ನಿರೀಕ್ಷೆಯಂತೆ ಮೋದಿ ಸಂಪುಟಕ್ಕೆ ಸೇರಿದ್ರು ರಮೇಶ್ ಜಿಗಜಿಣಗಿ, ಉ.ಪ್ರ ಕಾರ್ಡ್ ಪ್ರಯೋಗದಲ್ಲಿ ಪ್ರತಿಭೆಗೂ ಮಣೆ ಸಿಕ್ಕಿದೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ರಮೇಶ್ ಜಿಗಜಿಣಗಿ ಹೊಸ ಸೇರ್ಪಡೆಯಾದ್ರೆ, ಸದಾನಂದ ಗೌಡ್ರು ಸಂಪುಟದಲ್ಲಿ ಮುಂದುವರಿದ್ರು.. ರಾಜ್ಯ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್ ಸಂಪುಟಕ್ಕೆ ಬಡ್ತಿ ಪಡೆದರೆ, ಉತ್ತರ ಪ್ರದೇಶ, ರಾಜಸ್ಥಾನದ ದಲಿತ ಸಂಸದರ ಸೇರ್ಪಡೆ.. ಇವಿಷ್ಟೂ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಪ್ರಮುಖ ಹೈಲೈಟ್ಸ್.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಸಚಿವ ಸಂಪುಟ ವಿಸ್ತರಿಸಿದ್ದಾರೆ. ಈ ವಿಸ್ತರಣೆಯಲ್ಲಿ 19 ಹೊಸ ಮುಖಗಳ ಸೇರ್ಪಡೆಯಾಗಿದ್ದು, ನೂತನ ಸಚಿವರು ರಾಷ್ಟ್ರಪತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಸಮಾರಂಭದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ  ಅಧಿಕೃತವಾಗಿ ಸಂಪುಟ ಪ್ರವೇಶಿಸಿದರು.

ಉಳಿದಂತೆ ಸಿ.ಆರ್ ಚೌಧರಿ (ರಾಜಸ್ಥಾನ), ಮನ್ಸುಕ್ ಮಾಂಡವ್ಯ (ಗುಜರಾತ್ ರಾಜ್ಯಸಭಾ ಸದಸ್ಯ), ಕೃಷ್ಣ ರಾಜ್ (ಉತ್ತರ ಪ್ರದೇಶ), ಅಜಯ್ ತಮ್ತಾ (ಉತ್ತರಾಖಂಡ), ಅರ್ಜುನ್ ರಾಮ್ ಮೆಘ್ವಲ್ (ರಾಜಸ್ಥಾನ), ಎಂ.ಜೆ.ಅಕ್ಬರ್ (ಮಧ್ಯಪ್ರದೇಶ), ಪರ್ಸೊತ್ತಮ್ ಭಾಯ್ ರುಪಾಲ (ಗುಜರಾತ್), ಅನಿಲ್ ಮಾಧವ್ ಧಾವೆ (ಮಧ್ಯ ಪ್ರದೇಶ), ರಾಜನ್ ಗೊಹೈನ್ (ಅಸ್ಸಾಂ), ವಿಜಯ್ ಗೋಯೆಲ್ (ರಾಜಸ್ಥಾನ ರಾಜ್ಯಸಭೆ ಸದಸ್ಯ), ಎಸ್.ಎಸ್ ಅಹ್ಲುವಾಲಿಯಾ (ಪಶ್ಚಿಮ ಬಂಗಾಳ), ಫಗ್ಗಾನ್ ಸಿಂಗ್ ಖುಲಸ್ತೆ (ಮಧ್ಯಪ್ರದೇಶ), ಡಾ.ಸುಭಾಷ್ ರಾಮರಾವ್ ಭಮ್ರೆ (ಮಹಾರಾಷ್ಟ್ರ ಸಂಸದ), ಪಿ.ಪಿ.ಚೌಧರಿ (ರಾಜಸ್ಥಾನದ ಸಂಸದ), ಡಾ.ಮಹೇಂದ್ರನಾಥ ಪಾಂಡೆ (ಉತ್ತರ ಪ್ರದೇಶ), ಜಸ್ವಂತ್ ಸಿಂಗ್ (ಗುಜರಾತ್) ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ನಾಯಕರು. ಇನ್ನು ಅನುಪ್ರಿಯಾ ಪಟೇಲ್ (ಉತ್ತರ ಪ್ರದೇಶ, ಅಪ್ನಾ ದಳ ಸಂಸದೆ), ರಾಮ್ದಾಸ್ ಅಠವಾಳೆ (ರಾಜ್ಯ ಸಭೆ ಸದಸ್ಯ, ಆರ್ ಪಿ ಐ ) ಸಚಿವ ಸ್ಥಾನ ಗಿಟ್ಟಿಸಿದ ಬಿಜೆಪಿ ಹೊರತಾದ ನಾಯಕರು. ಈ ಎಲ್ಲಾ ಹೊಸ ಸೇರ್ಪಡೆ ನಿರೀಕ್ಷೆಯಂತೆ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದಲಿತ ಕಾರ್ಡ್ ಪ್ರಯೋಗವಾಗಿದೆ. ಈ ಬಗೆಗಿನ ವರದಿ ಇಲ್ಲಿದೆ.

