ಚಿಕ್ಕ, ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರಲ್ಲ, ಅದಕ್ಕೆ ಕಾರಣವೇನು ಅಂತ ಹುಡುಕಿದಾಗ…

author-geetha

‘ಹತ್ತನೇ ಮಹಡಿಯಿಂದ ಬಿದ್ದದ್ದು.. ಜೀವ ಉಳಿಯುತ್ತಾ? ಕಾಲು ಜೊತಾಡಿಸಿಕೊಂಡು ಕುಳಿತಿದ್ದ. ಗಾಬರಿಯಾಯ್ತು.. ಒಳಗೆ ಹೋಗು ಅಂತ ಕೂಗಿದೆ. ‘ಬೈ ಆಂಟಿ’ ಎಂದು ಕೂಗಿ ಧುಮುಕಿಯೇ ಬಿಟ್ಟ..’

‘ನಾನು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋದು ಮೇಡಂ.. ಇನ್ನೂ ಹತ್ತನೇ ಕ್ಲಾಸು ಓದ್ತಾ ಇದ್ದದ್ದು ಮಗಳು.. ಹಠ ಮಾಡಿದ್ಲು ಅಂತ ಮೊಬೈಲ್ ಕೊಡಿಸಿ, ಸಿಂ ಕಾರ್ಡ್ ಹಾಕಿಸಿ ಕೊಟ್ಟೆ. ಮೊನ್ನೆ ನೋಡಿದ್ರೆ ಎರಡೆರಡು ಸಿಂ ಕಾರ್ಡ್ ಇಟ್ಟುಕೊಂಡಿದ್ಲು. ಇನ್ನೊಂದು ಎಲ್ಲಿಂದ ಬಂತು ಅಂತ ವಿಚಾರಿಸಿದೆ. ಮೊಬೈಲ್ ಫೋನ್ ಮುಟ್ಟೋ ಹಾಗಿಲ್ಲ ಅಂದೆ. ಕೆಲಸದಿಂದ ಬರೋ ಹೊತ್ತಿಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ತಾಗಿಸಿಕೊಂಡು ಸುಟ್ಟುಹೋಗಿದ್ದಾಳೆ.. ಮೇಡಂ ನಾನು ವಿಚಾರಿಸಿದ್ದು ತಪ್ಪಾ..?’

‘ಸ್ಕೂಲಿನ ಫೀಲ್ಡ್ ನಲ್ಲಿ ಅವರಿಬ್ಬರೂ ಪಕ್ಕಪಕ್ಕ ಕುಳಿತು ಮಾತಾಡೊದೇನು? ಜ್ಯೂನಿಯರ್ ಹುಡುಗರು ಹೇಳಿದ್ರು ಮುತ್ತು ಬೇರೆ ಕೊಟ್ಕೊತಾ ಇದ್ರಂತೆ. ಇನ್ನೂ ಟೆನ್ತ್ ಸ್ಟಾಂಡರ್ಡ್! ಎರಡು ಬಾರಿ ವಾರ್ನ್ ಮಾಡಿದ್ವಿ. ಮೂರನೇ ಬಾರಿ ಪೇರೆಂಟ್ಸ್ ನ ಕರೆದು ಹೇಳಿದ್ವಿ. ಅವರುಗಳು ಬೈದರೋ, ಹೊಡೆದರೋ ನಮಗೇನು ಗೊತ್ತು? ಎಂಟನೇ ಮಹಡಿಯ ಫ್ರೆಂಚ್ ವಿಂಡೋಯಿಂದ ಧುಮುಕಿದಳು ಹುಡುಗಿ.. ನಮ್ಮ ಶಾಲೆಯನ್ನು ಬ್ಲೇಮ್ ಮಾಡೋದು ತಪ್ಪಲ್ಲವೇ?

