ಸ್ಮೃತಿ ಕಂಪನ ಹಾಗಿರಲಿ, ಮೋದಿ ಪರ್ವದ ಅನಂತ ವರ್ಚಸ್ಸೇ ಕರ್ನಾಟಕದ ಪಾಲಿಗೆ ಸಂಪುಟ ಪುನಾರಚನೆಯ ಮುಖ್ಯಾಂಶ

ಡಿಜಿಟಲ್ ಕನ್ನಡ ವಿಶೇಷ:

‘ಜೋರ್ ಕಾ ಜಟಕಾ, ಧೀರೆ ಸೆ ಲಗೆ’ ಎಂಬ ಮಾತನ್ನು ನೆನಪಿಸುವಂತಿದೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ. ಮಂಗಳವಾರದ ದಿನವಿಡೀ ಯಾರೆಲ್ಲ ಹೊಸಬರು ಸೇರಿದರು, ಯಾವ ಆಧಾರದಲ್ಲಿ ಸೇರಿದರು ಎಂಬ ಕುರಿತು ಮಾಧ್ಯಮ, ಸಾಮಾಜಿಕ ಮಾಧ್ಯಮಗಳೆಲ್ಲ ಚರ್ಚೆಯಲ್ಲಿದ್ದವು. ಇನ್ನೇನು ಎಲ್ಲ ಮುಗಿಸಿ ಅಂಗಡಿ ಬಾಗಿಲು ಹಾಕಬೇಕೆನ್ನುವಷ್ಟರಲ್ಲಿ ಖಾತೆ ಬದಲಾವಣೆಯ ವಿವರಗಳು ಹೊರಬೀಳತೊಡಗಿದವು. ಇಲ್ಲೇ ಇದ್ದಿದ್ದು ಸ್ವಾರಸ್ಯ- ಅಚ್ಚರಿಗಳು!

ಸ್ಮೃತಿ ಇರಾನಿಯವರನ್ನು ಮಾನವ ಸಂಪನ್ಮೂಲ ಸಚಿವಾಲಯದಿಂದ ಎತ್ತಿ, ಜವಳಿ ಖಾತೆಗೆ ಹಾಕಿರುವುದು ರಾಷ್ಟ್ರೀಯ ಮಾಧ್ಯಮಕ್ಕೆ ದೊಡ್ಡ ಸುದ್ದಿ. ಬೆಳಗ್ಗೆಯಷ್ಟೇ ರಾಜ್ಯಖಾತೆಯಿಂದ ಸಂಪುಟ ದರ್ಜೆಗೆ ಭಡ್ತಿ ಪಡೆದಿದ್ದ ಪ್ರಕಾಶ ಜಾವ್ಡೇಕರರಿಗೆ ಈ ಮಹತ್ತರ ಖಾತೆ.

ಆದರೆ ನಾವು ಕರ್ನಾಟಕವನ್ನು ಗಮನಿಸೋಣ. ಇಲ್ಲಿ ಬಹುಮುಖ್ಯವಾಗಿ ಎರಡು ಕತೆಗಳನ್ನು ಗಮನಿಸಬೇಕು. ಒಂದು ಅನಂತ ಕುಮಾರ್ ಇನ್ನೊಂದು ಸದಾನಂದ ಗೌಡ.

