ಕೋವಿ ಹಿಡಿದ ಉಗ್ರನ ಸಿದ್ಧಾಂತ, ಕುರಾನ್ ಹಿಡಿದ ಜಾಕಿರ್ ಪ್ರತಿಪಾದನೆಗಳಲ್ಲಿ ವ್ಯತ್ಯಾಸವೇನಿದೆ?

ಚೈತನ್ಯ ಹೆಗಡೆ

ಢಾಕಾ ದಾಳಿಯ ಯುವ ಉಗ್ರ, ಜಾಕಿರ್ ನಾಯಕ್ ಉಪನ್ಯಾಸಗಳಿಂದ ಪ್ರಭಾವಿತನಾಗಿದ್ದ ಎಂಬ ಮಾಹಿತಿ ಬಹಿರಂಗವಾಗುತ್ತಲೇ ಈ ವ್ಯಕ್ತಿಯ ಸುತ್ತ ಪರ-ವಿರೋಧ ಚರ್ಚೆಗಳು ಎದ್ದಿವೆ. ಒಸಾಮಾ ಬಿನ್ ಲಾಡೆನ್ ನನ್ನು ಭಯೋತ್ಪಾದಕ ಎಂದು ಒಪ್ಪಿಕೊಳ್ಳುವುದಕ್ಕೆ ಜಾಕಿರ್ ನಿರಾಕರಣೆ, ಮುಸ್ಲಿಮರೆಲ್ಲ ಭಯೋತ್ಪಾದಕರಾಗಬೇಕು ಎಂಬ ಜಾಕಿರ್ ಹೇಳಿಕೆಗಳನ್ನು ಪ್ರಮುಖವಾಗಿ ಉಲ್ಲೇಖಿಸುತ್ತ ಚರ್ಚೆಗಳು ಶುರುವಾಗಿವೆ.

ಇಂಗ್ಲೆಂಡ್, ಕೆನಡಾಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ಜಾಕಿರ್ಗೆ ಭಾರತದಲ್ಲಿ ಅಭಿಮಾನಿಗಳಿರುವುದಂತೂ ಖರೆ. ಜಾಕಿರ್ ಇಸ್ಲಾಂ ಉಪನ್ಯಾಸಕಾರ, ಇಂಗ್ಲಿಷ್ ಸ್ಫುಟವಾಗಿ ಮಾತನಾಡುತ್ತ ಕುರಾನಿನ ಪ್ಯಾರಾಗಳನ್ನೆಲ್ಲ ಖಚಿತವಾಗಿ ಉಲ್ಲೇಖಿಸುತ್ತ, ಕೋಟು-ಸೂಟುಗಳ ಆಧುನಿಕ ವ್ಯಕ್ತಿಯನ್ನು ವಿದ್ವಾಂಸ ಎಂದು ಪರಿಗಣಿಸಬೇಕಲ್ಲದೇ ತೀವ್ರವಾದಿಯಂತಲ್ಲ ಎಂಬುದು ಅನುಯಾಯಿಗಳ ವಾದ. ಕಳೆದೆರಡು ದಿನಗಳಿಂದ ರಾಷ್ಟ್ರೀಯ ಮಾಧ್ಯಮಗಳೆಲ್ಲ ಜಾಕಿರ್ ಮೇಲೆಯೇ ತೀವ್ರ ಗಮನ ಕೇಂದ್ರೀಕರಿಸುತ್ತಲೇ, ‘ಐ ಎಸ್ ಐ ಎಸ್ ಇಸ್ಲಾಂ ವಿರೋಧಿ’ ಎಂಬ ಹೇಳಿಕೆ ಜಾಕಿರ್ ಕಡೆಯಿಂದ ಬಂದಿದೆ.

ಇಂಥ ಎಲ್ಲ ಆಯಾಮಗಳಿಂದ ಪರ- ವಿರೋಧಗಳ ಆಚೆಗೆ ನಿಂತು ಯಾರೀ ಜಾಕಿರ್ ನಾಯಕ್ ಅಂತ ಗಮನಿಸುತ್ತಿರುವವರಿಗೂ ಗೊಂದಲಗಳು ಮೂಡಿವೆ. ಸಾವಿರ ಮಂದಿಯನ್ನು ಸೆಳೆಯುವ ಶಕ್ತಿ, ಇಂಗ್ಲಿಷ್ ಮಾತುಗಳೆಲ್ಲ ತೀವ್ರವಾದದ ಎಳೆಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೋಡಬಹುದು.

