ಗುರುವಿನ ಸೆರಗು ಸರಿಸಿ ಜುನೊ ಕೊಡಲಿರುವ ಚಿತ್ರಣಕ್ಕಾಗಿ ಜಗತ್ತೇ ಕಾದಿದೆ!

ಚೈತನ್ಯ ಹೆಗಡೆ

ಬರೋಬ್ಬರಿ ಐದು ವರ್ಷಗಳ ಪ್ರಯಾಣದ ನಂತರ ಗುರುಗ್ರಹದ ಕಕ್ಷೆ ಸೇರಿಕೊಂಡಿದೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ‘ಜುನೊ’ ಎಂಬ ಸೌರಚಾಲಿತ ನೌಕೆ. ಆಗಸ್ಟ್ 5, 2011ರಂದು ಭೂಮಿಯನ್ನು ಬಿಟ್ಟು ಚಿಮ್ಮಿದ್ದ ಈ ನೌಕೆ ಇಷ್ಟು ಸಮಯಗಳ ನಂತರ ಗುರುಗ್ರಹವನ್ನು ಸಮೀಪಿಸಿತು. ಆತಂಕ ಕವಿದಿದ್ದು ಆಗಲೇ. ಮುಂದಿನ 35 ನಿಮಿಷಗಳಲ್ಲಿ ನೌಕೆ ಪೂರ್ವನಿರ್ದೇಶನದಂತೆ ತನ್ನ ವೇಗವನ್ನು ಕಡಿಮೆ ಮಾಡಿಕೊಂಡು, ಗುರುಗ್ರಹದ ಗುರುತ್ವಕ್ಕೆ ಸಮನಾಗಿಸಿಕೊಂಡು ಕಕ್ಷೆಯಲ್ಲಿ ಕೂರಬೇಕು. ಇಲ್ಲೇನಾದರೂ ವೈಫಲ್ಯ ಎದುರಾದರೆ ಗುರಿ ತಪ್ಪಿ ಅಗಾಧ ಬಾಹ್ಯಾಕಾಶದಲ್ಲೆಲ್ಲೋ ತೂರಿಹೋಗಬೇಕಾದ ಸ್ಥಿತಿ. ಭೂಮಿ ಯಿಂದ 2.8 ಬಿಲಿಯನ್ ಕಿಲೋ ಮೀಟರ್ ಅಂತರಿಕ್ಷದಲ್ಲಿ  ಕ್ರಮಿಸಿದ್ದು ವ್ಯರ್ಥವಾದಂತೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆಯೂ ಇಲ್ಲ, ಏಕೆಂದರೆ ಬಿಲಿಯನ್ ಗಟ್ಟಲೇ ಡಾಲರುಗಳನ್ನು ವ್ಯಯಿಸಿ, ತಪಸ್ಸಿನಂತೆ ಐದು ವರ್ಷಗಳನ್ನು ಕಳೆದು ಕೊನೆಯಲ್ಲಿ ಎಡವಟ್ಟಾಗುವುದೆಂದರೆ… ಅಲ್ಲದೇ ಕಕ್ಷೆಯಲ್ಲಿ ಕೂರುವ ಪೂರ್ವದಲ್ಲಿ ಅದರ ಗಣಕವ್ಯವಸ್ಥೆಗಳೆಲ್ಲ ತಾತ್ಕಾಲಿಕ ಸ್ಥಗಿತಗೊಳ್ಳಬೇಕಾದ ಪ್ರಕ್ರಿಯೆ. ಗುರುಗ್ರಹದ ಅತಿ ವಿಕಿರಣದಿಂದ ಕಾಪಾಡಿಕೊಳ್ಳಲು ನೌಕೆಯ ಮುಖ್ಯ ಭಾಗಗಳನ್ನೆಲ್ಲ ಟೈಟಾನಿಯಂ ಕವಚದಲ್ಲೇ ಇಡಲಾಗಿದೆ ಎಂಬುದೇನೋ ಸರಿ… ಆನಂತರ ಏನಾಯಿತೆಂಬ ಸಂದೇಶವು ಬಾಹ್ಯಾಕಾಶದಾಳದಲ್ಲೆಲ್ಲ ಸಂಚರಿಸಿ ಇಲ್ಲಿ ಬರುವುದಕ್ಕೂ 49 ನಿಮಿಷ ಹಿಡಿಯುತ್ತಿತ್ತು.

