ ಆಚೆ ಹಾಕಿಸಿಕೊಂಡಿರುವ ಶ್ರೀನಿವಾಸ ಪ್ರಸಾದ್ ಅವರು ಅನ್ಯಪಕ್ಷಗಳಿಗೆ ವಲಸೆ ಹೋಗದೆ ಕಾಂಗ್ರೆಸ್ಸಿನಲ್ಲೇ ಇದ್ದಿದ್ದರೆ ಎಂದೋ ಮುಖ್ಯಮಂತ್ರಿ ಆಗುತ್ತಿದ್ದರು ಎಂಬುದು ಸಾಹಿತಿ ದೇವನೂರ ಮಹಾದೇವ ಅವರು ಇನ್ನೊಂದು ಕಡೆ ಹೇಳ್ತಾರೆ. ಅದೆಲ್ಲ ಸರಿ, ಆದರೆ..?

ಷರೀಫ್ ಸಾಹೇಬರು ಹೇಳಿದರೂ ಅಂದಾಕ್ಷಣ ಖರ್ಗೆ ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ? ದೇವನೂರ ಮಹಾದೇವ ಅವರ ಕಕ್ಕುಲತೆ ಪ್ರಸಾದ್ ರಾಜಕೀಯ ಭವಿಷ್ಯ ಬದಲಿಸುತ್ತದೆಯೇ ಎಂಬ ಪ್ರಶ್ನೆ ಕೇಳಿಕೊಂಡಾಗ ಬರುವ ಉತ್ತರ ಖಂಡಿತಾ ಇಲ್ಲ ಎಂದೇ. ಪುತ್ರ ವ್ಯಾಮೋಹಕ್ಕೆ ಸಿಕ್ಕಿ ಕೈಗೆ ಬಂದ ಅವಕಾಶವನ್ನು ಕಾಲಲ್ಲಿ ಒದೆಯೋ ಮಲ್ಲಿಕಾರ್ಜುನ ಖರ್ಗೆ ಅವರಂಥ ನಾಯಕರು ಇರೋವಾಗ, ಡಾ. ಜಿ. ಪರಮೇಶ್ವರ್ ಅವರಂಥ ಅಲ್ಪತೃಪ್ತರು ಬರೀ ಮಂತ್ರಿ ಪದವಿಗೆ ರಾಜಕೀಯ ಕನಸು ಮಾರಾಟ ಮಾಡಿಕೊಳ್ಳೋವಾಗ ಷರೀಫ್ ಅವರ ಆಕಾಂಕ್ಷೆಯಾಗಲಿ, ದೇವನೂರರ ಕಾಳಜಿಯಾಗಲಿ ನನಸಾಗಲು ಸಾಧ್ಯವೇ? ಉಹುಂ, ಬಿಲ್ ಕುಲ್ ಇಲ್ಲ. ಅವು ಇದ್ದಲ್ಲೇ ಮೋಕ್ಷ ಪಡೆಯುತ್ತವೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಮೂರು ವರ್ಷ ಅಧಿಕಾರದ ಅವಧಿಯಲ್ಲಿ ಆಗಾಗ್ಗೆ ದಲಿತ ಸಿಎಂ ಕೂಗು ಅನುರಣಿಸಿದಾಗಲೆಲ್ಲ ಪರಮೇಶ್ವರ್ ಕೋಟು ಕೊಡವಿದರೂ, ಆ ಧ್ವನಿಯ ಕೇಂದ್ರಬಿಂದು ಆಗಿದ್ದುದು ಮಾತ್ರ ಮಲ್ಲಿಕಾರ್ಜುನ ಖರ್ಗೆ ಅವರೇ. ಒಂಬತ್ತು ಬಾರಿ ಶಾಸಕರಾಗಿರುವ, 40 ವರ್ಷಗಳ ಹಿಂದೆಯೇ ಮಂತ್ರಿ ಆಗಿದ್ದ ಖರ್ಗೆ ಅವರು ತಮ್ಮ ಐದು ದಶಕಗಳ ರಾಜಕೀಯ ಇತಿಹಾಸದಲ್ಲಿ ಹಲವು ಬಾರಿ ಸಿಎಂ ಪದವಿ ಬಳಿ ಬಂದು ಅದನ್ನು ಕಳೆದುಕೊಂಡವರು. 1999 ರಲ್ಲಿ ಎಸ್.ಎಂ. ಕೃಷ್ಣ ಅವರಿಗೆ  ಅವರು ಕೊಟ್ಟ ಪೈಪೋಟಿ ಕಡಿಮೆಯೇನಿಲ್ಲ. ಅಂಥ ಖರ್ಗೆ ಅವರು ತೀರಾ ಇತ್ತೀಚಿಗೆ ಸಿದ್ದರಾಮಯ್ಯ ವಿರುದ್ಧದ ಬಂಡಾಯದಲ್ಲಿ ಅನಾಯಾನಸವಾಗಿ ಬಂದಿದ್ದ ಅವಕಾಶವೊಂದನ್ನು ಕಳೆದುಕೊಂಡು, ದಲಿತ ಸಿಎಂ ಕೂಗನ್ನು ಕುತ್ತಿಗೆ ಹಿಚುಕಿ ಬಿಸಾಕಿದ್ದಾರೆ.