  • ಜಾಕಿರ್ ಉದಾರವಾದಿ ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಜಾಕಿರ್ ಹಾಗೂ ಇದೇ ಧಾಟಿಯಲ್ಲಿ ಮಾತನಾಡುವ ಬಹಳಷ್ಟು ಆಧುನಿಕರು ಮೂಲಭೂತವಾಗಿ ಮಂಡಿಸುತ್ತಿರುವುದು ಬಹುತ್ವ ವಿರೋಧಿ ತತ್ತ್ವವನ್ನು. ಅದೆಂದರೆ- ಅಲ್ಲಾಹುವನ್ನು ಬಿಟ್ಟು ಬೇರೆ ದೇವರಿಲ್ಲ ಹಾಗೂ ಪ್ರವಾದಿ ಸಂದೇಶಕ್ಕಿಂತ ಹೊರತಾದ ದೈವ ಸಂದೇಶ ಇಲ್ಲವೇ ಇಲ್ಲ. ನಿಜ, ಎಲ್ಲ ಮತ- ನಂಬಿಕೆಗಳೂ ತಮ್ಮ ದೇವರೇ ಶ್ರೇಷ್ಠ ಎನ್ನುತ್ತವೆ. ಆದರೆ ಶ್ರೇಷ್ಠತೆ ಮಾತು ಹಾಗಿರಲಿ, ನಮ್ಮದಲ್ಲದ ಎಲ್ಲವೂ ಸುಳ್ಳು ಎಂದು ವಾದಿಸುವಲ್ಲಿಯೇ ಸಮಸ್ಯೆ ಶುರುವಾಗುವುದು. ಒಬ್ಬ ಹಿಂದು ಉದಾರವಾದಿಯಾದವನು ತನ್ನ ನಂಬಿಕೆಗಳನ್ನು ಶ್ರದ್ಧೆಯಿಂದ ಪಾಲಿಸುತ್ತಾನಾಗಲೀ, ಇನ್ನೊಬ್ಬ ಜೀಸಸ್ಗೋ, ಅಲ್ಲಾಹುವಿಗೋ ತಲೆಬಾಗಿದರೆ ಅದೂ ದೇವರನ್ನು ಸೇರುವ ಭಿನ್ನ ಮಾರ್ಗ ಎಂದುಕೊಳ್ಳುತ್ತಾನೆ. ಈ ವಿಷಯದಲ್ಲಿ ಪವಿತ್ರಗ್ರಂಥದಲ್ಲೇನಿದೆ ನೋಡೋಣ ಎಂಬ ಯೋಚನೆಯೇ ಸುಳಿಯುವುದಿಲ್ಲ. ಏಕೆಂದರೆ ಅವನಿಗದು ಜೀವನ ವಿಧಾನ. ಅಂತೆಯೇ ಮುಸ್ಲಿಂ ಮಹಿಳೆಯೊಬ್ಬಳು ಗೋಕುಲಾಷ್ಟಮಿ ದಿನ ತನ್ನ ಕಂದನಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುವಾಗ ಧರ್ಮಗ್ರಂಥ ಏನು ಹೇಳಿದೆ ಅಂತ ತಲೆಕೆಡಿಸಿಕೊಳ್ಳುವುದಿಲ್ಲ. ಇಂಥ ಸಹಜ ಬದುಕಿಗೆ ಭಂಗ ತಂದಿಡುವ ಪ್ರತಿಪಾದನೆಯ ಬಾಂಬುಗಳನ್ನು ಜಾಕಿರ್ ಅಂಥವರು ಎಸೆಯುತ್ತಾರೆ ಎಂಬ ಕಾರಣಕ್ಕೆ ಇವರು ಉಗ್ರರಿಗಿಂತ ಅಪಾಯಕಾರಿ!

