ಬೈಟ್ಸ್.. ಕ್ಯಾಮರಾ.. ಆಕ್ಷನ್.. ಇದು ಸಿನಿಮಾ ಭವಿಷ್ಯದ ಹೊಸ ಮಂತ್ರ

author-ssreedhra-murthyರೀಲ್, ಸೆಲ್ಯೂಲ್ಯಾಯ್ಡ್ ಮೊದಲಾದ ಪದಗಳು ಸಿನಿಮಾಕ್ಕೆ ಪರ್ಯಾಯವಾಗಿಯೇ ಬಳಸಲ್ಪಡುತ್ತಾ ಬಂದಿವೆ. ಆದರೆ ಈಗ ಸಿನಿಮಾ ಬದಲಾಗಿದೆ ಬೈಟ್ಸ್ ಗಳಲ್ಲಿ ರೂಪುಗೊಳ್ಳುತ್ತಿದೆ. ನಿರ್ಮಾಪಕ ಅಥವಾ ವಿತರಕ ಸಿಗ್ನಲ್‍ನ ಮೂಲಕ ಸಿನಿಮಾವನ್ನು ಚಿತ್ರಮಂದಿರಕ್ಕೆ ಕಳುಹಿಸುವ ತಂತ್ರಜ್ಞಾನ ಕೇವಲ ಕುತೂಹಲವಾಗಿ ಉಳಿಯದೆ ವ್ಯಾಪಕವಾಗಿ ಬಳಕೆಗೆ ಬರುತ್ತಿದೆ. ಡಿಜಿಟಲ್ ತಂತ್ರಜ್ಞಾನ ಇಂದು ನಿರ್ಮಾಣ, ವಿತರಣೆ, ಪ್ರದರ್ಶನ ಮೂರೂ ಕ್ಷೇತ್ರದಲ್ಲಿಯೂ ವ್ಯಾಪಕವಾಗಿದೆ.

ಇದು ಚಲನಚಿತ್ರದ ಭವಿಷ್ಯ ಎನ್ನುವುದು ದಿನ ದಿನಕ್ಕೂ ಖಚಿತವಾಗುತ್ತಾ ಸಾಗಿದೆ. ಡಬ್ಬದಲ್ಲಿ ರೀಲ್ ಗಳನ್ನು ತುಂಬಿಕೊಂಡು ಬಸ್ ನ ಮೂಲಕ ಥಿಯೇಟರ್ ಗಳಿಗೆ ಸಾಗಿಸುತ್ತಿದ್ದ ವ್ಯವಸ್ಥೆಯೇ ಮುಂದಿನ ಪೀಳಿಗೆಗೆ ದಂತಕತೆಯಾಗಬಹುದು. ‘ಡಿಜಿಟಲ್ ಸಿನಿಮಾ’ ಮೊದಲು ಕಾಣಿಸಿಕೊಂಡಿದ್ದು ಹಾಲಿವುಡ್ ನಲ್ಲಿ. ಅದೂ ಪ್ರದರ್ಶನ ಕ್ಷೇತ್ರದಲ್ಲಿ. 1999 ರ ಜೂನ್ 18 ರಂದು ‘ಟೆಕ್ಸಾಸ್ ಇನ್ಸ್ ಟ್ರೂಮೆಂಟ್’ ಎನ್ನುವ ಸಂಸ್ಥೆ ಈ ತಂತ್ರಜ್ಞಾನ ಬಳಸಿ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ಚಿತ್ರ ಪ್ರದರ್ಶನ ನಡೆಸಿತು. ಈ ತಂತ್ರಜ್ಞಾನದಿಂದ ಆಕರ್ಷಿತನಾದ ಜಾರ್ಜ್ ಲ್ಹೂಕಾನ್, ಸ್ಟಾರ್ ವಾರ್ ಸರಣಿಯ ಮೊದಲನೇ ಚಿತ್ರ ‘ಫ್ಯಾಂಟಮ್ ಮೆನ್ಸ್’ ನನ್ನು ಈ ತಂತ್ರಜ್ಞಾನ ಬಳಸಿ ಪ್ರದರ್ಶಿಸಿದರು. ಅಷ್ಟೇ ಅಲ್ಲ ಸರಣಿಯ ಎರಡನೇ ಚಿತ್ರ ‘ಅಟ್ಯಾಕ್ ಆಫ್ ಕ್ಲೋನ್ಸ್’ ಈ ತಂತ್ರಜ್ಞಾನ ಬಳಸಿಯೇ ನಿರ್ಮಾಣವಾಯಿತು. 2002 ರಲ್ಲಿ ತೆರೆ ಕಂಡ ಚಿತ್ರ ವಿಶ್ವದ ಮೊದಲ ‘ಡಿಜಿಟಲ್’ ನಿರ್ಮಾಣ ಎನ್ನಿಸಿಕೊಂಡಿದೆ. ಇಲ್ಲಿಂದ ಮುಂದೆ ಹಾಲಿವುಡ್ ನಲ್ಲಿ ಅಕ್ಷರಶಃ ‘ಡಿಜಿಟಲ್ ಕ್ರಾಂತಿ’ಯೇ ಜರುಗಿತು. ಹೊಸ ಹೊಸ ಸಾಧ್ಯತೆಗಳು ತೆರೆದು ಕೊಳ್ಳುತ್ತಾ ಹೋದವು 2011ರಲ್ಲಿ ‘ಟವರ್ ಹೇಸ್ಟ್’ ಚಿತ್ರವು ಚಿತ್ರಮಂದಿರಕ್ಕೂ ಮೊದಲೇ ‘ಆನ್ ಲೈನ್ ಬಿಡುಗಡೆ’ಗೆ ಸಿದ್ದತೆ ನಡೆಸಿದಾಗ ದೊಡ್ಡ ವಿವಾದವೇ ನಡೆಯಿತು. ಆ ಕ್ಷಣಕ್ಕೆ ಅದನ್ನು ತಡೆಯುವುದು ಸಾಧ್ಯವಾಯಿತಾದರು ಬಹುಬೇಗ ‘ಆನ್ ಲೈನ್ ಬಿಡುಗಡೆ’ ಎನ್ನುವುದು ಹಾಲಿವುಡ್ ನ ಭಾಗವಾಯಿತು.