ಅನಂತ ಕುಮಾರ್ ತಮ್ಮ ರಾಜಕೀಯ ಪ್ರಖರತೆಯನ್ನು ಮತ್ತೆ ಏರುಮಟ್ಟಕ್ಕೇ ತೆಗೆದುಕೊಂಡುಹೋಗುವಲ್ಲಿ ಸಫಲವಾಗಿರುವುದು ಬಹುಮುಖ್ಯ ಅಂಶ. ಪ್ರಧಾನಿ ಮೋದಿಯವರ ಆಂತರಿಕ ಕೂಟದಲ್ಲಿದ್ದರು ಎಂದು ಗುರುತಿಸಬಹುದಾದ ಎಂ. ವೆಂಕಯ್ಯನಾಯ್ಡು ಅವರು ನಿಭಾಯಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಅನಂತಕುಮಾರ್ ಅವರಿಗೆ ನೀಡಲಾಗಿದೆ. ಈಗಿರುವ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಗೆ ಹೋಲಿಸಿದರೆ ಇದು ಭಡ್ತಿಯೇ. ಈ ಖಾತೆಯನ್ನೂ ಅವರಲ್ಲೇ ಇರಿಸಲಾಗಿದೆ ಎಂಬುದೂ ಗಮನಾರ್ಹ. ಕರ್ನಾಟಕದ ಮಟ್ಟಿಗಂತೂ ಇದು ರಾಜಕೀಯ ಸಂದೇಶಗಳನ್ನೂ ಹೊತ್ತ ಬೆಳವಣಿಗೆ. ಏಕೆಂದರೆ ಮೋದಿ ಸರ್ಕಾರದ ಪ್ರಾರಂಭದ ದಿನಗಳಲ್ಲಿ ಅನಂತ ಕುಮಾರ್ ಅವರನ್ನು ಆಡ್ವಾಣಿ ಪಾಳೆಯ ಎಂದೇ ಗುರುತಿಸಲಾಗುತ್ತಿತ್ತು. ಮೋದಿ ಪರ್ವದಲ್ಲಿ ಅವರು ತೆರೆಮರೆಯಲ್ಲಿ ಇದ್ದಾರು ಅಷ್ಟೆ ಎಂಬಂತಹ ಅಭಿಪ್ರಾಯಗಳು ರೂಪು ತಾಳಿದ್ದವು. ಅದೇ ಸಮಯಕ್ಕೆ ಆಡ್ವಾಣಿ ಅವರಿಂದ ಅಸಮಾಧಾನಗೊಂಡಿದ್ದ ಯಡಿಯೂರಪ್ಪ ಮತ್ತವರ ಪಾಳೆಯ ಮೋದಿ ಆಗಮನವನ್ನು ತೆರೆದ ರೀತಿಯಲ್ಲೇ ಸ್ವಾಗತಿಸಿತ್ತು. ಆದರೆ ಮೋದಿ ಕೊನೆಗೂ ಕೆಲಸದ ಮೂಲಕ ಅಳೆಯುವವರೆಂಬ ಸೂಕ್ಷ್ಮವನ್ನು ಬೇಗ ಅರ್ಥಮಾಡಿಕೊಂಡಂತಿದ್ದ ಅನಂತಕುಮಾರ್, ತಮಗೆ ವಹಿಸಿದ ಖಾತೆಯಲ್ಲಿ ಲೋಪಕ್ಕೆಡೆ ಇಲ್ಲದಂತೆ ಕೆಲಸ ಮಾಡಿದರು. ಬೇವು ಲೇಪಿತ ಯೂರಿಯಾ ಯೋಜನೆ ಅನುಷ್ಠಾನದಲ್ಲಿ ಅನಂತ್ ಕುಮಾರ್ ಕಾರ್ಯವನ್ನು ಕರ್ನಾಟಕಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರಧಾನಿಯೇ ಒಮ್ಮೆ ಹೊಗಳಿದ್ದರು. ಅವೆಲ್ಲದರ ಫಲ ಈ ಸಂಪುಟ ಪುನಾರಚನೆಯಲ್ಲಿ ಪ್ರತಿಫಲಿಸಿದೆ. ಈ ಹಿಂದೆ ಅನಂತಕುಮಾರ್ ಆಡ್ವಾಣಿ ಆಪ್ತವಲಯಕ್ಕೆ ಹೇಗೋ ಸೇರಿಕೊಂಡುಬಿಟ್ಟಿದ್ದರು ಎನ್ನಬಹುದಾಗಿದ್ದರೂ, ಈಗಿನ ಏರುವಿಕೆಯಲ್ಲಿ ಕ್ಷಮತೆಯಷ್ಟೇ ಕೈ ಹಿಡಿದಿದೆಯಾಗಲೀ ಮತ್ತೇನಲ್ಲ.

