ದೇಶೀಯ ಇಸ್ಲಾಂ ಉಗ್ರರೇ ನಿಜವಾದ ಆತಂಕ, ಐ ಎಸ್ ಐ ಎಸ್ ಎಂಬುದೆಲ್ಲ ಗುಮ್ಮನ ಕರೆಯುವ ಆಟ!

ಚೈತನ್ಯ ಹೆಗಡೆ

‘ಶುಕ್ರವಾರ ಢಾಕಾದ ಮೇಲೆ ದಾಳಿ ಮಾಡಿದವರು ಐ ಎಸ್ ಐಎಸ್ ಸಂಘಟನೆಯವರಲ್ಲ. ದೇಶೀಯ ಉಗ್ರರೇ. ಇವರೆಲ್ಲ ಜಮಾತುಲ್ ಮುಜಾಹಿದೀನ್ ಸಂಘಟನೆಯವರು.’

ಹೀಗೆಂದು ಬಾಂಗ್ಲಾದೇಶ ಸರ್ಕಾರ ನೀಡಿರುವ ಸ್ಪಷ್ಟನೆಯನ್ನು ಗಂಭೀರವಾಗಿ ನೋಡಬೇಕಿದೆ. ಭಾರತದಲ್ಲಿ ಐ ಎಸ್ ಐ ಎಸ್ ಶಂಕಿತರ ಸೆರೆ, ಬಾಂಗ್ಲಾದೇಶದ ಮೇಲೆ ಐ ಎಸ್ ಐ ಎಸ್ ಉಗ್ರರ ದಾಳಿ… ಹೀಗೆಲ್ಲ ಶೀರ್ಷಿಕೆ ಓದಿಕೊಳ್ಳುವಾಗ ನಮ್ಮೆಲ್ಲರ ಸಿಟ್ಟು, ಗಮನಗಳೆಲ್ಲ ಅಲ್ಲೆಲ್ಲೋ ಸಿರಿಯಾದಲ್ಲಿ ತಲೆ ಎತ್ತಿ ಪಕ್ಕದ ಮುಸ್ಲಿಂ ರಾಷ್ಟ್ರಗಳನ್ನೆಲ್ಲ ಆವರಿಸಿಕೊಳ್ಳುತ್ತ, ಯುರೋಪಿಗೆ ಆತಂಕ ಒಡ್ಡಿರುವ ಉಗ್ರ ಸಂಘಟನೆ ಮೇಲೆ ಹೊರಳುತ್ತದೆ. ಐಎಸ್ ಐಎಸ್ ಅಂದರೆ ಏನು, ಅದರ ಉದ್ದೇಶವೇನು ಎಂಬೆಲ್ಲ ವಿವರಗಳ ಕತೆ ನಮಗೇನೋ ಹೊಸತಾಗಿ, ಆತಂಕದ ಕೇಳುವಿಕೆಗೆ ಅವಕಾಶ ಮಾಡಿಕೊಡುತ್ತದೆ. ಅತ್ತ, ಐ ಎಸ್ ಐ ಎಸ್ ಸಹ ಇದನ್ನು ಎಂಜಾಯ್ ಮಾಡುತ್ತದೆ. ಏಕೆಂದರೆ ಅವರ ಉಗ್ರ ವರ್ಚಸ್ಸಿಗೆ ಈ ಎಲ್ಲ ಕತೆಗಳು ಸಹಾಯವನ್ನೇ ಮಾಡುತ್ತವಷ್ಟೆ. ಹೀಗಾಗಿ ಜಗತ್ತಿನ ಯಾವ ಮೂಲೆಯಲ್ಲಿ ಬಾಂಬ್ ಸ್ಫೋಟ, ಉಗ್ರ ಘಟನೆಗಳಾದರೂ ಐಎಸ್ ಐಎಸ್ ಮತ್ತು ಅಲ್ ಕಾಯಿದಾಗಳು ಹೊಣೆ ಹೊರುವುದಕ್ಕೆ ಸಿದ್ಧವಿರುತ್ತವೆ.

ಆದರೆ ವಾಸ್ತವವೇನು? ಹೀಗೆ ಎಲ್ಲದಕ್ಕೂ ಐ ಎಸ್ ಐ ಎಸ್ ಎಂದು ಬೊಬ್ಬೆ ಹಾಕುವುದರಿಂದ ಉಗ್ರವಾದದ ವಿರುದ್ಧ ಜನಾಭಿಪ್ರಾಯದಲ್ಲಿ ನಾವು ಕಳೆದುಕೊಳ್ಳುತ್ತಿರುವುದೇನು ಎಂಬುದನ್ನೂ ಗಮನಿಸಬೇಕಿದೆ.

