ಪ್ರಿಯತಮೆಗೆ ಗುಂಡಿಕ್ಕಿದ್ದ ಆಸ್ಕರ್ ಗೆ 6 ವರ್ಷ ಜೈಲು ಶಿಕ್ಷೆ!

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಗೆ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ತನ್ನ ಪ್ರೇಯಸಿ ರೀವಾ ಸ್ಟೆಪಾನಿಕ್ ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಈ ಹಿಂದೆ 5 ವರ್ಷ ಶಿಕ್ಷೆ ಪಡೆದಿದ್ದ ಆಸ್ಕರ್, ಪ್ರಕರಣದ ಮೇಲ್ಮನವಿ ವಿಚಾರಣೆಯಲ್ಲಿ ಹೆಚ್ಚಿನ ಪ್ರಮಾಣದ ಶಿಕ್ಷೆ ಪಡೆದಿದ್ದಾರೆ.

2014 ರ ಅಕ್ಟೋಬರ್ ನಲ್ಲಿ ಈ ಪ್ರಕರಣವನ್ನು ನರಹತ್ಯೆ ಎಂದು ಪರಿಗಣಿಸಿ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪಿಸ್ಟೋರಿಯಸ್ ಉತ್ತಮ ನಡೆಯ ಕಾರಣಕ್ಕೆ ಅವರನ್ನು ಮಧ್ಯಂತರವಾಗಿ ಬಿಡುಗಡೆ ಮಾಡಲಾಗಿತ್ತಾದರೂ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಈ ತೀರ್ಪಿಗೆ ಅತೃಪ್ತ ವ್ಯಕ್ತಪಡಿಸಿದ ಪ್ರಾಸಿಕ್ಯೂಟರ್ ಗಳು 2014ರ ನವೆಂಬರ್ ನಲ್ಲಿ ಈ ಪ್ರಕರಣವನ್ನು ಕೊಲೆಯನ್ನಾಗಿ ಪರಿಗಣಿಸಬೇಕು ಹಾಗೂ 15 ವರ್ಷಗಳ ಜೈಲು ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ನ್ಯಾಯಾಲಯ ಪಿಸ್ಟೋರಿಯಸ್ ಅವರ ದೈಹಿಕ ನ್ಯೂನ್ಯತೆ, ಅವರ ಉತ್ತಮ ನಡವಳಿಕೆಯನ್ನು ಪರಿಗಣಿಸಿ 6 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

2013 ಫೆ.14 ರ ಪ್ರೇಮಿಗಳ ದಿನದಂದು ಬೆಳಗಿನ ಜಾವ ಅಚ್ಚರಿಯ ಭೇಟಿ ನೀಡಿದ್ದ ರೀವಾ ಅವರನ್ನು ದರೋಡೆಕೋರರು ಎಂದು ಭಾವಿಸಿ ಹತ್ಯೆ ಮಾಡಿದ್ದಾಗಿ ಪಿಸ್ಟೋರಿಯಸ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಈ ಶಿಕ್ಷೆಯ ಪ್ರಮಾಣದ ವಿರುದ್ಧ ಪಿಸ್ಟೋರಿಯಸ್ ಮನವಿ ಸಲ್ಲಿಸುವ ಅಂತಿಮ ಅವಕಾಶವಿದೆ.

Leave a Reply