ಸಭಾಧ್ಯಕ್ಷ ಪೀಠದಲ್ಲಿ ಕೋಳಿವಾಡರು, ಬಾಯ್ಕಟ್ಟಿದೆ ಎಂದ ರಮೇಶ್ ಕುಮಾರ್… ಮಂಗಳವಾರದ ಕಲಾಪದಲ್ಲಿ ಕಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಕೆ.ಬಿ.ಕೋಳಿವಾಡ ಮಂಗಳವಾರ ಅವಿರೋಧ ಆಯ್ಕೆಯಾದರು.

ಕಾಗೋಡು ತಿಮ್ಮಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೋಳಿವಾಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸದನದ ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸಭಾಧ್ಯಕ್ಷ ಎನ್. ಹೆಚ್.ಶಿವಶಂಕರರೆಡ್ಡಿ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಕಣದಲ್ಲಿದ್ದ ಏಕೈಕ ಅಭ್ಯರ್ಥಿ ಕೋಳಿವಾಡ ಅವರ ಆಯ್ಕೆಯನ್ನು ಪ್ರಕಟಿಸಿದರು.

koliwadaಇದಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ  ಕೋಳಿವಾಡ ಹೆಸರು ಸೂಚಿಸಿದರು. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ  ಟಿ. ಬಿ. ಜಯಚಂದ್ರ ಅನುಮೋದಿಸಿದರು. ಈ ಪ್ರಸ್ತಾವನೆಗೆ ಇಡೀ ಸದನ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೋಳಿವಾಡ್ ಅವರನ್ನು ಅಭಿನಂದಿಸಿ ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದರು.

ಕೋಳಿವಾಡ ಅವರನ್ನು ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವಿಧಾನಸಭೆಯಲ್ಲಿ ಅತಿ ಹಿರಿಯ ಸದಸ್ಯರೆಂದರೆ ಕಾಗೋಡು ತಿಮ್ಮಪ್ಪ ಮತ್ತು ಕೋಳಿವಾಡ ಮಾತ್ರ. ಹೀಗಾಗಿ ಕಾಗೋಡು ತಿಮ್ಮಪ್ಪ ನಂತರ ಕೋಳಿವಾಡರ ಆಯ್ಕೆ ಸದನಕ್ಕೆ ಗೌರವ ತಂದಿದೆ. ಇದಕ್ಕೆ ಸಹಕರಿಸಿದ ಪ್ರತಿಪಕ್ಷ ಸದಸ್ಯರ ಉದಾರ ಧೋರಣೆ ಅಭಿನಂದನೀಯ ಎಂದರು.

ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಸಕ್ತ ವಿಧಾನಸಭೆಯಲ್ಲಿ ತಾವೂ ಸೇರಿದಂತೆ ನಾಲ್ವರು ಮಾಜಿ ಸಭಾಧ್ಯಕ್ಷರು ಇದ್ದಾರೆ. ರಮೇಶ್ ಕುಮಾರ್, ಕೆ.ಜಿ.ಬೋಪಯ್ಯ ಹಾಗೂ ಕಾಗೋಡು ತಿಮ್ಮಪ್ಪ. ಅವರಲ್ಲಿಬ್ಬರು ಈಗ ಸಚಿವರಾಗಿದ್ದಾರೆ. ಹೀಗಾಗಿ ನೂತನ ಸಭಾಧ್ಯಕ್ಷರು ಈ ನಾಲ್ವರರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಆಶಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತಾ, ವಿಧಾನಸಭಾಧ್ಯಕ್ಷರಾಗಿ ಕಾಗೋಡು ತಿಮ್ಮಪ್ಪನವರು ಮಾದರಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ವಿಧಾನಸಭಾಧ್ಯಕ್ಷ ಸ್ಥಾನಕ್ಕಿಂತ ಸಚಿವ ಹುದ್ದೆಯೇ ಹೆಚ್ಚಿನದ್ದು ಎಂಬ ರೀತಿ ಆಗಿದೆ. ಅದು ತಪ್ಪು ಎಂದು ನಿರೂಪಿಸುವ ಹಾಗೆ ಕರ್ತವ್ಯ ನಿರ್ವಹಿಸಿ ಎಂದು ಮನವಿ ಮಾಡಿದರು.

