ಈದ್ ಪ್ರಾರ್ಥನೆ ವೇಳೆಯಲ್ಲೇ ಬಾಂಗ್ಲಾದೇಶದಲ್ಲಿ ಮತ್ತೆ ಬಾಂಬ್ ಸ್ಫೋಟ, ಇದ್ಯಾವ ರಾಜಕೀಯ ಹಿತಾಸಕ್ತಿಯ ಆಟ?

ಸಾಂದರ್ಭಿಕ ಚಿತ್ರ..

ಡಿಜಿಟಲ್ ಕನ್ನಡ ಟೀಮ್:

ಶುಕ್ರವಾರದ ಕ್ರೂರ ದಾಳಿಯಿಂದಿನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಬಾಂಗ್ಲಾದೇಶದ ಢಾಕಾದಿಂದ 100 ಕಿ.ಮೀ ದೂರದಲ್ಲಿರುವ ಕಿಶೊರೆಗಂಜ್ ಪ್ರದೇಶದಲ್ಲಿನ ಅಜಿಮುದ್ದೀನ್ ಶಾಲಾ ಮೈದಾನದಲ್ಲಿ ಪ್ರಾರ್ಥನೆಗಾಗಿ ಜನರು ಸೇರಿರುವಾಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ.

ಸದ್ಯಕ್ಕೆ ಲಭ್ಯವಾಗುತ್ತಿರುವ ಮಾಹಿತಿಗಳು ಇಷ್ಟು- ಉಗ್ರರು ಪೋಲೀಸ್ ಚೆಕ್ಪೋಸ್ಟ್ ಬಳಿ ದಾಳಿ ನಡೆಸಿ ಪ್ರಾರ್ಥನಾ ಸ್ಥಳದತ್ತ ತೆರಳಿದ್ದಾರೆ. ಒಬ್ಬ ಪೋಲೀಸ್, ನಾಲ್ವರು ನಾಗರೀಕರು ಮೃತರಾಗಿದ್ದು ಹತ್ತಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಒಬ್ಬ ಉಗ್ರನನ್ನು ಹೊಡೆಯಲಾಗಿದ್ದು ಉಳಿದವರ ಜತೆ ಭದ್ರತಾ ಪಡೆ ಚಕಮಕಿಯಲ್ಲಿ ನಿರತವಾಗಿದೆ. ಇಲ್ಲಿ ಬಳಕೆಯಾಗಿರುವುದು ಕಚ್ಚಾ ಬಾಂಬ್. ಬಳಕೆಯಾಗಿರುವ ಶಸ್ತ್ರಾಸ್ತ್ರಗಳು ಸಹ ಸ್ಥಳೀಯ ಸುಡು ಶಸ್ತ್ರಗಳು ಹಾಗೂ ಹರಿತ ಆಯುಧಗಳೆಂದು ಹೇಳಲಾಗುತ್ತಿದೆ.

ಈ ಮೈದಾನದಲ್ಲಿ ಬರೋಬ್ಬರಿ 2 ಲಕ್ಷ ಮಂದಿ ಸೇರಿದ್ದು ಬಾಂಗ್ಲಾದೇಶದಲ್ಲಿನ ದೊಡ್ಡ ಪ್ರಾರ್ಥನಾ ಸ್ಥಳವಾಗಿತ್ತು. ಮೈದಾನದ ಹೊರಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, 1 ಉಗ್ರನನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ 12 ಗಾಯಗೊಂಡಿದ್ದು, ಸತ್ತವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಅದೇಕೆ ಇಸ್ಲಾಂ ಧರ್ಮೀಯರ ಮೇಲೆಯೇ, ಅದೂ ಪ್ರಾರ್ಥನಾ ನಿರತರಾಗಿರುವಾಗ ದಾಳಿಯಾಯಿತು ಎಂಬುದಕ್ಕೆ ಸದ್ಯಕ್ಕೆ ಸಿಕ್ಕಿರುವ ಉತ್ತರ ಇದು…