ಟಕ್ ಟಕ್ ಟಕ್ ಟಕ್… ಕ್ಯಾಲಿಫೋರ್ನಿಯಾದ ನಾಸಾ ಕೇಂದ್ರವು ಕಾತರವನ್ನೇ ಉಸಿರಾಗಿಸಿಕೊಂಡು ಕುಳಿತಿತ್ತು…

ವಾವ್…

ಅದಾಗಲೇ ಸಂದೇಶ ಬಂದಿದೆ!

‘ಟೀಮ್ ವರ್ಕ್. ಗುರುಗ್ರಹದಿಂದ ಭೂಮಿಗೆ.. ಧನ್ಯವಾದ, ನನ್ನನ್ನು ಕಕ್ಷೆಯಲ್ಲಿ ಕೂರುವುದಕ್ಕೆ ಮಾರ್ಗದರ್ಶನ ನೀಡಿದ್ದಕ್ಕೆ..’

ಹಾಗಂತ ಜುನೊ ಹೇಳಿದೆ.

‘ಕಿರಣಗಳೆಲ್ಲ ಮೈಮೇಲೆ ಚೆಲ್ಲಿವೆ. ನನ್ನ ಸೌರ ರೆಕ್ಕೆಗಳು ಸೂರ್ಯನಿಗಭಿಮುಖವಾಗಿವೆ. ಭೂಮಿಯಿಂದ ಅತಿದೂರದಲ್ಲಿರುವ ಸೌರಯಂತ್ರ ಎಂಬ ಖ್ಯಾತಿ ನನ್ನದೇ’ ಹೀಗಂತ @NASAJuno ಖಾತೆಯಲ್ಲಿ ಟ್ವೀಟಿಸಿರುವ ನಾಸಾ ಸಂದೇಶ ತುಂಬ ಮಹತ್ತರವಾದದ್ದು.

juno3

ಈ ಹಿಂದಿನ ಎರಡು ಮಿಷನ್ ಗಳು ಗುರುಗ್ರಹವನ್ನು ಸುತ್ತುವರೆದು ಚಿತ್ರಗಳನ್ನು ಕಳುಹಿಸಿದ್ದವಾದರೂ ಜುನೊ ಹೋದಷ್ಟು ಸಮೀಪಕ್ಕೆ ಹೋಗಿ ಕಕ್ಷೆಯಲ್ಲಿ ಕುಳಿತಿರಲಿಲ್ಲ. ಜುನೊ ಗುರುಗ್ರಹಕ್ಕೆ ಅತಿ ಹತ್ತಿರ ಅಂದರೆ 5 ಸಾವಿರ ಕಿಲೋಮೀಟರ್ ಸನಿಹದಲ್ಲಿ ಸುತ್ತುತ್ತದೆ. ಸೌರವ್ಯವಸ್ಥೆಯ ಐದನೇ ಗ್ರಹ ಹಾಗೂ ಅತಿ ಭಾರದ್ದು ಎಂಬ ಲಕ್ಷಣ ಹೊಂದಿರುವ ಗುರುವನ್ನು ಅನಿಲ ದೈತ್ಯ ಎಂದೇ ಕರೆಯುತ್ತಾರೆ. ಭೂಮಿ ಮತ್ತು ಮಂಗಳಗಳಲ್ಲಿ ಕಂಡುಬರುವ ಕಲ್ಲಿನ ಲಕ್ಷಣಗಳ್ಯಾವವೂ ಇಲ್ಲದೇ ಜಲಜನಕ ಮತ್ತು ಹೀಲಿಯಂಗಳನ್ನೇ ಅತಿ ಪ್ರಮುಖವಾಗಿ ಹೊಂದಿರುವ ಗ್ರಹವಿದು ಎಂಬುದು ಈ ಹಿಂದಿನ ಬಾಹ್ಯಾಕಾಶ ಸಂಶೋಧನೆಗಳಿಂದ ದೃಢಪಟ್ಟಿರುವ ಅಂಶ.