ಮಂತ್ರಿ ಪದವಿ ಅಂದ್ರು ರಮೇಶ್ ಕುಮಾರ್ ಬಾಯ್ಕಟ್ಟಿಸಿದೆಯಂತೆ

ಮಂತ್ರಿ ಪದವಿ ಹೇಗೆ ವಾಗ್ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲಿದೆ, ಕಾನೂನಿನ ಅರಿವು ಇಲ್ಲದವರೂ ಸಭಾಧ್ಯಕ್ಷರಾಗಿ ಯಶಸ್ವಿಯಾಗಿರೋ ಬಗ್ಗೆ ಮಾಜಿ ಸ್ಪೀಕರ್, ಹಾಲಿ ಸಚಿವ ರಮೇಶ್ ಕುಮಾರ್ ತಮ್ಮನ್ನೇ ನಿದರ್ಶನ ಮಾಡಿಕೊಂಡಾಗ ವಿಧಾನಸಭೆ ನಗೆಯಲ್ಲಿ ಮುಳುಗದೇ ಗತ್ಯಂತರ ಇರಲಿಲ್ಲ.

ನೂತನ ಸಭಾಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಕೆ.ಬಿ.ಕೋಳಿವಾಡ ಅವರನ್ನು ಅಭಿನಂದಿಸಿ ವಿಧಾನಸಭೆಯಲ್ಲಿ ಮಾತಾಡಿದ ರಮೇಶ್‍ಕುಮಾರ್, ಕಾನೂನು ಗೊತ್ತಿಲ್ಲದವರೂ ಸಭಾಧ್ಯಕ್ಷರಾಗಿ ಯಶಸ್ವಿಯಾಗಿದ್ದಾರೆ ಎಂದಾಗ ಸಾಮಾನ್ಯ ಜ್ಞಾನ ಇದ್ದರೆ ಸಾಕು ಅಂತಾ ಅವರ ಎದಿರು ಕುಳಿತಿದ್ದ ಮುಖ್ಯಮಂತ್ರಿ ಧ್ವನಿಗೂಡಿಸಿದರು. ಮಾತು ಮುಂದುವರಿಸಿದ ರಮೇಶ್‍ಕುಮಾರ್, ನನಗೆ ಸಾಮಾನ್ಯ ಜ್ಞಾನ ಅಂದರೆ ಗೊತ್ತಿಲ್ಲ. ಆದರೂ ಮುಖ್ಯಮಂತ್ರಿ ಹೇಳಿದ್ದಾರೆ ಅನ್ನೋ ಕಾರಣಕ್ಕೆ ಬದಲಿ ಮಾತಾಡುವಂತಿಲ್ಲ. ಏಕೆಂದರೆ ನಾನೀಗ ಅವರ ಸಂಪುಟದ ಸಚಿವ. ಅವರ ಮಾತನ್ನು ಸುಮ್ನೆ ಒಪ್ಪಿಕೊಳ್ಳಬೇಕು ಎಂದಾಗ ಸದನದಲ್ಲಿ ನಗೆಯಲೆ.