ನಿಜ, ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಪ್ರಮುಖ ಅಡ್ಡಿಯಾಗಿದ್ದವರು ಖರ್ಗೆ. ತವರು ಜಿಲ್ಲೆ ಕಲ್ಬುರ್ಗಿಯ ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್ ಅವರು ಸಚಿವ ಸ್ಥಾನದಿಂದ ಹೋದರೆ ಮತರಾಜಕೀಯದಲ್ಲಿ ತಮಗೆ ಹೊಡೆತ ಬೀಳುತ್ತದೆ ಎಂದು ಎಣಿಸಿದ್ದ ಖರ್ಗೆ ಅವರು ಸಂಪುಟ ವಿಸ್ತರಣೆಗೆ ಅವಕಾಶ ನೀಡದಂತೆ ಹೈಕಮಾಂಡ್ ಮೇಲೂ ಒತ್ತಡ ಹೇರಿದ್ದರು. ತಮ್ಮ ಜತೆ ಚರ್ಚಿಸಿದ ಸಿದ್ದರಾಮಯ್ಯ ಅವರಿಗೂ ಅದನ್ನೇ ಹೇಳಿದ್ದರು. ಇಲ್ಲಿ ಖರ್ಗೆ ಅವರ ಲೆಕ್ಕಾಚಾರ ಬೇರೆ ಇತ್ತು. ಸಿದ್ದರಾಮಯ್ಯ ಅವರ ಬಗ್ಗೆ ಉತ್ತಮಾಭಿಪ್ರಾಯ ಇಲ್ಲದ ಹೈಕಮಾಂಡ್ ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆಗೆ  ಆಸ್ಪದ ಕೊಡುವುದಿಲ್ಲ. ಬದಲಿಗೆ ಇಂದಲ್ಲ, ನಾಳೆ ತಮ್ಮನ್ನೇ ಪರ್ಯಾಯ ಮುಖ್ಯಮಂತ್ರಿ ಮಾಡುತ್ತಾರೆ ಅಂತ ಅವರಂದುಕೊಂಡಿದ್ದರು. ಆದರೆ ಯಾವಾಗ ಹೈಕಮಾಂಡ್ ಸಂಪುಟ ಪುನಾರಚನೆಗೆ ಅವಕಾಶ ಕೊಟ್ಟಿತೋ ಖರ್ಗೆ ಅವರ ಎಣಿಕೆ ಎಗರಿ ಬಿತ್ತು.