ಈ ದಾಳಿಯ ಪ್ರಮುಖ ಗುರಿ, ಪ್ರಾರ್ಥನೆಯ ಮುನ್ನೆಲೆಯಲ್ಲಿ ನಿಂತಿದ್ದ ಬಾಂಗ್ಲಾದೇಶದ ಜಮಾಯಿತುಲ್ ಉಲಾಮಾ ಮುಖ್ಯಸ್ಥ ಮೌಲಾನ ಫರೀದ್ ಉದ್ದೀನ್ ಮಸೂದ್. ಇತ್ತೀಚೆಗಷ್ಟೇ ಫರೀದ್ ಅವರು ಉಗ್ರರು ಇಸ್ಲಾಂ ಸಮುದಾಯಕ್ಕೆ ಸೇರಿದವರಲ್ಲ ಎಂಬ ಫತ್ವಾ (ಇಸ್ಲಾಂ ಕಾನೂನಿಗೆ ಸಂಬಂಧಿಸಿದಂತೆ ನೀಡುವ ಅಧಿಕೃತ ನಿರ್ಧಾರ) ಹೊರಡಿಸಿದ್ದರು. ಈ ಕಾರಣಕ್ಕೆ ಅವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಢಾಕಾ ಮೇಲಿನ ದಾಳಿಯ ನಂತರ ಬುಧವಾರ ಐಎಸ್ಐಎಸ್ ಉಗ್ರ ಸಂಘಟನೆ ಇನ್ನಷ್ಟು ದಾಳಿ ನಡೆಸುವ ಬಗ್ಗೆ ಬುಧವಾರವಷ್ಟೇ ವಿಡಿಯೋ ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ ಉಗ್ರರು ನೀಡಿದ್ದ ಸಂದೇಶ ಹಿಗಿತ್ತು: ‘ಈಗ ನೀವು ನೋಡಿರುವುದು ಕೇವಲ ಆರಂಭ. ನೀವು ಸೋತು ನಾವು ಗೆಲ್ಲುವವರೆಗೂ ಇದು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಈ ಶರಿಯಾ (ಇಸ್ಲಾಮಿಕ್ ಕಾನೂನು) ವನ್ನು ವಿಶ್ವದೆಲ್ಲೆಡೆ ಹರಡುತ್ತೇವೆ.’

‘ಇದು ರಾಜಕೀಯ ಪ್ರೇರಿತ ಕೃತ್ಯವೇ ಹೊರತು ಉಗ್ರರ ಕೈವಾಡವಿಲ್ಲ’ ಎಂದಿದ್ದಾರೆ ಮಾಹಿತಿ ಸಚಿವ ಹಸಾನುಲ್ ಹಕ್. ಇನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ಹೀಗಿದೆ: ‘ಭಯೋತ್ಪಾದನೆ ಮಾನವತಾವಾದದ ವಿರುದ್ಧವಾಗಿದೆ. ಮುಗ್ಧ ಜನರನ್ನು ಕೊಲ್ಲಬಾರದು ಎಂದು ಹೇಳುತ್ತೆ ಇಸ್ಲಾಂ ಧರ್ಮ. ರಂಜಾನ್ ದಿನ ನಮಾಜ್ ಮಾಡುವ ಬದಲಿಗೆ ದಾಳಿ ನಡೆಸುತ್ತಿರುವುದು ಎಂಥಹ ಇಸ್ಲಾಂ ಧರ್ಮಾಚರಣೆ?’

