ಕೇಜ್ರಿವಾಲರ ಪ್ರಧಾನ ಕಾರ್ಯದರ್ಶಿ ಬಂಧನ, ಬದಲಾದ ಪಾತ್ರದಲ್ಲಿ ಕಾಗೋಡು, ಯಾತ್ರಾಕಾಲದಲ್ಲಿ ಕೇಂದ್ರದಿಂದ ಕನ್ನಡ ಕಡೆಗಣನೆ… ಇದು ಸುದ್ದಿಸಂತೆ

ಸಂಪೂರ್ಣ ಜೈವಿಕ ಇಂಧನ ಬಳಸಿ ಚಲಿಸಲಿರುವ ದೇಶದ ಪ್ರಥಮ ಸಾರಿಗೆ ಬಸ್ಸಿಗೆ ವಿಧಾನಸೌಧದ ಎದುರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ನಟಿ ಹರ್ಷಿಕಾ ಹಸಿರು ನಿಶಾನೆ..

 

ಡಿಜಿಟಲ್ ಕನ್ನಡ ಟೀಮ್:

 ಅಕ್ರಮ-ಸಕ್ರಮ ತ್ವರಿತ: ಕಾಗೋಡು

ಈ ಮೊದಲು ಸಭಾಧ್ಯಕ್ಷ ಸ್ಥಾನದಿಂದ ಕಂದಾಯ ಇಲಾಖೆಯನ್ನು ಹಲವು ಸಾರಿ ತರಾಟೆಗೆ ತೆಗೆದುಕೊಂಡಿದ್ದ ಕಾಗೋಡು ತಿಮ್ಮಪ್ಪ ಅವರಿಗೆ, ಈ ಬಾರಿ ಕಂದಾಯ ಸಚಿವರಾಗಿ ಉತ್ತರದಾಯಿ ಆಗುವ ಪಾತ್ರ.

‘ಗ್ರಾಮೀಣ ಪ್ರದೇಶದ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಸಕ್ರಮಗೊಳಿಸಿಕೊಳಿಸುವುದಾಗಿ ಅವರು ವಿಧಾನ ಸಭೆಯಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ದಂಡದ ಮೊತ್ತ ಕಡಿಮೆ ಮಾಡುವುದಾಗಿಯೂ ಹೇಳಿದ್ದಾರೆ. ನಿರ್ಗತಿಕ, ವಿಧವೆ, ಅಂಗವಿಕಲ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಇತರ ವ್ಯಕ್ತಿಗಳಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿ ವೇತನವನ್ನು ಹೆಚ್ಚಿಸುವ ಭರವಸೆಯೂ ಸಿಕ್ಕಿತು.

ಬಡವರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ,ವಿಧವಾ ವೇತನದ ಪ್ರಮಾಣವನ್ನು ಹೆಚ್ಚಿಸಲು ಚಿಂತನೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಇನ್ನುಮುಂದೆ ಪಿಂಚಣಿ ಅದಾಲತ್‍ಗಳನ್ನು ಶಾಸಕರ ಗಮನಕ್ಕೆ ತಂದೇ ನಡೆಸುವುದಾಗಿ ಹೇಳಿದರು.

ಕಾಗೋಡು ತಿಮ್ಮಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕಡೆ ದಿನವಾದ ಸೋಮವಾರ ಕೆ.ಬಿ.ಕೋಳಿವಾಡ್ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರ ಅವಿರೋಧ ಆಯ್ಕೆ ಖಚಿತವಾಗಿದೆ.

kagodu timmappa

ಕೇಜ್ರಿವಾಲ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರೆಸ್ಟ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಈ ಬೆಳವಣಿಗೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದ್ದು, ಎಂದಿನಂತೆ ಕೇಂದ್ರದ ವಿರುದ್ಧ ಕಿಡಿ ಕಾರಿದೆ.

