ಕೋರ್ ಕಮಿಟಿಯಿಂದ ಶೋಭಾ ಕರಂದ್ಲಾಜೆ ಹೊರಕ್ಕೆ, ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆಗೆ ಕಡಿವಾಣ

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ವರಿಷ್ಠರು ಗುರುವಾರ ಸಂಜೆ ಪ್ರಕಟಿಸಿರುವ 12 ಸದಸ್ಯರ ಕರ್ನಾಟಕ ಕೋರ್ ಕಮಿಟಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಹೊರಗಿಟ್ಟಿದ್ದು, ಇದರಿಂದ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ತೀವ್ರ ಮುಖಭಂಗವಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆದೇಶದ ಮೇರೆಗೆ ರಾಷ್ಟ್ರೀಯ ಉಪಾಧ್ಯಕ್ಷ ಅರುಣ್ ಸಿಂಗ್ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಂಸದ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಸಿ.ಎಂ. ಉದಾಸಿ, ಗೋವಿಂದ ಕಾರಜೋಳ, ಸಿ.ಟಿ. ರವಿ ಹಾಗೂ ಅರವಿಂದ ಲಿಂಬಾವಳಿ ಸ್ಥಾನ ಪಡೆದಿದ್ದಾರೆ. ಇವರ ಜತೆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಮುರಳೀಧರರಾವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಹ್ವಾನಿತ ಸದಸ್ಯರಾಗಿ ಕಮಿಟಿಯಲ್ಲಿರುತ್ತಾರೆ.

ವ್ಯಕ್ತಿ ಎಷ್ಟೇ ದೊಡ್ಡವರಿರಲಿ, ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಸಮಾಲೋಚನೆ ಆಧಾರದ ಮೇಲೆಯೇ ಪಕ್ಷ ನಡೆಯುತ್ತದೆ, ಸರ್ವಾಧಿಕಾರಿ ಧೋರಣೆಗೆ ಮನ್ನಣೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ವರಿಷ್ಠರು ಈ ಪಟ್ಟಿ ಮೂಲಕ ನೀಡಿದ್ದಾರೆ. ಅಲ್ಲದೇ ಪ್ರತಿ ತಿಂಗಳೂ ಕಮಿಟಿ ಸದಸ್ಯರು ಸಭೆ ಸೇರಿ ರಾಜಕೀಯ ಆಗುಹೋಗುಗಳ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ.

ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪನವರು ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ, ಕೋರ್ ಕಮಿಟಿ ಸದಸ್ಯರ ಜತೆ ಸಮಾಲೋಚನೆ ನಡೆಸಿಲ್ಲ ಎಂದು ಆಪಾದಿಸಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಅತೃಪ್ತ ನಾಯಕರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ್ದರು. ಅದೇ ದಿನ ಯಡಿಯೂರಪ್ಪನವರು ದಿಲ್ಲಿಗೆ ತೆರಳಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರಿಗೆ 22 ಸದಸ್ಯರ ಕೋರ್ ಕಮಿಟಿ ಪಟ್ಟಿಯನ್ನು ಸಲ್ಲಿಸಿದ್ದರು. ಅದರಲ್ಲಿ ಶೋಭಾ ಕರಂದ್ಲಾಜೆ, ರವಿಕುಮಾರ್, ಬಿ.ಜಿ. ಪುಟ್ಟಸ್ವಾಮಿ ಸೇರಿದಂತೆ ತಮ್ಮ ಆಪ್ತರನ್ನು ಸೇರಿಸಿ, ನಿಕಟಪೂರ್ವ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ತಮಗಾಗದವರನ್ನು ಈ ಪಟ್ಟಿಯಿಂದ ಕೈಬಿಟ್ಟಿದ್ದರು.

