ಯಡಿಯೂರಪ್ಪ ಏಕಪಕ್ಷೀಯ ನಡೆಗೆ ಆರೆಸ್ಸೆಸ್ ನಲ್ಲೂ ಅಸಮಾಧಾನ, ಕೋರ್ ಕಮಿಟಿ ಪಟ್ಟಿಗೆ ಹೈಕಮಾಂಡ್ ತಡೆ

ಸಾಂದರ್ಭಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಕೇಶವ ಕೃಪ’ದಲ್ಲಿ ಬುಧವಾರ ಆರೆಸ್ಸೆಸ್ ಹಾಗೂ ಪಕ್ಷ ಪ್ರಮುಖರ ಸಭೆ ನಡೆಯಿತು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಯ ತಣ್ಣಗಾಗಿಸುವ ಪ್ರಯತ್ನ ನಡೆಯಿತು ಎನ್ನಲಾಗಿದೆ. ಆದರೆ ಸಭೆಯಲ್ಲಿ ಯಡಿಯೂರಪ್ಪನವರ ಏಕಪಕ್ಷೀಯ ನಿಲುವಿಗೆ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದೂ ಮೂಲಗಳು ಹೇಳುತ್ತಿವೆ.

ಆರೆಸ್ಸೆಸ್ ಮೂಲದಿಂದ ಹೋಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರ ಆಕ್ಷೇಪಗಳು ಹೀಗೆಲ್ಲ ವ್ಯಕ್ತವಾಗಿರುವ ಮಾಹಿತಿ ಇದೆ.

  • ದೇಶ ಮೊದಲು, ನಂತರ ಪಕ್ಷ, ಆನಂತ ವ್ಯಕ್ತಿ ಎಂಬ ಘೋಷದ ಮೂಲಕವೇ ರಾಷ್ಟ್ರೀಯ ಸ್ಥರದಲ್ಲಿ ಅಧಿಕಾರ ಹಿಡಿಯುವ ಮಟ್ಟಿಗೆ ಬಂದೆವು. ಈಗೇಕೆ ವ್ಯಕ್ತಿಯೇ ಮುಖ್ಯ ಎಂಬ ನೀತಿಗೆ ಶರಣಾಗುತ್ತಿದ್ದೇವೆ? ಸರ್ವಾಧಿಕಾರಿ ಧೋರಣೆಗೆ ಪುರಸ್ಕಾರ ಬೇಡ.
  • ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ಆರೆಸ್ಸೆಸ್ ಕಾರ್ಯಕರ್ತರ ಕೊಡುಗೆ ಇಲ್ಲದೇ ಸಾಧ್ಯವಾಗಿಲ್ಲ. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಂಡವರಿಗೆ ಸಂಘಟನೆ ಕಡೆಯಿಂದ ಕೆಲವು ಭರವಸೆಗಳನ್ನು ಕೊಟ್ಟಿದ್ದೇವೆ. ಹೀಗಿರುವಾಗ ಪಕ್ಷದ ಪದಾಧಿಕಾರಿಗಳನ್ನು,ಜಿಲ್ಲಾ ಸಮಿತಿಗಳನ್ನು ತಮ್ಮಿಚ್ಛೆಯಂತೆ ರಚಿಸಿದರೆ ಹೇಗೆ? ತಳಮಟ್ಟದಲ್ಲಿ ಕಾರ್ಯಕರ್ತರು ತಟಸ್ಥರಾದರೆ ಭಟ್ಟಂಗಿಗಳು ಬಂದು ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ.
  • ಬೆಂಗಳೂರಿನಲ್ಲಿ ಕುಳಿತು ಮಿಷನ್-150 ಮಾಧ್ಯಮಗಳಲ್ಲಿ ಸುದ್ದಿಯಾಗಿಸುವುದರಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಿಷ್ಠಾವಂತ ಕಾರ್ಯಕರ್ತರ ಪಡೆ ಇಲ್ಲವಾದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಯನ್ನು ದಮನಿಸುತ್ತವೆ.

ಹೀಗೆಂದು ಸಮನ್ವಯ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಪ್ರಚಾರಕರು, ಅರುಣ್ ಕುಮಾರ್, ರವಿ ಕುಮಾರ್ ಈಶ್ವರಪ್ಪ ಮತ್ತಿತರರ ಉಪಸ್ಥಿತಿಯಲ್ಲಿಯೇ ಯಡಿಯೂರಪ್ಪ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಯಡಿಯೂರಪ್ಪನವರು ತಮ್ಮ ಬೆಂಬಲಿಗರನ್ನೇ ತುಂಬಿಸಿ ರಚಿಸಿದ್ದ 22 ಮಂದಿಯ ಕೋರ್ ಕಮಿಟಿಗೆ ಸಹ ರಾಷ್ಟ್ರೀಯ ಬಿಜೆಪಿ ತಡೆ ಹಾಕಿರುವುದು ತಿಳಿದುಬಂದಿದೆ. ಸಂತೋಷ್, ಪ್ರಹ್ಲಾದ್ ಜೋಷಿ ಸೇರಿದಂತೆ ಪ್ರಮುಖರನ್ನು ಕೈಬಿಟ್ಟು ಮಾಜಿ ಸಚಿವರಾದ ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ,  ಬಿ.ಜೆ.ಪುಟ್ಟಸ್ವಾಮಿ ಹಾಗೂ ಡಿ.ಎಸ್.ವೀರಯ್ಯ ಸೇರಿದಂತೆ 22 ಮಂದಿಯ ಹೊಸ ಪಟ್ಟಿ ತಯಾರಿಸಿದ್ದರು ಯಡಿಯೂರಪ್ಪ.ಈ ಕೋರ್ ಕಮಿಟಿ ಪಟ್ಟಿಗೆ ತಡೆ ಹಾಕಿರುವ ಹೈಕಮಾಂಡ್ ಈ ತಿಂಗಳ ಎರಡನೇ ವಾರ ಕರ್ನಾಟಕದ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

Leave a Reply