1989ರಲ್ಲಿ ಉಡ್ಡಯನವಾಗಿ ಗುರುವಿನ ಬಳಿ ಸಾರಿದ್ದ ಗೆಲಿಲಿಯೋ ನೌಕೆಯು 14 ವರ್ಷಗಳ ಕಾಲ ಅಲ್ಲಿ ಸುತ್ತಿ ಗುರುಗ್ರಹ ಹಾಗೂ ಅದರ ಉಪಗ್ರಹಗಳ ಅನನ್ಯ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು. ಬಹಳ ಮುಖ್ಯವಾಗಿ ಗುರುವಿನ ಉಪಗ್ರಹಗಳಲ್ಲೊಂದಾದ ಯುರೋಪಾದ ಹಿಮದ ಮೇಲ್ಮೈ ಒಳಗೆ ಮಹಾಸಮುದ್ರವೇ ಇದ್ದಿರಬಹುದಾದ ಕುರುಹಗಳನ್ನು ಗೆಲಿಲಿಯೋ ಅಂದು ಕಳುಹಿಸಿದ್ದ ಚಿತ್ರಗಳು ಸಾರುತ್ತಿವೆ. ಹೀಗೆಂದೇ ಭೂಮಿಯನ್ನು ಹೊರತುಪಡಿಸಿದರೆ ಈ ಯುರೋಪಾದಲ್ಲೇನಾದರೂ ಜೀವದ ಚಿಹ್ನೆ ಇರಬಹುದಾ ಎಂಬ ಕೌತುಕ ಆಗಲೇ ತೆರೆದುಕೊಂಡಿತ್ತು.

ಆದರೆ ಗುರುಗ್ರಹ ಮಾತ್ರ ತನ್ನ ತೀರ ಮೇಲ್ಮೈ ವಿವರ ಬಿಟ್ಟರೆ ಒಂಚೂರು ಒಳಬಿಟ್ಟುಕೊಂಡಿರಲಿಲ್ಲ. ಅಷ್ಟರಮಟ್ಟಿಗೆ ಅಗಾಧವಾದ ಅನಿಲ ಮೋಡ ಆ ಗ್ರಹವನ್ನು ಆವರಿಸಿದೆ.

ಇದೀಗ ಮತ್ತಷ್ಟು ಮುಂದುವರಿದ ತಂತ್ರಜ್ಞಾನಗಳೊಂದಿಗೆ ಕಕ್ಷೆಯಲ್ಲೇ ಕುಳಿತಿರುವ ಜುನೊ ವಹಿಸಿಕೊಂಡಿರುವ ಕಾರ್ಯಭಾರವೆಂದರೆ ಗುರುಗ್ರಹವನ್ನು ಕವಿದಿರುವ ಗಾಢ ಮೋಡವನ್ನು ಛೇದಿಸಿ ಅದರ ಅಂತರಾಳಕ್ಕೆ ಇಣುಕುವುದು. ಅಲ್ಲಿ ದೊರೆಯುವ ಚಿತ್ರಣಗಳನ್ನು ನಮಗೆ ಒದಗಿಸುವುದು. ಅಷ್ಟೇ ಅಲ್ಲ, ಗ್ರಹದ 12,000 ಕಿಲೋ ಮೀಟರ್ ಆಳದಲ್ಲಿ ಅದರ ಗರ್ಭದ ಸ್ಥಿತಿ ಹೇಗಿದೆಯೆಂದು ಗುರುತ್ವದ ಅಧ್ಯಯನದ ಮೂಲಕ ಸಾದರಪಡಿಸುವ ಗುರಿಯೂ ಅದಕ್ಕಿದೆ.