ಈ ಮಧ್ಯೆ, ಸಂಪುಟ ಪುನಾರಚನೆ ಬಂಡಾಯಕ್ಕೆ ಆಸ್ಪದ ಕೊಡುತ್ತದೆ ಎಂದು ಮೊದಲೇ ಗ್ರಹಿಸಿದ್ದ ಸಿದ್ದರಾಮಯ್ಯ ಬಳಗ ಪುನಾರಚನೆಗೂ ಮುನ್ನ ಒಳಗೊಳಗೇ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಆಗುವಂತೆ ಪುಸಲಾಯಿಸಿತ್ತು. ಇವತ್ತು ನೀವು ಮಂತ್ರಿಯಾದರೆ ಇನ್ನು ಹತ್ತು ವರ್ಷಕ್ಕೆ ಕಾಂಗ್ರೆಸ್ಸಿನಲ್ಲಿ ನೀವೇ ಸಿಎಂ ಮೆಟಿರಿಯಲ್, ಹೇಗಿದ್ದರೂ ದಲಿತ ಸಿಎಂ ಕೂಗು ಇದೆ, ಮುಂದೆ ಈ ಕೂಗಿನ ವಾರಸುದಾರರು ನೀವೇ ಎಂದೆಲ್ಲ ಬಣ್ಣ ತುಂಬಿತ್ತು. ಆದರೆ ಇದೆಲ್ಲ ಆಗದ ಮಾತು, ಇದಕ್ಕೆ ತಮ್ಮ ತಂದೆ ಒಪ್ಪುವುದಿಲ್ಲ ಎಂದು ಹೇಳಿದ್ದ ಪ್ರಿಯಾಂಕ್ ಗೆ ಆ ಹೊಣೆ ತಾವು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿತ್ತು. ತಂದೆ ಎದಿರು ತಲೆಯೆತ್ತಿ ಮಾತಾಡದ ಪ್ರಿಯಾಂಕ್ ಸಿಎಂ ಬಳಗದ ಪ್ರಸ್ತಾವನೆಯನ್ನು ತಾಯಿ ರಾಧಾಬಾಯಿ ಅವರಿಗೆ ದಾಟಿಸಿಬಿಟ್ಟರು.

ಅಲ್ಲಿಂದಾಚೆಗೆ ಶುರುವಾದದ್ದು ರಾಜಕೀಯ ತಿರುವು!

ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ಅಳಿಯ ರಾಧಾಕೃಷ್ಣ ಅವರು ಕುಟುಂಬ ಸದಸ್ಯರ ಜತೆ ಪ್ರಿಯಾಂಕ್ ಮಂತ್ರಿ ಪದವಿ ಸುತ್ತಮುತ್ತಲಿನ ರಾಜಕೀಯ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದರು. ಖರ್ಗೆ ಅವರು ತಕ್ಷಣಕ್ಕೆ ಸಿಎಂ ಆಗುವ ಸಾಧ್ಯತೆಗಳು ಕ್ಷೀಣ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. 2023 ರ ವೇಳೆಗೆ ಖರ್ಗೆ ಅವರ ಸಿಎಂ ಕಾಯಸ್ಸು ಉಳಿದಿರುತ್ತದೋ ಇಲ್ಲವೋ ಅದೂ ಗೊತ್ತಿಲ್ಲ. ಅಷ್ಟೊತ್ತಿಗೆ ಖರ್ಗೆ ವಯಸ್ಸು 80 ರ ಸಮೀಪ ಮುಟ್ಟಿರುತ್ತದೆ. ಹೀಗಾಗಿ ಪ್ರಿಯಾಂಕ್ ಸಂಪುಟ ಸೇರುವುದೇ ಸಮ್ಮತ ಎಂಬ ತೀರ್ಮಾನ ಹೊರಹೊಮ್ಮುತ್ತಿದ್ದಂತೆ ಕುಟುಂಬ ಸದಸ್ಯರಿಂದ ಖರ್ಗೆ ಅವರ ಮೇಲೆ ಈ ಬಗ್ಗೆ ಒತ್ತಡ ಶುರುವಾಯಿತು. ಖರ್ಗೆ ಅವರು ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ. ಪ್ರಿಯಾಂಕ್ ಸಂಪುಟ ಸೇರ್ಪಡೆಯಿಂದ ಈಗ ಬಂದಿರುವ ಆಪಾದನೆಗಳ ಬಗ್ಗೆ ಅವರಿಗೆ ಆಗಲೇ ಸ್ಪಷ್ಟ ಅರಿವು ಇತ್ತು. ಹೀಗಾಗಿ ಬೇಡ ಅಂದರು. ಆದರೆ ರಕ್ತಸಂಬಂಧದ ಮುಂದೆ ಉಳಿದೆಲ್ಲವೂ ಗೌಣ (blood is thicker than water) ಎಂಬಂತೆ ಕೊನೆಗೊಮ್ಮೆ ಕುಟುಂಬಾಭಿಪ್ರಾಯಕ್ಕೆ ಮಣಿದರು.