ಹಿಂದೆ ಯಾರಾದ್ರೂ ಸರಕಾರದ ವಿರುದ್ಧ ಮಾತಾಡಿದಾಗ ಸಿದ್ದರಾಮಯ್ಯ ವಿರುದ್ಧವೂ ಕಿಚಾಯಿಸುತ್ತಿದ್ದ ರಮೇಶ್‍ಕುಮಾರ್ ಚರ್ಯೆಯನ್ನು ಮಂತ್ರಿ ಪದವಿ ಇಂದು ಬದಲಿಸಿತ್ತು. ಸಭಾಧ್ಯಕ್ಷರ ಹುದ್ದೆ ಬಹಳ ಗಂಭೀರವಾದದ್ದು. ತಾಳ್ಮೆ ಮತ್ತು ಧೈರ್ಯ ಮುಖ್ಯ. ರಾಜಕಾರಣದಲ್ಲಿ ಅಜೆಂಡಾ ಹಾಕಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಯಾಗಿದ್ದರೆ  ಮುಂದಿನ ವರ್ಷ ಇಂತಹ ಬಡ್ತಿ ಸಿಗುತ್ತದೆ. ನಿವೃತ್ತಿಯಾಗುವಾಗ ಯಾವ ಹುದ್ದೆಯಲ್ಲಿರುತ್ತೇವೆ ಎಂದು ಲೆಕ್ಕಾಚಾರ ಹಾಕಿಕೊಳ್ಳಬಹುದು. ಆದರೆ ರಾಜಕಾರಣದಲ್ಲಿ ಹಂಗಾಗಲ್ಲ. ಎಷ್ಟೋ ಮಂದಿ ಅರ್ಹತೆ ಇದ್ದರೂ ವಿಧಾನಸಭೆ ಒಳಗೆ ಬರಲಾಗದೆ ರಾಜಕೀಯ ಬದುಕು ಕಳೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಿಗಾದ ಸದನ ತಲೆದೂಗಿತ್ತು.

ನಾನು ಸಭಾಧ್ಯಕ್ಷನಾಗಿದ್ದಾಗ ಲೂಸಿಂಗ್‍ಟನ್ ಎಂಬ ಮಾರ್ಷಲ್ ಇದ್ದರು. ಅವರಿಗೆ ಕನ್ನಡದ ಉಚ್ಚಾರಣೆ ಗೊತ್ತಿರಲಿಲ್ಲ. ಸಭಾಧ್ಯಕ್ಷರು ಸದನಕ್ಕೆ ಆಗಮಿಸಿದಾಗ ಮಾನ್ಯ ಸಭಾಧ್ಯಕ್ಷರು ಎಂದು ಸಭೆಯನ್ನು ಎಚ್ಚರಿಸಬೇಕಾಗಿದ್ದ ಅವರು ‘ಮಾನ್ಯ ಅದಕ್ಷರು’ ಎಂದೇ ಕರೆಯುತ್ತಿದ್ದರು. ಆಗ ಜೆ.ಎಚ್.ಪಟೇಲರು ‘ನೋಡ್ರಪ್ಪಾ..  ಇಡೀ ಸದನದಲ್ಲಿ  ಇವನೊಬ್ಬನೇ ಸತ್ಯ ಹೇಳೋದು’ ಅಂತ ಹಾಸ್ಯ ಮಾಡುತ್ತಿದ್ದರು. ಆ ಸಮಯದಲ್ಲಿ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಅವರು,  ದನ ಕಾಯುವವರ ಸಮಸ್ಯೆ ಬಗ್ಗೆ ರೋಷಾವೇಶದಿಂದ ಮಾತನಾಡುತ್ತಿದ್ದರು. ಆಗ ಎರಡು ವರ್ಷದಿಂದ ಸಭಾಧ್ಯಕ್ಷ ಸ್ಥಾನದಲ್ಲಿದ್ದ ನಾನು,  ‘ದನ ಕಾಯೋರ ಸಮಸ್ಯೆ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಎರಡು ವರ್ಷದಿಂದ ಅದನ್ನೇ ಮಾಡುತ್ತಿದ್ದೇನೆ’ ಎಂದು ಹೇಳಿದ್ದೆ ಅಂತ ಮೆಲುಕು ಹಾಕುವ ಮೂಲಕ ಸದನದಲ್ಲೊಂದು ತಿಳಿಗೊಳ ವಾತಾವರಣ ಸೃಷ್ಟಿಸಿದರು.