ಹಾಗೆಂದೇ ನೌಕೆಗೆ ಜುನೊ ಅಂತ ಹೆಸರಿಡಲಾಗಿದೆ! ನಾಸಾ ಕೇವಲ ಗಣಿತ ಲೆಕ್ಕಾಚಾರಗಳಲ್ಲಿರುವ ವಿಜ್ಞಾನಿಗಳ ಗುಂಪೆಂದುಕೊಳ್ಳಬೇಡಿ. ಇವರ ಪುರಾಣದೃಷ್ಟಿಯ ಕಾವ್ಯ ಭಾವಕೋಶ ಎಷ್ಟು ಚೆನ್ನಾಗಿದೆ ಎಂಬುದಕ್ಕೆ ಜುನೊ ಎಂಬ ನಾಮಕರಣವೇ ಸಾಕ್ಷಿ. ಗ್ರೀಕ್ ಮತ್ತು ರೋಮನ್ ಪುರಾಣಗಳ ಪ್ರಕಾರ, ಜುಪಿಟರ್ (ಗುರು) ರೋಮನ್ ದೈವದ ತಂದೆ. ಆತ ತನ್ನ ಕುಚೇಷ್ಟೆಗಳನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ತನ್ನ ಸುತ್ತಲೂ ಮೋಡದ ಸೆರಗನ್ನು ಹೊದ್ದುಕೊಂಡಿರುತ್ತಿದ್ದ. ಆದರೆ, ಆತನ ಹೆಂಡತಿ ಜುನೊ ಈ ಸೆರಗನ್ನು ಪಕ್ಕ ಸರಿಸಿ ಆತನ ನಿಜ ಲಕ್ಷಣಗಳನ್ನು ಕಂಡಳಂತೆ. ಹಿಂಗಾಗಿ ಸೌರನೌಕೆಗೆ ಜುನೊ ಎಂಬ ಹೆಸರು. ಈ ನೌಕೆ ಮಾಡಬೇಕಿರುವ ಕೆಲಸವೂ ಗುರುವಿನ ಸೆರಗು ಸರಿಸಿ ಆದಷ್ಟು ನಿಜಬಣ್ಣವ ತೋರುವುದು. ಗುರುಗ್ರಹದ ವಾತಾವರಣ ನಿಜಕ್ಕೂ ಹೇಗಿದೆ ಎಂಬುದು ವಿಜ್ಞಾನಿಗಳಿಗೆ ತಿಳಿದರೆ ನಮ್ಮ ಸೌರವ್ಯೂಹ ನಿರ್ಮಾಣವಾಗಿದ್ದು ಹೇಗೆ ಎಂಬುದರ ಚಿತ್ರಣ ಮತ್ತಷ್ಟು ನಿಖರವಾಗಲಿದೆ. ಇಪ್ಪತ್ತು ತಿಂಗಳು ಗುರುವನ್ನು ಸುತ್ತಲಿರುವ ಜುನೊ, ನಂತರ ಅದೇ ಗ್ರಹದ ವಾತಾವರಣದಲ್ಲಿ ಲೀನವಾಗಿ ‘ಪ್ರಾಣತ್ಯಾಗ’ ಮಾಡಲಿದ್ದಾಳೆ. ಅವಧಿ ನಂತರ ದುರ್ಬಲವಾಗಿದ್ದರೂ ಹಾಗೆಯೇ ಬಿಟ್ಟರೆ ಭವಿಷ್ಯದಲ್ಲಿ ಗುರುಗ್ರಹದ ಯಾವುದೋ ಉಪಗ್ರಹಕ್ಕೆ ಢಿಕ್ಕಿ ಹೊಡೆದು ಅನಿರೀಕ್ಷಿತ ಅವಘಡಗಳು ಸಂಭವಿಸಬಾರದೆಂಬ ಕಾಳಜಿ ವಿಜ್ಞಾನಿಗಳದ್ದು.