‘ಇಸ್ಲಾಮಿಗಿಂತ ಹಿಂದೆಯೇ ಹಲವು ಮತಗಳು ಹುಟ್ಟಿರಬಹುದಾದರೂ, ದೇವಸಂದೇಶ ಹೊತ್ತ ಹಲವು ಪ್ರವಾದಿಗಳು ಬಂದಿರಬಹುದಾದರೂ ಅವೆಲ್ಲ ನರ್ಸರಿ- ಎಲ್ಕೆಜಿ ಮಟ್ಟವಿದ್ದಂತೆ. ಇಸ್ಲಾಂ ಮಾತ್ರವೇ ಉಚ್ಛ ಸ್ಥಿತಿ ಹಾಗೂ ಮಹಮದ್ ಪೈಗಂಬರರ ದೇವಸಂದೇಶವೊಂದೇ ಮಾನ್ಯ’ ಎಂಬುದು ಜಾಕಿರ್ ನಿಲುವು.

ಉಗ್ರರು ಕೈಯಲ್ಲಿ ಬಂದೂಕು ಹಿಡಿದು ಈ ಮಾತು ಹೇಳುತ್ತಾರೆ ಹಾಗೂ ಜಾಕಿರ್ ಕೈಯಲ್ಲಿ ಕುರಾನ್ ಇರುತ್ತದೆ ಎಂಬುದನ್ನು ಬಿಟ್ಟರೆ, ಉಂಟುಮಾಡುವ ಪರಿಣಾಮ ಒಂದೇ. ಬಹುಸಂಸ್ಕೃತಿ, ಸೆಕ್ಯುಲರಿಸಂ, ಎಲ್ಲರನ್ನೂ ಒಳಗೊಳ್ಳುವಿಕೆ ಇವೆಲ್ಲವುಗಳ ನಿರಾಕರಣೆ. ಅಮಾನುಷತೆ ಪ್ರಾರಂಭವಾಗುವುದು ಅಲ್ಲಿಂದಲೇ.

  • ಹಿಂಸೆ ವಿನಾಕಾರಣ ಸುದೀರ್ಘಾವಧಿಗೆ ಮುಂದುವರಿಯುವುದಿಲ್ಲ. ಸುಮ್ಮನೇ ಜನರನ್ನು ಕೊಲ್ಲುತ್ತ ಹೋಗುವವನಿಗೂ ಒಂದು ಹಂತದಲ್ಲಿ ಬೇಸರ ಬಂದೀತೇನೋ? ಯಾಕಾಗಿ ಹೀಗೆ ಮಾಡುತ್ತಿದ್ದೇನೆ ಎಂದು ಪ್ರಶ್ನಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವಾಗ ಈ ಹಿಂಸೆಗೆ ಸೈದ್ಧಾಂತಿಕ ಮೆರುಗೊಂದನ್ನು ಕೊಡಲಾಗುತ್ತದೋ ಆಗ ಅದೊಂದು ಮುಗಿಯದ ಆಕರ್ಷಣೆ ಹಾಗೂ ಮಾಡಲೇಬೇಕಾದ ಮಹತ್ಕಾರ್ಯವಾಗುತ್ತದೆ. ತಮ್ಮ ಮಾತಿನ ಬುದ್ಧಿವಂತಿಕೆ ಉಪಯೋಗಿಸಿಕೊಂಡು ‘ಸಂದೇಹದ ಲಾಭ’ ಪರಿಕಲ್ಪನೆ ಕಟ್ಟಿಕೊಡುತ್ತಿರುವ ಜಾಕಿರ್ ನಾಯಕ್ ಉಪನ್ಯಾಸಗಳಿಂದ, ಸುಶಿಕ್ಷಿತನಾದವನೂ ಸ್ಫೂರ್ತಿ ಪಡೆದು ಉಗ್ರನಾದರೆ ಅದರಲ್ಲಿ ಅಚ್ಚರಿ ಏನಿಲ್ಲ. ಏಕೆಂದರೆ, ಆತ್ಮಹತ್ಯೆ ಬಾಂಬರ್ ಗಳನ್ನೂ ಸೌಮ್ಯವಾಗಿ ಸಮರ್ಥಿಸಿಕೊಳ್ಳುವ ಜಾಣ್ಮೆ ಜಾಕಿರ್ ಮಾತುಗಳಲ್ಲಿದೆ. ಆತ್ಮಹತ್ಯೆ ಇಸ್ಲಾಮಿಗೆ ಸಮ್ಮತವೇ ಎಂಬ ಯುವಕನ ಪ್ರಶ್ನೆಗೆ ಜಾಕಿರ್ ಉತ್ತರಿಸಿರೋದು- ‘ವೈಯಕ್ತಿಕ ಆತ್ಮಹತ್ಯೆಗಳೆಲ್ಲ ಹರಾಮ್ ಎಂಬುದರಲ್ಲಿ ಸಂಶಯ ಬೇಡ. ಆದರೆ ಉದ್ದೇಶವೊಂದಕ್ಕೆ ಜೀವ ತೆತ್ತುಕೊಳ್ಳುವುದು ಹರಾಮ್ ಆಗುವುದಿಲ್ಲ. ಏಕೆಂದರೆ ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಾಯದೇ ಹೋರಾಡುವುದು ಅಶಕ್ಯವಾದ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮೂಲಕ ಶತ್ರು ಪಾಳೆಯಕ್ಕೆ ಹೆಚ್ಚಿನ ಹಾನಿ ಮಾಡುವುದು ಸಾಧ್ಯವಾದರೆ ಅದು ಇಸ್ಲಾಂ ವಿರೋಧಿ ಏನಲ್ಲ. ಇಸ್ಲಾಂ ವಿದ್ವಾಂಸರನ್ನು ಕೇಳಿ ಈ ವಿಚಾರದಲ್ಲಿ ಮುನ್ನಡೆಯಬೇಕು..’

ಹೀಗನ್ನುವ ಜಾಕಿರ್ ಇದಕ್ಕೆ ಪ್ರತಿವಾದ ಸಲ್ಲಿಸಿದ್ದ ಇನ್ನೊಬ್ಬ ಇಸ್ಲಾಂ ಉಪನ್ಯಾಸಕಾರರ ಪ್ರಶ್ನೆಯನ್ನೂ ಎದುರಿಸಿದ್ದಾಗಿ ಹೇಳಿಕೊಳ್ಳುತ್ತ ಪ್ರವಾದಿ ಉದಾಹರಣೆ ಮೂಲಕ ಉದ್ದೀಪಿಸುವುದನ್ನು ಗಮನಿಸಬೇಕು. ‘ವೈರಿ ಗುಂಡು ಹೊಡೆಯುತ್ತಿದ್ದಾನೆ. ಎದುರಿಗೆ ಪ್ರವಾದಿ ಇದ್ದಾಗ ನೀವು ಮಧ್ಯೆ ಹೋಗಿ ಗುಂಡಿಗೆ ಎದೆ ಒಡ್ಡುತ್ತೀರೋ ಇಲ್ಲವೋ’ ಅಂತ ಕೇಳಿದ್ದಕ್ಕೆ ಆ ವಿದ್ವಾಂಸರು ‘ಪ್ರವಾದಿ ವಿಷಯದಲ್ಲಾದರೆ ಮಾಡುತ್ತೇನೆ’ ಅಂದರಂತೆ. ಇದೂ ಆತ್ಮಹತ್ಯೆಯೇ ಅಲ್ಲವೇ ಎಂಬ ಜಾಕಿರ್ ವಾದಕ್ಕೆ ಆ ವಿದ್ವಾಂಸರ ಪ್ರತಿವಾದ- ‘ಆತ್ಮಹತ್ಯೆ ಹೇಗಾಗುತ್ತದೆ, ಗುಂಡು ಬಂದಿದ್ದು ವೈರಿಯಿಂದಲ್ಲವೇ..’ ಇಷ್ಟಕ್ಕೇ ನಿಲ್ಲದೇ ಜಾಕಿರ್ ಊಹೆಯ ಪ್ರಚೋದನೆ ಮುಂದುವರಿಸುತ್ತ ಮುಸ್ಲಿಂ ಕೇಳುಗರನ್ನು ತೀವ್ರವಾದಿಗಳಾಗಿಸುವ ಪರಿ ಹೀಗಿದೆ- ‘ವೈರಿ ಮತ್ತು ಪ್ರವಾದಿ ಮಧ್ಯೆ ತೂರಿ, ವೈರಿ ಕೈಲಿದ್ದ ಪಿಸ್ತೂಲು ಕಸಿಯುವುದಕ್ಕೆ ಪ್ರಯತ್ನಿಸಿ, ಪ್ರವಾದಿಗೆ ಬೀಳಬೇಕಾದ ಗುಂಡನ್ನು ನೀವೇ ಟ್ರಿಗರ್ ಅದುಮಿ ಹೊಡೆದುಕೊಂಡರೆ ಅದು ಆತ್ಮಹತ್ಯೆ ಅಲ್ಲವೇ? ಆಗದನ್ನು ತಪ್ಪೆನ್ನುವುದಕ್ಕೆ ಹೇಗೆ ಸಾಧ್ಯ?’

