ಎಂಪುರಿಯಾ ಸಿರಿವಂತಿಕೆ, ಬೋಸ್ನಿಯಾದವನ ಭಿಕ್ಷಾಟನೆ, ಭಾರತೀಯ ಸ್ಪೇನಿಗನ ವೇದನೆ…. ಪ್ರವಾಸವೆಂಬುದು ಅನುಭವಗಳ ಖಜಾನೆ

ತಿರುಗಾಟ- ಹುಡುಕಾಟ

ಪ್ರವಾಸ ಪ್ರಸಂಗಗಳು- 4

authors-rangaswamyಫ್ರಾನ್ಸ್ ಸುತ್ತಾಟ ಮುಗಿಸಿ ಬಾರ್ಸಿಲೋನಾ ತಲುಪಿದ ತಕ್ಷಣ ಒಂಥರಾ ನಿರಾಳ ಅನುಭವ. ಮನೆ ತಲುಪಿದಷ್ಟೇ ಖುಷಿ. ಹೌದು, ಬಾರ್ಸಿಲೋನಾ ಎರಡನೇ ಮನೆ ಇದ್ದಹಾಗೆ. ದಶಕಗಳ ಒಡನಾಟ ಅಷ್ಟು ಸುಲಭದಲ್ಲಿ ಮುಗಿದು ಹೋಗುವುದಲ್ಲ. ಬಾರ್ಸಿಲೋನಾ ನಗರದಲ್ಲಿ ನೋಡಲು ನಮಗೆ ಹೊಸತೇನು ಇರಲಿಲ್ಲ ಹಾಗಾಗಿ ಈ ಬಾರಿಯ ನಮ್ಮ ವಾಸಸ್ಥಾನ ಎಂಪುರಿಯಾ ಬ್ರಾವ (ಸ್ಪ್ಯಾನಿಷ್ ನಲ್ಲಿ ಅಂಪುರಿಯ ಬ್ರಾವ ) ಎನ್ನುವ ಸ್ಥಳ. ಬಾರ್ಸಿಲೋನಾ ದಿಂದ ಉತ್ತರಕ್ಕೆ 150 ಕಿಲೋಮೀಟರ್ ದೂರದಲ್ಲಿ ಇರುವ ಈ ಸ್ಥಳ ‘ಲಾರ್ಜೆಸ್ಟ್ ರೆಸಿಡೆನ್ಸಿಯಲ್ ಮರೀನಾ ಇನ್ ದ ವರ್ಲ್ಡ್’ ಎಂದು ಪ್ರಸಿದ್ಧಿ ಪಡೆದಿದೆ. ಸರಿ ಸುಮಾರು 24 ಕಿಲೋಮೀಟರ್ ಉದ್ದದ ಕಾಲುವೆ ಮಧ್ಯದಲ್ಲಿ ವಸತಿ ನಿರ್ಮಾಣವಾಗಿದೆ. ಖಾಸಗಿ ವಿಹಾರ ನೌಕೆಗಳು ಅಲ್ಲಲಿ ನಿಲ್ಲಿಸಲಾಗಿದೆ. ಈ ಭಾಗದ ಪ್ರಸಿದ್ಧರು, ಹಣವಂತರು ಹೇಗೆ ಹಣವನ್ನು ವ್ಯಯಿಸುತ್ತಾರೆ ಎನ್ನುವುದ ನೋಡಲು ಉತ್ತಮ ಜಾಗ. ಸ್ಪೈನ್ ದೇಶದ ವೆನೀಸ್ ಎಂದು ಕೂಡ ಇದು ಪ್ರಸಿದ್ಧಿ ಪಡೆದಿದೆ. ನನ್ನ ಮಟ್ಟಿಗಂತೂ  ಫ್ರಾನ್ಸ್ ದೇಶದಲ್ಲಿ ಇರುವ ಆದರೆ ಪ್ರತ್ಯೇಕ ದೇಶವೆಂದು ಗುರುತಿಸಿಕೊಂಡಿರುವ ಮೊನಾಕೊ ದೇಶವನ್ನು ನೆನಪಿಗೆ ತಂದಿತು. ಜಗತ್ತಿನಲ್ಲಿ ಎಲ್ಲ ಕಡೆ ಒಂದು ದಿನಕ್ಕೆ 24 ಘಂಟೆಯಾದರೆ ಇಲ್ಲಿ ಮಾತ್ರ 48 ಘಂಟೆ ಎನಿಸುವಷ್ಟು ನಿರಾಳತೆ, ಶಾಂತತೆ ನೆಲೆಸಿದೆ. ಇಲ್ಲಿನ ಜನರ ಸರಾಸರಿ ಆಯಸ್ಸು 90 ಎಂದು ಕೇಳಿದ ತಕ್ಷಣ ಅಬ್ಬಾ ಎನಿಸಬಹುದು. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟ ನಂತರ ಇಂತಹ ಪರಿಸರ, ವಾತಾವರಣ ಇದ್ದರೆ 90 ವರ್ಷ ಏನು ಮಹಾ, ನೂರು ಕೂಡ ಬದುಕಬಹುದು ಎನ್ನಿಸದೆ ಇರದು.