ನಾವು ತಿಳಿದುಕೊಳ್ಳಬೇಕಿರುವುದು- ಸದ್ಯದ ಮಾಹಿತಿಗಳನ್ನು ಹಾಗೂ ಶುಕ್ರವಾರದ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಉಗ್ರರೆಲ್ಲ ಆ ದೇಶದವರೇ ಆಗಿರುವುದನ್ನು ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಐ ಎಸ್ ಐ ಎಸ್ ಗುಮ್ಮನ ಹೆಸರಲ್ಲಿ ಅಲ್ಲಿನ ಸ್ಥಳೀಯ ಉಗ್ರಗಾಮಿ ಸಂಘಟನೆಗಳು ಚಿಗಿತುಕೊಂಡಿವೆ. ಇಸ್ಲಾಮಿಗೆ ಸೇರಿದ ಉದಾರವಾದಿಗಳನ್ನೂ ಬಿಡದೇ, ಶಿಯಾದಂಥ ಪಂಥಗಳನ್ನು ಕೊಚ್ಚಿಹಾಕಿ ಕಟ್ಟರ್ ಸುನ್ನಿ ಇಸ್ಲಾಂ ಪ್ರತಿಪಾದಿಸುವ ಅಜೆಂಡಾ ಒಂದೆಡೆ. ಇನ್ನೊಂದೆಡೆ ಅಲ್ಲಿನ ಶೇಖ್ ಹಸೀನಾ ಸರ್ಕಾರವನ್ನು ಇಂಥ ಬಲಪ್ರಯೋಗದ ಮೂಲಕವೇ ಉರುಳಿಸಿ ಬಾಂಗ್ಲಾದೇಶವನ್ನು ಕಟ್ಟರ್ ಜಿಹಾದಿ ರಾಷ್ಟ್ರವಾಗಿಸುವ ಸ್ಥಳೀಯ ರಾಜಕೀಯ ಶಕ್ತಿಗಳ ಹಿತಾಸಕ್ತಿಯೂ ಸ್ಪಷ್ಟವಾಗಿದೆ. ಯಾವಾಗ 1971ರ ಬಾಂಗ್ಲಾ ವಿಮೋಚನೆ ಯುದ್ಧದ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತೋ ಆಗಿನಿಂದಲೇ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನ ಇಸ್ಲಾಮಿಕ್ ಕಾರ್ಡ್ ಉಪಯೋಗವಾಗುವುದಿಲ್ಲ ಎಂದು ಅರಿವಾಗಿದೆ. ಪಾಕಿಸ್ತಾನದಿಂದ ಬೇರೆಯಾಗುವುದು ಬೇಡ ಎಂದೇ ಹೋರಾಡಿದ್ದ ಜಮಾತೆ ಇಸ್ಲಾಮಿಯ ಸದಸ್ಯರೇ ಈ ಪ್ರಕರಣಗಳಲ್ಲಿ ಹೆಚ್ಚಿನದಾಗಿ ಶಿಕ್ಷೆಗೆ ಒಳಗಾಗಿದ್ದಾರೆ. ಈ ಜಮಾತೆ ಜತೆಗೆ ಬಾಂಗ್ಲಾದ ಪ್ರಮುಖ ಪ್ರತಿಪಕ್ಷ ಖಲೀದಾ ಜಿಯಾರ ಬಿ ಎನ್ ಪಿ ಮೈತ್ರಿ ಹೊಂದಿತ್ತು. 2013ರ ಆಗಸ್ಟ್ ನಲ್ಲಿ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಜಮಾತೆ ಇಸ್ಲಾಮಿ ಸಂಘಟನೆಯನ್ನೇ ನಿಷೇಧಿಸಿತು.

ಈಗ ಐ ಎಸ್ ಐ ಎಸ್ ಫ್ರಾಂಚೈಸಿ ಪಡೆದು ನಡೆಸುತ್ತಿರುವ ದಾಳಿಗಳೆಲ್ಲ ಬಾಂಗ್ಲಾದೇಶದ ಹಸೀನಾ ಸರ್ಕಾರವನ್ನು ಕೆಳಗಿಳಿಸಿ ಇಸ್ಲಾಂ ಪ್ರಭುತ್ವ ಸ್ಥಾಪಿಸುವ ಪ್ರಯತ್ನದ ಭಾಗಗಳು ಎಂಬ ಬಗ್ಗೆ ಅನುಮಾನಗಳೇನೂ ಬೇಡ.

Leave a Reply