ಜಾತಿ- ಮುಂಬರುವ ಉ.ಪ್ರ. ಚುನಾವಣೆಗಳನ್ನು ಸಂಭಾಳಿಸಬೇಕಾದ ಒತ್ತಡ ಇದ್ದರೂ ಈ ನಡುವೆಯೇ ಪ್ರತಿಭೆಗಳಿಗೂ ಮಣೆ ಹಾಕಲಾಗಿದೆ. ಸುಪ್ರೀಂ ಕೋರ್ಟಿನ ನ್ಯಾಯವಾದಿ ಆಗಿರುವ ಪಿ. ಪಿ. ಚೌಧರಿ ಅವರು ಸಂವಿಧಾನ ತಜ್ಞರೂ ಹೌದು. ಉ. ಪ್ರ. ಮೈತ್ರಿಕೂಟವಾದ ಅಪ್ನಾದಳದ ಅನುಪ್ರಿಯಾ ಪಟೇಲರಿಗೆ ಸ್ಥಾನ ನೀಡಿರುವುದು ಒಂದೆಡೆ ಮೈತ್ರಿಧರ್ಮ ಪಾಲನೆಯಾದರೆ, ಇನ್ನೊಂದೆಡೆ ಅವರು ಅಕಾಡೆಮಿಕ್ ಹಿನ್ನೆಲೆ ಹೊಂದಿರುವುದನ್ನೂ ಗಮನಿಸಬೇಕು. ಸುಭಾಷ್ ರಾಮರಾವ್ ಭಾಮರೆ ಅವರು ಪ್ರಸಿದ್ಧ ಶಸ್ತ್ರಚಿಕಿತ್ಸಕರು.  ಅನಿಲ್ ಮಾಧವ ದವೆಯವರು ನರ್ಮದಾ ಸಂರಕ್ಷಣೆಯ ಆ್ಯಕ್ಟಿವಿಸ್ಟ್ ಹಿನ್ನೆಲೆ ಹೊಂದಿದ್ದರೆ, ಎಂ. ಜೆ. ಅಕ್ಬರ್ ಪತ್ರಕರ್ತರಾಗಿ ಹಲವು ವಿಷಯಗಳಲ್ಲಿ ಪರಿಣತ ದೃಷ್ಟಿಕೋನ ಹೊಂದಿದವರಾಗಿದ್ದಾರೆ.

ಈ ಸಂಪುಟ ವಿಸ್ತರಣೆಯಲ್ಲಿ ಪ್ರಕಾಶ್ ಜಾವಡೇಕರ್ ಅವರಿಗೆ ಮಾತ್ರ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಉಳಿದ ಹೊಸ ಸದಸ್ಯರಿಗೆ ಸಹಾಯಕ ಅಥವಾ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಈ ಪೈಕಿ ಕೆಲವರಿಗೆ ಸ್ವತಂತ್ರ ಖಾತೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಉಳಿದಂತೆ ಕ್ಯಾಬಿನೆಟ್ ಮಟ್ಟದಲ್ಲಿ ಯಾವುದೇ ದೊಡ್ಡಮಟ್ಟದ ಬದಲಾವಣೆಯಾಗಿಲ್ಲ.

Leave a Reply