ಕಂಪ್ಯೂಟರ್ ಗಳ ಖರೀದಿಗೆ ಸಂಬಂಧಿಸಿದಂತೆ ನಡೆದಿರುವ ₹ 50 ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜೇಂದ್ರ ಅವರೇ ಕಿಂಗ್ ಪಿನ್ ಎಂಬುದು ಸಿಬಿಐನ ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಅವರ ಜತೆಗೆ ಇತರೆ ನಾಲ್ವರನ್ನು ಬಂಧಿಸಲಾಗಿದೆ. ಸೋಮವಾರ ರಾಜೇಂದ್ರ ಅವರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಸುದೀರ್ಘ 9 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ರಾಜೇಂದ್ರ ಅವರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಪ್ರಕರಣಕ್ಕೆ ಕೇಂದ್ರವನ್ನು ದೂಷಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೊಡಿಯಾ ಹೇಳೋದಿಷ್ಟು:

‘ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಿಬಿಐ ಅಧಿಕಾರಿಗಳು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಲ್ಲಿನ ಅವ್ಯವಹಾರಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಭೇಟಿ ಮಾಡಿ ಅವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ ಡಿಡಿಸಿಎ ಅಧಿಕಾರಿ ಯಾರೆಂದು ಹೇಳುವಂತೆ ಸಿಬಿಐ ಅಧಿಕಾರಿಗಳು ರಾಜೇಂದ್ರ ಅವರನ್ನು ಬಲವಂತ ಮಾಡುತ್ತಿದ್ದಾರೆ. ಈ ರೀತಿಯಾದ ಬೆದರಿಕೆಗೆ ದೆಹಲಿ ಸರ್ಕಾರ ಬಗ್ಗುವುದಿಲ್ಲ.’

ಇದು ಯಾತ್ರಾಕಾಲ, ಕನ್ನಡಕ್ಕಿಲ್ಲ ಜಾಗ!

ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯಕ್ಕೆ ಆರಂಭಿಕ ಮೂರು ದಿನಗಳಲ್ಲಿ 24 ಸಾವಿರ ಯಾತ್ರಿಕರು ಭೇಟಿ ನೀಡಿದ್ದಾರೆ. ನಿನ್ನೆ ವೇಳೆಗೆ ಸುಮಾರು 15 ಸಾವಿರ ಯಾತ್ರಿಕರು ಗುಹೆಯಲ್ಲಿ ನಿರ್ಮಾಣವಾಗಿರುವ ಮಂಜಿನ ಲಿಂಗವನ್ನು ನೋಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಸೋಮವಾರ ಬೆಳಗಿನ ಜಾವ 4.40ರ ಸುಮಾರಿಗೆ 1842 ಯಾತ್ರಿಕರ ಮತ್ತೊಂದು ಗುಂಪು ಭಗವತಿ ನಗರದ ಕ್ಯಾಂಪ್ ನಿಂದ ಹೊರಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು, ಜೂನ್ 12ರಿಂದ ಪ್ರಾರಂಭವಾಗುವ ಕೈಲಾಸ ಮಾನಸಸರೋವರ ಯಾತ್ರೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿರುವ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಕನ್ನಡದಲ್ಲಿ ಮಾಹಿತಿ ನೀಡಿಲ್ಲ. ತಮಿಳು, ಮಲಯಾಳಂ, ಉರ್ದು, ಬಂಗಾಳಿ ಭಾಷೆಗಳಲ್ಲಿ ಪಿಡಿಎಫ್ ವಿವರಣ ಪಟ್ಟಿ ಲಭ್ಯವಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ ರವಿ ಸಹ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ:

‘ಕನ್ನಡದಲ್ಲಿ ಮಾಹಿತಿ ನೀಡದೇ ನಮ್ಮ ಭಾಷೆಯನ್ನು ಕಡೆಗಣಿಸಿರುವುದನ್ನು ಖಂಡಿಸುತ್ತೇನೆ. ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ನಲ್ಲಿ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ಮಾಹಿತಿ ನೀಡುವಾಗ ಕನ್ನಡದಲ್ಲಿ ಏಕೆ ನೀಡಿಲ್ಲ. ಕನ್ನಡಿಗರೆಂದರೆ ಅಷ್ಟೊಂದು ಕಡೆಯೇ? ಕೇಂದ್ರದ ಹಲವು ಸಚಿವಾಲಯಗಳು ಕನ್ನಡವನ್ನು ನಿರ್ಲಕ್ಷಿಸುತ್ತಿವೆ ಎಂದು ಪ್ರಧಾನಿ ಮೋದಿ ಅವರ ಗಮನಕ್ಕೆ ತರಲು ನೋವಾಗುತ್ತಿದೆ.’