ಹೌದು, ಐದು ದಶಕಗಳ ರಾಜಕೀಯ ಮಥನದಲ್ಲಿ ಬೆಣ್ಣೆ ಬರುವ ಸಂದರ್ಭದಲ್ಲಿ ಪುತ್ರವಾತ್ಸಲ್ಯವೆಂಬುದೇ ಖರ್ಗೆ ಅವರ ಕಣ್ಣಪೊರೆಯಾಯಿತು. ಇಷ್ಟು ವರ್ಷ ಮಾಡಿದ ರಾಜಕೀಯ ಹೊಳೆಯಲ್ಲಿ ನಾಮ ತೇಯ್ದಂತಾಯಿತು. ಅವರಿಗೆ ಚೆನ್ನಾಗಿ ಗೊತ್ತಿತ್ತು. ಸಂಪುಟ ಪುನಾರಚನೆಯಿಂದ ಬಂಡಾಯ ಸ್ಫೋಟಗೊಳ್ಳುತ್ತದೆ. ಹಾಗೆ ಬಂಡೆದ್ದವರು ಪರ್ಯಾಯ ನಾಯಕತ್ವಕ್ಕಾಗಿ ತಮ್ಮ ಕಡೆಯೇ ನೋಡುತ್ತಾರೆ ಎಂದು. ಆದರೂ ಮಗನನ್ನು ಮಂತ್ರಿ ಮಾಡಿ ‘ನೊಣ ತಿಂದು ಜಾತಿಕೆಡಿಸಿಕೊಂಡರು’ ಎಂಬಂತೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕೈಚೆಲ್ಲಿಕೊಂಡರು.

ಒಂದೊಮ್ಮೆ ಖರ್ಗೆ ಅವರು ಮಗನನ್ನು ಮಂತ್ರಿ ಮಾಡದೇ ಹೋಗಿದಿದ್ದರೆ ಇವತ್ತು 70-80 ಕ್ಕೂ ಹೆಚ್ಚು ಶಾಸಕರು ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದರು. ತಮ್ಮ ನಾಯಕರಾಗುವಂತೆ ದುಂಬಾಲು ಬೀಳುತ್ತಿದ್ದರು. ತತ್ಪರಿಣಾಮವಾಗಿ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ಇತ್ತು. ಸಂಪುಟ ಪುನಾರಚನೆ ನಂತರದ ಬಂಡಾಯ ತಕ್ಕ ನಾಯಕನ ಕೊರತೆಯಿಂದ ತಣ್ಣಗಾಗುತ್ತಿದೆ. ಅವರಿಗೆ ಯಾರೂ ಸಮರ್ಥ ನಾಯಕ ಸಿಗಲೇ ಇಲ್ಲ. ಒಂದೊಮ್ಮೆ ಅವರನ್ನು ಖರ್ಗೆ ಆತುಕೊಂಡಿದ್ದರೆ ಅತೃಪ್ತರ ಸಂಖ್ಯೆ ಇಮ್ಮಡಿ, ಮುಮ್ಮಡಿಯಾಗಿ ಇವತ್ತಿನ ರಾಜಕೀಯ ಚಿತ್ರಣವೇ ಬೇರೆ ಆಗಿರುತ್ತಿತ್ತು.

ಖರ್ಗೆ ಮತ್ತು ಪುತ್ರ ಪ್ರಿಯಾಂಕ್ ಅವರ ಪ್ರಸ್ತುತ ಅಧಿಕಾರ ರಾಜಕೀಯ ತುಲನೆ ಮಾಡಿ ನೋಡಿದಾಗ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. ಪ್ರಿಯಾಂಕ್ ಮುಂದೆ ಯಾವಾಗಲಾದರೂ ಮಂತ್ರಿ ಆಗಬಹುದಿತ್ತು. ಅವರಿಗೆ ವಯಸ್ಸಿದೆ, ಅವಕಾಶಗಳಿವೆ. ಆದರೆ ಇದೇ ಮಾತನ್ನು ಖರ್ಗೆ ಅವರಿಗೆ ಹೇಳುವಂತಿಲ್ಲ. ಮುಂದೆ ಯಾವಾಗಲಾದರೂ ಸಿಎಂ ಆಗಬಹುದು ಎನ್ನುವಂತಿಲ್ಲ. ವಯಸ್ಸು, ಅವಕಾಶ ಎರಡೂ ಕಡಿಮೆ. ಜತೆಗೆ ಮಗ ಮಂತ್ರಿ ಆದ ಸಂದರ್ಭದಲ್ಲಿ ಸಂಪುಟದಿಂದ ಹೊರಬಿದ್ದಿರೋ ಖಮರುಲ್ ಮತ್ತು ಚಿಂಚನಸೂರ್ ಬಯ್ದುಕೊಂಡು ಓಡಾಡುತ್ತಿರುವುದು ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಪ್ರಬಲ ಮುಸ್ಲಿಂ ಮತ್ತು ಗಂಗಾಮತಸ್ಥ ಮತಗಳನ್ನು ಅಲ್ಲಾಡಿಸುತ್ತಿದೆ. ಅದು ಖರ್ಗೆ ಇರಲಿ, ಪುತ್ರ ಪ್ರಿಯಾಂಕ್ ಇರಲಿ ಇಬ್ಬರ ಚುನಾವಣೆ ರಾಜಕೀಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ.

