ಸೌರ ಅಕ್ರಮಕ್ಕೆ ಅಭಿಯಂತರರ ಅಮಾನತು, ಡ್ರೋನ್ ಚಿತ್ರೀಕರಣಕ್ಕೆ ಅಂಕುಶ, ಆಪ್ ಧಾರ್ಮಿಕ ವಿವಾದ, ನಾಳೆ ನಮಾಮಿ ಗಂಗೆಯ ಭರ್ಜರಿ ಕಾರ್ಯಕ್ರಮಗಳು, ಜಾಕಿರ್ ಬಗ್ಗೆ ರಿಜಿಜು ಹೇಳಿದ್ದೇನು?

ಮಾನವ ಸಂಪನ್ಮೂಲದಿಂದ ಜವಳಿ ಖಾತೆಗೆ ವರ್ಗಾವಣೆಗೊಂಡಿರುವ ಸ್ಮೃತಿ ಇರಾನಿ ಸುತ್ತಲಿನ ಚರ್ಚೆಯಲ್ಲಿಯೇ ಮಾಧ್ಯಮ ಮಿಂದೇಳುತ್ತಿರುವಾಗ ಅವರು, ಬುಧವಾರ ತಮ್ಮ ಹೊಸಖಾತೆಯನ್ನು ಅಲಂಕರಿಸಿದರು. ಇದು ನಿಮಗೆ ಹಿಂಬಡ್ತಿಯೇ, ಉ.ಪ್ರ. ಚುನಾವಣೆ ಪ್ರಭಾವವೇ ಎಂಬೆಲ್ಲ ಪ್ರಶ್ನೆಗಳು ಕಿಕ್ಕಿರಿದಿದ್ದ ಮಾಧ್ಯಮ ಪ್ರತಿನಿಧಿಗಳಿಂದ ಎದುರಾದವು. ‘ಕುಛ್ ತೊ ಲೋಗ್ ಕಹೇಂಗೆ, ಲೋಗೋಂಕಾ ಕಾಮ್ ಹೈ ಕೆಹನಾ’ ಅಂತ ನಕ್ಕರು ಸ್ಮೃತಿ. ‘ಮಾಧ್ಯಮದವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಜವಳಿ ಖಾತೆಯ ಕಚೇರಿಗೆ ಈ ಪ್ರಮಾಣದಲ್ಲಿ ಬಂದಿದ್ದು ಇದೇ ಮೊದಲಿರಬೇಕು’ ಅಂತಲೂ ಚಟಾಕಿ ಹಾರಿಸಿದರು. ‘ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ, ಉದ್ಯೋಗ ನೀಡಿಕೆಯ ದೊಡ್ಡ ಕ್ಷೇತ್ರವಾಗಿಯೂ ಜವಳಿ ವಲಯ ಕಾರ್ಯನಿರ್ವಹಿಸುತ್ತದೆ. ಇದನ್ನು ಉನ್ನತಿಗೇರಿಸುವ ಪ್ರಧಾನಿ ಕನಸಿಗೆ ತಕ್ಕದಾಗಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ’ ಎಂದರು ಸ್ಮೃತಿ.

ಡಿಜಿಟಲ್ ಕನ್ನಡ ಟೀಮ್:

ಸೌರ ವಿದ್ಯುತ್ ಯೋಜನೆ ಅಕ್ರಮ: 9 ಎಂಜಿನಿಯರ್ಗಳ ಅಮಾನತು

ಮೇಲ್ಛಾವಣಿ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯಲ್ಲಿ ನಿಯಮ ಬಾಹಿರವಾಗಿ ಒಪ್ಪಂದಗಳನ್ನು ಮಾಡಿಕೊಂಡಿರುವ 9 ಮಂದಿ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

