ಗೌಡರು ಉಸಿರು ಬಿಟ್ಕೊಂಡ್ ಪಕ್ಷ ಕಟ್ತಿದ್ರೆ, ಕುಮಾರಣ್ಣಾ ಫಾರಿನ್ ಟೂರ್ ಮುಗಿಸ್ಕೊಂಡ್ ಊರಿಗೆ ಬಂದವ್ರೆ!

ಡಿಜಿಟಲ್ ಕನ್ನಡ ವಿಶೇಷ:

ಕತೆ ನೋಡಿ ಹೆಂಗಿದೆ ಅಂತಾ..?!

ಮಾಜಿ ಪ್ರಧಾನಿ ದೇವೇಗೌಡರು ಎಂಬತ್ನಾಲ್ಕರ ಇಳಿವಯಸ್ಸಿನಲ್ಲಿ ಏದುಸಿರು ಬಿಟ್ಟುಕೊಂಡು ಊರೂರು ಸುತ್ತಿ ಪಕ್ಷ ಕಟ್ಟುತ್ತಿದ್ದರೆ, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಅವರ ಪುತ್ರ ಕುಮಾರಸ್ವಾಮಿ ಸುಮಾರು ಒಂದು ತಿಂಗಳ ವಿದೇಶ ಪ್ರವಾಸ ಮುಗಿಸಿಕೊಂಡು ಶನಿವಾರ ಬೆಳಗ್ಗೆ ಊರಿಗೆ ಬಂದಿದ್ದಾರೆ. ಅವರು ಮಗ ನಿಖಿಲ್ ಗೌಡ ನಾಯಕ ನಟನಾಗಿರುವ ‘ಜಾಗ್ವಾರ್’ ಚಲನಚಿತ್ರದ ಷೂಟಿಂಗ್ ಗೆಂದು ಬಲ್ಗೇರಿಯಾಕ್ಕೆ ತೆರಳಿದ್ದರು.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಫಾರೂಕ್ ಸೋಲುಂಡ ದಿನ ಅಂದರೆ ಜೂನ್ 11 ರ ರಾತ್ರಿ ಬಲ್ಗೇರಿಯಾ ವಿಮಾನ ಹತ್ತಿದ ಕುಮಾರಸ್ವಾಮಿ ಇವತ್ತಿನವರೆಗೂ ಇತ್ತ ತಲೆ ಹಾಕಿರಲಿಲ್ಲ. ತಮ್ಮದೇ ಪಕ್ಷ ಜೆಡಿಎಸ್, ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯಲ್ಲಿ ಎಷ್ಟೆಲ್ಲ ನಡೆದ ಬಿರುಸಿನ ರಾಜಕೀಯ ಚಟುವಟಿಕೆಗಳು ಅವರನ್ನು ಮಿಸುಕಾಡಿಸಲಿಲ್ಲ. ಬೆಂಗಳೂರಿಗೆ ಕರೆತರಲಿಲ್ಲ.

ಇರಲಿ, ಅವರು ವಿದೇಶಕ್ಕೆ ಹಾರುತ್ತಿದ್ದಂತೆ ಜೆಡಿಎಸ್ಸಿನ ಎಂಟು ಶಾಸಕರನ್ನು ಅಡ್ಡಮತದಾನ ಆರೋಪದ ಮೇಲೆ ಮೇಲೆ ಪಕ್ಷದಿಂದ ಸಸ್ಪೆಂಡ್ ಮಾಡಲಾಯಿತು. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಗೌಡರೇ ಈ ಕೆಲಸ ಮಾಡಬೇಕಾಯಿತು. ಇದಾದ ನಂತರ ಭಿನ್ನಮತೀಯ ಶಾಸಕರು ಮತ್ತು ದೇವೇಗೌಡರ ನಡುವೆ ಜಗಳ್ಬಂದಿ ಕೂಡ ನಡೆದು ಹೋಯಿತು. ರೇವಣ್ಣ ಭಿನ್ನರನ್ನು ಶನಿಗಳು ಅಂತ ಕರೆದು ಸಮಾಧಾನ ಮಾಡಿಕೊಂಡರು. ಅದರ ಬೆನ್ನಲ್ಲೇ ಗೌಡರು ಬೆಳಗಾವಿ, ತುಮಕೂರು ಪ್ರವಾಸ ಮಾಡಿದ್ದೇ ಅಲ್ಲದೇ, ಮಂಡ್ಯ ಸಮಾವೇಶದಲ್ಲಿ ಭಿನ್ನಮತೀಯರಿಗೆ ಟಾಂಗ್ ಕೂಡ ಕೊಟ್ಟು ಬಂದರು. ವಯಸ್ಸು ಮತ್ತು ಆರೋಗ್ಯ ಸಹಕರಿಸದಿದ್ದರೂ ಛಲ ಎಂಬುದು ಅವರನ್ನು ಸಂಘಟನೆಯಲ್ಲಿ ಸಕ್ರಿಯರನ್ನಾಗಿಸಿದೆ. ಆದರೆ ಎರಡೂ ಇರುವ ಕುಮಾರಸ್ವಾಮಿ ತಂದೆಯ ಛಲ ಮತ್ತು ಶ್ರಮ ಎರಡಕ್ಕೂ ವಿಮುಖರಾಗಿದ್ದಾರೆ.