ಈಗ ನಿರ್ಮಾಣ, ವಿತರಣೆ, ಪ್ರದರ್ಶನ ಈ ಮೂರೂ ಹಂತಗಳಲ್ಲಿಯೂ ಹಾಲಿವುಡ್ ನಲ್ಲಿ ‘ಡಿಜಿಟಲ್’ ಸಾಧ್ಯತೆಗಳು ಹಾಲಿವುಡ್ ಅನಿವಾರ್ಯತೆಯಾಗಿವೆ. ಈ ಬೆಳವಣಿಗೆ ಹೊಸ ಮಾದರಿಗಳನ್ನು ಹುಡುಕಿಕೊಟ್ಟಂತೆ ಹೊಸ ಪ್ರೇಕ್ಷಕರನ್ನೂ ಸೃಷ್ಟಿಸಿದೆ.

‘ಡಿಜಿಟಲ್ ಬಿಡುಗಡೆ’ಎನ್ನುವ ಕಲ್ಪನೆಯನ್ನು ಕ್ರಾಂತಿಕಾರಕವಾಗಿ ಜಾರಿಗೆ ತಂದ ಹೆಗ್ಗಳಿಕೆ ಹಾಗೆ ನೋಡಿದರೆ ‘ಸಿನಿಮಾ’ ಎನ್ನುವ ಮಾಧ್ಯಮವನ್ನೇ ಗುಮಾನಿಯಿಂದಲೇ ಸ್ವೀಕರಿಸಿದ ದೇಶ ಚೀನಾಕ್ಕೆ ಸೇರಬೇಕು. 2005 ರ ಜೂನ್ ನಲ್ಲಿ ಅಲ್ಲಿ ‘ಇ ಸಿನಿಮಾ ಸಿಸ್ಟ್’ ತಂತ್ರಜ್ಞಾನ ರೂಪುಗೊಂಡಿತು. ಡಿ.ಎಂ.ಎಸ್ ಗಳ ಮೂಲಕ ಚೀನಾದ ಮೂವತ್ತು ಪ್ರಾಂತ್ಯಗಳ 15,000 ಚಿತ್ರಮಂದಿರಗಳಲ್ಲಿ ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ‘ಶಾಂಗನೈ’ ಚಿತ್ರ ತೆರೆ ಕಂಡಿತು. ಅಲ್ಲಿಂದ ಮುಂದೆ ಇದು ವ್ಯಾಪಕವಾಗಿ ಬೆಳೆದು ಇಂದು ಬೆರಳ ಚಲನೆಯಲ್ಲೇ ಚಿತ್ರಗಳು ಲಕ್ಷಾಂತರ ಕಿಲೋಮೀಟರ್ ಗಳನ್ನು ಕ್ಷಣಮಾತ್ರದಲ್ಲಿ ಕ್ರಮಿಸಬಲ್ಲವಾಗಿವೆ.

