ಗೂಗಲ್- ಯಾಹೂಗಳಿಗೆ ಸುಪ್ರೀಂ ತರಾಟೆ, ಹೈಕೋರ್ಟುಗಳ ಹೆಸರು ಬದಲು, ಧನರಾಜ್ ಪಿಳ್ಳೈ ಪ್ರಧಾನಿಗೆ ಥ್ಯಾಂಕ್ಸ್ ಹೇಳಿದ್ದೇಕೆ?

ಬಿಬಿಎಂಪಿ ಸಹಾಯವಾಣಿಯಲ್ಲಿ ತೆಲುಗು, ತಮಿಳು ಸೇರಿದಂತೆ ಪರಭಾಷೆಗಳಲ್ಲಿಡುವ ಕ್ರಮ ಸರಿಯಲ್ಲ. ವಲಸಿಗರಿಗೆ ಆಂಗ್ಲ ಭಾಷೆ ಇದೆ. ಅದಕ್ಕೂ ಮೀರಿ ತುಷ್ಟೀಕರಣ ಮಾಡಿದರೆ ಬೆಂಗಳೂರಿನಲ್ಲಿ ಕನ್ನಡಕ್ಕೆ ಜಾಗವಿರುವುದಿಲ್ಲ. ಬಿಬಿಎಂಪಿ ಈ ಯೋಜನೆ ಹಿಂತೆಗೆದುಕೊಳ್ಳಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.

ಡಿಜಿಟಲ್ ಕನ್ನಡ ಟೀಮ್:

  • ‘ಭಾರತದಲ್ಲಿ ಭ್ರೂಣದಲ್ಲಿ ಲಿಂಗಪರೀಕ್ಷೆ ಮಾಡಿಸುವುದು ಅಪರಾಧ. ಆದರೆ ಗೂಗಲ್, ಯಾಹೂ, ಮೈಕ್ರೊಸಾಫ್ಟ್ ನಂಥ ದೈತ್ಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳು ಈ ನೆಲದ ಕಾಯ್ದೆಗೆ ಗೌರವ ತೋರದೇ ಲಿಂಗಪತ್ತೆಯ ಜಾಹೀರಾತುಗಳನ್ನು ತಮ್ಮ ವೇದಿಕೆಗಳಲ್ಲಿ ಬಿತ್ತರಿಸುತ್ತಿವೆ. ತಂತ್ರಜ್ಞಾನ ಪರಿಣತರ ಸಭೆ ಕರೆದು ಇಂಥ ಜಾಹೀರಾತುಗಳನ್ನು ತಡೆ ಹಾಕುವ ಮಾರ್ಗ ರೂಪಿಸಿ’ ಇದು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರಕ್ಕೆ ನೀಡಿರುವ ನಿರ್ದೇಶನ.
  • ಮದ್ರಾಸ್, ಬಾಂಬೆ ಹಾಗೂ ಕಲ್ಕತಾ ಹೈಕೋರ್ಟ್ ಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೆಲ ವರ್ಷಗಳ ಹಿಂದೆ ಈ ಮೂರು ನಗರಗಳ ಹೆಸರನ್ನು ಕ್ರಮವಾಗಿ ಚೆನ್ನೈ, ಮುಂಬೈ ಹಾಗೂ ಕೋಲ್ಕತಾ ಎಂದು ಬದಲಾಯಿಸಲಾಗಿತ್ತು. ಆದ್ರೆ, ಈ ನಗರಗಳಲ್ಲಿರುವ ಹೈಕೋರ್ಟ್ ಗಳ ಹೆಸರು ಮಾತ್ರ ಹಾಗೇ ಉಳಿದಿತ್ತು. ದ ಹೈಕೋರ್ಟ್ಸ್ (ಬದಲಿ ಹೆಸರುಗಳು) ಬಿಲ್ 2016ರ ಮೂಲಕ ಈ ನ್ಯಾಯಾಲಯಗಳ ಹೆಸರನ್ನು ಬದಲಾಯಿಸಲು ಸರ್ಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್. ಇದರೊಂದಿಗೆ ಮುಂದಿನ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಅನ್ನು ಮುಂಬೈ ಹೈಕೋರ್ಟ್ ಎಂದು, ಮದ್ರಾಸ್ ಹೈಕೋರ್ಟ್ ಅನ್ನು ಚೆನ್ನೈ ಹೈಕೋರ್ಟ್ ಎಂದು ಹಾಗೂ ಕಲ್ಕತಾ ಹೈಕೋರ್ಟ್ ಅನ್ನು ಕೋಲ್ಕತಾ ಹೈಕೋರ್ಟ್ ಎಂದು ಕರೆಯಲಾಗುವುದು.
  • ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾಕಂದ್ರೆ, ಭಾರತದ ಮಾಜಿ ಹಾಕಿ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಮೊಹಮದ್ ಶಾಹಿದ್ ಅವರು ಯಕೃತ್ ಮತ್ತು ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರ ಚಿಕಿತ್ಸೆಗಾಗಿ ನೆರವು ನೀಡುವಂತೆ ಪಿಳ್ಳೈ ಪ್ರಧಾನಿ ಜತೆಗೆ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ರೈಲ್ವೇ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಕೇಂದ್ರ ₹ 10 ಲಕ್ಷ ಸಹಾಯ ಮಾಡಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿರುವ ಅಖಿಲೇಶ್ ಯಾದವ್ ಸರ್ಕಾರ ಸಹ ₹ 5 ಲಕ್ಷ ನೆರವು ನೀಡಿದ್ದು, ಅಖಿಲೇಶ್ ಯಾದವ್ ಅವರಿಗೂ ಪಿಳ್ಳೈ ಧನ್ಯವಾದ ತಿಳಿಸಿದ್ದಾರೆ.
  • ಹಣಕ್ಕಾಗಿ ಯುವಕನನ್ನು ಕಿಡ್ನಾಪ್ ಮಾಡಿಸಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಬೆಳಗಾವಿಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದಲ್ಲಿರುವ ತಮ್ಮ ಪತ್ನಿಯ ಅಜ್ಜನ ಮನೆಯಲ್ಲಿ ಕಲ್ಲಪ್ಪ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನೈಜ ಕಾರಣ ಏನೆಂಬುದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಪೂರ್ಣ ವರದಿ ಇಲ್ಲಿದೆ.

Leave a Reply