  • ಧರ್ಮದ ‘ಎಕ್ಸ್’ಕ್ಲೂಸಿವ್’ ತನಗಳನ್ನೇ ಜಾಕಿರ್ ಅಂಥ ವ್ಯಗ್ರತೆಗಳೇನನ್ನೂ ಪ್ರದರ್ಶಿಸದೇ ತನ್ನ ಲಾಭಕ್ಕೆ ಬೇಕಾಗುವ ತರ್ಕ- ಹೋಲಿಕೆಗಳ ಮೂಲಕ ಹೇಳುತ್ತಿರುವುದನ್ನು ಗಮನಿಸಿದರೆ ಸಾಕು. ಉಗ್ರರು, ಮಾಡರೇಟ್ ಗಳೆಂದು ಕರೆದುಕೊಳ್ಳುವ ಉದಾರವಾದಿಗಳು ಕೊನೆಗೂ ಪ್ರತಿಪಾದಿಸುತ್ತಿರುವುದು ಒಂದೇ ಸೂತ್ರವನ್ನು ಎಂಬುದು ಮನದಟ್ಟಾಗುತ್ತದೆ. ಮೆಕ್ಕಾ- ಮದೀನಾಗಳಿಗೆ ಮುಸ್ಲಿಮೇತರರಿಗೆ ಪ್ರವೇಶವಿಲ್ಲವೇಕೆ ಎಂಬ ಪ್ರಶ್ನೆಗೆ, ‘ಸಿಂಗಾಪುರಕ್ಕೆ ಹೋಗಬೇಕಿದ್ದರೆ ಅರ್ಜಿಯಲ್ಲಿ, ಮಾದಕ ವಸ್ತು ಅಪರಾಧಕ್ಕೆ ಮರಣದಂಡನೆ ಒಪ್ಪಿಕೊಳ್ಳುತ್ತೇನೆ ಎಂದು ಬರೆದುಕೊಡಬೇಕು. ಇಲ್ಲಿಯೂ ಹಾಗೆ. ಅಲ್ಲಾಹುವನ್ನು ಬಿಟ್ಟರೆ ಬೇರೆ ದೇವರಿಲ್ಲ ಎನ್ನುವವರಿಗೆ ಮಾತ್ರ ಪ್ರವೇಶ ಸಿಗುತ್ತದೆ’ ಎಂಬ ವಾದ.

ಷರತ್ತುಗಳು ಎಲ್ಲ ಕಡೆಯೂ ಇರುತ್ತವೆ. ವ್ಯಾಟಿಕನ್ ಗೆ ಹೋಗಬೇಕಾದರೆ ವಸ್ತ್ರ ಸಂಹಿತೆ ಪಾಲಿಸಬೇಕು. ಆದರೆ ಬಹುತ್ವ, ಉದಾರತೆ ಬಿಡದ ಹೊರತು ಪ್ರವೇಶವಿಲ್ಲ ಎಂಬ ನಿಯಮಕ್ಕೆ ಉಳಿದವನ್ನು ಹೋಲಿಸಲಾಗುವುದಿಲ್ಲ. ಇಂಥ ‘ಎಕ್ಸ್’ಕ್ಲೂಸಿವ್’ ಪ್ರತಿಪಾದನೆಯನ್ನು ಯಾವ ಧರ್ಮದಲ್ಲಿ ಯಾರು ಮಾಡಿದರೂ ಅದು ತೀವ್ರವಾದವೇ.