ಪುತ್ರನ ಚಿತ್ರಕ್ಕೆ ಕುಮಾರಸ್ವಾಮಿ ನಿರ್ಮಾಪಕರೇ ಹೊರತು ನಿರ್ದೇಶಕರೇನೂ ಇಲ್ಲ. ಅವರೇನು ಕತೇನೂ ಬರೆದಿಲ್ಲ, ಡೈಲಾಗೂ ಪೋಣಿಸಿಲ್ಲ. ಪುತ್ರವ್ಯಾಮೋಹ ಒಂದೆರಡು ದಿನದ ಷೂಟಿಂಗಿಗೆ ಹಿಡಿದಿಟ್ಟುಕೊಂಡರೇ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಒಂದು ತಿಂಗಳು, ಅದರಲ್ಲೂ ಇವರನ್ನು ಚಿತ್ರ ನಿರ್ಮಾಪಕನ ಸ್ಥಾನಕ್ಕೆ ಬೆಳೆಸಿರುವ ಪಕ್ಷವು ಆಂತರಿಕ ಕಚ್ಚಾಟದಿಂದ ನಲುಗುತ್ತಿರುವಾಗ ಅವರ ಆದ್ಯತೆ ಜೆಡಿಎಸ್ ಪ್ರೊಡಕ್ಷನ್ ಗೆ ಮೀಸಲಿರಬೇಕಿತ್ತು. ಅವರು ಇಲ್ಲೇ ಇದ್ದು ಪರಿಸ್ಥಿತಿಯನ್ನು ನಿರ್ವಹಿಸಬೇಕಿತ್ತು. ಭಿನ್ನಮತೀಯ ಶಾಸಕರ ಜತೆ ಸಮಾಲೋಚನೆಯೋ, ಬಂಡಾಯದಿಂದ ಪಕ್ಷಕ್ಕೆ ಆಗಿರುವ ಹಾನಿ ಸರಿಪಡಿಸುವುದೋ.. ಈ ಕೆಲಸವನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರು ಮಾಡಬೇಕಿತ್ತು. ಬಂಡಾಯ ಎದ್ದಿರುವವರೆಲ್ಲ ಅವರ ಸ್ನೇಹಿತರೇ. ಆದರೆ ಗೌಡರ ಹೆಗಲಿಗೆ ಈ ಎಲ್ಲ ಹೊಣೆ ವಹಿಸಿ ಫಾರಿನ್ನಿಗೆ ಪಲಾಯನ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅಸಮಾಧಾನವೂ ಇದೆ.

ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಳಗೊಳಗೇ ಪೋಷಿಸಿಕೊಂಡು ಬಂದಿದ್ದ ಜೆಡಿಎಸ್ ಬಂಡಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಸಮಯದಲ್ಲಿ ಸದ್ಬಳಕೆ ಮಾಡಿಕೊಂಡರು. ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ಸಿಗೆ ಮುಖಭಂಗ ಆಗುವಂತೆ ನೋಡಿಕೊಂಡರು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ ಸ್ಫೋಟಿಸಿದ ಬಂಡಾಯ ಚಟುವಟಿಕೆಗಳನ್ನು ಜೆಡಿಎಸ್ ಕೂಡ ರಾಜಕೀಯವಾಗಿ ಬಳಸಿಕೊಳ್ಳಲು ಅವಕಾಶವಿತ್ತು. ಜೆಡಿಎಸ್ ಭಿನ್ನಮತೀಯರು ಸಿದ್ದರಾಮಯ್ಯನವರ ಪಕ್ಕ ನಿಂತುಕೊಂಡಂತೆ, ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟವರ ಪಕ್ಕ ಕುಮಾರಸ್ವಾಮಿ ಕೂಡ ನಿಲ್ಲಬಹುದಿತ್ತು. ರಾಜಕೀಯದಲ್ಲಿ ಪ್ರತಿ ನಡೆಯೂ ಸಂದೇಶದಿಂದ ಕೂಡಿರುತ್ತದೆ ಎಂಬುದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದ ಅವರಿಗೆ ಗೊತ್ತಿಲ್ಲದೆ ಏನಿಲ್ಲ.  ಶ್ರೀನಿವಾಸ ಪ್ರಸಾದ್, ಅಂಬರೀಶ್, ಖಮರುಲ್ ಇಸ್ಲಾಂ ಮತ್ತಿತರರ ಜತೆ ದೇವೇಗೌಡರು ಸಂಪರ್ಕ ಸಾಧಿಸುವುದಕ್ಕೂ ಕುಮಾರಸ್ವಾಮಿ ವ್ಯವಹರಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದೇ ರೀತಿ ಯಡಿಯೂರಪ್ಪನವರ ಏಕಪಕ್ಷೀಯ ಪದಾಧಿಕಾರಿಗಳ ನೇಮಕ ಸೃಷ್ಟಿಸಿದ ಬಿಜೆಪಿ ಬಂಡಾಯವನ್ನು ರಾಜಕೀಯ ಹೇಳಿಕೆಗಳಿಗಾದರೂ ಬಳಸಿಕೊಳ್ಳಬಹುದಿತ್ತು. ಆದರೆ ಹಾಗಾಗಲು ಅವರೇ ಇಲ್ಲಿರಲಿಲ್ಲವಲ್ಲ.

ಬಲ್ಗೇರಿಯಾದಿಂದಲೇ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಸತತ ಮಾಹಿತಿ ಪಡೆಯುತ್ತಿರುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಹಾಗಂತ ಅಲ್ಲಿಂದಲೇ ರಾಜಕೀಯ ಮಾಡಲು ಆಗುತ್ತದೆಯೇ? ಪಕ್ಷ ಸಂಘಟಿಸಲು ಸಾಧ್ಯವೇ?

ವಿಧಾನಸಭೆ ಚುನಾವಣೆಗೆ ಎರಡು ವರ್ಷ ಕೂಡ ಬಾಕಿ ಉಳಿದಿಲ್ಲ. ಜನತಾ ಪರಿವಾರದ ಹಲವು ಅವತಾರಗಳ ಪೈಕಿ ಒಂದಾಗಿರುವ ಜೆಡಿಎಸ್ ಅಸ್ತಿತ್ವಕ್ಕೆ ಬಂದಾಗಿನಿಂದಲೂ ‘ಪಾಲು ರಾಜಕೀಯ’ದಲ್ಲೇ ಅಲ್ಪತೃಪ್ತಿ ಕಂಡಿದೆ. ಅದು ಕಾಂಗ್ರೆಸ್ ಜತೆಗಿರಬಹುದು, ಇಲ್ಲವೇ ಬಿಜೆಪಿ ಜತೆಗಿರಬಹುದು. ಅನ್ಯರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುತ್ತಿದ್ದರೆ ಕರ್ನಾಟಕದಲ್ಲಿ ಜೆಡಿಎಸ್ ಇದ್ದಲ್ಲೇ ಸೈಕಲ್ ತುಳಿಯುತ್ತಿದೆ. ರಾಷ್ಟ್ರೀಯ ಪಕ್ಷ ಬಿಜೆಪಿಗೂ ನಲ್ವತ್ತು ಚಿಲ್ಲರೆ ಸೀಟು, ಜೆಡಿಎಸ್ಸಿಗೂ ಹೆಚ್ಚುಕಡಿಮೆ ಅಷ್ಟೇ ಸೀಟು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರೆ ಅದು ರಾಜಕೀಯ ಎನ್ನಿಸಿಕೊಳ್ಳುತ್ತದೆಯೇ? ಅನ್ಯರ ದೌರ್ಬಲ್ಯದ ಮೇಲೆ ರಾಜಕೀಯ ಮಾಡುವುದಕ್ಕೂ ಸ್ವಂತ ಬಲದ ಮೇಲೆ ರಾಜಕೀಯ ಭವಿಷ್ಯ ಅರಸುವುದಕ್ಕೂ ವ್ಯತ್ಯಾಸವಿಲ್ಲವೇ?

