ಜಿಗಜಿಣಗಿ ಕೇಂದ್ರ ಸಂಪುಟ ಸೇರ್ಪಡೆ ಹಿಂದಿದೆ ಕರ್ನಾಟಕ ಬಿಜೆಪಿಗೊಂದು ಮೆಸೇಜು,  ಕಾಂಗ್ರೆಸ್ಸಿಗೂ ಮತ್ತೊಂದು..!

ಡಿಜಿಟಲ್ ಕನ್ನಡ ವಿಶೇಷ:

ಕೇಂದ್ರ ಸಂಪುಟಕ್ಕೆ ಹಿರಿಯ ಮುಖಂಡ, ಪರಿಶಿಷ್ಟ ಸಮುದಾಯದ ರಮೇಶ್ ಜಿಗಜಿಣಗಿ ಸೇರ್ಪಡೆ ಹಿಂದೆ ಬರೀ ಉತ್ತರ ಪ್ರದೇಶ ಚುನಾವಣೆ ರಾಜಕೀಯ ಲೆಕ್ಕಾಚಾರ ಮಾತ್ರ ಅಡಗಿಲ್ಲ. ಬದಲಿಗೆ ಕರ್ನಾಟಕ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳನ್ನೂ ಸಮೀಕರಿಸಲಾಗಿದೆ.

ಕೇಂದ್ರ ಸಚಿವ ಅನಂತಕುಮಾರ್ ಮತ್ತು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಪ್ತರಾಗಿರುವ ರಮೇಶ್ ಜಿಗಜಿಣಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪರಮಾಪ್ತ ಸಿದ್ದೇಶ್ವರ್ ಅವರನ್ನು ತಾವಾಗಿಯೇ ಸಂಪುಟದಿಂದ ನಿರ್ಗಮಿಸುವಂತೆ ಮೌಖಿಕ ಸೂಚನೆ ನೀಡಿರುವ ವರಿಷ್ಠರ ನಡೆಯ ಹಿಂದೆ ಕರ್ನಾಟಕ ಬಿಜೆಪಿ ಒಳಗಿನ ಬೆಳವಣಿಗೆಗಳು ತಳಕು ಹಾಕಿಕೊಂಡಿವೆ. ಅದೇ ಕಾಲಕ್ಕೆ ದಲಿತ ಸಿಎಂ ಕೂಗನ್ನು ಸದೆ ಬಡಿದಿರುವ ಕಾಂಗ್ರೆಸ್ಸಿನಿಂದ ಆ ಸಮುದಾಯದ ಮತಗಳನ್ನು 2018 ರ ಚುನಾವಣೆ ವೇಳೆಗೆ ಮತ್ತಷ್ಟು ಸೆಳೆದುಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.

ಬಿಜೆಪಿ ವಿಚಾರಕ್ಕೆ ಬರುವುದಾದರೆ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದಲಿತ ಮತ್ತು ಬ್ರಾಹ್ಮಣ ಸಮುದಾಯದ ಮತಗಳ ಸಂಯೋಜನೆಯೊಂದಿಗೆ ಎದುರಿಸುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದು. ಅದಕ್ಕನುಗುಣವಾಗಿ ಸಂಪುಟ ವಿಸ್ತರಣೆಯಲ್ಲಿ ಆ ಸಮುದಾಯಗಳಿಗೆ ನೀಡಿರುವ ಮತಬದ್ಧ ಪ್ರಾಶಸ್ತ್ಯ ಜಿಗಜಿಣಗಿ ಅವರಿಗೂ ಸ್ಥಾನ ಕಲ್ಪಿಸಿದೆ ಎನ್ನುವುದು ಒಂದು ಭಾಗ. ಮತ್ತೊಂದು ಭಾಗ ಏನೆಂದರೆ ಕರ್ನಾಟಕ ಮೂಲದ ಮತ್ತಿಬ್ಬರು ಸಚಿವರಾದ ಸದಾನಂದಗೌಡ ಮತ್ತು ಸಿದ್ದೇಶ್ವರ್ ಅವರನ್ನು ಸಂಪುಟದಿಂದ ಕೈಬಿಡುವ ಪ್ರಸ್ತಾಪ ವರಿಷ್ಠರ ಮುಂದಿದೆ ಎಂದು ಗೊತ್ತಾದಾಗ ಅನಂತಕುಮಾರ್ ಮತ್ತು ಯಡಿಯೂರಪ್ಪ ಬಣ ಕಾರ್ಯಪ್ರವೃತ್ತವಾದವು. ಸದಾನಂದಗೌಡ ಅವರನ್ನು ಉಳಿಸಿಕೊಳ್ಳುವುದರ ಜತೆಗೆ ಜಿಗಜಿಣಗಿ ಅವರನ್ನು ಸಂಪುಟಕ್ಕೆ ತರಬೇಕು ಎನ್ನುವುದು ಅನಂತಕುಮಾರ್, ಜಗದೀಶ್ ಶೆಟ್ಟರ್ ಟೀಮಿನ ಆಕಾಂಕ್ಷೆಯಾಗಿದ್ದರೆ, ಸಿದ್ದೇಶ್ವರ ಅವರನ್ನು ಉಳಿಸಿಕೊಂಡು, ಜಿಗಜಿಣಗಿ ಸೇರ್ಪಡೆ ತಡೆಯುವುದು ಯಡಿಯೂರಪ್ಪನವರ ಆಶಯವಾಗಿತ್ತು.