  •  ‘ಉಗ್ರವಾದಕ್ಕೇ ಆತಂಕ ಒಡ್ಡುವ ಟೆರರಿಸ್ಟ್ ಒಸಾಮಾ ಬಿನ್ ಲಾಡೆನ್ ಎಂದಾದರೆ, ದೊಡ್ಡ ಉಗ್ರವಾದಿಯಾಗಿರುವ ಅಮೆರಿಕ ವಿರುದ್ಧ ಹೋರಾಡುವ ಆತನ ಪರ ಇದ್ದೇನೆ. ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಮುಸ್ಲಿಮರೆಲ್ಲರೂ ಉಗ್ರವಾದಿಗಳಾಗಬೇಕು’ ಎಂಬ ಜಾಕಿರ್ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ಅನುಯಾಯಿಗಳ ಗೋಳು. ಇದರಲ್ಲಿ ತಪ್ಪಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಏನಿದೆ? ಕಮ್ಯುನಿಸ್ಟರು, ಇಸ್ಲಾಂ ತೀವ್ರವಾದಿಗಳು ಮಂಡಿಸುವ ಈ ‘ಶೋಷಣೆ- ಬಡತನ’ದ ವಾದಕ್ಕೆ ಕಟ್ಟುಬೀಳುವುದಾದರೆ, ಶತಮಾನಗಳ ಕಾಲ ಭಾರತದಲ್ಲಿ ಮೊಘಲರ ಆಳ್ವಿಕೆ, ಅವರ ಹಿಂದೂ ತಲೆಗಂದಾಯ, ದೇಗುಲಗಳ ನಾಶವನ್ನೆಲ್ಲ ಪ್ರಶ್ನಿಸಿ ಹಿಂದುಗಳು ಈಗಿನ ಮುಸ್ಲಿಮರ ಬಗ್ಗೆ ಅನವರತ ಕ್ರೋಧ ವ್ಯಕ್ತಪಡಿಸಬೇಕಲ್ಲವೇ? ಸೌದಿ ಅರೇಬಿಯಾದಲ್ಲಿ ಇತರ ಧರ್ಮಗಳಿಗೆ ಸಮಾನ ಅವಕಾಶವಿಲ್ಲವೇಕೆ ಎಂದು ಇಲ್ಲಿನ ಮುಸ್ಲಿಮರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಉದಾರವಾದಿ, ಸೆಕ್ಯುಲರ್ ರಾಜಕಾರಣ ಒಪ್ಪುತ್ತದೆಯೇ? ಹಾಗಾದರೆ, ಅಮೆರಿಕವು ಇರಾಕಿನ ಮೇಲೆ ದಾಳಿ ಮಾಡಿದ್ದಕ್ಕೆ ಬಾಂಗ್ಲಾದೇಶದಲ್ಲಿ ಬಾಂಬ್ ಬಿತ್ತು ಎಂಬ ದರಿದ್ರ ತರ್ಕಕ್ಕೇಕೆ ಕೊನೆಯಿಲ್ಲ?
  • ಸುಶಿಕ್ಷಿತ, ಬುದ್ಧಿವಂತ, ಒಳ್ಳೆ ಧಿರಿಸು ತೊಟ್ಟವ ಎಂಬ ಯಾವ ಕಾರಣಗಳಿಂದಲೂ ‘ಮಾಡರೇಟ್’ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಷ್ಟಕ್ಕೂ ಜಗತ್ತಿಗೆ ಅಪಾಯವಿರುವುದು ದಡ್ಡರಿಂದಲ್ಲ, ಅತಿ ಬುದ್ಧಿವಂತರಿಂದಲೇ. ಏಕೆಂದರೆ ಅವರು ಯಾವ ಕೃತ್ಯಕ್ಕೆ ಬೇಕಾದರೂ ಸಮರ್ಥನೆ ಕೊಡಬಲ್ಲರು. ಈ ಪೊಳ್ಳುತನವನ್ನು ಕೊನೆಯಲ್ಲಿ ತಮಾಷೆ ನೋಟದೊಂದಿಗೆ ಮುಗಿಸುವುದಾದರೆ, ನರ್ಸರಿ ಪದ್ಯವನ್ನು ಸಹ ಧರ್ಮ ವಿರೋಧಿ ಅಂತ ಬಿಂಬಿಸಬಹುದು, ಮಾತಿನ ಜಾಣ್ಮೆ ಇದ್ದರೆ… ಹಾಗಂತ ಜಾಕಿರ್ ನಾಯಕ್ ಮಾತುಗಳನ್ನು ವಿಡಂಬಿಸಿರುವ ಈ ವಿಡಿಯೋವನ್ನೂ ನೋಡಿಬಿಡಿ.

Leave a Reply