ನಾಗರತ್ನಮ್ಮ ಅವರು ಸಭಾಧ್ಯಕ್ಷರಾದಾಗ ಅವರನ್ನು ಅಭಿನಂದಿಸಿದ ಗುಬ್ಬಿ ಚಂದ್ರಶೇಖರ್, ‘ಅದು ದೊಡ್ಡ ಕುರ್ಚಿ. ನೀವೊಬ್ಬರೇ ಅದರ ಗಾತ್ರಕ್ಕೆ ಸರಿಯಾಗಿ ಹೊಂದುವ ವ್ಯಕ್ತಿ’ ಎಂದು ಚಟಾಕಿ ಹಾರಿಸಿದ್ದರು. ಸದನದಲ್ಲಿ ಹಗುರ ವಾತಾವರಣ ನಿರ್ಮಾಣಕ್ಕೆ ಈ ಉದಾಹರಣೆಗಳನ್ನು ಉಲ್ಲೇಖಿಸಿದ್ದೇನೆ ಎಂದು ಜಾಣ್ಮೆ ಪ್ರದರ್ಶಿಸಿದರು.

ಸಭಾಧ್ಯಕ್ಷರ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸದೆ ಅವಿರೋಧ ಆಯ್ಕೆ ಸತ್ಸಂಪ್ರದಾಯ ಮುಂದುವರೆಸಿರುವ ಪ್ರತಿಪಕ್ಷದವರು ಅಭಿನಂದನಾರ್ಹರು. ಜಗದೀಶ್ ಶೆಟ್ಟರ್ ಅವರು ನಿಮ್ಮನ್ನು ‘ಅಖಂಡ ಕರ್ನಾಟಕ ಧಾರವಾಡದ ಜಿಲ್ಲೆಯವರು’ ಎಂದು ಕರೆಯುವ ಮೂಲಕ ನಿಮಗೆ ಸಹಕಾರ ನೀಡುವ ಮುನ್ಸೂಚನೆ ನೀಡಿದ್ದಾರೆ. ಇದು ನಿಮ್ಮ ಅದೃಷ್ಟ. ಮುಜುಗರ ತರುವಂತಹ ಸಾರ್ವಜನಿಕ ಸಮಾರಂಭಗಳಿಂದ ದೂರ ಇರಿ ಎಂದು ರಮೇಶ್‍ಕುಮಾರ್ ಸಭಾಧ್ಯಕ್ಷ ಕೋಳಿವಾಡ ಅವರಿಗೆ ಸಲಹೆ ನೀಡಿದರು.

ಬಿಜೆಪಿ ಬಸವರಾಜಬೊಮ್ಮಾಯಿ, ಬಂಡಾಯ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಕಾಂಗ್ರೆಸ್ ಶಾಸಕ ಬಿ.ಆರ್.ಯಾವಗಲ್, ಶಿವಮೂರ್ತಿ, ಕೆಜೆಪಿ ಶಾಸಕ  ಬಿ.ಆರ್.ಪಾಟೀಲ್, ಪಕ್ಷೇತರ ಶಾಸಕ ಅಶೋಕ್ ಖೇಣಿ ಮತ್ತಿತರರು ಕೋಳಿವಾಡ ಅವರನ್ನು ಅಭಿನಂದಿಸಿದರು.

ಶಂಕರಮೂರ್ತಿ ಜಾಗಕ್ಕೆ ಹೊರಟ್ಟಿ ಸಂಭವ

ವಿಧಾನ ಪರಿಷತ್‍ನ ಸಭಾಪತಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಿ, ಆ ಜಾಗಕ್ಕೆ ಜೆಡಿಎಸ್‍ನ ಬಸವರಾಜ ಹೊರಟ್ಟಿ ತರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಜತೆ ಮಂಗಳವಾರ ಮಹತ್ವದ ಮಾತುಕತೆ ನಡೆಸಿದರು.