‘ಈ ಒಂಬತ್ತು ಇಂಜಿನಿಯರ್‍ಗಳು ಮೇಲ್ಛಾವಣಿ ಬಿಟ್ಟು ಜಮೀನುಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ಒಡಂಬಡಿಕೆ ಸಹಿ ಹಾಕಿದ್ದಲ್ಲದೇ ಅವಧಿ ಮುಗಿದ ನಂತರವೂ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರ್‍ಆರ್ ನಂಬರ್ ಸಹ ಇಲ್ಲ. ಈ ಬಗ್ಗೆ ಸಮಿತಿ ರಚಿಸಿ ಕೂಲಂಕಷ ತನಿಖೆ ನಂತರವಷ್ಟೇ ಕ್ರಮ ಜರುಗಿಸಲಾಗಿದೆ.’ ಎಂದು ಇಂದನ ಸಚಿವರು ತಿಳಿಸಿದ್ದಾರೆ.

ಕೆಲವು ಸೌರ ವಿದ್ಯುತ್ ಉತ್ಪಾದಕರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ನಿಯಮ ಬಾಹಿರವಾಗಿರುವ ಶೇ 90 ರಷ್ಟು ಒಪ್ಪಂದಗಳನ್ನು ರದ್ದುಪಡಿಸಲಾಗಿದೆ. ಈ ನಿಯಮ ಬಾಹಿರ ಸೋಲಾರ್ ವಿದ್ಯುತ್ ಯೋಜನೆಗೆ ಹಣ ನೀಡದಂತೆ ಬ್ಯಾಂಕ್‍ಗಳಿಗೆ ಹಾಗೂ ಖಾಸಗಿ ಲೇವಾದೇವಿ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿರುವುದರಿಂದ ವಿದ್ಯುತ್ ಕೊರತೆ ನೀಗಿದೆ ಎಂದೂ ಹೇಳಿದರು.

ಡ್ರೋನ್ ಚಿತ್ರೀಕರಣಕ್ಕೆ ನಿಷೇಧ

ರಾಜ್ಯದಲ್ಲಿ ಡ್ರೋನ್ ಮೂಲಕ ಛಾಯಾಚಿತ್ರ, ವಿಡಿಯೋ ತೆಗೆಯುವುದನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮದುವೆ ಇನ್ನಿತರ ಸಂದರ್ಭಗಳಲ್ಲಿ ಡ್ರೋನ್ ಮೂಲಕ ಚಿತ್ರೀಕರಣದ ಖಯಾಲಿ ಹೆಚ್ಚುತ್ತಿದೆ. ಆದರೆ ಇದರಿಂದ ಕಾನೂನು ಸುವ್ಯವಸ್ಥೆ ಮೇಲೆ ಅದರಲ್ಲೂ ಉಗ್ರರ ದಾಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಮನದಟ್ಟು ಮಾಡಿದ ನಂತರ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಚಾಲಕರಿಲ್ಲದೆ ಡ್ರೋನ್‍ಗಳನ್ನು ಹಾರಿಸಿ ನಿರ್ದಿಷ್ಟ ಸ್ಥಳದಲ್ಲಿ ಕುಳಿತೇ ಅದರ ಹಾರಾಟವನ್ನು ನಿಯಂತ್ರಿಸಬಹುದಾದ್ದರಿಂದ ಇದರ ದುರ್ಬಳಕೆ ಮಾಡಿಕೊಳ್ಳುವವರಿಗೆ ಅಗಾಧ ಅವಕಾಶಗಳಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಮಾಮಿ ಗಂಗೆ ಯೋಜನೆ ಮೂಲಕ 231 ಕಾರ್ಯಕ್ರಮಗಳಿಗೆ ನಾಳೆ ಚಾಲನೆ

