ಸೌದಿ ಮಸೀದಿ ಪಕ್ಕದಲ್ಲೂ ಬಾಂಬ್ ಇಡುವವರ ಮನದಲ್ಲೇನಿದೆ? ಜಾಕಿರ್ ನಾಯಕ್ ಉಗ್ರರಿಗೆ ಸ್ಫೂರ್ತಿಯೆಂಬುದು ಜಾಹೀರಾಗಿದೆ…

 

ಡಿಜಿಟಲ್ ಕನ್ನಡ ವಿಶೇಷ:

ಕಳೆದ ಒಂದು ವಾರದಲ್ಲಿ ಉಗ್ರರ ಉಪಟಳ ಹೆಚ್ಚಿದೆ. ಟರ್ಕಿ, ಬಾಂಗ್ಲಾದೇಶ, ಇರಾಕ್ ನಲ್ಲಿ ನರಹತ್ಯೆ ನಂತರ ಈಗ ಸೌದಿ ಅರೆಬಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಸೋಮವಾರ ಬೆಳಗಿನ ಜಾವ ಸೌದಿಯ ಮೂರು ನಗರಗಳಲ್ಲಿ ಸ್ಫೋಟ ನಡೆಸಿ ತಮ್ಮ ಕ್ರೌರ್ಯ ಮುಂದುವರಿಸಿದ್ದಾರೆ. ಈ ಸ್ಫೋಟದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ.

ಮೆಕ್ಕಾದ ನಂತರ ಇಸ್ಲಾಂನ ಪವಿತ್ರ ಸ್ಥಳವೆಂದೇ ಖ್ಯಾತಿ ಪಡೆದಿರುವ ಮದಿನಾದ ಪ್ರೊಪೆಟ್ ಮಸೀದಿಯ ಹೊರ ಆವರಣದಲ್ಲಿ, ಜೆಡ್ಡಾ ಪ್ರದೇಶದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಹಾಗೂ ಕಾತಿಫ್ ನ ಶಿತೆ ಮಸೀದಿ ಬಳಿ ಉಗ್ರರು ಆತ್ಮಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಇದರೊಂದಿಗೆ ಪವಿತ್ರ ರಂಜಾನ್ ತಿಂಗಳ ಅಂತ್ಯದ ವೇಳೆಯಲ್ಲಿ ತಲ್ಲೀನರಾಗಿದ್ದ ಸೌದಿ ಅರೆಬಿಯಾಗೆ ಉಗ್ರರ ಕರಿನೆರಳು ಆವರಿಸಿದೆ.

ಅಮೆರಿಕ ರಾಯಭಾರಿ ಕಚೇರಿ ಬಳಿಯ ಸ್ಫೋಟ ವಿದೇಶಿಗರನ್ನು ಗುರಿಯಾಗಿಸಿ ಮಾಡಿದ್ದಾರೆ ಎಂದುಕೊಳ್ಳಬಹುದು. ಆದ್ರೆ, ಮುಸಲ್ಮಾನರ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಪ್ರವಾದಿ ಮಸೀದಿ ಹೊರಗಡೆ ನಡೆದಿರುವ ಸ್ಫೋಟ ಉಗ್ರರ ನಿಜವಾದ ಟಾರ್ಗೆಟ್ ಯಾರು ಎಂಬ ಪ್ರಶ್ನೆ ಮೂಡಿಸುತ್ತದೆ. ಮುಸ್ಲಿಮರು ಯಾಕೆ ತಮ್ಮ ಧಾರ್ಮಿಕ ಸ್ಥಳಗಳ ಮೇಲೆಯೇ ಗುರಿಯಾಗಿಸಿದ್ದಾರೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.