ಯಡಿಯೂರಪ್ಪನವರ ಈ ಚಿಂತನೆಗೆ ಕಾರಣಗಳು ಇಲ್ಲದಿರಲಿಲ್ಲ. ತಮ್ಮ ವಿರೋಧಿ ಬಣದ ಅನಂತಕುಮಾರ್ ಮತ್ತು ಶೆಟ್ಟರ್ ಅವರನ್ನು ರಾಜಕೀಯವಾಗಿ ಮೆತ್ತಗೆ ಮಾಡುವ ಹುನ್ನಾರವಿತ್ತು.  ಒಂದೊಮ್ಮೆ ಲಿಂಗಾಯತ ಸಮುದಾಯದ ಸಿದ್ದೇಶ್ವರ ಉಳಿದುಕೊಂಡು, ಪರಿಶಿಷ್ಟ ಸಮುದಾಯದ ಜಿಗಜಿಣಗಿ ನಿಯಂತ್ರಿತರಾದರೆ, ಸಾಮಾಜಿಕ ನ್ಯಾಯ ಮುಂದಿಟ್ಟು ಜಿಗಜಿಣಗಿ ಸಮುದಾಯದರೇ ಆದ ಗೋವಿಂದ ಕಾರಜೋಳ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕನ ಹುದ್ದೆಗೆ ತಂದು ಶೆಟ್ಟರ್ ಗೆ ಗುದ್ದು ಕೊಡುವುದು ಯಡಿಯೂರಪ್ಪನವರ ಚಿಂತನೆಯಾಗಿತ್ತು. ಅನಂತಕುಮಾರ್ ಮತ್ತು ಶೆಟ್ಟರ್ ಕೂಡ ಇದಕ್ಕೆ ತದ್ವಿರುದ್ಧವಾಗಿಯೇ ಯೋಚನೆ ಮಾಡಿದ್ದರು. ಅದಕ್ಕೆ ಪೂರಕವಾಗಿ ಕೇಂದ್ರ ನಾಯಕರ ಮೇಲೆ ಒತ್ತಡವನ್ನೂ ತಂದಿದ್ದರು. ಅಂತಿಮವಾಗಿ ರಾಷ್ಟ್ರ ನಾಯಕರು ಅನಂತಕಮಾರ್, ಶೆಟ್ಟರ್ ಬಣಕ್ಕೆ ಮನ್ನಣೆ ಕೊಟ್ಟು, ಯಡಿಯೂರಪ್ಪನವರ ಓಟಕ್ಕೆ ಲಗಾಮು ಹಾಕಿದೆ. ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಏಕಪಕ್ಷೀಯ ನೇಮಕ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಎದ್ದಿರುವ ಬಂಡಾಯದ ಬಗ್ಗೆ ಅವರಿಗಿದ್ದ ದೂರುಗಳು ಇಲ್ಲಿ ಕೆಲಸ ಮಾಡಿವೆ.

2004 ರ ವಿಧಾನಸಭೆ ಚುನಾವಣೆ ನಂತರ ಅನಂತಕುಮಾರ್ ಮತ್ತು ಯಡಿಯೂರಪ್ಪನವರ ನಡುವಣ ಸಂಬಂಧ ಕಿತ್ತುಕೊಂಡು ಹೋಗಿದೆ. ವೇದಿಕೆ ಮೇಲಿನ ಪರಸ್ಪರ ನಗು ತೋರಿಕೆಯದೇ ಹೊರತು ಮನಸ್ಸಿನದಲ್ಲ ಎಂಬುದು ಇಬ್ಬರಿಗೂ ಗೊತ್ತು. ಅಧಿಕಾರ ರಾಜಕೀಯದಲ್ಲಿ ಪರಸ್ಪರ ಕಾಲೆಳೆಯುವ ಪ್ರಯತ್ನಗಳು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಮೋದಿ ಅವರ ಸಂಪುಟ ರಚನೆಯಲ್ಲಿ ಅನಂತಕುಮಾರ್ ಅವರಿಗೆ ಅವಕಾಶ ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಅದು ಸಫಲವಾಗಿರಲಿಲ್ಲ. ಅವರಿಗೆ ರಾಸಯನಿಕ ಮತ್ತು ರಸಗೊಬ್ಬರ ಖಾತೆ ಕೊಟ್ಟಾಗ ಅದು ಮಹತ್ವವಲ್ಲದ ಖಾತೆ ಎಂದು ಹಂಗಿಸಲಾಗಿತ್ತು. ಇದೀಗ ಅವರಿಗೆ ಹೆಚ್ಚುವರಿಯಾಗಿ ಸಿಕ್ಕಿರುವ ಸಂಸದೀಯ ವ್ಯವಹಾರಗಳ ಖಾತೆ ಮೋದಿ ಮತ್ತು ಅನಂತಕುಮಾರ್ ನಡುವಣ ಸಂಬಂಧ ವಿಸ್ತರಣೆಯ ಪ್ರತಿಬಿಂಬ. ಈಗ ಸಿಕ್ಕಿರುವ ಹೆಚ್ಚುವರಿ ಖಾತೆ ಪ್ರಧಾನಿ ಜತೆಗಿನ ಒಡನಾಟ ವೃದ್ಧಿಸಲಿದ್ದು, ಅದನ್ನು ಅನಂತಕುಮಾರ್ ರಾಜಕೀಯ ಪ್ರಯೋಗಗಳಿಗೆ ಬಳಸುವ ಸಾಧ್ಯತೆಗಳು ವಿರೋಧಿ ಪಾಳೆಯಕ್ಕೆ ಕಣ್ಮಂಜು ತರಿಸಿದೆ.