ಇನ್ನು ಸದಾನಂದ ಗೌಡರು ಸಂಪುಟದಿಂದಲೇ ಹೊರಬೀಳುತ್ತಾರೆ ಎಂಬ ವದಂತಿಗಳಿದ್ದವು. ಈ ಜಾಗಕ್ಕೆ ಕರ್ನಾಟಕದಿಂದ ‘ತಮ್ಮವರನ್ನು’ ತೂರಿಸಬೇಕೆಂಬ ತೆರೆಮರೆ ಪ್ರಯತ್ನಗಳೂ ನಡೆದಿದ್ದವಾದರೂ ಅಂಥದಕ್ಕೇನೂ ಆಸ್ಪದವಾಗಿಲ್ಲ. ಆದರೆ, ಈ ಹಿಂದೆ ರೈಲ್ವೆ ಖಾತೆಯಿಂದ ಹೊರಬಂದು ಕಾನೂನು ಸಚಿವರಾಗಿದ್ದ ಸದಾನಂದ ಗೌಡರ ಕಾರ್ಯವೈಖರಿ ಇಲ್ಲೂ ಪ್ರಧಾನಿ ಮನ ಗೆಲ್ಲುವುದಕ್ಕೆ ವಿಫಲವಾಗಿರುವುದು ಸ್ಪಷ್ಟ. ಸದಾನಂದ ಗೌಡರು ತುಂಬ ಒಳ್ಳೆಯವರು, ಆದರೆ ಮುಂದೆ ಹೇಳಲಿಕ್ಕೇನಿಲ್ಲ ಅಷ್ಟಕ್ಕೇ ಫುಲ್ ಸ್ಟಾಪ್ ಎಂಬ ಮಾತು ಗಟ್ಟಿಯಾದಂತೆ ಆಗಿದೆ. ಅಷ್ಟೇನೂ ಪ್ರಮುಖವಲ್ಲದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನದ ಖಾತೆಗೆ ವರ್ಗಾಯಿಸಲಾಗಿದೆ.

ಮತ್ತೆ ರಾಷ್ಟ್ರೀಯ ನೆಲೆಗೆ ಹೋಗುವುದಾದರೆ, ಸ್ಮೃತಿ ಇರಾನಿಯವರನ್ನು ಮಾನವ ಸಂಪನ್ಮೂಲದಿಂದ ತೆಗೆದಿರುವುದನ್ನು ಉತ್ಪ್ರೇಕ್ಷಿತ ಮಟ್ಟದಲ್ಲೇನೂ ಟೀಕಿಸಬೇಕಿಲ್ಲ. ಈ ಖಾತೆ ವಿವಾದಕ್ಕೆ ಒಳಗಾಗುತ್ತಿರುವುದನ್ನು ತಗ್ಗಿಸುವ ದೃಷ್ಟಿ ಇದ್ದಿರಬಹುದಾದರೂ, ಇರಾನಿ ಮಹತ್ವವನ್ನೇನೂ ಕಡೆಗಣಿಸಿಲ್ಲ. ಕಾಂಗ್ರೆಸಿನ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುನ್ನೆಲೆಯಲ್ಲಿ ನಿಲ್ಲುವ ಸೂಚನೆಗಳಿರುವಾಗ, ಗಾಂಧಿ ಕುಟುಂಬವನ್ನು ಎದುರುಗೊಳ್ಳಲು ಸ್ಮೃತಿಗಿಂತ ದೊಡ್ಡ ಹೋರಾಟಗಾರರು ಮತ್ಯಾರಿಲ್ಲ ಎಂಬ ಮಂತ್ರಾಲೋಚನೆ ಇದರ ಹಿಂದೆ ಇದ್ದಂತಿದೆ. ಮಾನವ ಸಂಪನ್ಮೂಲಕ್ಕೆ ಹೋಲಿಸಿದರೆ ಜವಳಿ ಖಾತೆ ಕಡಿಮೆ ಮಹತ್ವದ್ದಾದರೂ, ಇತ್ತೀಚೆಗೆ ಕೋಟ್ಯಂತರ ರುಪಾಯಿಗಳ ಪ್ಯಾಕೇಜು ಬಿಡುಗಡೆಗೊಳಿಸಿರುವ ಕೇಂದ್ರವು ಜವಳಿ ವಿಭಾಗದಲ್ಲೂ ಉನ್ನತ ಯೋಜನೆಗಳನ್ನು ಇರಿಸಿಕೊಂಡಿದೆ.

