ಮತ್ತೊಬ್ಬ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ್ರು, ಡೆತ್ ಮಾತಲ್ಲಿ ಸಚಿವ ಜಾರ್ಜ್, ಎ.ಎಂ. ಪ್ರಸಾದ್, ಮೊಹಂತಿ ಕಿರುಕುಳವೇ ಕಾರಣ ಅಂದ್ರು

ಡಿಜಿಟಲ್ ಕನ್ನಡ ಟೀಮ್:

ಏನ್ರೀ ಇದು ದುರಂತ..?!

ತನ್ನ ಮೇಲೆ ಎರಗಿದ್ದ ರೌಡಿಯನ್ನು ಏನೂ ಅಲ್ಲ ಎನ್ನುವಂತೆ ಗುಂಡಿಕ್ಕಿ ಪರಲೋಕಕ್ಕೆ ಅಟ್ಟಿದ್ದ ಈ ಗಂಡು ಪೊಲೀಸ್ ಗುಂಡಿಗೆ ಆತ್ಮಹತ್ಯೆಗೆ ಶರಣಾಗುತ್ತದೆ ಅಂದರೆ ವ್ಯವಸ್ಥೆ ಇನ್ನೆಷ್ಟು ಕುಲಗೆಟ್ಟು ಹೋಗಿರಬಹುದು? ಅದೆಂಥ ಹತಾಶೆ ಅವರನ್ನು ಸಾವಿನ ಮನೆಗಟ್ಟಿರಬಹುದು?

2010 ರ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಮತ್ತಿಕೆರೆಯಲ್ಲಿ ರೌಡಿ ಪ್ರಶಾಂತ್ ಅಲಿಯಾಸ್ ಪಚ್ಚಿಯನ್ನು ಗುಂಡಿಕ್ಕಿ ಕೊಂದು, ನಕಲಿ ಎನ್ಕೌಂಟರ್ ಮೊಕದ್ದಮೆಗೆ ಗುರಿಯಾಗಿದ್ದ ಆಗಿನ ಯಶವಂತಪುರ ಪೊಲೀಸ್ ಠಾಣೆಯ ಇನ್ಸಪೆಕ್ಟರ್, ಈಗ ಮಂಗಳೂರು ಡಿವೈಎಸ್ಪಿಯಾಗಿದ್ದ ಎಂ.ಕೆ. ಗಣಪತಿ ಹುಟ್ಟೂರು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಗುರುವಾರ ಮಧ್ಯಾಹ್ನದ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದಕ್ಕೆ ಮೊದಲು ಟಿವಿ ಚಾನೆಲ್ ಗಳಿಗೆ ನೀಡಿರುವ ಸಂದರ್ಶನದಲ್ಲಿ ಗಣಪತಿ ಅವರು ತೋಡಿಕೊಂಡಿರುವ ಅಸಹಾಯಕ ಅಳಲು ಎಂಥ ಗಂಡೆದೆಯನ್ನೂ ಕರಗಿಸುವಂಥದ್ದು. ಹಿಂದೆ ಗೃಹ ಖಾತೆ ಹೊಂದಿದ್ದ ಹಾಲಿ ನಗರಾಭಿವೃದ್ಧಿ ಸಚಿವ  ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಅವರ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಗಣಪತಿ ಅವರು ಅದೆಂಥ ನೋವು ಉಂಡಿದ್ದರೆಂಬುದಕ್ಕೆ ಅವರ ಪ್ರಾಣತ್ಯಾಗಕ್ಕಿಂಥ ಬೇರೆ ಸಾಕ್ಷಿ ಬೇಕಿಲ್ಲ.

ವರ್ಷದ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆಯಲ್ಲಿ ವ್ಯವಸ್ಥೆಯ ಲೋಪ ಗಹಿಗಹಿಸಿ ನಕ್ಕಿತ್ತು. ಎರಡು ವಾರದ ಹಿಂದೆ ಬಳ್ಳಾರಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ರಾಜಕೀಯ ಮತ್ತು ಪೊಲೀಸ್ ಒತ್ತಡ ತಾಳಲಾರದೇ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಅಷ್ಟರ ಮಟ್ಟಿಗೆ ಅವರು ಪುಣ್ಯವಂತರು. ಮೊನ್ನೆ ಬೆಟ್ಟಿಂಗ್ ದಂಧೆ ಹೆಣೆದ ಬಲೆಗೆ ಇನ್ನೊಬ್ಬ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ನೇಣಿಗೆ ಶರಣಾಗಿದ್ದರು. ಈಗ ಎಂ.ಕೆ. ಗಣಪತಿ!