ಇನ್ನು ಕರ್ನಾಟಕ ರಾಜಕೀಯ ಸ್ಥಿತಿಗೆ ಇದನ್ನು ಹೋಲಿಕೆ ಮಾಡುವುದಾದಲ್ಲಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯದ ಮತಗಳನ್ನು ಮತ್ತಷ್ಟು ಕ್ರೋಡೀಕರಿಸುವ ಉದ್ದೇಶವೂ ಜಿಗಜಿಣಗಿ ಸೇರ್ಪಡೆಯಲ್ಲಿದೆ. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕರ್ನಾಟಕದಲ್ಲಿ ದಲಿತ ಸಿಎಂ ಕೂಗು ಇದೆ. ಸಿದ್ದರಾಮಯ್ಯನವರು ಅಹಿಂದ ಆಧಾರದ ಮೇಲೆ ಅಧಿಕಾರ ಹಿಡಿದಿದ್ದರೂ ದಲಿತರ ಬಗ್ಗೆ ತೋರುತ್ತಾ ಬಂದಿರುವ ಅಸಡ್ಡೆಯೇ ಈ ಕೂಗಿಗೆ ಕಾರಣ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪದವಿಗೆ ಹೋರಾಡಿದ ಡಾ. ಜಿ. ಪರಮೇಶ್ವರ್ ಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಹೊರಹಾಕಲಾಯಿತು. ಮಲ್ಲಿಕಾರ್ಜುನ ಖರ್ಗೆ ಪುತ್ರವ್ಯಾಮೋಹಕ್ಕೆ ಉನ್ನತ ಅವಕಾಶ ಕಳೆದುಕೊಂಡರು. ಇದೆಲ್ಲವೂ ಕಾಂಗ್ರೆಸ್ ಒಳಗಿನ ಪರಿಶಿಷ್ಟ ಮತಗಳನ್ನು ಅಲ್ಲಾಡಿಸಿದೆ. ಈ ಸನ್ನಿವೇಶ ಸದ್ಬಳಕೆ ಮಾಡಿಕೊಳ್ಳಲು ಜಿಗಜಿಣಗಿ ಅವರನ್ನು ಸಂಪುಟಕ್ಕೆ ತರಲಾಗಿದೆ. ಇಲ್ಲಿ ಇನ್ನೂ ಒಂದು ಪ್ರಮುಖ ವಿಚಾರವೆಂದರೆ ಲಾಗಾಯ್ತಿನಿಂದಲೂ ಪರಿಶಿಷ್ಟರ ಪೈಕಿ ಬಲಗೈ ಗುಂಪಿಗೆ ಹೆಚ್ಚಿನ ರಾಜಕೀಯ ಸ್ಥಾನಮಾನಗಳು ದಕ್ಕಿವೆ. ಜಿಗಜಿಣಗಿ ಪ್ರತಿನಿಧಿಸುವ ಎಡಗೈ ಗುಂಪಿನ ಮತಗಳನ್ನು ಸಾರಸಗಟು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಇದರಲ್ಲಿದೆ. 2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ಸಿನಿಂದ ವರ್ಗವಾಗಿದ್ದ ಪರಿಶಿಷ್ಟ ಮತಗಳು ಪ್ರಮುಖ ಪಾತ್ರ ವಹಿಸಿದ್ದವು. ಹೀಗಾಗಿ ಯಡಿಯೂರಪ್ಪನವರ ಸಂಪುಟದಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲಾಗಿತ್ತು. ಮುಂದಿನ ಚುನಾವಣೆಯಲ್ಲೂ ಈ ಮತಗಳನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವ ಇರಾದೆ ಜಿಗಜಿಣಗಿ ಸಂಪುಟ ಸೇರ್ಪಡೆ ಹಿಂದಿದೆ.

Leave a Reply