ತುಸು ಅಚ್ಚರಿಗೆ ಕಾರಣವಾಗುತ್ತಿರುವುದು ವಿತ್ತ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಜಯಂತ್ ಸಿನ್ಹಾ ಅವರನ್ನು ನಾಗರಿಕ ವಿಮಾನ ಯಾನಕ್ಕೆ ಕಳುಹಿಸಿರುವುದು. ವಿತ್ತ ಸಚಿವಾಲಯದಲ್ಲಿ ಇವರ ಕ್ಷಮತೆ ಬಗ್ಗೆ ಉತ್ತಮ ಮಾತುಗಳೇ ಕೇಳಿಬಂದಿದ್ದವು. ಉಳಿದಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಹೆಚ್ಚುವರಿ ವಾರ್ತಾ ಮತ್ತು ಪ್ರಸಾರವನ್ನು ತೆಗೆದುಕೊಂಡು ಅದನ್ನು ವೆಂಕಯ್ಯ ನಾಯ್ಡು ಅವರಿಗೆ ನೀಡಿರುವುದು ಆಶ್ಚರ್ಯವೇನಲ್ಲ. ಇದನ್ನು ಜೇಟ್ಲಿ ಅಧಿಕಾರ ಕಡಿತ ಎಂದೇನೂ ವ್ಯಾಖ್ಯಾನಿಸಬೇಕಿಲ್ಲ. ಏಕೆಂದರೆ ವಿತ್ತ ಸಚಿವಾಲಯದ ಕಾರ್ಯಗಳು ವ್ಯಾಪಕವಾಗುತ್ತಿರುವ ಹೊತ್ತಿನಲ್ಲಿ ಸ್ವತಃ ಜೇಟ್ಲಿ ಅವರಿಗೇ ಮತ್ತೊಂದು ಖಾತೆ ನಿರ್ವಹಣೆ ಸಾಧ್ಯವಿಲ್ಲ ಎಂಬ ಸ್ಥಿತಿ ಇತ್ತು.

ಈ ಹಿಂದೆ ದೂರವಾಗಿದ್ದ ಕಾನೂನು ಖಾತೆ ಮತ್ತೆ ರವಿಶಂಕರ ಪ್ರಸಾದ್ ಅವರಿಗೆ ಒಲಿದಿದೆ. ಇದನ್ನು ಭಡ್ತಿ ಎಂದುಕೊಳ್ಳಬಹುದಾದರೂ ದೂರ ಸಂಪರ್ಕ ಸಚಿವಾಲಯದಲ್ಲಿ ಅವರ ಕಾರ್ಯ ನಿರೀಕ್ಷಿತ ಮಟ್ಟದಲ್ಲಿರಲಿಲ್ಲವೆಂಬುದು ಸ್ಪಷ್ಟ. ಆ ಖಾತೆಯನ್ನೀಗ ರೈಲ್ವೆ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಮನೋಜ್ ಸಿನ್ಹ ಅವರಿಗೆ ವಹಿಸಲಾಗಿದೆ. ನಾವೆಲ್ಲ ರೈಲ್ವೆ ಸುಧಾರಣೆಗಳಿಗೆ ಒಬ್ಬ ಸುರೇಶ್ ಪ್ರಭು ಅವರನ್ನಷ್ಟೇ ಹೊಗಳುತ್ತಿರುವಾಗ, ನೇಪಥ್ಯದಲ್ಲಿ ಉತ್ತಮ ಕ್ಷಮತೆ ತೋರಿದವರು ಮನೋಜ್ ಸಿನ್ಹ ಎಂಬ ವಿಶ್ಲೇಷಣೆಗಳಿವೆ.

ಹಲವು ಪತ್ರಿಕೆಗಳ ಸಂಪಾದಕತ್ವ ಹಾಗೂ ವಿಶ್ಲೇಷಣೆಗಳಲ್ಲಿ ಹೆಸರು ಗಳಿಸಿದ್ದ ಎಂ. ಜೆ. ಅಕ್ಬರರಿಗೆ ವಿದೇಶಾಂಗ ಖಾತೆಯ ರಾಜ್ಯ ಖಾತೆ ಸಿಕ್ಕಿರುವುದೂ ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದು.

Leave a Reply