ಏನೇ ಆದರೂ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ರಾಜಕೀಯ ಪರಿಭಾಷೆಗಳೇ ಬೇರೆ, ಬೇರೆ. ಗೌಡರು ಹೋರಾಟದಿಂದ ರಾಜಕೀಯ ಮಾಡುತ್ತಾರೆ, ಕುಮಾರಸ್ವಾಮಿ ವ್ಯವಹಾರಿಕವಾಗಿ ರಾಜಕೀಯ ನೋಡುತ್ತಾರೆ. ವ್ಯವಹಾರಿಕ ಧೋರಣೆಯಿಂದ ಎಂದಿಗೂ ಪಕ್ಷ ಬೆಳೆಯುವುಲ್ಲ. ದೇವೇಗೌಡರಿಗೆ ಈಗೇನೂ  ಮುಖ್ಯಮಂತ್ರಿಯೋ ಅಥವಾ ಪ್ರಧಾನಿಯೋ ಅಗಬೇಕಂತೇನೂ ಇಲ್ಲ. ಅದಕ್ಕಾಗಿ ಅವರು ಊರೂರು ಸುತ್ತಿ ಪಕ್ಷ ಕಟ್ಟುತ್ತಿಲ್ಲ. ಜೆಡಿಎಸ್ ಉಳೀಲಿ, ಬೆಳೀಲಿ ಅನ್ನೋದು ಅವರ ನೈಜ ಕಾಳಜಿ. ಮಕ್ಕಳ ಮೂಲಕ ಅಧಿಕಾರ ನೋಡೋದರಲ್ಲೇ ಅವರ ರಾಜಕೀಯ ಸಾರ್ಥಕ್ಯ ಅಡಗಿದೆ. ಹೀಗಾಗಿ ಹಗಲು-ರಾತ್ರಿ ಎನ್ನದೇ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಅತಂತ್ರ ರಾಜಕಾರಣದ ಕನಸಿನಲ್ಲೇ ಅಧಿಕಾರ ಅರಸುತ್ತಿರುವ ಕುಮಾರಸ್ವಾಮಿಯವರು ಶ್ರಮದಾನವಿಲ್ಲದೇ ಅಧಿಕಾರ ಸಿಗುತ್ತದೆಂದು ಪರಿಭಾವಿಸಿರುವುದು ಜೆಡಿಎಸ್ ದುರಂತ.

1 COMMENT

  1. ಯಾವುದನ್ನು ಅವಸರವಾಗಿ ಮಾಡಬಾರದು. ಬಿಡಿ ಸರ್. ನಿಮಗೆ ಗೊತ್ತಿಲ್ಲ ಅಂದ್ರೆ ಜನಗಳಿಗೆ ಗೊತ್ತಿದೆ ಕುಮಾರಸ್ವಾಮಿ ಶಕ್ತಿ ಏನು ಅಂತ. .ಪಕ್ಷದಲ್ಲಿ ಅಸಮಾಧನ ಭುಗಿಲೆದ್ದಾಗ ಸ್ವಲ್ಪ ಸಮಧಾನದಿಂದ ಇರಬೇಕು..ಪ್ರತಿಯೊಬ್ಬರಿಗೂ ಬೇಜಾರಾಗುತ್ತೆ ಆದೇ ರೀತಿ ಕುಮಾರಸ್ವಾಮಿಗೂ ಆಗಿದೆ. ಸ್ಪಲ್ಪ ದಿನ ಬಲ್ಗೇರಿಯದಲ್ಲಿ ಇದ್ದು ರೆಸ್ಟ್ ತೆಗೆದುಕೊಂಡಿದಕ್ಕೆ ಇನ್ನು ಹೆಚ್ಚಿನ ಶಕ್ತಿ ಬರುತ್ತೆ. ಎಲ್ಲವನ್ನು ಏಕದಮ್ ಕೈಗೊಳ್ಳಬಾರದು.. ಎತ್ತಿನ ಗಾಡಿ ಓಡಿಸಬೇಕೆಂದ್ರೆ ಹಗ್ಗವನ್ನು ಹಿಡಿದು ಬಿಟ್ಟು ಓಡಿಸಬೇಕೇ ವಿನ..ಹಗ್ಗ ಬಿಟ್ರೆ ಎತ್ತುಗಳು ಬೇಕಾಬಿಟ್ಟಿ ಹೋಡುತ್ತವೆ. ಹಗ್ಗ ಹಿಡಿದ್ರೆ ಎತ್ತಿನಗಾಡಿ ಅಲ್ಲೇ ನಿಲ್ಲುತ್ತೆ. ಅಲ್ವಾ ಸರ್ ..

Leave a Reply