  • ದೇಶಿ ಉಗ್ರವಾದಕ್ಕೆ ಕುರುಡಾಗಿಬಿಡುತ್ತೇವೆ..

ಅದು ಸಾಮ್ರಾಜ್ಯಶಾಹಿ ವ್ಯವಸ್ಥೆಯೇ ಆಗಿರಲಿ, ಇಸ್ಲಾಂ ವಿಸ್ತರಣವಾದವೇ ಆಗಿರಲಿ ಎಲ್ಲಿಂದಲೋ ಬಂದು ಏಕಾಏಕಿ ಯಾರನ್ನೋ ಮಣಿಸಿಬಿಡುವುದು ಸಾಧ್ಯವಿಲ್ಲದ ಮಾತು. ಅದಕ್ಕೆ ಇಲ್ಲಿನ ಮೀರ್ ಜಾಫರುಗಳೇ ಮುಖ್ಯ ಪಾತ್ರ ವಹಿಸುತ್ತಾರೆ. ಭಾರತವನ್ನು ಆಳಿದ ಬ್ರಿಟಿಷರೇನು ಅಗಾಧ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಬೀಡು ಬಿಟ್ಟರೇ? ಹಾಗೇನಿಲ್ಲ, ಇಲ್ಲಿನ ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡರು. ಇಸ್ಲಾಂ ಉಗ್ರವಾದ ಸಹ ಇಂಥದೇ ಮಾದರಿಯದ್ದು ಎಂಬುದನ್ನು ಮರೆಯಬಾರದು. ಯುರೋಪು, ಬಾಂಗ್ಲಾದೇಶ ಇಲ್ಲವೇ ಭಾರತದ ಮೇಲೆ ಸಿರಿಯಾದ ಐ ಎಸ್ ಐ ಎಸ್ ಉಗ್ರಪಡೆ ದಾಳಿ ಮಾಡಿ ಗೆಲ್ಲುವುದು ಸಾಧ್ಯವಿಲ್ಲದ ಮಾತು. ಇದಕ್ಕೇನಿದ್ದರೂ ‘ಐ ಎಸ್ ಐ ಎಸ್ ಮತ್ತದು ಪ್ರತಿಪಾದಿಸುವ ಇಸ್ಲಾಂ ವಿಸ್ತರಣವಾದ ತನ್ನ ಹಿತಾಸಕ್ತಿಯದ್ದು’ ಎಂದು ನಂಬಿ, ಆ ನಿಟ್ಟಿನಲ್ಲಿ ಕೆಲಸ ಮಾಡುವ ಇದೇ ನೆಲದ ಪಡೆ ಇರಬೇಕು. ಇವತ್ತು ಬಾಂಗ್ಲಾದೇಶದ ಮೇಲಿನ ದಾಳಿ ಹಾಗೂ ಭಾರತದಲ್ಲಾಗಿರುವ ಬಂಧನಗಳು ಇಲ್ಲೆಲ್ಲ ಇರುವವರು ದೇಶೀಯರೇ. ಹೀಗಾಗಿ ಐ ಎಸ್ ಐ ಎಸ್ ಒಂದು ಪ್ರೇರಕ ಶಕ್ತಿ ಆಗಿರಬಹುದಾದರೂ ಖೂಳರೆಲ್ಲ ಇಲ್ಲಿಯವರೇ ಹಾಗೂ ನಾವೆಲ್ಲ ಎದುರಿಸಬೇಕಿರುವುದು ದೇಶೀಯ ಇಸ್ಲಾಂ ತೀವ್ರವಾದವನ್ನು ಎಂಬುದೇ ವಾಸ್ತವ.