‘ನಾವು ನಿತ್ಯ ರಾತ್ರಿ ಊಟದ ವೇಳೆಯಲ್ಲಿ ಮಾತಾಡುತಲ್ಲಿದ್ವಿ.. ಕಮ್ಯುನಿಕೇಷನ್ ಇತ್ತು.. ಅವನು ಯಾಕೆ ಜೀವ ತೆಗೆದುಕೊಂಡ? ಗೊತ್ತಿಲ್ಲ.. ಅಮ್ಮನ ಹತ್ತಿರವಲ್ಲದಿದ್ದವರೆ ನನ್ನ ಬಳಿ ಹೇಳಿಕೊಳ್ಳಬಹುದಿತ್ತು. ಅಕ್ಕ ನಾನು!’

‘ತೀರಾ ಹನ್ನೊಂದು ವರ್ಷ! ಪಾಸು, ಫೇಲು ಅಂದರೆ ಏನು ಎಂದು ಅರಿವಿರಬಾರದ ವಯಸ್ಸು.. ಫೇಲಾದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಅಂದರೆ ಏನು?’

‘ಯಾಕೋ ಕಾಲ ಕೆಟ್ಟು ಹೋಯ್ತು. ಚಿಕ್ಕ ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ ಅಂದರೆ ನಮ್ಮ ಸಮಾಜದ ಸ್ವಾಸ್ಥ್ಯ ಹಾಳಾಗಿದೆ. ಈ ಟಿ.ವಿ, ಇಂಟರ್ ನೆಟ್, ಫೇಸ್ ಬುಕ್ ಎಲ್ಲಾ ಬಂದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.’

‘ದೊಡ್ಡವರು, ಒಳ್ಳೆಯ ಸ್ಥಾನದಲ್ಲಿ ಇರುವವರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಮಕ್ಕಳು ಅವರಿಂದ ಕಲಿಯುತ್ತಾರೆ..’

ಎಷ್ಟು ಪ್ರಕರಣಗಳು! ಎಷ್ಟು ಮಾತುಗಳು.. ಕಲಿಯಬೇಕಾಗಿರುವುದು ಏನು? ಕಲಿಯುವವರು ಯಾರು? ಪರಿಣಾಮವೇನು?

ಸಾಮಾಜಿಕ ತಜ್ಞರು, ಮಾನಸಿಕ ತಜ್ಞರು.. ಪತ್ರಕರ್ತರು, ಚಿಂತಕರು, ತಾಯಂದಿರು, ರಾಜಕೀಯ ನಾಯಕರು.. ಎಲ್ಲರೂ ವಿಚಾರ ಮಂಡಿಸುತ್ತಾರೆ. ಯಾಕೆ ಚಿಕ್ಕ ಮಕ್ಕಳಲ್ಲಿ, ಟೀನೇಜರ್ರುಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿವರಿಸುತ್ತಾರೆ. ಎಷ್ಟೇ ವಿಚಾರ ಮಾಡಿದರೂ, ವಿವರಿಸಿದರೂ ಇದು 2-2 = 0 ಅಥವಾ 2+2 = 4 ಅನ್ನೋ ವಿಷಯವಲ್ಲ.

ಆತ್ಮಹತ್ಯೆಯೇ ಕಾಡುತ್ತದೆ. ಇನ್ನು ಚಿಕ್ಕಮಕ್ಕಳು, ಟೀನೇಜರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದು ತಂದೆ, ತಾಯಿ, ಗುರು ಹಿರಿಯರ ಸೋಲಾಗಿ ಕಂಡು ಮತ್ತಷ್ಟು ಕಾಡುತ್ತದೆ. ಆತ್ಮಹತ್ಯೆ ಮಾನಸಿಕ ದೌರ್ಬಲ್ಯದಿಂದ ಉಂಟಾಗುವ ಕ್ರಿಯೆ.. ಇದಕ್ಕೆ ವಂಶಪಾರಂಪರ್ಯದ ಕಳಂಕ ಇದೆ. ನಿಜವೇ? ಇಲ್ಲ ಎನ್ನುತ್ತಾರೆ ತಜ್ಞರು. ವಂಶಪಾರಂಪರ್ಯವಾಗಿ ಕಾಯಿಲೆಗಳನ್ನು ಎದುರಿಸಲು ಧೈರ್ಯ ತುಂಬುತ್ತಾರೆ. ಇನ್ನು ಮಾನಸಿಕ ದೌರ್ಬಲ್ಯವಿದ್ದರೆ ಕೌನ್ಸಲಿಂಗ್ ಮಾಡಿಸಬಹುದಲ್ಲವೇ..? ಅಷ್ಟು ಸುಲಭವೇ ಕೌನ್ಸಲಿಂಗ್? ಕಣ್ಣಿಗೆ ಐಬಿದ್ದು ಕನ್ನಡಕ ಹಾಕಿಕೊಳ್ಳಲು ಹಿಂದೇಟು ಹಾಕುವ ಜನರಿದ್ದಾರೆ. ಕಿವಿ ಕೇಳಿಸದಿದ್ದರೆ ಹಿಯರಿಂಗ್ ಏಡ್ ಹಾಕಿಕೊಳ್ಳಲು ಹಿಂಜರಿಯುತ್ತಾರೆ. ಹೀಗಿರುವಾಗ ಮಾನಸಿಕ ದೌರ್ಬಲ್ಯಕ್ಕೆ ಕೌನ್ಸಲಿಂಗ್ ಗೆ ಹೋಗುತ್ತಾರಾ? ಮಾನಸಿಕ ದೌರ್ಬಲ್ಯ, ಅಸ್ವಸ್ಥತೆಯನ್ನು ಗುರುತಿಸಲೇ ಸಿದ್ಧರಿಲ್ಲ ನಾವು.