ಆದರೆ ಯಡಿಯೂರಪ್ಪನವರ ಏಕಪಕ್ಷೀಯ ನಡೆ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಂಡಾಯ ನಾಯಕರ ಸಭೆ ಬಗ್ಗೆ ಸ್ಪಷ್ಟ ಅರಿವಿದ್ದ ರಾಮಲಾಲ್ ಅವರು, ಇಷ್ಟು ದೊಡ್ಡ ಪ್ರಮಾಣದ ಕಮಿಟಿ ಬೇಡ. ಹಿರಿಯ ಮುಖಂಡರ ಜತೆ ಸಮಾಲೋಚನೆ ನಡೆಸಿ, ಪಟ್ಟಿ ಪರಿಷ್ಕರಿಸಿಕೊಂಡು ಬನ್ನಿ ಎಂದು ಹೇಳಿ ಯಡಿಯೂರಪ್ಪನವರನ್ನು ವಾಪಸ್ಸು ಕಳುಹಿಸಿದ್ದರು. ಅಲ್ಲಿಂದ ಬಂದ ನಂತರ ಪಕ್ಷದ ಪದಾಧಿಕಾರಿಗಳು, ನಾಯಕರ ಸಭೆ ನಡೆಸಿದ ಯಡಿಯೂರಪ್ಪನವರು ಪದಾಧಿಕಾರಿಗಳ ಪಟ್ಟಿ ಬದಲಿಸುವ ಪ್ರಶ್ನೆಯೇ ಇಲ್ಲ. ನಾಯಕತ್ವದ ವಿರುದ್ಧ ಮಾತಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಸಭೆಯ ಮರುದಿನ ದಿಲ್ಲಿಗೆ ತೆರಳಿದ್ದ ಈಶ್ವರಪ್ಪ ಮತ್ತು ಪ್ರಹ್ಲಾದ್ ಜೋಷಿ ಅವರು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆ ಬಗ್ಗೆ ದೂರು ನೀಡಿದ್ದರು. ತಮ್ಮ ಜತೆ ಕೆಜೆಪಿಗೆ ಬಂದಿದ್ದವರಿಗೆ ಯಡಿಯೂರಪ್ಪ ಮಣೆ ಹಾಕುತ್ತಿದ್ದಾರೆ, ಮೂಲ ಬಿಜೆಪಿ ಮುಖಂಡರ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೋರ್ ಕಮಿಟಿ, ರಾಜ್ಯ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಆಗಬೇಕು, ಶೋಭಾ ಕರಂದ್ಲಾಜೆ ಅವರಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಮಹತ್ವ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದರು.

ಈ ಮಧ್ಯೆ ಹಿರಿಯ ನಾಯಕರ ಜತೆ ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಸಮಾಲೋಚನೆ ನಡೆಸಿದ ಆರೆಸ್ಸಸ್ ಮುಖಂಡರು ಯಡಿಯೂರಪ್ಪನವರಿಗೆ ವರ್ತನೆ ತಿದ್ದಿಕೊಳ್ಳುವಂತೆ ಕಿವಿಮಾತು ಹೇಳಿದ್ದರಲ್ಲದೇ ಕೋರ್ ಕಮಿಟಿ ಪಟ್ಟಿಗೆ ತಡೆ ನೀಡಿದ್ದರು. ಅದರ ಬೆನ್ನಲ್ಲೇ ರಾಷ್ಟ್ರೀಯ ನಾಯಕರು ಪರಿಷ್ಕೃತ ಕೋರ್ ಕಮಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಲಿಂಗಾಯತರಿಗೆ ಮೂರು (ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿ.ಎಂ. ಉದಾಸಿ), ಮೂವರು ಒಕ್ಕಲಿಗರು (ಡಿ.ವಿ. ಸದಾನಂದಗೌಡ, ಆರ್. ಆಶೋಕ್, ಸಿ.ಟಿ. ರವಿ), ಇಬ್ಬರು ಹಿಂದುಳಿದ ವರ್ಗದವರು (ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್) ಹಾಗೂ ಇಬ್ಬರು ಪರಿಶಿಷ್ಟರಿಗೆ (ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ) ಸ್ಥಾನ ಕಲ್ಪಿಸಲಾಗಿದೆ.

Leave a Reply