ಭಾರತೀಯ ಚಿತ್ರರಂಗದ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಮೊದಲು ಪ್ರವೇಶಿಸಿದ್ದು ‘ಮಲಯಾಳಂ ಚಿತ್ರರಂಗದ ಮೂಲಕ’ 2006ರಲ್ಲಿ ನಿರ್ಮಾಣಗೊಂಡ ‘ಮೂನ್ನಮತೊರಾಲ್’ ಭಾರತದ ಮೊದಲ ಡಿಜಿಟಲ್ ಪ್ರಯೋಗವೆನ್ನಿಸಿತು. ಇದು ಅಲ್ಲಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡಿತ್ತು. 2007 ರ ಜನವರಿಯಲ್ಲಿ ತೆರೆ ಕಂಡ ‘ಗುರು’ ಪೂರ್ಣ ಪ್ರಮಾಣದ ಭಾರತದ ಮೊದಲ ‘ಡಿಜಿಟಲ್ ಸಿನಿಮಾ’ ಎನ್ನಿಸಿಕೊಂಡಿದೆ. ಈ ಚಿತ್ರ ನಿರ್ಮಾಣದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿದ್ದರೂ ಡಿಜಿಟಲ್ ಬಿಡುಗಡೆ ಕಂಡಿದ್ದು ಹದಿನೈದು ಚಿತ್ರಮಂದಿರಗಳಲ್ಲಿ ಮಾತ್ರ. ಏಕೆಂದರೆ ಇದಕ್ಕೆ ಅಗತ್ಯವಾದ 35 ಮಿಲಿ ಮೀಟರ್ ಸಿನಿಮಾ ಪ್ರೊಜೆಕ್ಟರ್ ಬಹುತೇಕ ಚಿತ್ರಮಂದಿರಗಳಲ್ಲಿ ಲಭ್ಯವಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಭಾರತೀಯ ಚಿತ್ರರಂಗವನ್ನು ಗಮನಾರ್ಹವಾಗಿ ಆಕ್ರಮಿಸಿಕೊಂಡಿದೆ. ಗ್ರೀನ್ ಮ್ಯಾಟ್ ಬಳಸಿ ವಿವಿಧ ಹಿನ್ನೆಲೆಯನ್ನು ಸೃಷ್ಟಿಸುವ ಜಾದು, ಗ್ರಾಫಿಕ್ ಬಳಸಿ ರೋಮಾಂಚಕ ಹೋರಾಟವನ್ನೋ, ಕನಸನ್ನೋ ಸೃಷ್ಟಿಸುವ ಪ್ರಯೋಗ ಈಗ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಕಾಣಿಸಿಕೊಂಡಿದೆ.

‘ಬಾಹುಬಲಿ’ಯಂತೂ ತಾಂತ್ರಿಕ ಚಮತ್ಕಾರಗಳ ಬಳಕೆಯಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಹೀಗಿದ್ದರೂ ಡಿಜಿಟಲ್ ಬಿಡುಗಡೆ ವಿಚಾರದಲ್ಲಿ ಜಗತ್ತಿಗೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದಿದೆ. ಇಂದಿಗೂ ಭಾರತದಲ್ಲಿ ಡಿಸ್ಕ್, ಬ್ಲೂರೇ ಮೂಲಕ ಮಾನವ ಮಧ್ಯಪ್ರವೇಶದ ಬಿಡುಗಡೆ ವಿಧಾನವೇ ಜಾರಿಯಲ್ಲಿದೆ. ಸ್ಯಾಟಲೈಟ್ ಸಿಗ್ನಲ್ ಗಳ ಮೂಲಕ ಚಿತ್ರ ಬಿಡುಗಡೆ ಅಪರೂಪಕ್ಕೆ ಬಳಕೆಯಲ್ಲಿದೆ. ಅನ್ ಲೈನ್ ಬಿಡುಗಡೆ ಇನ್ನೂ ಚಿತ್ರಮಂದಿರಗಳ ಬಿಡುಗಡೆಗೆ ಪರ್ಯಾಯ ಮಾರ್ಗವಾಗಿಲ್ಲ. ಈ ಕುರಿತು ನಾವು ಸಾಕಷ್ಟು ದೂರವನ್ನು ಕ್ರಮಿಸಬೇಕಾಗಿದೆ.