ಒಂದು ದೌರ್ಬಲ್ಯದ ಕ್ಷಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ… ಹಾಗೆಂದು ಹೇಳಿದ ಮಾತ್ರಕ್ಕೆ ಅವರು ಅಲ್ಲಿಯವರೆಗೂ ಯಾವುದೇ ಗೊಂದಲ, ಬೇಸರ, ದುಃಖ, ಕೋಪ ತಾಪಗಳಿಲ್ಲದೇ ನೆಮ್ಮದಿಯಿಂದ ಇದ್ದರು ಎಂದೇನಲ್ಲ. ಮನೆಯವರ, ಸ್ನೇಹಿತರ ಗಮನಕ್ಕೆ ಬಂದಿಲ್ಲ ಅಷ್ಟೇ. ಮಾಮೂಲಾಗಿ ಮಾತಾಡಿಕೊಂಡು ಇರುವವರು ಸುಮ್ಮನಾದರೆ ಹೇಗೆ ಆತಂಕವೋ ಹಾಗೆಯೇ ಸುಮ್ಮನೆ ಇರುವವರು ವಿಪರೀತ ನಗಾಡಿಕೊಂಡು ಮಾತನಾಡಲು ಪ್ರಾರಂಭಿಸಿದರೆ ಅಷ್ಟೇ ಆತಂಕಗೊಳ್ಳಬೇಕು.

ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವಾಗ ಆ ತಂದೆ ತಾಯಿಗೆ ಅವರು ಮಾಡಿರಬಹುದಾದ ತಪ್ಪು ಏನು ಎಂದು ವಿಚಾರ ಮಾಡುತ್ತಾ, ಪ್ರಶ್ನಿಸುತ್ತಾ ಕೂರಲು ಆಗುವುದಿಲ್ಲ. ಯಾವ ತಂದೆ ತಾಯಿಯೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಯೋಚಿಸಿರುವುದಿಲ್ಲ. ಒಳ್ಳೆಯ ದಾರಿಯಲ್ಲಿ ನಡೆಯಲಿ, ಚೆನ್ನಾಗಿ ಓದಲಿ, ಒಳ್ಳೆ ಕೆಲಸ ಸಿಕ್ಕಿ ನೆಮ್ಮದಿಯ ಬದುಕು ಅವರದಾಗಲಿ ಎಂದು ಹದ್ದುಬಸ್ತಿನಲ್ಲಿ ಇಡಬಹುದು, ತಪ್ಪು ಮಾಡಿದಾಗ ಶಿಕ್ಷಿಸಬಹುದು.. ಆದರೆ ಅವರ ಶಿಕ್ಷೆಯ ಪರಿಣಾಮ ಆತ್ಮಹತ್ಯೆ ಆಗಬಹುದು ಎಂದು ಅವರಿಗೆ ಅನ್ನಿಸಿಯೇ ಇರುವುದಿಲ್ಲ.. ಶಿಕ್ಷಿಸುವ ಶಿಕ್ಷಕರಿಗಾಗಲೀ, ಛೇಡಿಸುವ ಸ್ನೇಹಿತರಿಗಾಗಲೀ ಆ ಉದ್ದೇಶ ಇರುವುದಿಲ್ಲ. ಅಂದರೆ ತಾನು ಛೇಡಿಸುತ್ತಿರುವ ತನ್ನ ಸ್ನೇಹಿತ ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಕಲ್ಪನೆ ಇರುವುದಿಲ್ಲ. (ನನ್ನ ಮನೆಯಲ್ಲಿಯೇ ಎಲ್ಲರೂ ನನ್ನ ರೇಗಿಸುತ್ತಲಿರುತ್ತಾರೆ. ಒಮ್ಮೊಮ್ಮೆ ಬೇಸರವಾಗಿ ಕಣ್ಣಲ್ಲಿ ನೀರು ತಂದುಕೊಂಡರೆ.. ನಿನ್ನನ್ನು ಅಳಿಸುವ ಉದ್ದೇಶ ಇರಲಿಲ್ಲ ಎಂದು ಸಂಕಟಪಟ್ಟು ಸಮಾಧಾನಿಸುತ್ತಾರೆ.)