ವಿಷಯವಿಷ್ಟೆ. ಉಗ್ರರಿಗೆ ತನ್ನ ಎದುರಿನವ ಕೇವಲ ಮುಸ್ಲಿಂ ಆಗಿದ್ದರೂ ಸಾಲದು. ಅದರಲ್ಲೂ ಇನ್ನಷ್ಟು ಸೋಸುವಿಕೆ ಇದೆ. ಉಗ್ರರೆಲ್ಲ ಇಸ್ಲಾಮಿನ ಕಟ್ಟರ್ ಸುನ್ನಿ ಪಂಥಕ್ಕೆ ಸೇರಿದವರು. ಇವರು ಸೌದಿಯಲ್ಲಿ ಗುರಿಯಾಗಿಸಿಕೊಂಡಿದ್ದು ಶಿಯಾ ಮುಸ್ಲಿಮರನ್ನು. ಅಂದರೆ ಇವರ ಮತಾಂಧತೆಯ ತೀವ್ರತೆ ಹಾಗೂ ಕಾಫಿರರ ವ್ಯಾಖ್ಯಾನ ಯಾವ ಮಟ್ಟದ್ದಿರಬಹುದೆಂಬುದನ್ನು ಯೋಚಿಸಿ.

ಬಡತನ ಮತ್ತು ಭವಿಷ್ಯದ ಬಗ್ಗೆ ವಿಭ್ರಾಂತ ಸ್ಥಿತಿಯಲ್ಲಿರುವವರು ಉಗ್ರ ಸಂಘಟನೆಗಳಿಗೆ ಸೇರುತ್ತಾರೆಂಬ ವಾದ ಯಾವತ್ತೋ ಮೂಲೆ ಸೇರಿದೆ. ಬಾಂಗ್ಲಾದೇಶದ ಮೇಲಿನ ದಾಳಿ ಸಹ ಇದನ್ನೇ ಸಾರಿದೆ. ಇಲ್ಲಿ ದಾಳಿ ಮಾಡಿದ ಉಗ್ರರು ಸುಶಿಕ್ಷಿತರು ಎಂಬುದು ಗಮನಾರ್ಹ. ಅಲ್ಲದೇ ಇವರಿಗೆ ಸ್ಫೂರ್ತಿದಾತರು ಯಾರೆಂದುಕೊಂಡಿರಿ? ಇಸ್ಲಾಂ ಉಪನ್ಯಾಸಗಳನ್ನು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಇಂಗ್ಲಿಷಿನಲ್ಲೇ ಕಟ್ಟಿಕೊಡುವ, ತನ್ನನ್ನು ವಿದ್ವತ್ ವಲಯದಲ್ಲಿ ಗುರುತಿಸಿಕೊಳ್ಳುವ ಜಾಕಿರ್ ನಾಯಕ್!

ಢಾಕಾ ದಾಳಿಯಲ್ಲಿ ಭಾಗಿಯಾಗಿದ್ದ ಬಾಂಗ್ಲಾ ಉಗ್ರರ ಪೈಕಿ ರೋಹನ್ ಇಮ್ತಿಯಾಜ್ ಮತ್ತು ನಿಬ್ರಾಸ್ ಇಸ್ಲಾಂ ಪ್ರಮುಖರು. ಇವರು ಉಗ್ರರಾಗಲು ಸ್ಫೂರ್ತಿಯಾಗಿದ್ದು ಮುಂಬೈ ಮೂಲದ ಇಸ್ಲಾಂ ಭೋದಕ ಜಾಕಿರ್ ನಾಯಕ್ ಮತ್ತು ಬೆಂಗಳೂರು ಮೂಲದ ಇಸ್ಲಾಮಿಕ್ ಸ್ಟೇಟ್ ಪ್ರಚಾರಕ ಮೆಹ್ದಿ ಮಸ್ರೂರ್ ಬಿಸ್ವಾಸ್ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಈ ಪತ್ರಿಕೆಯ ವರದಿಯ ಪ್ರಮುಖ ಅಂಶಗಳು ಹೀಗಿವೆ…

