ಹಣಕ್ಕಾಗಿ ಯುವಕನ ಕಿಡ್ನಾಪ್ ಮಾಡಿಸಿದ ಆರೋಪಿ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಬೆಳಗಾವಿಯಲ್ಲಿ ಆತ್ಮಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಹಣಕ್ಕಾಗಿ ಯುವಕನನ್ನು ಕಿಡ್ನಾಪ್ ಮಾಡಿಸಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಬೆಳಗಾವಿಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದಲ್ಲಿರುವ ತಮ್ಮ ಪತ್ನಿಯ ಅಜ್ಜನ ಮನೆಯಲ್ಲಿ ಕಲ್ಲಪ್ಪ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನೈಜ ಕಾರಣ ಏನೆಂಬುದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಕಲ್ಲಪ್ಪ ಹತ್ತು ಲಕ್ಷ ರುಪಾಯಿ ಸುಲಿಗೆ ಮಾಡಲು ಗುಂಡಾಗಳಿಗೆ ಕುಮ್ಮಕ್ಕು ನೀಡಿ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿಸಿದ್ದರೆಂಬ ಪ್ರಕರಣ ಸೋಮವಾರ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಅವರೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಿಕ್ಕೊಳೆಯ ಕಾಫಿ ತೋಟವೊಂದರಲ್ಲಿ ಜೂ.28 ರಂದು ಜೂಜಾಡುತ್ತಿದ್ದ 23 ಮಂದಿ ಆರೋಪಿಗಳನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ನಂತರ ಅವರೆಲ್ಲರೂ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಇವರ ಪೈಕಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಕೆಂಪನಹಳ್ಳಿ ನಿವಾಸಿ ತೇಜಸ್‍ಗೌಡನನ್ನು ಸ್ಕಾರ್ಪಿಯೋ ವಾಹನದಲ್ಲಿ ನಾಲ್ಕೈದು ಜನ ಜೂ.28 ರಂದು ಅಪಹರಿಸಿ, ಎರಡು ದಿನಗಳ ನಂತರ ಬಿಡುಗಡೆ ಮಾಡಿದ್ದರು.

ಈ ನಡುವೆ ಅಪಹರಣಕಾರರು ಡಿವೈಎಸ್‍ಪಿ ಕಲ್ಲಪ್ಪ ಅವರಿಗೆ 10 ಲಕ್ಷ ರುಪಾಯಿ ತಲುಪಿಸುವಂತೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ತೇಜಸ್‍ಗೌಡ ಜೂ.4 ರಂದು ಬಸವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಅಭಿಜಿತ್ ಸೇರಿದಂತೆ 6 ಮಂದಿ ಕಾರಿನಲ್ಲಿದ್ದ ನನ್ನನ್ನು ಅಪಹರಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಬೆಂಗಳೂರಿನ ಗೋದಾಮೊಂದರಲ್ಲಿ ಕಟ್ಟಿ ಹಾಕಿದ್ದರು. ನವೀನ್ ಶೆಟ್ಟಿ ಎಂಬಾತ ಮನಬಂದಂತೆ ನನ್ನನ್ನು ಥಳಿಸಿದ. ನಟರಾಜ್ ಹಾಗೂ ಖಾಂಡ್ಯ ಪ್ರವೀಣ್ ಜೀವ ಬೆದರಿಕೆ ಹಾಕಿದ್ದರು.

ಕಲ್ಮನೆ ಚಿಟ್‍ಫಂಡ್ ಮತ್ತು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ 25 ಲಕ್ಷ ರೂ. ಮೋಸ ಮಾಡಿದ್ದೀಯಾ. ಅದನ್ನು ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಇನ್ನೊಂದು ಸ್ಥಳಕ್ಕೆ ಕರೆದೊಯ್ದು ಕೊನೆಗೆ 10 ಲಕ್ಷ ರುಪಾಯಿಗೆ ಇತ್ಯರ್ಥ ಮಾಡಿ ಮೊಬೈಲ್ ಹಿಂತಿರುಗಿಸಿದರು.