ನಮಾಮಿ ಗಂಗಾ ಯೋಜನೆಗೆ ಉತ್ತೇಜನ ನೀಡಲು ಗುರುವಾರ ದೇಶದಾದ್ಯಂತ 231 ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ. ಕೊಳಚೆ ಮೂಲ ಸೌಕರ್ಯ, ರುಧ್ರಭೂಮಿಗಳ ಅಭಿವೃದ್ಧಿ ಮತ್ತು ಆಧುನಿಕರಣ, ಗಿಡ ನೆಡುವ ಮೂಲಕ ಕಾಡು ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಘಟಕ, ಜೈವಿಕ ವೈವಿದ್ಯತೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಉತ್ತರಾಖಂಡದ ಪ್ರಮುಖ ಜಿಲ್ಲೆಗಳಾದ ಡೆಹ್ರಾಡುನ್, ಗರ್ಹ್ವಾಲ್, ತೆಹ್ರಿ ಗರ್ಹ್ವಾಲ್, ರುದ್ರಪ್ರಯಾಗ್, ಹರಿದ್ವಾರ ಮತ್ತು ಚಮೋಲಿ ಜಿಲ್ಲೆಗಳಲ್ಲಿ 47 ಯೋಜನೆಗಳು ಜಾರಿಯಾಗಲಿದೆ. ಹರಿದ್ವಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್, ಕೇಂದ್ರ ಸಚಿವ ನಿತೀನ್ ಗಡ್ಕರಿ, ಚೌಧರಿ ಬಿರೇಂದ್ರ ಸಿಂಗ್, ಮಹೇಶ್ ಶರ್ಮಾ ಮತ್ತು ಉಮಾ ಭಾರತಿ ಭಾಗವಹಿಸಲಿದ್ದಾರೆ.

ಉತ್ತರಾಖಂಡ ಹೊರತಾಗಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಹರ್ಯಾಣ ಮತ್ತು ದೆಹಲಿಯಲ್ಲಿ ಇದೇ ರೀತಿಯ ಯೋಜನೆಗಳಿಗೆ ಚಾಲನೆ ಸಿಗಲಿದೆ. ಗಂಗಾ ಗ್ರಾಮದ ಮೊದಲ ಹಂತದಲ್ಲಿ ನದಿಯ ಪಕ್ಕದಲ್ಲಿರುವ 400 ಹಳ್ಳಿಗಳು ಅಭಿವೃದ್ಧಿಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಸಚಿವೆ ಮತ್ತು ಗಂಗಾ ಪುನಶ್ಚೇತನ ಉಸ್ತುವಾರಿ ಹೊತ್ತಿರುವ ಉಮಾ ಭಾರತಿ.

ಜಾಕಿರ್ ನಿಷೇಧದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತದೆ: ರಿಜಿಜು

ಢಾಕಾ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನಿಗೆ ಮುಂಬೈ ಮೂಲದ ಇಸ್ಲಾಂ ಭೋದಕ ಜಾಕಿರ್ ನಾಯಕ್ ಪ್ರೇರಕ ಎಂಬ ವರದಿಗಳು ಬಂದ ನಂತರ ಭಾರತದಲ್ಲಿ ಅವರಿಗೆ ನಿಷೇಧ ಹೇರಬೇಕು ಎಂಬ ಮಾತುಗಳು ಕೇಳಿಬರ್ತಿವೆ. ಇದಕ್ಕೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿರುವುದು ಹೀಗೆ:

‘ಒಬ್ಬ ವ್ಯಕ್ತಿಯನ್ನು ಏಕಾಏಕಿ ದೇಶದಿಂದ ನಿಷೇಧ ಹೇರುವುದು ಸಚಿವಾಲಯದ ನಿರ್ಧಾರವಲ್ಲ. ಅದೊಂದು ಕಾನೂನು ಹಾಗೂ ಸಾಂಸ್ಥಿಕ ಚೌಕಟ್ಟಿನಲ್ಲಿ ಬರುವ ವಿಷಯ. ಭಯೋತ್ಪಾದನೆ ಕೇವಲ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಭದ್ರತೆಯ ಕುರಿತಂತೆ ಭಾರತ ಹಾಗೂ ಬಾಂಗ್ಲಾದೇಶಗಳು ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ಕಾರ್ಯ ನಿರ್ವಹಿಸತ್ತಿವೆ.  ಈ ಬಗ್ಗೆ ಬಾಂಗ್ಲಾದೇಶದೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಯಾವಾಗ ಯಾರ ವಿರುದ್ಧ ನಡೆಸಲಾಗುವುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ.’