ಮೈಸೂರು ಜಿಲ್ಲಾಧಿಕಾರಿ ಪರ ಕರಂದ್ಲಾಜೆ ಆಗ್ರಹ

ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಆಪ್ತ ಮರಿಗೌಡ ಮತ್ತು ಅವರ ಆಪ್ತರನ್ನು ತಕ್ಷಣವೇ ಬಂಧಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಆಪ್ತ ಸಹಾಯಕರು ಎಂದು ಹೇಳಿಕೊಳ್ಳುವವರಿಂದ ದೌರ್ಜನ್ಯ ಹೆಚ್ಚಿದೆ. ಈ ಹಿಂದಿನ ರಶ್ಮಿ ಪ್ರಕರಣವನ್ನು ತನಿಖೆ ನಡೆಸುವ ಸೋಗಿನಲ್ಲಿ ಮುಚ್ಚಿ ಹಾಕಲಾಗಿದೆ. ಅಷ್ಟೇ ಅಲ್ಲ ಅಲ್ಲಿನ ತರಬೇತಿ ಸಂಸ್ಥೆಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಹಗರಣವನ್ನು ಈ ಸರ್ಕಾರ ಮುಚ್ಚಿಹಾಕಿದೆ ಎಂದು ದೂರಿದರು.

ಭಾನುವಾರ ಇಪ್ತಾರ್ ಕೂಟಕ್ಕೆ ತೆರಳಿದ್ದ ಸಿಎಂ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಅವರ ಆಪ್ತ ಮರಿಗೌಡ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತವರ ಹಿಂಬಾಲಕರು ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಸಿಎಂ ಮುಂದೆಯೇ ಬೆದರಿಕೆ ಹಾಕಿದ್ದಾರೆ ಎಂಬುದು ಕೇಳಿಬಂದಿರುವ ಆರೋಪ.

ಮೈಸೂರು ಜಿಲ್ಲೆಯಲ್ಲಿರುವ 7 ತಹಶೀಲ್ದಾರ್ ಪೋಸ್ಟ್ ಗಳಲ್ಲಿ 4 ಖಾಲಿಯಿದ್ದು, ನವೀನ್ ಜೊಸೆಫ್ ಅವರಿಗೆ ರಿಲೀವ್ ಮಾಡಿದರೇ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ. ಅವರ ಸ್ಥಳಕ್ಕೆ ಮತ್ತೊಬ್ಬ ಅಧಿಕಾರಿ ಬರುವವರೆಗೂ ಅವರನ್ನು ಅಲ್ಲಿಂದ ರಿಲೀವ್ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಶಿಖಾ ಮನವರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದ್ದಾರೆ.

ಸಿಎಂ ಅಲ್ಲಿಂದ ಹೊರಟ ನಂತರ ಶಿಖಾ ಬೆಂಗಾವಲು ವಾಹನದ ಜೊತೆ ತೆರಳಬೇಕಿತ್ತು. ಈ ವೇಳೆ ಸಿಎಂ ಹಿಂಬಾಲಕರು ಡಿಸಿ ಶಿಖಾ ವಿರುದ್ಧ ಜೊರಾಗಿ ಕೂಗಾಡುತ್ತಿದ್ದರು. ಪರಿಸ್ಥಿತಿ ಅರಿತ ಗನ್ ಮ್ಯಾನ್ ಗಳ ಡಿಸಿ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದರು.

rio pm

ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತೆರಳುತ್ತಿರುವ ಭಾರತದ ಕ್ರೀಡಾಳುಗಳ ಜತೆ ಬೆರೆತ ಪ್ರಧಾನಿ ನರೇಂದ್ರ ಮೋದಿ, ತಂಡಕ್ಕೆ ಶುಭ ಹಾರೈಸಿದರು.

Leave a Reply