empuria
ಬಾರ್ಸಿಲೋನಾ ನಗರದ ‘ಎಲ್ ಪ್ರಾತ್’ ವಿಮಾನ ನಿಲ್ದಾಣದಲ್ಲಿ ಇಳಿದು ಅಂಪುರಿಯ ಬ್ರಾವ ಕಡೆಗೆ ರೈಲು ಹತ್ತಿದೆವು. ಸ್ವಲ್ಪ ದೂರ ಸಾಗಿಲ್ಲ ಅಷ್ಟರಲ್ಲಿ ಮಧ್ಯ ವಯಸ್ಕ ವ್ಯಕ್ತಿ ‘ಮುಯ್ ಬೋನಸ್ ಸೀನ್ಯೋರ ಸಿ ಸೀನ್ಯೂರೇಸ್ , ಯೋ ಸೊಯ್ ದೇ ಬೋಸ್ನಿಯಾ …..,  ನೋ   ತೇಂಗೋ ತ್ರಬಾಹೋ, ನೋ ತೇಂಗೋ ಕಾಸ, ಕೋನ್ ಆಯುದ ದೇ ರೆಡ್ ಕ್ರಾಸ್ ಎಸ್ತೋಯ್ ಅಕಿ .’  ಅಂದರೆ ‘ಎಲ್ಲರಿಗೂ ನಮಸ್ಕಾರ. ನಾನು ಬೋಸ್ನಿಯಾ ದೇಶದವನು. ರೆಡ್ ಕ್ರಾಸ್ ಸಂಸ್ಥೆಯ ಸಹಾಯದಿಂದ ಇಲ್ಲಿಗೆ ಬಂದಿದ್ದೇನೆ. ನನ್ನ ಬಳಿ ಕೆಲಸವಿಲ್ಲ, ಮನೆಯಿಲ್ಲ ದಯಮಾಡಿ ನನಗೆ ಸಹಾಯ ಮಾಡಿ ಎಂದು ಹೇಳುತಿದ್ದ. ಪದೇ ಪದೆ ನಾನು ಬೋಸ್ನಿಯಾ ದವನು ಅಲ್ಲಿನ ಪರಿಸ್ಥಿತಿ ಉತ್ತಮವಾಗಿಲ್ಲ, ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಸಹಾಯ ಮಾಡಿ ಎಂದು ಕೇಳುವುದು ಅವನಿಗೆ ಉಸಿರಾಡಿದಷ್ಟು ಸಹಜವಾಗಿತ್ತು.