ಆಪ್ ವಿವಾದ ಪರ್ವ: ಆಶೀಶ್ ಖೇತನ್ ಸರದಿ

ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ಹಣೆಬರಹ ಸರಿ ಇದ್ದಂತೆ ಕಾಣ್ತಿಲ್ಲ. ಕಾರಣ, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷದ ನಾಯಕ ಆಶೀಶ್ ಖೇತನ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ ದಾಖಲಾಗಿದೆ.

ಅರೆ, ಪಕ್ಷದ ಪ್ರಣಾಳಿಕೆಗೂ ಧಾರ್ಮಿಕ ಭಾವನೆಗೆ ಧಕ್ಕೆಗೂ ಎಲ್ಲಿಂದೆಲ್ಲಿಯ ಸಂಬಂಧ ಅಂದಿರಾ.. ಸಂಬಂಧ ಇದೆ. ಅದು ಹೇಗಂದ್ರೆ, ಆಶೀಶ್ ಮತ್ತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಒಟ್ಟಿಗೆ ಪಕ್ಷದ ಯುವಕರ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಶೀಶ್ ಈ ಪ್ರಣಾಳಿಕೆಯನ್ನು ಸಿಖ್ಖರ ಪವಿತ್ರ ಗ್ರಂಥ ‘ಗುರು ಗ್ರಂಥ ಸಾಹಿಬ್’ ಗೆ ಹೋಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಿಂದು ಪವಿತ್ರ ಗ್ರಂಥ ‘ಭಗವದ್ಗೀತೆ’ಗೂ ಹೋಲಿಕೆ ಮಾಡಲಾಗಿದೆ.

ಕೇವಲ ಹೋಲಿಕೆಗೆ ಮಾತ್ರ ಈ ವಿವಾದ ಹುಟ್ಟುಕೊಂಡಿಲ್ಲ. ಈ ಪ್ರಣಾಳಿಕೆಯಲ್ಲಿ ಸಿಖ್ಖರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್ ಚಿತ್ರವನ್ನು ಬಳಸಲಾಗಿದ್ದು, ಅದರ ಮೇಲೆ ಪಕ್ಷದ ಚಿಹ್ನೆ ಪೊರಕೆಯನ್ನು ಮುದ್ರಿಸಲಾಗಿದೆ. ಇದು ಪ್ರಮುಖವಾಗಿ ಸಿಖ್ಖರ ಭಾವನೆಯನ್ನು ಕೆರಳಿಸಿದೆ.

ಸಿಖ್ಖರ ಭಾವನೆಗೆ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಆಶೀಶ್ ಕ್ಷಮೆಯಾಚಿಸಿದರೂ ಇದನ್ನು ಅಖಿಲ ಭಾರತ ಸಿಖ್ ವಿದ್ಯಾರ್ಥಿ ಸಂಘ ತಿರಸ್ಕರಿಸಿದೆ. ಈ ಸಂಘಟನೆ ಅಮೃತಸರ ಪೊಲೀಸ್ ಠಾಣೆಯಲ್ಲಿ ಆಶೀಶ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ದೆಹಲಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಗಿರುವ ಬಂಧನದ ವಿವಾದಗಳು ಹೆಗಲೇರಿರುವಾಗ ಮತ್ತೊಂದು ವಿವಾದ ಸೃಷ್ಟಿಯಾಗಿರೋದು ಆಪ್ ಗೆ ನುಂಗಲಾರದ ತುತ್ತಾಗಿದೆ.

Leave a Reply