ವಿಧಾನ ಪರಿಷತ್‍ನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಂದರ್ಭ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಬಸವರಾಜ ಹೊರಟ್ಟಿ ಅವರು ಚರ್ಚೆ ನಡೆಸಿದ್ದಾರೆ. ಈ ಸುಳಿವು ಸಿಕ್ಕಿರುವ ಶಂಕರಮೂರ್ತಿಯವರು ಮುಂದಿನ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

CM SIDDU GREETTING HORTHI AFTER TAKKING AOTH AS MLC AT COUNCIL75 ಸದಸ್ಯಬಲದ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಹಿಂದೆ ಪ್ರಾಬಲ್ಯ ಹೊಂದಿತ್ತು, ಇತ್ತೀಚೆಗೆ ನಡೆದ ನಾನಾ ಚುನಾವಣೆಗಳಿಂದ ಕಾಂಗ್ರೆಸ್ ಸಂಖ್ಯೆ ಏರಿಕೆಯಾಗಿದೆ. ಕಾಂಗ್ರೆಸ್ 30, ಜೆಡಿಎಸ್ 11, ಬಿಜೆಪಿ 24 ಹಾಗೂ ಕಾಂಗ್ರೆಸ್ ಬೆಂಬಲಿತ ಐವರು ಪಕ್ಷೇತರ ಸದಸ್ಯರಿದ್ದಾರೆ. ಮೂರು ಸ್ಥಾನಗಳು ಖಾಲಿ ಇವೆ. ಸಭಾಪತಿ ಒಳಗೊಂಡರೂ ಬಿಜೆಪಿ ಬಲ 25. ನೂತನ ಬೆಳವಣಿಗೆಯಲ್ಲಿ ಮೇಲ್ಮನೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಡೆ ಅಚ್ಚರಿ ಮೂಡಿಸಿದ್ದು, ಒಂದೆ ಕಲ್ಲಿನಲ್ಲಿ ಹಲವಾರು ಹಕ್ಕಿಗಳನ್ನೂ ಒಡೆಯುವ ತಂತ್ರಗಾರಿಗೆ ಅಡಗಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಪುನಾರಚನೆಯಲ್ಲಿ ಎಚ್ಚರಿಕೆಯ ರಾಜಕೀಯ ದಾಳ ಉರುಳಿಸಿ ಪಕ್ಷದೊಳಗಿನ ಪ್ರತಿಸ್ಪರ್ಧಿಗಳನ್ನು ಮೂಲೆಗುಂಪು ಮಾಡಿರುವ ಸಿದ್ದರಾಮಯ್ಯ, ಈಗ ತಮ್ಮ ದೀರ್ಘ ಕಾಲದ ಗೆಳಯ ಬಸವರಾಜ ಹೊರಟ್ಟಿಯವರನ್ನು ವಿಧಾನ ಪರಿಷತ್ ಸಭಾಪತಿಯನ್ನಾಗಿ ಮಾಡಿ ಪಕ್ಷದ ಹೊರಗಿನ ಎದುರಾಳಿಗಳನ್ನು ಮಣಿಸಲು ಮುಂದಾಗಿದ್ದಾರೆ.

ಸರ್ಕಾರದ ವಿಧೇಯಕಗಳು ಅಂಗೀಕಾರ ಆಗಲು ಕಾಂಗ್ರೆಸ್ ಮೇಲ್ಮನೆಯಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿದೆ. ಜೆಡಿಎಸ್ ಕೆಲವೊಮ್ಮೆ ಬೆಂಬಲ ನೀಡುತ್ತದೆ,  ಇನ್ನೂ ಕೆಲವೊಮ್ಮೆ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಬೃಹತ್ ಬೆಂಗಳೂರ್ ಮಹಾನಗರ ಪಾಲಿಕೆ ವಿಭಜನೆಯಂತಹ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆಯಲಾಗದೆ ಸರಕಾರ ಸೋಲು ಕಂಡಿತ್ತು. ಈಗ 7ನೇ ಭಾರಿ ಆಯ್ಕೆಯಾಗಿರುವ ಹೊರಟ್ಟಿ ಅವರನ್ನು ಸಭಾಪತಿ ಮಾಡುವ ಮೂಲಕ ಅಡಚಣೆ ನಿವಾರಣೆಗೆ ಯತ್ನಿಸಿದ್ದಾರೆ.