ಛೇಡಿಸುವುದು, ರೇಗಿಸುವುದು ಬೇರೆ. ಎದುರಿಗಿರುವವರನ್ನು ಅವಮಾನಿಸಲೇಬೇಕು ಎಂದು ಹೊರಟವರಿರುತ್ತಾರೆ. ದುಃಖಿಸಿದರೆ, ಕುಗ್ಗಿಹೋದರೆ ಅದೇನೋ ಸುಖ ಅವರಿಗೆ. ಅಂತಹವರಿಂದ ದೂರವಿರುವಂತೆ ನಮ್ಮ ಮಕ್ಕಳಿಗೆ ಹೇಳಬೇಕು. ಅದನ್ನು ಹೇಳಲು ನಮ್ಮ ಮಕ್ಕಳು ನಮ್ಮೊಂದಿಗೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವಂತಹ ವಾತಾವರಣ, ಮುಕ್ತತೆಯನ್ನು ನಾವು ಕಲ್ಪಿಸಿರಬೇಕು. ಹಂಚಿಕೊಂಡಾಗ ಕೇಳಿಸಿಕೊಳ್ಳುವ ಸಹನೆ ಇರಬೇಕು.. ಅವರಿಗೆ ತಕ್ಕಂತಹ, ಅವರು ಪಾಲಿಸಬಹುದಾದಂತಹ ಸಲಹೆಗಳನ್ನು ಕೊಡಬೇಕು. ಅತ್ತರೆ ನಾವೇ ಹೀಯಾಳಿಸಬಾರದು. ಹೆದರಿಕೊಂಡಿದ್ದರೆ ನಾವೇ ಕೆಳಗೆಳೆಯಬಾರದು. Channel of communication should always be open.

ಇನ್ನೊಬ್ಬರನ್ನು ಹೀಯಾಳಿಸಿ ಸುಖಿಸುವ ವಿಕೃತರು (bullies) ನಮ್ಮ ಮಕ್ಕಳೇ ಆಗಿದ್ದರೆ.. ಎಚ್ಚರಿಕೆಯಿಂದ ಅವರನ್ನು ತಿದ್ದಬೇಕು.. children who are abused at home, abuse others when they get a chance.  ನಮ್ಮ ನಡತೆಯಲ್ಲಿ ತಪ್ಪಿದೆಯೇ ಎಂದು ನೋಡಿಕೊಳ್ಳಬೇಕು. ಮನೆಯಲ್ಲಿ ಹೀಯಾಳಿಕೆಗೆ, ಹೊಡೆತಕ್ಕೆ ತುತ್ತಾಗಿರುವ ಮಕ್ಕಳು ಹೊರಗೆ ಅವರಿಗಿಂಥ ಚಿಕ್ಕವರ ಮೇಲೆ ಅಥವಾ ಮೆದು ಮನಸ್ಸಿನವರ ಮೇಲೆ ದಾಳಿ ಮಾಡುತ್ತಾರೆ. ಅವರಿಗೆ ಕೂಡ councelling ಅವಶ್ಯಕತೆ ಇದೆ.