ನಿಜ, ಸಿದ್ದರಾಮಯ್ಯನವರು ಒಂದೇ ಕಲ್ಲಲ್ಲಿ ಹಲವು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ತಮ್ಮ ನಾಯಕತ್ವಕ್ಕೆ ಮಗ್ಗುಲ ಮುಳ್ಳಾಗಿದ್ದ ಖರ್ಗೆ ಅವರನ್ನು ವ್ಯವಸ್ಥಿತವಾಗಿ ನಿವಾರಿಸಿಕೊಂಡಿದ್ದಾರೆ. ಕಳೆದ ಸಂಸತ್ ಚುನಾವಣೆಯಲ್ಲಿ ದೇಶಾದ್ಯಂತ ಹೀನಾಯ ಸೋಲು ಕಂಡ ಕಾಂಗ್ರೆಸ್ಸಿಗೆ ಲೋಕಸಭೆ ನಾಯಕರಾಗಲು ಖರ್ಗೆ ಅವರೇ ದಿಕ್ಕಾದರು. ಅವರು ದಿಲ್ಲಿ ರಾಜಕಾರಣದಲ್ಲಿದ್ದರೂ ಸಿದ್ದರಾಮಯ್ಯ ಅವರಿಗೆ ಮನದ ಮೂಲೆಯಲ್ಲೆಲ್ಲೋ ಖರ್ಗೆ ಅವರ ಬಗ್ಗೆ ಭೀತಿ ಇದ್ದೇ ಇತ್ತು. ದಲಿತ ಸಿಎಂ ಕೂಗಿಗೆ ಹೊರತಾಗಿಯೂ ಆ ಹುದ್ದೆಗೇರುವ ಎಲ್ಲ ಅರ್ಹತೆಗಳು ಖರ್ಗೆ ಅವರಿಗಿದ್ದದ್ದೇ ಇದಕ್ಕೆ ಕಾರಣ. ಸಂಪುಟದಲ್ಲಿ ಹೆಚ್ಚು ಅದ್ಯತೆ ಪಡೆದ ಜನತಾ ಪರಿವಾರ ಮೂಲದವರ ವಿರುದ್ಧ ರಾಜಕೀಯ ಸಮರ ನಡೆಸುತ್ತಾ ಬಂದಿದ್ದ ಮೂಲ ಕಾಂಗ್ರೆಸ್ಸಿಗರಿಗೆ ಪರ್ಯಾಯ ಆಶಾಕಿರಣವಾಗಿ ಗೋಚರಿಸಿದ್ದುದು ಖರ್ಗೆ ಅವರೊಬ್ಬರೇ. ಆದರೆ ಅವರೆಲ್ಲರ ನಂಬಿಕೆಯನ್ನು ಖರ್ಗೆ ಪುತ್ರವ್ಯಾಮೋಹ ನುಂಗಿ ಹಾಕಿದೆ. ದಲಿತ ಸಿಎಂ ಕೂಗು ಮತ್ತು ಮೋಹದ ಜತೆಗೆ!

ಲಗೋರಿ : ಕರುಳಮೋಹದ ಮುಂದೆ ಆತ್ಮಸಾಕ್ಷಿಯೂ ಅಳಿಯುತ್ತದೆ.

Leave a Reply