ಜಾಕಿರ್ ವಿರುದ್ಧ ತನಿಖೆಗೆ ಇಂಗಿತ, ಇರಾನಿಗೆ ಅವಹೇಳನ, ಆಫ್ರಿಕಾ ಪ್ರವಾಸದಲ್ಲಿ ಮೋದಿ, ಖಂಡ್ಯ ಬಂಧನ

ಮೊಜಾಂಬಿಕ್ ಪ್ರವಾಸದಲ್ಲಿ ಬೇಳೆಕಾಳು ಆಮದು ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿಯವರ ಐದು ದಿನಗಳ ಆಫ್ರಿಕಾ ಪ್ರವಾಸವು ಮೊಜಾಂಬಿಕ್ ಭೇಟಿಯೊಂದಿಗೆ ಗುರುವಾರ ಪ್ರಾರಂಭವಾಗಿದೆ. ಯುಜನ ಕಲ್ಯಾಣ, ಮಾದಕ ಪದಾರ್ಥ ನಿಯಂತ್ರಣ ಇತ್ಯಾದಿ ವಿಭಾಗಗಳಲ್ಲಿ ಒಪ್ಪಂದಗಳಿಗೆ ಸಹಿ ಬಿದ್ದಿತು. ಮುಖ್ಯವಾಗಿ ಮೊಜಾಂಬಿಕ್ ಜತೆಗೆ ದೀರ್ಘಕಾಲದ ಬೇಳೆಕಾಳು ಆಮದು ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಈ ಮೂಲಕ ಇಲ್ಲಿ ಧಾನ್ಯಗಳ ಕೊರತೆಯಿಂದಾಗುತ್ತಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ.

ಜಾಕೀರ್ ತನಿಖೆಗೆ ಸರ್ಕಾರದ ಇಂಗಿತ

ಜಾಕೀರ್ ನಾಯ್ಕ್ ಉಪನ್ಯಾಸಗಳಲ್ಲಿ ಆಕ್ಷೇಪಾರ್ಹ ಅಂಶಗಳು ಸರ್ಕಾರವನ್ನು ಸಹ ಚಿಂತೆಗೆ ಹಚ್ಚಿದ್ದು, ಈ ಬಗ್ಗೆ ಕೇಂದ್ರದ ಗೃಹ ಸಚಿವಾಲಯ ಪರಿಶೀಲನೆ ಮಾಡಲಿದ್ದಾರೆ ಎಂದಿದ್ದಾರೆ ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು. ಇನ್ನೊಂದೆಡೆ ಸಂಸ್ಥೆಯ ಕೇಂದ್ರವಾಗಿರುವ ಮಹಾರಾಷ್ಟ್ರದಲ್ಲೂ ಜಾಕಿರ್ ಬಗ್ಗೆ ತನಿಖೆ ನಡೆಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಪೋಲೀಸ್ ಇಲಾಖೆಗೆ ಸೂಚಿಸಿದೆ. ಆದರೆ, ಇದು ಕೇವಲ ಉಪನ್ಯಾಸಗಳ ಕುರಿತೋ ಅಥವಾ ಸಂಸ್ಥೆಯ ಹಣಕಾಸು ವ್ಯವಹಾರಗಳನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗುತ್ತದೆಯೋ ಸ್ಪಷ್ಟವಿಲ್ಲ.

ಇದೇ ವೇಳೆ, ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಈ ಹಿಂದೆ ಜಾಕಿರ್ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಹಾಡಿಹೊಗಳಿದ ದೃಶ್ಯಗಳು ಪ್ರಶ್ನೆ ಎಬ್ಬಿಸಿದವು. ಇದಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಜಾಕಿರ್ ಕೋಮು ಸೌಹಾರ್ದ ಕದಡುವ ಹಾಗೂ ಉಗ್ರವಾದ ಪ್ರೇರೇಪಣೆಯಲ್ಲಿ ತೊಡಗಿದ್ದರೆ ಕೇಂದ್ರ ಅಗತ್ಯವಾಗಿ ತನಿಖೆ ನಡೆಸಲಿ ಎಂದರು.

ಸ್ಮೃತಿಗೆ ಅವಹೇಳನ ಮಾಡಿದ ಜೆಡಿಯು ಸಂಸದಗೆ ಮಹಿಳಾ ಆಯೋಗದ ಸಮನ್ಸ್

‘ಸ್ಮೃತಿ ಇರಾನಿಗೆ ಜವಳಿ ಖಾತೆ ಕೊಟ್ಟಿದ್ದು ಒಳ್ಳೆಯದಾಯಿತು. ಮೈಮುಚ್ಚಿಕೊಳ್ಳುವುದಕ್ಕೆ ಸಹಾಯವಾಗುತ್ತದೆ’- ಇದು ಜೆಡಿಯುನ ಅಲಿ ಅನ್ವರ್ ಅವಹೇಳನದ ಪರಿ!