  • ಐ ಎಸ್ ಐನಂಥವುಗಳ ಕೈವಾಡಗಳಿಗೆ ಕುರುಡಾಗುತ್ತೇವೆ…

ಬಾಂಗ್ಲಾದೇಶದ ಮೇಲಿನ ದಾಳಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಎನ್ಡಿಟಿವಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದರು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಸಯ್ಯದ್ ಅಟಾ ಹಸ್ನೆನ್, ಮಾಜಿ ರಾಜತಾಂತ್ರಿಕ ಜಿ. ಪಾರ್ಥಸಾರಥಿ ಹಾಗೂ ಬಿಜೆಪಿಯ ಶೇಷಾದ್ರಿಚಾರಿ. ನಿರೂಪಕ ಶ್ರೀನಿವಾಸನ್ ಜೈನ್ ಅವರು ಐ ಎಸ್ ಐ ಎಸ್ ಅಂತ ಬೊಬ್ಬೆ ಹಾಕುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ಈ ಮೂವರು ನೀಡಿದ ಅಭಿಪ್ರಾಯ ಒಮ್ಮತದ್ದಾಗಿತ್ತು. ಅದೆಂದರೆ- ‘ಬಾಂಗ್ಲಾದೇಶದ ಮೇಲಿನ ಉಗ್ರದಾಳಿಯಲ್ಲಿ ಐ ಎಸ್ ಐ ಎಸ್ ಕೈವಾಡಕ್ಕಿಂತ ಮೊದಲು ಐಎಸ್ಐ (ಪಾಕಿಸ್ತಾನದ ಗುಪ್ತಚರ ಸಂಸ್ಥೆ) ಪಾತ್ರವಿದೆಯಾ ಅಂತ ವಿಚಾರಿಸಬೇಕು!’ ಸಯ್ಯದ್ ಹಸ್ನೆನ್ ಅಂತೂ ತುಂಬ ಚೆನ್ನಾಗಿ ವಿವರಿಸಿದರು- ‘ದಾಳಿಯಲ್ಲಿ ಭಾಗವಹಿಸಿದ ಕೆಲವರಿಗೆ ಐ ಎಸ್ ಐ ಎಸ್ ನಂಟು ಇದ್ದಿರಬಹುದು. ಕೆಲವೇ ಕೆಲವರು ತರಬೇತನ್ನೂ ಪಡೆದುಕೊಂಡಿದ್ದಿರಬಹುದು. ಆದರೆ ಸಂಚು ರೂಪಿಸುವುದು, ಕಾರ್ಯಾಚರಣೆ ಇವೆಲ್ಲ ಸ್ಥಳೀಯರದ್ದೇ. ಬಾಂಗ್ಲಾದೇಶವನ್ನು ಮುರಿಯಬೇಕೆಂಬ ಆಸಕ್ತಿ ಮೊದಲಿನಿಂದ ಇರುವುದು ಪಾಕಿಸ್ತಾನದ ಐಎಸ್ಐಗೆ’ ಅಂತ.

ಇಂಥ ಸೂಕ್ಷ್ಮಗಳನ್ನು ನಾವೂ ಅರ್ಥ ಮಾಡಿಕೊಂಡು ಐ ಎಸ್ ಐ ಎಸ್, ಅಲ್ ಕಾಯಿದಾ ಇಂಥ ಗುಮ್ಮನ ಕರೆಯುವ ಆಟಗಳಿಗೆ ಮರುಳಾಗುವುದನ್ನು ಬಿಡಬೇಕು. ಚಳಿ ಬಿಡಿಸಬೇಕಿರುವುದು ದೇಶೀಯ ಇಸ್ಲಾಮಿಕ್ ಉಗ್ರರಿಗೆ. ಹಾಗಂತ ಐ ಎಸ್ ಐ ಎಸ್ ಉಪಸ್ಥಿತಿಯನ್ನೇ ಅಲ್ಲಗೆಳೆಯಬೇಕು ಎಂದೇನಲ್ಲ. ಆದರೆ ಭಾರತ ಅಥವಾ ಇನ್ಯಾವುದೇ ದೇಶಕ್ಕೆ ಅತಿ ಅಪಾಯ ಇರುವುದು ಈ ಒಳಗಿನ ಕ್ರಿಮಿಗಳಿಂದ.

ಈ ನಿಟ್ಟಿನಲ್ಲಿ ಬಾಂಗ್ಲಾದೇಶಕ್ಕಿರುವ ಸ್ಪಷ್ಟತೆ ನಮಗೂ ಒಲಿಯಲಿ. ಅಲ್ಲಿನ ಗೃಹ ಸಚಿವ ಅಸದುಜ್ಜಮಾನ್ ಖಾನ್ ಹೇಳಿದ್ದಾರೆ-

‘ಇದನ್ನು ಇನ್ನೊಮ್ಮೆ ಸ್ಪಷ್ಟಪಡಿಸಿಬಿಡುತ್ತೇನೆ ಕೇಳಿ. ಬಾಂಗ್ಲಾದೇಶದಲ್ಲಿ ಐಎಸ್ ಆಗಲಿ ಅಲ್ ಕೈದಾ ಆಗಲೀ ಉಪಸ್ಥಿತಿ ಹೊಂದಿಲ್ಲ. ಒತ್ತೆ ಕೃತ್ಯದಲ್ಲಿ ಭಾಗವಹಿಸಿದ್ದವರೆಲ್ಲ ಇದೇ ಮಣ್ಣಲ್ಲಿ ಬೆಳೆದ ಉಗ್ರರು. ಜಮಾತುಲ್ ಮುಜಾಹಿದೀನ್ ಸಂಘಟನೆಗೆ ಸೇರಿರುವ ಇವರ ಹಿರೀಕರು ಸಹ ಇದೇ ಮಣ್ಣಿನವರು ಎಂಬುದನ್ನು ನಾವು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇವೆ..’

Leave a Reply