ಜಾಕಿರ್ ನಾಯಕ್ ಇಸ್ಲಾಂ ಧರ್ಮ ಭೋದಕ ಹಾಗೂ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕ. ವಿಶ್ವದ ಹಲವು ಭಾಗಗಳಲ್ಲಿ ಖ್ಯಾತಿ ಪಡೆದಿರುವ ಪೀಸ್ ಟಿವಿಯಲ್ಲಿ ಭಾಷಣದಿಂದ ಬಾಂಗ್ಲಾದೇಶ ಸೇರಿದಂತೆ ಹಲವೆಡೆ ಈತನಿಗೆ ಅನುಯಾಯಿಗಳು ಹುಟ್ಟುಕೊಂಡಿದ್ದರು. ಒಸಾಮಾ ಬಿನ್ ಲಾಡೆನ್ ಅನ್ನು ಉಗ್ರ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಜಾಕಿರ್ ಮೇಲೆ ಈಗಾಗಲೇ ಬ್ರಿಟನ್, ಮಲೇಷ್ಯಾ ಹಾಗೂ ಕೆನಾಡ ದೇಶಗಳು ನಿಷೇಧ ಹೇರಿವೆ. ಇನ್ನು 24 ವರ್ಷದ ಮಸ್ರೂರ್ ಬಿಸ್ವಾಸ್ ಇಸ್ಲಾಮಿಕ್ ಸ್ಟೇಟ್ ನ ಪ್ರಚಾರಕ ಎಂಬ ಆರೋಪ ಹೊತ್ತಿದ್ದು, ಈ ಬಗ್ಗೆ ತನಿಖೆಗೂ ಒಳಪಟ್ಟಿದ್ದಾನೆ.

ಉಗ್ರ ರೋಹನ್ ಇಮ್ತಿಯಾಜ್ ಅವಾಮಿ ಲೀಗ್ ಮುಖಂಡನ ಪುತ್ರ. ಕಳೆದ ವರ್ಷ ಪೀಸ್ ಟಿವಿಯ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದ ‘ಎಲ್ಲಾ ಮುಸ್ಲಿಮರು ಉಗ್ರವಾಗಬೇಕು’ ಎಂಬ ಜಾಕಿರ್ ಹೇಳಿಕೆಯನ್ನು ಮೆಚ್ಚಿ ಹಂಚಿಕೊಂಡಿದ್ದನೀತ.

ಮುಸ್ಲಿಮರು ಉಗ್ರರಾಗಬೇಕು ಎನ್ನುವ ಬಗ್ಗೆ ಜಾಕಿರ್ ಹೇಳಿದ್ದ ಮಾತು ಹೀಗಿತ್ತು:

‘ಪ್ರತಿಯೊಬ್ಬ ಮುಸ್ಲಲ್ಮಾನನು ಉಗ್ರನಾಗುವಂತೆ ಕರೆ ನೀಡುತ್ತೇನೆ. ಉಗ್ರ ಎಂದರೆ ಒಬ್ಬ ವ್ಯಕ್ತಿ ಇತರರನ್ನು ಹೆದರಿಸುವವ. ಕಳ್ಳನಿಗೆ ಪೊಲೀಸ್ ಕಂಡರೆ ಹೆದರಿಕೆಯಾಗುತ್ತದೆ. ಹೀಗಾಗಿ ಕಳ್ಳನ ಪಾಲಿಗೆ ಪೊಲೀಸರೇ ಉಗ್ರರು. ಈ ದೃಷ್ಟಿಯಲ್ಲಿ ಮುಸಲ್ಮಾನರು ಉಗ್ರರಾಗಬೇಕು.’