ರಾತ್ರಿ ಎಂಟು ಗಂಟೆಗೆ ಸ್ನೇಹಿತ ಶಿವು ಎಂಬುವವನಿಗೆ ಫೋನ್ ಮಾಡಿ 10 ಲಕ್ಷ ವ್ಯವಸ್ಥೆ ಮಾಡಿದೆ. ಆ ಹಣವನ್ನು ಯಾರಿಗೆ ಕೊಡಬೇಕೆಂದು ಸ್ನೇಹಿತ ಕೇಳಿದಾಗ ಒಂದು ಮೋಬೈಲ್ ನಂಬರ್ ಕೊಟ್ಟರು. ಅದು ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಅವರದ್ದಾಗಿತ್ತು. ಆ ನಂಬರಿಗೆ ಫೋನ್ ಮಾಡಿದಾಗ ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿರುವ ಮಥಾಯಿಸ್ ಟವರ್ ಹಿಂಭಾಗದ ಪೊಲೀಸ್ ಕ್ವಾರ್ಟಸ್‍ಗೆ ಹಣ ತರುವಂತೆ ಹೇಳಿದರು. ಅದರ ಪ್ರಕಾರ 10 ಲಕ್ಷ ರೂಗಳನ್ನು ಡಿವೈಎಸ್‍ಪಿ ಕಲ್ಲಪ್ಪಗೆ ಅವರಿಗೆ ತಲುಪಿಸಲಾಯಿತು. ಅನಂತರ ರಾತ್ರಿ 10ರ ಸುಮಾರಿಗೆ ನನ್ನನ್ನು ಬೆಂಗಳೂರಿನ ಗಾಂಧಿನಗರದ ಎಂಪೈರ್ ಹೋಟೆಲ್ ಬಳಿ ಬಿಟ್ಟು ಆರೋಪಿಗಳು ಪರಾರಿಯಾದರು ಎಂದು ತೇಜಸ್ ದೂರಿನಲ್ಲಿ ವಿವರಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನವೀನ್ ಶೆಟ್ಟಿ ನಟರಾಜ್ ಖಾಂಡ್ಯ ಪ್ರವೀಣ್, ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ಡಿವೈಎಸ್ಪಿ ಕಲ್ಲಪ್ಪ ಅವರ ಹೆಸರು ಕೇಳಿ ಬಂದಿದ್ದರಿಂದ ಸರ್ಕಾರ ಜಿಲ್ಲಾ ಪೊಲೀಸ್ ವರದಿ ಆಧರಿಸಿ ಅವರನ್ನು ಸೋಮವಾರ ಸೇವೆಯಿಂದ ಅಮಾನತು ಮಾಡಿತ್ತು. ಜತೆಗೆ ಆರೋಪಗಳ ಕುರಿತು ಸಿಐಡಿ ತನಿಖೆಗೆ ಆದೇಶಿಸಿತ್ತು.

ಅಮಾನತು ನಂತರ ಕಲ್ಲಪ್ಪ ಬೆಳಗಾವಿಯ ಮುರುಗೋಡ ಗ್ರಾಮದಲ್ಲಿರುವ ಪತ್ನಿಯ ಅಜ್ಜನ ಮನೆಗೆ ತೆರಳಿದ್ದರು. ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲಪ್ಪ ಆತ್ಮಹತ್ಯೆ ವಿಚಾರ ಕೇಳಿ ಪತ್ನಿ ವಿದ್ಯಾ ತೀವ್ರ ಅಸ್ವಸ್ಥರಾಗಿದ್ದಾರೆ. ಕಲ್ಲಪ್ಪ ಅವರಿಗೆ ಮೂರು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದು ಒಂದು ಗಂಡು ಮಗುವಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕಲ್ಲಪ್ಪ ದಕ್ಷ ಅಧಿಕಾರಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದ ತಮಗೆ ಆ ಬಗ್ಗೆ ಮಾಹಿತಿ ಇತ್ತು. ಆದರೆ ಅಪಹರಣ ಪ್ರಕರಣದಲ್ಲಿ ಕಲ್ಲಪ್ಪ ಅವರನ್ನು ಯಾರಾದರೂ ಸಿಲುಕಿಸಲು ಪ್ರಯತ್ನಿಸಿದ್ದಾರೆಯೇ, ಯಾವ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದರು. ತೇಜಸ್ ಅಪಹರಣ ಹಾಗೂ ಕಲ್ಲಪ್ಪ ಆತ್ಮಹತ್ಯೆ ಎರಡೂ ಪ್ರಕರಣಗಳ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದೂ ಅವರು ತಿಳಿಸಿದರು.

Leave a Reply