ಆತನಿಗೆ ಆ ಕ್ಷಣದಲ್ಲಿ ಸಿಗುವ  ಇಪ್ಪತ್ತೋ, ಐವತ್ತೋ ಸೆಂಟ್ ಅಷ್ಟೇ ಮುಖ್ಯ. ಬೋಸ್ನಿಯಾ ಅವನಿಗೆ ಹಣ ಕೇಳಲು, ನೆರವು ಬೇಡಲು ಒಂದು ಆಯುಧ! ಕೆಲಸವಿಲ್ಲ, ಮನೆಯಿಲ್ಲ ಎನ್ನುವದನ್ನು ಮುಖ್ಯ ಮಾಡಿ ಬೇಡುವಂತೆ ಬೋಸ್ನಿಯಾ ಕೂಡ ಅವನ ಬೇಡುವಿಕೆಯ ಮುಖ್ಯ ಭಾಗವಾಗಿತ್ತು. ತನ್ನ ದೇಶದ ಹೆಸರನ್ನ ಭಿಕ್ಷೆ ಬೇಡಲು ಉಪಯೋಗಿಸುತ್ತಿದ್ದೇನೆ ಎನ್ನುವ ಬೇಜಾರು  ಆತನಲ್ಲಿ  ಎಳ್ಳುಕಾಳಿನಷ್ಟು ಇರಲಿಲ್ಲ. ತನ್ನ ಸಮಸ್ಯೆ ದೊಡ್ಡದು ಅದನ್ನು ಪರಿಹರಿಸುವುದಷ್ಟೇ ಆತನಿಗೆ ಮುಖ್ಯವಾಗಿತ್ತು. ತಾನು ಬದುಕಬೇಕು ಎನ್ನುವುದಷ್ಟೆ ಅಲ್ಲಿ ಮುಖ್ಯ, ಮಿಕ್ಕೆಲ್ಲ ಅಂಶಗಳಿಗೆ ಅಲ್ಲಿಲ್ಲ ಜಾಗ.  ಡಿಸ್ನಿ ಲ್ಯಾಂಡ್ ನಲ್ಲಿ ಭಾರತದ ಮಾನ  ಹರಾಜು ಹಾಕಿದ ಉತ್ತರ ಭಾರತೀಯ, ವರ್ಸಲೈಸ್ ನಗರ ನೋಡಲು ಹೊರಟಾಗ ಅಸಭ್ಯವಾಗಿ ವರ್ತಿಸಿದ ಯುವ ಜೋಡಿ, ಪ್ಯಾರಿಸ್ ನಗರದ ಹೋಟೆಲ್ ನಲ್ಲಿ ಮೂರು ಜನರ ರೂಮ್ ನಲ್ಲಿ ನಾಲ್ಕು ಜನ ವಾಸ ಮಾಡಿ ‘ಛಿ’ ಎನಿಸಿಕೊಂಡ ಭಾರತೀಯ ಕುಟುಂಬ  ಕಣ್ಮುಂದೆ ಹಾದುಹೋದವು . ಹೊಟ್ಟೆಗಿಲ್ಲದೆ ದೇಶದ ಹೆಸರು ಹೇಳಿಕೊಂಡು ಭಿಕ್ಷೆ ಬೇಡುವ ಬೋಸ್ನಿಯಾ ದೇಶದ ಪ್ರಜೆಗೂ ಸಾಮಾಜಿಕವಾಗಿ, ಆರ್ಥಿಕವಾಗಿ ತಕ್ಕ ಮಟ್ಟಿಗೆ ಬಲಿಷ್ಠರೇ ಆಗಿರುವ ಹಲವು ಯುರೋ ಉಳಿಸುವ ಸಲುವಾಗಿ ದೇಶದ ಹೆಸರಿಗೆ ಮಸಿ ಬಳಿಯುವ ಭಾರತೀಯ ಪ್ರವಾಸಿಗಳಿಗೂ ವ್ಯತ್ಯಾಸವೇನು? ಎನ್ನುವ ಚಿಂತೆಯ ನಡುವೆ ಕಣ್ಣಿಗೆ ಬಿದ್ದವನು  ಹೊಸೆ.
ಹೊಸೆ ಮೂಲ ಭಾರತೀಯ! ಆತ ತಮಿಳುನಾಡಿನವ. ಎರಡು ವರ್ಷದ ಮಗುವಿದ್ದಾಗ ಆತನನ್ನ ದತ್ತು ತೆಗೆದು ಕೊಂಡು ಬಂದರಂತೆ. ಹೀಗಾಗಿ ಆತನ ದೇಹ ಭಾರತೀಯ, ಆತ್ಮ ಸ್ಪ್ಯಾನಿಷ್. ಅರಳು ಹುರಿದಂತೆ  ಸ್ಪ್ಯಾನಿಷ್ ಹಾಗೂ ಕಾತಲಾನ್ ಭಾಷೆಯನ್ನು ಮಾತನಾಡುವ ಈತನದು ಒಂದು ವಿಶಿಷ್ಟ ಸಮಸ್ಯೆ. ಹೊಸೆಯನ್ನು ಬಲ್ಲವರಿಗಷ್ಟೇ ಆತ ಸ್ಪ್ಯಾನಿಷ್ ಎನ್ನುವುದು ಗೊತ್ತು. ಉಳಿದವರು ಆತನನ್ನು ‘ದೊಂದೇ ಎರೇಸ್’ (ನೀನು ಎಲ್ಲಿಯವನು ? ) ಎಂದು ಇಂದಿಗೂ ಕೇಳುತ್ತಾರಂತೆ. ನಡೆ ನುಡಿಯಲ್ಲಿ ಪೂರ್ಣ ಸ್ಪ್ಯಾನಿಷೇ ಆಗಿದ್ದೂ ಕೆಲವೊಮ್ಮೆ ನೀನು ಎಲ್ಲಿಯವ ಎಂದು ಕೇಳುವುದು ಆತನನ್ನ ಹೈರಾಣಾಗಿಸಿದೆ. ಇನ್ನು ಆತನನ್ನು ಭೇಟಿ ಮಾಡುವ ಭಾರತೀಯರು ಒಮ್ಮೆಲೇ ಹಿಂದಿಯಲ್ಲೋ, ಇಂಗ್ಲಿಷ್ನಲ್ಲೋ ಸಂಭಾಷಣೆಗೆ ಇಳಿಯುತ್ತಾರಂತೆ! ಹೊಸೆಗೆ ಇಂಗ್ಲಿಷ್ – ಹಿಂದಿ ಎರಡೂ ಬಾರದು.
