ಹೈಕೋರ್ಟ್ ಚೀಫ್ ಜಸ್ಟೀಸ್ ಎಸ್.ಕೆ. ಮುಖರ್ಜಿ ಅವರ ಸತ್ಯಸಂಧತೆ, ಅದು ಚಿಮ್ಮಿಸಿರುವ ಪ್ರಶ್ನೆಗಳ ಒರತೆ

ಕಡತ ಚಿತ್ರ

ಡಿಜಿಟಲ್ ಕನ್ನಡ ವಿಶೇಷ:

ಸತ್ಯ ಹೇಳಿದ್ರು ಕೂಡ ಸಮಯ, ಸಂದರ್ಭ ಪರಿಸ್ಥಿತೀನಾ ಹೆಂಗೆ ಮಾಡಿಸಿಬಿಡುತ್ತೇ ನೋಡಿ.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸುಬ್ರತೋ ಕಮಲ್ ಮುಖರ್ಜಿ ಅವರು ಸತ್ಯಸಂಧರಾಗಲು ಹೊರಟಿದ್ದೇನೋ ಸತ್ಯ. ಆದರೆ ಕೈ ಕೊಟ್ಟ ಟೈಮಿಂಗ್ ಅವರ ಸತ್ಯಕ್ಕೂ ಪೂರ್ತಿ ಕಿಮ್ಮತ್ತು ಕೊಟ್ಟಿಲ್ಲ.

ಮೂರು ದಿನಗಳ ಹಿಂದೆ ತಮ್ಮ ಮನೆಗೆ ಬಂಗಾಳಿ ಭಾಷಿಕನೊಬ್ಬ ಬಂದು ಭೂವಿವಾದ ಸಂಬಂಧ ತಮ್ಮ ಪರ ತೀರ್ಪು ಬರೆದರೆ ಲಂಚ ಕೊಡ್ತೀನಿ ಅಂತಾ ಆಮಿಷ ಒಡ್ಡಿದ್ದ ಅಂತಾ ಚೀಫ್ ಜಸ್ಟೀಸ್ ಎಸ್.ಕೆ. ಮುಖರ್ಜಿ ಅವರು ಓಪನ್ ಕೋರ್ಟ್ ನಲ್ಲಿ ಹೇಳಿದ್ದೇನೋ ಸರಿ. ಅದರೆ ಹಾಗೆ ತಮ್ಮ ಮನೆಗೆ ಬಂದು ಲಂಚದ ದೀಪ ಹೊತ್ತಿಸಿದ ವ್ಯಕ್ತಿಯನ್ನು ಹಾಗೇ ಹೋಗಲು ಅವರು ಬಿಟ್ಟಿದ್ದೇಕೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಯೇ ಅವರ ಸತ್ಯಸಂಧತೆಗೆ ಸವಾಲು ಒಡ್ಡಿರುವುದು.

ಕೋರ್ಟ್ ನಲ್ಲಿ ಜಡ್ಜ್ ಮುಂದೆ ಯಾರಾದರೂ ಕಾಲು ಅಲ್ಲಾಡಿಸಿದರೂ, ಯಾರದ್ದಾದರೂ ಮೊಬೈಲ್ ರಿಂಗಾದರೂ, ಜೋರಾಗಿ ಮಾತಾಡಿದರೂ ಸ್ಪಾಟ್ ಶಿಕ್ಷೆ ಎಂಬಂತೆ ಇಡೀ ದಿನ ಅವರನ್ನೂ ಅಲ್ಲೇ ಕೂರಿಸಿ ಕಳುಹಿಸಿರುವ ನಿದರ್ಶನಗಳು ಇವೆ. ಹೀಗಿರುವಾಗ ತಮ್ಮ ಮನೆಗೇ ಬಂದು ಲಂಚ ಕೊಡ್ತೀನಿ ಅಂತಂದ ವ್ಯಕ್ತಿ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಹೃದಯ ವೈಶಾಲ್ಯ ಮೆರೆದಿರುವುದು ಚರ್ಚೆಗೆ ಆಸ್ಪದ ಕೊಟ್ಟಿದೆ.