ಢಾಕಾ ದಾಳಿಯ ಮತ್ತೊಬ್ಬ ಉಗ್ರ 22 ವರ್ಷದ ನಿಬ್ರಾಸ್ ಇಸ್ಲಾಂ, 2014 ರಲ್ಲಿ ಇಬ್ಬರು ಇಸ್ಲಾಮಿಕ್ ಸ್ಟೇಟ್ ಪ್ರಚಾರಕ ಟ್ವಿಟರ್ ಖಾತೆಯನ್ನು ಅನುಸರಿಸಲು ಆರಂಭಿಸಿದ್ದ. ಅಂಜೆಮ್ ಚೌಧರಿ ಮತ್ತು ಶಮಿ ವಿಟ್ನೆಸ್ ಎಂಬುದು ಆ ಟ್ವಿಟರ್ ಖಾತೆಗಳಾಗಿದ್ದವು. ಅಂಜೆಮ್ ಚೌಧರಿ ತನ್ನ ಹೆಸರಿನಲ್ಲೇ ಟ್ವಿಟರ್ ಖಾತೆ ನಡೆಸಿದ್ದ. ಆದ್ರೆ, ಶಮಿ ವಿಟ್ನೆಸ್ ಖಾತೆ ಮೆಹ್ದಿ ಮಸ್ರೂರ್ ಬಿಸ್ವಾಸ್ ನದ್ದಾಗಿತ್ತು. ಇವರಿಬ್ಬರು ಟ್ವಿಟರ್ ನಲ್ಲಿ ಐಎಸ್ಐಎಸ್ ಸಂಘಟನೆಯ ಪರ ಸಂದೇಶವನ್ನು ರವಾನಿಸುತ್ತಿದ್ದರು. ಈ ಕಾರಣಕ್ಕೆ ಬಿಸ್ವಾಸ್ ನನ್ನು 2014ರಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಆ ಖಾತೆಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಪಾಕಿಸ್ತಾನ ಮೂಲದ ಬ್ರಿಟನ್ ಪ್ರಜೆಯಾಗಿದ್ದ ಅಂಜೆಮ್ ಚೌಧರಿಯನ್ನು ಬ್ರಿಟನ್ ಉಗ್ರವಾದ ನಿಗ್ರಹ ಕಾಯ್ದೆ ಉಲ್ಲಂಘಿಸಿದ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ನಿಬ್ರಾಸ್ ಇಸ್ಲಾಂ ಈ ಇಬ್ಬರ ಉಗ್ರ ಪರವಾದ ಹೇಳಿಕೆಗಳಿಂದ ಪ್ರೇರಿತನಾಗಿದ್ದ.

ಇಲ್ಲಿ ನಿರ್ಬಾಸ್ ಮತ್ತು ರೋಹನ್ ರಾತ್ರಿ ಕಳೆಯುವುದರೊಳಗೆ ಉಗ್ರರಾದವರಲ್ಲ. ಒಂದೆರಡು ವರ್ಷಗಳ ಕಾಲ ಉಗ್ರರ ಪರವಾದ ಸಂದೇಶಗಳನ್ನು ಪಡೆದು ಅದರಿಂದ ಪ್ರೇರಿತರಾಗಿದ್ದಾರೆ. ಕಳೆದ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಈ ಇಬ್ಬರು ಕಣ್ಮರೆಯಾಗಿದ್ದರು. ನಂತರ ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೊರೆಂಟ್ ನಲ್ಲಿ ಉಗ್ರರಾಗಿ ಪ್ರತ್ಯಕ್ಷರಾಗಿದ್ದಾರೆ. ಮಾರ್ಚ್ ನಿಂದ ಜೂನ್ ವರೆಗೂ ಇವರಿಬ್ಬರಿಗೆ ವ್ಯವಸ್ಥಿತಿವಾಗಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗಿದೆ.

ಸೌದಿ ಮಸೀದಿಯಲ್ಲೂ ಬಾಂಬ್ ಇಟ್ಟವರ ಮನಸ್ಥಿತಿ, ಜಾಕಿರ್ ಥರ ಪ್ರತಿಷ್ಠೆ ವಲಯದಲ್ಲಿರುವವರೂ ಉಗ್ರ ಪ್ರಚೋದನೆ ನೀಡಬಲ್ಲ ರೀತಿ ಇಸ್ಲಾಮಿಕ್ ಉಗ್ರವಾದದ ತಾಜಾ ಅಧ್ಯಾಯಗಳು!

Leave a Reply