ನನ್ನೊಂದಿಗೆ ಮಾತಿಗಿಳಿದ ಹೊಸೆ ಹೇಳಿದ್ದು ‘ದೇಹ , ಆತ್ಮ ಎರಡೂ ಒಂದೇ ಆಗಿರಬೇಕು. ಯಾರದೋ ದೇಹದಲ್ಲಿ ಇನ್ನ್ಯಾರದೋ ಆತ್ಮ ಸೇರಿಕೊಂಡರೆ ಏನಾಗುತ್ತೆ? ಅದೇ ನನಗೂ ಆಗುತ್ತಿದೆ. ನಾನು ಭಾರತೀಯನೋ ಸ್ಪ್ಯಾನಿಷೋ ಕೆಲವೊಮ್ಮೆ ಸಂದೇಹ ಉಂಟಾಗುತ್ತದೆ’. ದತ್ತು ತೆಗೆದುಕೊಳ್ಳುವ ಬರದಲ್ಲಿ ಪೋಷಕರು ಮಾಡುವ ತಪ್ಪು ಮಕ್ಕಳ ಪೂರ್ತಿ ಜೀವನ ದ್ವಂದ್ವದಲ್ಲಿ ಬದುಕುವಂತೆ ಮಾಡುವುದು ಸುಳ್ಳಲ್ಲ.
ಸ್ಪೈನ್ ನಲ್ಲಿ ಇಂತಹ ಒಂದು ಚಿಕ್ಕ ಜನಾಂಗ ಸೃಷ್ಟಿ ಆಗುತ್ತಿದೆ ಎಂದರೆ ನೀವು ನಂಬಲೇಬೇಕು. ಇಲ್ಲಿನ ಜನರಿಗೆ, ಭಾರತೀಯರನ್ನು, ಚೀನಾ ದೇಶದ ಮಕ್ಕಳನ್ನ ದತ್ತು ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಫ್ಯಾಷನ್ ಎಂತಲೇ ಹೇಳಬಹುದು. ಈ ಎಲ್ಲಾ ದ್ವಂದ್ವಗಳ ನಡುವೆ ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರತವರು, ಹೆಸರು ಮಾಡಿದವರು ಇದ್ದರೆ ಆಶಾ ಮಿರೊ ಎನ್ನುವ ಬರಹಗಾರ್ತಿ, ಟೆಲಿವಿಷನ್ ನಿರೂಪಕಿ ಹೀಗೆ  ಕಾತಲಾನ್ ಕುಟುಂಬ ಒಂದರ ದತ್ತು ಪುತ್ರಿ.
‘ಗ್ರಾಸಿಯಾಸ್ ಅಮಿಗೋ’  ( ಧನ್ಯವಾದ ಸ್ನೇಹಿತ ) ನೀನು ಎಲ್ಲರಂತೆ ನನ್ನ ಕಂಡ ತಕ್ಷಣ ಹಿಂದಿ ಭಾಷೆಯಲ್ಲಿ ವ್ಯವಹರಿಸಲು ಬರಲಿಲ್ಲ. ನನ್ನ ನಾನಿದ್ದಂತೆ ಒಪ್ಪಿಕೊಂಡು ನನ್ನ ಕಥೆ ಕೇಳಿದ ನಿನಗೆ ನಾನು ಅಭಾರಿ. ವೇಳೆ ಮುಂದೆಂದಾರೂ ಒಂದು ದಿನ ಮತ್ತೆ ನಮ್ಮನ್ನ ಎದುರು -ಬದುರು ತರಬಹುದು. ನಿನಗೆ ಶುಭವಾಗಲಿ.’ ಎಂದು ಕೈ ಬೀಸಿ ಹೋದ ಹೊಸೆಗೆ ನಿನಗೂ ಶುಭವಾಗಲಿ ಗೆಳೆಯ ಎಂದು ಕೈಬೀಸಿದೆ.