ನನ್ನ ಮನೆಗೆ ಯಾರು ಬೇಕಾದರೂ ಬರಬಹುದು, ಆದರೆ ಇಂಥ ಕಾರಣಗಳಿಗೆ ಅಲ್ಲ ಎಂದೂ ಅವರು ಹೇಳಿದ್ದಾರೆ. ಸಾಧಾರಣವಾಗಿ ಗುರುತು-ಪರಿಚಯ ಇಲ್ಲದವರು, ನಿರ್ದಿಷ್ಟ ಕಾರಣ ಹೇಳದ ಆಗಂತುಕರು  ಪೊಲೀಸ್ ಭದ್ರತೆಯನ್ನು ದಾಟಿಕೊಂಡು ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಇರುತ್ತದೆ. ಸಿಟಿ ಮಾರುಕಟ್ಟೆಗೆ ಹೋದ ಹಾಗೆ ಅವರ ಮನೆಯೊಳಗೆ ನುಸುಳಲು ಸಾಧ್ಯವಿಲ್ಲ. ಇನ್ನು ಎರಡನೇ ವಿಚಾರ ಏನೆಂದರೆ ಲಂಚದ ಆಮಿಷವೊಡ್ಡಿದ ವ್ಯಕ್ತಿಯನ್ನು ಇದೇ ಪೊಲೀಸರನ್ನು ಕರೆಸಿ, ಬಂಧಿಸಲು ಸೂಚನೆ ಕೊಡಬಹುದಿತ್ತು. ಇಲ್ಲವೇ ಆತನನ್ನು ಅಲ್ಲಿಯೇ ಕೂರಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟು ಅರೆಸ್ಟ್ ಮಾಡಲು ಹೇಳಬಹುದಿತ್ತು. ಏಕೆಂದರೆ ಲಂಚ ಪಡೆಯುವುದು ಎಷ್ಟು ತಪ್ಪೋ ಅದೇ ರೀತಿ ಲಂಚ ಕೊಡುವುದು, ಆಮಿಷವೊಡ್ಡುವುದೂ ಕೂಡ ಅಂತದೇ ತಪ್ಪು ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಇದು ತಪ್ಪು ಎಂದು ಗೊತ್ತಿಲ್ಲದಿದ್ದರೆ ಮುಖ್ಯ ನ್ಯಾಯಮೂರ್ತಿಗಳು ಓಪನ್ ಕೋರ್ಟ್ ನಲ್ಲಿ ಈ ವಿಚಾರ ಬಹಿರಂಗಪಡಿಸಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿವ ಪ್ರಶ್ನೆಯೇ ಬರುತ್ತಿರಲಿಲ್ಲ. ತಪ್ಪು ಎಂದು ಗೊತ್ತಿದ್ದರಿಂದಲೇ ಅವರು ವಿಷಯ ಬಹಿರಂಗಪಡಿಸಿದ್ದು. ಆದರೆ ಲಂಚ ಆರೋಪಿಯನ್ನು ಏಕೆ ಅರೆಸ್ಟ್ ಮಾಡಿಸಲಿಲ್ಲ, ಪೊಲೀಸರಿಗೆ ಏಕೆ ದೂರು ಕೊಡಲಿಲ್ಲ ಎನ್ನುವುದು ಸತ್ಯಸಂಧತೆ ಹಿಂದಿನ ಸಮಯ ಪರಿಪಾಲನೆಯನ್ನೇ ಪ್ರಶ್ನಿಸುತ್ತಿದೆ. ಪಾಪ, ನ್ಯಾಯಮೂರ್ತಿಗಳಿಗೆ ಆರೋಪಿ ವಾಪಸ್ಸು ಹೋದ ನಂತರ ಆತ ಮಾಡಿದ್ದು ತಪ್ಪು ಅಂತಾ ಗೊತ್ತಾಯ್ತೋ, ಪ್ರಕರಣದ ವಿಚಾರಣೆಯಿದ್ದ ದಿನ ಮನವರಿಕೆಯಾಯ್ತೋ ಗೊತ್ತಿಲ್ಲ.