ಮಂಗಳೂರು ವಲಯದ ಡಿಐಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಗಣಪತಿ ಮೂರು ದಿನಗಳ ರಜೆ ಮೇಲೆ  ಕೊಡಗಿಗೆ ಬಂದಿದ್ದು, ವಿನಾಯಕ ಲಾಡ್ಜನಲ್ಲಿ ಪೊಲೀಸ್ ಯೂನಿಫಾರಂನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಮೊದಲು ತೋಡಿಕೊಂಡಿರುವ ಹೃದಯ ವಿದ್ರಾವಕ ಅಳಲು ಹೀಗಿದೆ:

‘ನನ್ನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಬಂದಿದ್ದ ಪ್ರಶಾಂತ್ ಅಲಿಯಾಸ್ ಪಚ್ಚಿಯನ್ನು ಗುಂಡಿಕ್ಕಿ ಕೊಂದ ನನ್ನ ಮೇಲೆ ನಕಲಿ ಎನ್ಕೌಂಟರ್ ಪ್ರಕರಣ ದಾಖಲಿಸಲಾಯಿತು. ಅದಾದ ಮೇಲೆ ನನ್ನನ್ನು ವಿನಾಕಾರಣ ನಾನಾ ಕಡೆ ವರ್ಗಾವಣೆ ಮಾಡಲಾಯಿತು. ಒಂದು ಕಡೆ ಕೆಲಸ ಮಾಡಲು ಬಿಡಲಿಲ್ಲ. ಜತೆಗೆ ಮಾನವ ಹಕ್ಕುಗಳ ಆಯೋಗ, ಲೋಕಾಯುಕ್ತ ಅಂತೆಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಪ್ರಕರಣ ದಾಖಲು ಮಾಡಿಸಿದರು. ಅವರಿಗೆ ಹಫ್ತಾ ವಸೂಲಿ ಮಾಡಿಕೊಡುತ್ತಿರಲಿಲ್ಲ ಎಂಬುದೇ ಇದಕ್ಕೆ ಕಾರಣ. ಹಲವು ಬಾರಿ ಲಂಚಕ್ಕೆ ಪೀಡಿಸಿದರೂ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಜತೆಗೆ ಅವರ ವೈಯಕ್ತಿಕ ಕೆಲಸ ಕಾರ್ಯಗಳಿಗೂ ನಾನು ಸಹಕರಿಸಲಿಲ್ಲ. ಹೀಗಾಗಿ ನನ್ನ ಮೇಲೆ ದ್ವೇಷ ಸಾಧಿಸಲು ಆರಂಭಿಸಿದರು. ವಿನಾಕಾರಣ ಕೇಸು ದಾಖಲು, ಅನಿಯಮಿತ ವರ್ಗವಾಣೆಯಂಥ ಕಿರುಕುಳ ನೀಡಿದರು. ಹೀಗೆ ಕಿರುಕುಳ ನೀಡಿದವರು ಆಗಿನ ಗೃಹ ಸಚಿವ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ. ಅವರು ಹೇಳಿದಂತೆ ಹಫ್ತಾ ವಸೂಲಿ ಮಾಡಿಕೊಡಲಿಲ್ಲ ಎಂಬುದೇ ಮುಖ್ಯ ಕಾರಣ.’

‘ಹಿರಿಯ ಅಧಿಕಾರಿಗಳಿಂದ ನನಗಾಗುತ್ತಿದ್ದ ಹಿಂಸೆ ಬಗ್ಗೆ ಈಗಿನ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಲ್ಲಿಯೂ ಅಳಲು ತೋಡಿಕೊಂಡಿದ್ದೆ. ಆದರೂ ಏನೂ ಪ್ರಯೋಜನ ಆಗಲಿಲ್ಲ. ನಾನು ಮುಂದೆ ಏನಾಗುತ್ತೇನೋ ಗೊತ್ತಿಲ್ಲ. ಆದರೆ ನಾನು ಹೆಸರು ಹೇಳಿರುವ ಯಾರನ್ನೂ ದೇವರು ಕ್ಷಮಿಸುವುದಿಲ್ಲ. ಹಿಂದೆ ಇದ್ದ ಬಿಜೆಪಿ-ಜೆಡಿಎಸ್ ಸರಕಾರ ಪರವಾಗಿರಲಿಲ್ಲ. ಈಗಿನ ಸಿದ್ದರಾಮಯ್ಯ ಸರಕಾರ ಬಹಳ ಕೆಟ್ಟದ್ದು. ಆ ದೇವರೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ನಾನು ಮುಂದೆ ಏನಾಗುತ್ತೇನೋ ಗೊತ್ತಿಲ್ಲ. ನನಗೆ ಏನಾದ್ರೂ ಅದರೆ ಅದಕ್ಕೆ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಂತಿ ಅವರೇ ಕಾರಣ.’

ಟಿವಿ ಮಾಧ್ಯಮದವರ ಜತೆ ಮಾತಾಡಿದ ನಂತರ ಗಣಪತಿ ಅವರು ಮಧ್ಯಾಹ್ನ 1.30 ರ ವೇಳೆಗೆ ಆಟೋರಿಕ್ಷಾದಲ್ಲಿ ವಿನಾಯಕ ಲಾಡ್ಜ್ ಗೆ ತೆರಳಿ, ಊಟ ಮುಗಿಸಿ ಕೋಣೆ ಸೇರಿದ್ದಾರೆ. ಅಲ್ಲಿ ರಿವಾಲ್ವಾರ್ ಸೇರಿದಂತೆ ತೊಟ್ಟ ಯೂನಿಫಾರಂನಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಹಾರೆ.

ಮೂರು ದಿನಗಳಿಂದ ಇಂತಿಲ್ಲಿಗೆ ಹೋಗುತ್ತೇನೆ ಎಂದು ಹೇಳದಿದ್ದ ಗಣಪತಿ ಅವರು ಇರುವ ಸ್ಥಳ ಪತ್ತೆಗೆ ಸಹೋದರ ತಮ್ಮಯ್ಯ ಮೊಬೈಲ್ ಟವರ್ ಮೂಲಕ ಮಡಿಕೇರಿಯಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಜತೆಗೆ ಅವರು ಇವತ್ತು ಮಧ್ಯಾಹ್ಮ ಮಾತಾಡಿದ್ದ ಟಿವಿ ಚಾನೆಲ್ ಗಳ ಸಂಪರ್ಕ ಸಾಧಿಸಿ, ವಿಚಾರಿಸಿಕೊಂಡಿದ್ದಾರೆ. ಆಗಷ್ಟೇ ಟಿವಿ ಮಾಧ್ಯಮದವರಿಗೆ ಏನೋ ಯಡವಟ್ಟಾಗಿದೆ ಎಂಬುದು ಗೊತ್ತಾಗಿದೆ. ಏಕೆಂದರೆ ಪ್ರತಿನಿಧಿಗಳ ಜತೆ ಮಾತಾಡುವ ಮೊದಲು ಅವರು ಕ್ಯಾಮರಾ ಆನ್ ಮಾಡಬೇಕು, ಅದರಲ್ಲಿ ತಮ್ಮ ಮಾತು ಸೆರೆ ಹಿಡಿಯಬೇಕು ಎಂದು ತಾಕೀತು ಮಾಡಿದ್ದರು. ನಂತರ ಗಣಪತಿ ಅವರು ಉಳಿದುಕೊಂಡಿದ್ದ ಲಾಡ್ಜ್ ಗೆ ಹೋಗಿ ವಿಚಾರಿಸಿದಾಗ ಸಂಜೆ ಸುಮಾರು 7.30 ಆಗಿತ್ತು. ಅವರ ಕೊಠಡಿ ಬಾಗಿಲು ಒಡೆದು ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಹಿಂದೆ ಯಾವುದೇ ಸರಕಾರದ ಅವಧಿಯಲ್ಲಾಯಿತು, ಯಾವುದೇ ಜಾಗದಲ್ಲಾಯಿತು ತಾವು ಕೆಲಸ ಮಾಡಿದ ಕಡೆಯೆಲ್ಲ ಗಣಪತಿ ಅವರು ಉತ್ತಮ ಹೆಸರು ಮಾಡಿದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವಂಥ ಹಿರಿಯ ಅಧಿಕಾರಿಗಳ ಯಾವುದೇ ಆದೇಶಗಳಿಗೆ ತಲೆ ಬಾಗಿದವರಲ್ಲ. ಹೀಗಾಗಿಯೇ ಅವರು ಜನಾನುರಾಗಿಯಾದಷ್ಟೇ ಮೇಲಧಿಕಾರಿಗಳ ಅವಕೃಪೆಗೂ ಒಳಗಾಗಿದ್ದರು. ತಮಗಾಗುತ್ತಿದ್ದ ಕಿರುಕುಳ ತಾಳಲಾರದೆ ಮಾಜಿ ಗೃಹ ಸಚಿವ ಆರ್. ಅಶೋಕ್ ಅವರ ಬಳಿಯೂ ಹಲವು ಅಳಲು ತೋಡಿಕೊಂಡಿದ್ದರು. ನಿರಂತರ ಕಿರುಕುಳಕ್ಕೆ ಒಳಗಾಗಿದ್ದೇನೆ. ಒಂದು ಕಡೆ ಕೆಲಸ ಮಾಡಲು ಬಿಡುತ್ತಿಲ್ಲ. ನಿರಂತರ ವರ್ಗಾವಣೆ ಮಾಡುತ್ತಿದ್ದಾರೆ ಎಂದು ದೂರಿಕೊಂಡಿದ್ದರು. ಆಗೆಲ್ಲ ಸಾಂತ್ವನ ಹೇಳಿಕಳುಹಿಸಿದ್ದ ಅಶೋಕ್ ಅವರಿಗೆ ಗಣಪತಿ ಇಂಥ ತೀರ್ಮಾನಕ್ಕೆ ಬರುತ್ತಾರೆ ಎಂದು ಗೊತ್ತಿರಲಿಲ್ಲವಂತೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎನ್ನುತ್ತಾರವರು.

Leave a Reply