ಗುರುಗ್ರಹದಲ್ಲಿ ಅಲ್ಟ್ರಾವಾಯ್ಲೆಟ್ ಮತ್ತು ಎಕ್ಸ್ ರೆ ಪ್ರಭೆ ಹಬಲ್ ದೂರದರ್ಶಕದ ಮೂಲಕ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೊಂದು ಕೌತುಕದ ವಿಷಯ. ಆಗೀಗ ತಿಂಗಳುಗಟ್ಟಲೇ ಅವಧಿಗೆ ಘಟಿಸುವ ಈ ಧ್ರುವಪ್ರಭೆಗಳು ಭೂಮಿಯಷ್ಟೇ ಗಾತ್ರದವು! ಗುರುಗ್ರಹದ ಉತ್ತರ ಮತ್ತು ದಕ್ಷಿಣ ಧ್ರುವಗಳ ಬೆಳಕಿನ ಪುಂಜ ಇಡೀ ಸೌರವ್ಯವಸ್ಥೆಯಲ್ಲೇ ಅತ್ಯಂತ ಪ್ರಕಾಶಮಾನ. ಏನಿವು? ಇದೇ ಹಬಲ್ ಬಾಹ್ಯಾಕಾಶ ದೂರದರ್ಶಕದ ಮೂಲಕ ವೀಕ್ಷಣೆಯ ಅಧ್ಯಯನದಲ್ಲಿ ತೋರಿಬಂದಂತೆ ಗುರುವಿನ ಮೇಲೆ ಶತಮಾನಗಳ ಹಿಂದಿದ್ದ ಅನಿಲದಲೆಗಳ ಆರ್ಭಟ ಈಗ ಕಡಿಮೆಯಾಗಿರುವುದು ಹೌದೇ? ಗುರುವಿನ ಕಾಂತವಲಯಗಳ ಕತೆ ಏನಾಗಿದ್ದಿರಬಹುದು? ಗ್ಯಾಸುಗಳ ಆರ್ಭಟದ ನಡುವೆ ಗಟ್ಟಿ ಮೈಯನ್ನೇನಾದರೂ ತೋರಿಯಾನೇ ಗುರು? – ಇವೆಲ್ಲವಕ್ಕೆ ಉತ್ತರ ಒದಗಿಸುವ ಪ್ರಯತ್ನದಲ್ಲಿ ತೊಡಗಿಕೊಳ್ಳಲಿದೆ ಜುನೊ.

ಕೊನೆಯಲ್ಲಿ…

juno2

ಜುನೊ ಎಂಬ ಸೌರನೌಕೆಯಲ್ಲಿ ಉಳಿದೆಲ್ಲ ಎಲೆಕ್ಟ್ರಾನಿಕ್ ಉಪಕರಣಗಳ ಜತೆ ಮೂರು ಪಾತ್ರಗಳೂ ಪ್ರಯಾಣ ಮಾಡಿವೆ. ಅವೆಲ್ಲ ಅಲ್ಯುಮಿನಿಯಂ ಮೂರ್ತಿಗಳು. ಗುರುಗ್ರಹದ ಉಪಗ್ರಹಗಳನ್ನು ಪತ್ತೆ ಹಚ್ಚಿದ್ದ ಖ್ಯಾತ ವಿಜ್ಞಾನಿ ಗೆಲಿಲಿಯೊ ಗೆಲಿಲಿ ಟೆಲಿಸ್ಕೋಪ್ ಹಿಡಿದು ನಿಂತಿದ್ದರೆ, ಒಲಂಪಸ್ ಪರ್ವತದಿಂದ ಗುರುವಿನ ಸೆರಗು ಭೇದಿಸಿದ ಆತನ ಹೆಂಡತಿ ಜುನೊ ಪಾತ್ರವಾಗಿ ಸಹ ಕೈಯಲ್ಲಿ ಸತ್ಯಶೋಧನೆ ಬಿಂಬಿಸುವ ಮಸೂರ ಹಿಡಿದು ನಿಂತಿದ್ದಾಳೆ. ಇನ್ನೊಂದು ವಿಗ್ರಹ ಖುದ್ದು ಜ್ಯುಪಿಟರ್ ಮಹಾಶಯನದ್ದು.

ವಿಜ್ಞಾನ ಪುರಾಣಗಳನ್ನೆಲ್ಲ ಒಟ್ಟೊಟ್ಟಿಗೆ ಜೀಕುತ್ತಿರುವ ನಾಸಾಕ್ಕೆ ಜಯವಾಗಲಿ!

(ಲೇಖನದ ತಿದ್ದುಪಡಿ ಶ್ರೇಯಸ್ಸು- ಟಿ. ಆರ್. ಅನಂತರಾಮು)

Leave a Reply