ನ್ಯಾಯವಾದಿಗಳು, ನ್ಯಾಯಪರಿಪಾಲಕರ ವಲಯದಲ್ಲಿ ಕಾಡುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ ಯಾವುದು ಎಲ್ಲಿ ಸಿಗುತ್ತದೆ ಅಂತ ಅನಿಸುತ್ತದೋ ಅಲ್ಲಿಗೆ ಜನ ಹೋಗುತ್ತಾರೆ. ಉದಾಹರಣೆಗೆ ಹಣ್ಣು ಬೇಕಾದರೆ ಹಣ್ಣಿನ ಅಂಗಡಿಗೆ, ಹೂವು ಬೇಕಾದರೆ ಹೂವಿನ ಅಂಗಡಿಗೆ, ಬಟ್ಟೆ ಬೇಕಾದರೆ ಬಟ್ಟೆ ಅಂಗಡಿಗೆ ಹೋಗುತ್ತಾರೆ. ಹಾಗಾದರೆ ಈ ಲಂಚ ಆರೋಪಿಯನ್ನು ಅದ್ಯಾವ ವಿಶ್ವಾಸ ಮುಖ್ಯ ನ್ಯಾಯಮೂರ್ತಿಗಳ ಒಳಮನೆವರೆಗೂ ಕರೆದೊಯ್ದಿತು ಎನ್ನುವುದು. ಯಾರೋ ತಪ್ಪು ಅಡ್ರೆಸ್ ಹೇಳಿ ಕಳುಹಿಸಿರಬಹುದು ಅಂತಾ ಇಟ್ಟುಕೊಂಡರೂ, ಯಾರಾದರೂ ತಪ್ಪು ಅಡ್ರೆಸ್ ಹೇಳಿದರೂ ಅಂತಾ ಕಳ್ಳನೊಬ್ಬ ಪೊಲೀಸ್ ಠಾಣೆಗೆ ಹೋಗುವ ಧೈರ್ಯ ಮಾಡುತ್ತಾನೆಯೇ? ಎನ್ನುವ ಪ್ರಶ್ನೆಯೂ ಇಲ್ಲಿ ಬರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳು ಆತನಿಗೆ ಅಂತದೊಂದು ಹುಂಬ ಧೈರ್ಯ ತಂದುಕೊಟ್ಟಿತೇ ಗೊತ್ತಿಲ್ಲ. ಆದರೆ ತಪ್ಪು ಮಾಡಿದವನು, ಅದೂ ಮುಖ್ಯ ನ್ಯಾಯಮೂರ್ತಿಗಳ ಸಮಕ್ಷಮದಲ್ಲೇ ತಪ್ಪು ಮಾಡಿ ಆರಾಮವಾಗಿ ಹೊರಗೆ ಹೋದ ಎಂಬುದೇ ಪರಿಸ್ಥಿತಿಯ ಅಣಕದಂತೆ ಕಾಣುತ್ತಿದೆ.