ಮಹಿಳೆಯ ಘನತೆಗೆ ಚ್ಯುತಿ ತರುವ ಮಾತುಗಳನ್ನಾಡಿರುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಅಲಿಗೆ ಸಮನ್ಸ್ ನೀಡಿದೆ. ಈ ಅವಹೇಳನದ ಮಾತುಗಳಿಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲಿ, ‘ನಾನು ಹೇಳಿದ್ದು ದೇಶದ ಜನರ ಮೈ ಮುಚ್ಚುವುದಕ್ಕೆ ಅನುಕೂಲವಾಗುತ್ತದೆ’ ಎಂಬರ್ಥದಲ್ಲಿ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆಗೆ ಸಜ್ಜು

ಕಡಿಮೆ ವೆಚ್ಚದಲ್ಲಿ ಶಿವನಸಮುದ್ರ ಜಲಪಾತದಲ್ಲಿ ಜಲವಿದ್ಯುತ್ ಉತ್ಪಾದಿಸುವ ಯೋಜನೆಗೆ ರಾಜ್ಯದ ತಾಂತ್ರಿಕ ತಜ್ಞರು ಕ್ರಿಯಾ ಯೋಜನೆ ರೂಪಿಸಿಸದ್ದು, ಮುಂದಿನ ಸಚಿವ ಸಂಪುಟದಲ್ಲಿ 200 ಮೆಗಾವ್ಯಾಟ್ ಉತ್ಪಾದನೆಯ 900 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ.

ಪ್ರತಿ ಯೂನಿಟ್‍ಗೆ 2.54 ರೂ. ವೆಚ್ಚ ತಗುಲಲಿದೆ. ಶಿವನಸಮುದ್ರದ ಐದು ಕಿ.ಮೀ. ಸುರಂಗದಲ್ಲಿ 897 ಕೋಟಿ ರೂ. ವೆಚ್ಚದಲ್ಲಿ ತಿರುಗುವ ಯಂತ್ರಳನ್ನು ಅಳವಡಿಸಿ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮಾದರಿ ಯೋಜನೆ ಇದಾಗಿದೆ.

ಹಂಡಿಭಾಗ್ ಪ್ರಕರಣ: ಪ್ರವೀಣ್ ಖಂಡ್ಯ ಬಂಧನ

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಡಿವೈಎಸ್‍ಪಿ ಕಲ್ಲಪ್ಪ ಹಂಡಿಬಾಗ್ ಅತ್ಮಹತ್ಯೆ ಸಂಬಂಧ ಪ್ರವೀಣ್ ಖಂಡ್ಯನನ್ನು ಬಂಧಿಸಲಾಗಿದೆ. ಈತ ಬಜರಂಗದಳದಲ್ಲಿ ಸಕ್ರಿಯ ಎಂಬ ಮಾಹಿತಿ ಇದೆ.

ಇಸ್ಪೀಟ್ ಮೇಲಿನ ದಾಳಿ, ಬೆಟ್ಟಿಂಗ್ ವ್ಯವಹಾರದಲ್ಲಿ ಮಾಡಿದ ಸಾಲ ತೀರಿಸುವ ವಿಚಾರ ಕಲ್ಲಪ್ಪ ಆತ್ಮಹತ್ಯೆಗೆ ಕಾರಣ. ಆದರೆ, ಇದ್ಯಾವುದರಲ್ಲೂ ಕಲ್ಲಪ್ಪ ಅವರ ನೇರ ಭಾಗಿ ಇರಲಿಲ್ಲ. ಸ್ನೇಹಿತ ಪ್ರವೀಣ್ ಖಂಡ್ಯಗೆ ಸಹಾಯ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸ್ನೇಹಿತನಾಗಿದ್ದ ಪ್ರವೀಣ್ ಖಂಡ್ಯ, ಕಲ್ಲಪ್ಪಗೆ ದೂರವಾಣಿ ಕರೆ ಮಾಡಿ ‘ಸ್ನೇಹಿತರೊಬ್ಬರು 10 ಲಕ್ಷ ರೂ. ತಂದು ಕೊಡುತ್ತಾರೆ. ಇಟ್ಟುಕೊಂಡಿರಿ ನಾನು ನಾಳೆ ಬಂದು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದು, ಅದರಂತೆ ಅಪಹರಣಗೊಂಡಿದ್ದ ತೇಜಸ್‍ಗೌಡ ಅವರ ಸ್ನೇಹಿತ ಹಣ ತಂದು ಪೊಲೀಸ್ ಕ್ವಾಟರ್ಸ್‍ಗೆ ಕೊಟ್ಟು ಹೋಗಿದ್ದಾನೆ. ಈ ಎಲ್ಲ ಸಂಭಾಷಣೆ ರೆಕಾರ್ಡ್ ಆಗಿ ಎಸ್‍ಪಿವರೆಗೂ ದೂರು ಹೋಗಿತ್ತು. ಇದಕ್ಕೆ ಎಸ್ಪಿ ಗದರಿದ್ದೇ ಕಲ್ಲಪ್ಪ ಆತ್ಮಹತ್ಯೆಗೆ ಕಾರಣ ಅಂತ ಹೇಳಲಾಗುತ್ತಿದೆ.

Leave a Reply