ಮೈತ್ರಿ ಕೈಗೊಡಿದರೆ ಮೇಲ್ಮನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬಲ ಒಟ್ಟು 47 ಆಗುತ್ತದೆ. ಇದರಿಂದ ಯಾವುದೇ ವಿಧೇಯಕಕ್ಕೆ ಹಿಂಜರಿಕೆ ಇಲ್ಲದೆ ಅಂಗೀಕಾರ ಪಡೆಯಬಹುದು.

ತದ ನಂತರ ಮಾತನಾಡಿದ ನೂತನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್, ಸಭಾಧ್ಯಕ್ಷನಾಗಿ ಕಾಗೋಡು ತಿಮ್ಮಪ್ಪ ಅವರಂತಹ ಹಿರಿಯರಷ್ಟು  ಚೆನ್ನಾಗಿ ಕೆಲಸ ಮಾಡುತ್ತೇನೋ ಇಲ್ಲವೋ ಆದರೆ ಪ್ರಾಮಾಣಿಕವಾಗಿ ನನ್ನ ಸೇವೆಯನ್ನು ಸಲ್ಲಿಸುತ್ತೇನೆ ಎಂದರು.

ಸಭಾಧ್ಯಕ್ಷ ಎಂದರೆ ಸದನದ ಸೇವಕನೇ ಹೊರತು ಸದನದ ಮಾಲೀಕನಲ್ಲ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದಂತೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಸದನಕ್ಕೆ ಬರುತ್ತಾರೆ.ಈ ಸದನದ ಮುಖ್ಯಸ್ಥರಾಗಿ ಸಭಾಧ್ಯಕ್ಷರು ಇರುತ್ತಾರೆ.ಹೀಗಾಗಿ ಅವರು ರಾಷ್ಟ್ರದ ಗೌರವವನ್ನು ಕಾಪಾಡುವಂತಹ ಕೆಲಸ ಮಾಡಬೇಕು ಎಂದರು.

ಇದೇ ರೀತಿ ನೀಲಂ ಸಂಜೀವರೆಡ್ಡಿ ಅವರೂ ಸಭಾಧ್ಯಕ್ಷರ ಸ್ಥಾನ ಎಂದರೆ ಎಷ್ಟು ಘನತೆಯುಳ್ಳದ್ದು ಎಂದು ಹೇಳಿದ್ದಾರೆ ಎಂದು ಉದಾಹರಿಸಿದ ಅವರು,ನಾನು ಈ ಸದನದ ಅಧ್ಯಕ್ಷನಾಗಿ 225 ಸದಸ್ಯರ ಹಕ್ಕುಗಳನ್ನು ರಕ್ಷಿಸುತ್ತೇನೆ ಎಂದರು.

ನಾನು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಮುಖ್ಯಮಂತ್ರಿಗಳು,ಪ್ರತಿಪಕ್ಷಗಳ ನಾಯಕರು ಹಾಗೂ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ನಂಬಿಕೆಯನ್ನು ಹುಸಿ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

eshwarappa-mahadevappa

ಸದನದಲ್ಲಿ ಕಂಡ ಸಚಿವ ಮಹಾದೇವಪ್ಪ ಮತ್ತು ಪ್ರತಿಪಕ್ಷ ನಾಯಕ ಈಶ್ವರಪ್ಪ ನಡುವಿನ ಚಕಮಕಿ

Leave a Reply