ಪ್ರಕರಣದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇನ್ನಷ್ಟು ಪ್ರಶ್ನೆಗಳು ಉದ್ಭವವಾಗುತ್ತವೆ. ಉಮ್ರಾಹ್ ಡೆವಲಪರ್ಸ್ ಸಂಸ್ಥೆ 2008 ರಲ್ಲಿ ಬಹಿರಂಗ ಹರಾಜಿನಲ್ಲಿ 2.1 ಕೋಟಿ ರುಪಾಯಿ ಕೊಟ್ಟು ಖರೀದಿಸಿದ್ದ 1.2 ಎಕರೆ ಭೂಮಿಯನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿತು. ಜಮೀನು ಮತ್ತು ಕಟ್ಟಿದ್ದ ದುಡ್ಡು ಎರಡೂ ಸಿಗದಿದ್ದಾಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪರ್ಯಾಯ ಜಮೀನು ಕೊಡಬೇಕು ಎಂಬ ಏಕಸದಸ್ಯ ಪೀಠ ಆದೇಶವನ್ನು ಕಂದಾಯ ಇಲಾಖೆ ಪ್ರಶ್ನಿಸಿದಾಗ ವಿಭಾಗೀಯ ಪೀಠ ಪರ್ಯಾಯ ಜಮೀನು ಬದಲು ಕಟ್ಟಿರುವ ಹಣವನ್ನು ಬಡ್ಡಿಸಮೇತ ವಾಪಸ್ಸು ಕೊಡಬೇಕು ಅಂತ ಬಿಡಿಎಗೆ ಆದೇಶಿಸಿತು. ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಂತರವಷ್ಟೇ ಉಮ್ರಾಹ್ ಡೆವಲಪರ್ಸ್ ಗೆ ಬಿಡಿಎ 2.1 ಕೋಟಿ ರುಪಾಯಿ ವಾಪಸ್ಸು ಕೊಟ್ಟಿತು ಆದರೆ ಬಡ್ಡಿ ಕೊಡಲಿಲ್ಲ. ಈ ದುಡ್ಡು ತೆಗೆದಿಟ್ಟುಕೊಂಡ ಡೆವಲಪರ್ಸ್ ಬಡ್ಡಿ ಹಣ ಕೇಳುವ ಬದಲು ಮತ್ತೊಂದು ಪುನರ್ ಅವಲೋಕನ ಅರ್ಜಿ ಸಲ್ಲಿಸಿ ಮೊದಲಿಗೆ ಏಕಸದಸ್ಯ ಪೀಠ ನೀಡಿದ್ದ ಆದೇಶದಂತೆ ಪರ್ಯಾಯ ಜಮೀನು ನೀಡಲು ಬಿಡಿಎಗೆ ಆದೇಶ ನೀಡಬೇಕು ಎಂದು ಕೋರಿತ್ತು. ಆ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯುತ್ತಿರುವಾಗ ಈ ಲಂಚ ಆಮಿಷ ಘಟನೆ ನಡೆದು ಹೋಗಿದೆ.

ಉಮ್ರಾಹ್ ಡೆವಲಪರ್ಸ್ ಬಿಡಿಎಯಿಂದ ಮೂಲ ಹಣ 2.1 ಕೋಟಿ ವಾಪಸ್ಸು ಪಡೆದ ನಂತರವೂ ಹತ್ತಾರು ಕೋಟಿ ರುಪಾಯಿ ಬೆಲೆ ಬಾಳಬಹುದಾದ ಪರ್ಯಾಯ ಜಮೀನಿಗೆ ಅರ್ಜಿ ಸಲ್ಲಿಸಲು ನೀಡಿದ ಪ್ರೇರಣೆಯಾದರೂ ಏನು? ತಮ್ಮ ಪರ ತೀರ್ಪು ಬರೆದರೆ ಲಂಚ ಕೊಡುತ್ತೇನೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೇ ಹೇಳುವಷ್ಟು ಧೈರ್ಯ ಬಂತಾದರೂ ಎಲ್ಲಿಂದ? ಅದ್ಯಾವ ಸಂಪರ್ಕ ಆತನನ್ನು ಚೀಫ್ ಜಸ್ಟೀಸ್ ಮನೆಗೆ ಕೊಂಡೊಯ್ದಿತು? ಬಂಗಾಳಿ ಭಾಷೆ ಬಾಂಧವ್ಯ ಮಾತ್ರವೇ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಹೋಗಲು ಆತನ ಕಾಲುಗಳಿಗೆ ಶಕ್ತಿ ತುಂಬಿದೆಯೇ? ಆ ಭಾಷಾ ಬಾಂಧವ್ಯವೇ ಆತನನ್ನು ಲಂಚದ ಆಮಿಷವೊಡ್ಡಿದ ನಂತರವೂ ಸರಾಗವಾಗಿ ಹೊರಗೆ ಹೋಗಲು ಬಿಟ್ಟಿದೆಯೇ ಅಥವಾ ಇದಕ್ಕೂ ಮಿಗಿಲಾದ ಬೇರೆ ವಿಷಯಗಳು ಇವೆಯೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

2 COMMENTS

  1. CJ his gives wrongful statement for public because of common person will not allow for the CJ house but who is gives to permission this Unknown person ? law and order not good now days .

Leave a Reply