Empuriabrava

ಪಂಪೆಯೂ ಫಾಬ್ರ ಯೂನಿವರ್ಸಿಟಿ ಭೇಟಿ
ಪ್ರೊಫೆಸರ್ ಸುಧೀಂದ್ರ ಹಾಲ್ದೊಡ್ಡೇರಿ ಕುಟುಂಬ ಸಮೇತ ಯೂರೋಪಿನ ಹಲವು ದೇಶಗಳ ಪ್ರವಾಸ ಹೊರಟಿದ್ದರು. ‘ಸಾರ್ ನಾನು ಆ ದಿನಗಳಲ್ಲಿ ಬಾರ್ಸಿಲೋನಾ ನಗರದಲ್ಲಿ ಇರುತ್ತೇನೆ ಬನ್ನಿ. ನಗರವ ಒಟ್ಟಿಗೆ ಸುತ್ತಬಹುದು’ ಎನ್ನುವ ನನ್ನ ಕರೆಗೆ ಓಗೊಟ್ಟ ಸುಧೀಂದ್ರ ಅವರು ಬಾರ್ಸಿಲೋನಾಗೆ ಬಂದರು. ಅವರು ತಯಾರಿಸಿದ್ದ ಪ್ರವಾಸಿ ವೇಳಾಪಟ್ಟಿಯಲ್ಲಿ ಬಾರ್ಸಿಲೋನಾ ಇರಲಿಲ್ಲ. ನನ್ನೊಂದಿಗಿನ ಮಾತಿನ ನಂತರ ಬದಲಾದ ವೇಳಾಪಟ್ಟಿಯಲ್ಲಿ ಬಾರ್ಸಿಲೋನಾ ಜಾಗಪಡೆಯಿತು. ಅವರೊಂದಿಗೆ ಎರಡು ದಿನ ಸುತ್ತಾಡುವ, ಹೊಸ ಅನುಭವ ಪಡೆಯುವ ಅವಕಾಶ ನಮ್ಮದಾಯಿತು. ಅನನ್ಯಳಂತೂ ಎಷ್ಟೋ ವರ್ಷದ ಹಳೆಯ ಸಂಬಂಧವೇನೋ ಎನ್ನುವಂತೆ ಹಾಲ್ದೊಡ್ಡೇರಿ ಕುಟುಂಬದವರೊಂದಿಗೆ ಬೆರೆತು ಹೋದಳು.
ಬಾರ್ಸಿಲೋನಾ ದಲ್ಲಿ ನನ್ನ ಸೋದರ ಲಕ್ಷ್ಮೀಕಾಂತ ಪಿಹೆಚ್ಡಿ ಪದವಿ ಪಡೆದದ್ದು. ಅದು ಟೆಕ್ನಿಕಲ್ ಪದವಿಗೆ ಸಂಬಂಧ ಪಟ್ಟ ಯೂನಿವರ್ಸಿಟಿ. ಅಲ್ಲಿಗೆ ಹಲವು ಬಾರಿ ಹೋಗಿದ್ದೆ. ವಿಜ್ಞಾನ, ತಾಂತ್ರಿಕ ವಿಷಯಗಳಿಂದ ನಾನು ಮೈಲಿ ದೂರ. ಹೀಗಿದ್ದರೂ ತಮ್ಮ ಪ್ರೀತಿಯಿಂದ ತಾನು ಮಾಡುತ್ತಿರುವ ಕೆಲಸದ ಬಗ್ಗೆ ವಿವರಿಸುವಾಗ ಇಲ್ಲವೆನ್ನದೆ ತಾಸುಗಟ್ಟಲೆ ಕೇಳಿಸಿಕೊಂಡಿದ್ದೇನೆ, ಇರಲಿ.  ಈ ಬಾರಿ ಹೊಸ ಅನುಭವ. ಸುಧೀಂದ್ರ ಅವರ ಜೊತೆಗೆ ಹೋದ ಯೂನಿವರ್ಸಿಟಿಯಲ್ಲಿ ಸಂಗೀತ, ಜರ್ನಲಿಸಂನಿಂದ ಹಿಡಿದು ಹಲವು ಹತ್ತು ಕೋರ್ಸ್ ಗಳು ಲಭ್ಯವಿದೆ. ಎಲ್ಲಕ್ಕೂ ಮುಖ್ಯ ಮಾಸ್ಟರ್ಸ್ ಕೋರ್ಸ್ ಗಳು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಭಾರ ಎನಿಸದ ಶುಲ್ಕ ಇನ್ನೊಂದು ಧನ್ಯಾತ್ಮಕ ಅಂಶ. ಸುಧೀಂದ್ರ ಅವರ ಮಗಳು ಮೇಘನ ಸಂಗೀತದಲ್ಲಿ ಹೆಚ್ಚಿನ ಅಧ್ಯಯನದ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಸಿಕ್ಕ ಅಲ್ಪ ಸಮಯದಲ್ಲಿ ಜರ್ನಲಿಸಂ ವಿದ್ಯಾರ್ಥಿಗಳ ಕೊಠಡಿಯಲ್ಲಿ ಕಣ್ಣಾಡಿಸಿದೆ. ಅಲ್ಲಿ ಅವರಿಗೆ  ಡಾಕ್ಯುಮೆಂಟರಿ ತಯಾರು ಮಾಡಲು ಬೇಕಾದ ಎಲ್ಲಾ ಸವಲತ್ತು ಇದೆ. ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಅವರು ನನ್ನ ಕಣ್ಣಿಗೆ ಆಧುನಿಕ ಋಷಿಗಳಂತೆ ಕಂಡರು.
ಪ್ರಪಂಚದ ದೊಡ್ಡ  ಭೂಪಟ ದಲ್ಲಿ ಜಗತ್ತಿನ ಯಾವ ಭಾಗದಿಂದೆಲ್ಲಾ ಇಲ್ಲಿಗೆ ವಿದ್ಯಾರ್ಥಿಗಳು ಬಂದಿದ್ದಾರೆ ಎಂದು ಪಿನ್ ಪಾಯಿಂಟ್ ಮಾಡಿ ತೋರಿಸಿದ್ದಾರೆ. 8-10 ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎನ್ನುವುದು ಸಂತೋಷದ ವಿಷಯ.
ಸ್ಪ್ಯಾನಿಷ್ ಜನರ ಬಗ್ಗೆ ಒಂದಷ್ಟು ಮೂಲಭೂತ ವಿಷಯಗಳನ್ನು ಹೇಳದೆ ಹೋದರೆ ಈ ಬರಹ ಅಪೂರ್ಣವಾಗುತ್ತದೆ. ಹಾಗಾಗಿ ನಾಲ್ಕು ಸಾಲು ಸ್ಪ್ಯಾನಿಷ್ ನಾಗರಿಕರ ಬಗ್ಗೆ ಹೇಳಿಬಿಡುತ್ತೇನೆ. ಆಕಸ್ಮಾತ್ ನೀವು ದಾರಿ ತಪ್ಪಿದರೆ ಅಥವಾ ಯಾರನ್ನಾದ್ರೂ ದಾರಿ ಕೇಳಿದರೆ ನಿಂತು ತಮ್ಮ ಮೊಬೈಲ್ ತೆಗೆದು ಜಿಪಿಎಸ್ ಮೂಲಕ ನೀವೆಲ್ಲಿದೀರಿ, ಹೇಗೆ ಹೋಗಬೇಕು ಎನ್ನುವುದನ್ನು ತೋರಿಸಿ ಮುಂದೆ ಹೋಗುತ್ತಾರೆ. ವಯಸ್ಸಾದವರಾದರೆ ನಡಿ, ಬಸ್ ಸ್ಟ್ಯಾಂಡ್ ತನಕ ನಾನು ಜೊತೆ ಬರುತ್ತೀನಿ ಎಂದು ನಿಮ್ಮ ಕೈ ಹಿಡಿದು ನಡೆದರೆ ಆಶ್ಚರ್ಯಗೊಳ್ಳಬೇಡಿ. ಸ್ಪ್ಯಾನಿಷ್ ಜನರು ಸಹೃದಯಿಗಳು. ಮೇಲು – ಕೀಳು, ಭೇದಭಾವ ಅರಿಯದ ಮುಗ್ಧ ಜನ. ದೊಡ್ಡ ನಗರಗಳಾದ ಮ್ಯಾಡ್ರಿಡ್, ಬಾರ್ಸಿಲೋನಾ, ವಾಲೆನ್ಸಿಯಾ ದ ಹೃದಯ ಭಾಗದಲ್ಲಿ ವಾಸಿಸುವ ನಾಗರೀಕರು ವೇಳೆಯ ಅಭಾವದಿಂದ ನೀವು ಕೇಳಿದ ಪ್ರಶ್ನೆಗೆ ಚುಟುಕು ಉತ್ತರ ನೀಡಿ ಹೋಗಬಹುದು, ಅಂಥವರ ಸಂಖ್ಯೆ ಕಡಿಮೆ. ಜಗತ್ತು ವೇಗವಾಗಿ ಬದಲಾಗುತ್ತಿದೆ ಆದರೆ ಸ್ಪೈನ್ ಮಾತ್ರ ನಾನು ಈ ಪ್ರಪಂಚಕ್ಕೆ ಸೇರಿಲ್ಲ ಎನ್ನುವಂತೆ ಅದೇ ಮುಗ್ಧತೆ, ಒಳ್ಳೆತನ ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ ಹಣದುಬ್ಬರ ಬಹಳ ಕಡಿಮೆ. ಎರಡು ಸಾವಿರ ಇಸವಿಯಲ್ಲಿ 79 ಸೆಂಟ್ ಗೆ ಒಂದು ಲೀಟರ್ ಹಾಲು ಇಂದು 82 ಸೆಂಟ್! ಇತರ ಯೂರೋಪಿಯನ್ ನಾಗರೀಕರಲ್ಲಿ ಕಾಣುವ ‘ನಾನು’  ‘ಯೂರೋಪಿಯನ್’ ಎನ್ನುವ ಅಹಂಭಾವ ಈ ಜನರಲ್ಲಿ ಕಾಣಸಿಗದು.
ಮೂರು ವಾರ ಕಳೆದದ್ದೇ ತಿಳಿಯಲಿಲ್ಲ. ಹೊಸ ಅನುಭವ, ಹೊಸ ವಿಷಯಗಳ ಜೊತೆಯಲ್ಲಿ ಬಾರ್ಸಿಲೋನಾಗೆ ಆದೇವ್ (ಬೈ, ಕಾತಲಾನ್ ಭಾಷೆಯಲ್ಲಿ) ಜೊತೆಗೆ ಆದಿಯೋಸ್ (ಬೈ ಸ್ಪ್ಯಾನಿಷ್ ಭಾಷೆಯಲ್ಲಿ) ಹೇಳಿ ಬೆಂಗಳೂರ ಟ್ರಾಫಿಕ್ ಎದುರಿಸಲು ಸಜ್ಜಾದೆವು.

ಹಸ್ತಲಾ ವಿಸ್ತ ಅಮಿಗೋಸ್! ಆದಿಯೋಸ್ !! (ಮತ್ತೆ ನಿಮ್ಮ ಕಾಣುವವರೆಗೆ  ಬೈ).

ಇದರೊಂದಿಗೆ ಪ್ರವಾಸ ಸರಣಿ ಮುಕ್ತಾಯ. ಈ ಹಿಂದಿನ ಬರಹಗಳನ್ನು ಇಲ್ಲಿ ಓದಿ.

1 COMMENT

  1. ರಂಗಸ್ವಾಮಿ ಅವರೆ, ಒಳ್ಳೆಯ ಬರಹ. ನನಗೆ ಒಂದು ಕುತೂಹಲ ಇದೆ. ನೀವು ವಿದೇಶ ಪ್ರವಾಸ ಕೈಗೊಂಡಾಗ ಇತರ ದೇಶದ (ಭಾರತೀಯರನ್ನು ಹೊರತುಪಡಿಸಿ ) ಜನರ ನಡಾವಳಿ ಹೇಗಿರುತ್ತೆ ಎಂದು. In one of your forthcoming articles, request you to touch base on the conduct & behaviour of the tourists from other parts pf the world (other than India) whom you might have come across during your world tours.

Leave a Reply