ಮನೆಯಿಂದ ಆಚೆ ಶಾಲೆಗೆ ಹೋಗುವ ಮಕ್ಕಳನ್ನು ಹೆತ್ತವರು ಎಷ್ಟು ರಕ್ಷಿಸಲು ಸಾಧ್ಯ? ಅವರ ಪರಿಸರವನ್ನು ನಿಯಂತ್ರಿಸಲು ಸಾಧ್ಯವೇ? ಅವರು ಒಡನಾಡುವ ಜನರ ಬಗ್ಗೆ ಎಷ್ಟು ಗಮನವಿಡಲು ಆಗುತ್ತದೆ? ಅವರ ಕಷ್ಟ ಸಂಕಷ್ಟಗಳನ್ನು ಅವರೇ ಎದುರಿಸಬೇಕು. ಲೋಕದ ಬಾಯನ್ನು ಮುಚ್ಚಿಸಲು ಸಾಧ್ಯವಿಲ್ಲ.. ನಮ್ಮ ಕಿವಿಗಳನ್ನು ಮುಚ್ಚಿಕೊಳ್ಳಬಹುದೆಂದು ಹೇಳಿಕೊಡಬೇಕು. ಮಕ್ಕಳು ಸಂವೇದನಾಶೀಲರಾಗಿರಬೇಕು. ಇತರರ ಕಷ್ಟಕ್ಕೆ, ನೋವಿಗೆ ಸ್ಪಂದಿಸಬೇಕು. ಆದರೆ ಅವರಿಗೆ ನೋಯುವಂತೆ ಮಾತಾದಾಗ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು.. ಇನ್ನೊಬ್ಬರಿಗೆ ನೋಯುವಂಥ ಮಾತು, ನಡೆ ನಮ್ಮದಾಗಿರಬಾರದು. ಜೊತೆಗೆ ಏನೇ ಆದರೂ ತಂದೆತಾಯಿಯಾಗಿ ನಾವು ನಿನ್ನೊಂದಿಗೆ ಇರುತ್ತೇವೆ ಎಂದು ಮಕ್ಕಳಿಗೆ ಅವರು ನಂಬುವಂತೆ ತಿಳಿಸಿ ಹೇಳಬೇಕು. ಹೊರಗಿನ ಕಾರಣ ನೂರು ಇರಲಿ.. ಮನೆಯೊಳಗಿನ ತಂದೆ ತಾಯಿ ಒಪ್ಪದಿರಬಹುದು, ಬೇಸರ ಮಾಡಿಕೊಳ್ಳಬಹುದು, ಕೋಪಿಸಿಕೊಳ್ಳಬಹುದು, ನಿರಾಸೆಗೊಳ್ಳಬಹುದು ಎಂದು ಹೆದರಿಯೂ ಮಕ್ಕಳು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಗಳಿವೆ.

ಹಿಂದೊಂದು, ಮುಂದೊಂದು ಕನ್ನಡಿ ಇಟ್ಟುಕೊಂಡು ನಾವು ನಮ್ಮನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮ ಕಿರಿಯರಿಗೆ ನಾವೆಷ್ಟು ಮಾದರಿಯಾಗಿದ್ದೇವೆ? ನಮ್ಮ ಹುಳುಕು, ಕೊಳಕನ್ನು ಸರಿಮಾಡಿಕೊಳ್ಳಬೇಕು.. ನಾವು ಹೇಗೋ ನಮ್ಮ ಮುಂದಿನ ಪೀಳಿಗೆ ಹಾಗೆ.

1 COMMENT

 1. ????????, ???????? ??????…
  ????? ! ???????? ?????? ???.
  ???? ????? ????????????.. …
  ????? , ?????? ?? ????? ??? ?????? ?????? ???????? ????? ?????? ????????, ????? ?????? ????????.
  how to control or stop…
  You cant blame only parents.

Leave a Reply