ಭಾರತದಲ್ಲಿ ಈಗ ಒಂದು ಅಂದಾಜಿನ ಪ್ರಕಾರ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ 12,000 ಚಿತ್ರಮಂದಿರಗಳಿವೆ. ಅವುಗಳಲ್ಲಿ 9,000 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೇ. ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಡ ಹೆಚ್ಚಿನ ಕಡೆ ಡಿಜಿಟಲ್ ಬಿಡುಗಡೆಗೆ ಅಗತ್ಯ ಸೌಲಭ್ಯಗಳಿಲ್ಲ. ಈಗ ಹಿಂದೂಸ್ಥಾನ್ ಅಲಿವರ್, ರಾನ್ ಬಾಕ್ಸಿ ಸಂಸ್ಥೆಯವರು ಡಿಜಿಟಲಿಕರಣದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರ ಉದ್ದೇಶದಂತೆ ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ 5,000 ಚಿತ್ರಮಂದಿರಗಳು ಸ್ಯಾಟಲೈಟ್ ಸಿಗ್ನಲ್ ಮೂಲಕ ಚಿತ್ರಗಳನ್ನು ಸ್ವೀಕರಿಸುವ ಶಕ್ತಿಯನ್ನು ಪಡೆದುಕೊಳ್ಳಲಿವೆ. ತಮಿಳು ನಾಡಿನಲ್ಲಿ ಹೀರೋ ಸಂಸ್ಥೆ ಐದು ನೂರು ಚಿತ್ರಮಂದಿರಗಳನ್ನು ಡಿಜಿಟಲಿಕರಣಗೊಳಿಸುವ ದೊಡ್ಡ ಅಭಿಯಾನವನ್ನೇ ಆರಂಭಿಸಿದೆ. ಆದರೆ ಕನ್ನಡದ ಮಟ್ಟಿಗೆ ಪರಿಸ್ಥಿತಿ ಸಾಕಷ್ಟು ನಿರಾಶದಾಯಕವಾಗಿದೆ. ಇಲ್ಲಿ ಈಗ ಉಳಿದಿರುವುದು 800 ಚಿತ್ರಮಂದಿರಗಳು ಮಾತ್ರ. ಅವುಗಳಲ್ಲಿ ಕೂಡ 460 ಚಿತ್ರಮಂದರಿಗಳು ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವುದಿಲ್ಲ.

ಉಳಿದಿರುವ ಬಹುತೇಕ ಚಿತ್ರಮಂದಿರಗಳು ಸಿಂಗಲ್ ಸ್ಕ್ರೀನ್ ನವು. ಮಲ್ಟಿಪ್ಲೆಕ್ಸ್ ಗಳು ಮಹಾನಗರಕ್ಕೆ ಸೀಮಿತವಾಗಿ ಕನ್ನಡ ಚಿತ್ರಗಳಿಗೆ ಗಗನ ಕುಸುಮ ಎನ್ನುವ ಸ್ಥಿತಿ ಇದೆ. ಜಗತ್ತಿನಲ್ಲಿ ಈಗ ನಿಮ್ಮ ಕಂಪ್ಯೂಟರ್ ಪರದೆಗೆ ನೇರವಾಗಿ ಚಿತ್ರಗಳನ್ನು ಬಿಡುಗಡೆ ಮಾಡುವ ಪ್ರಯೋಗ ನಡೆಯುತ್ತಿದ್ದರೆ ನಾವಿನ್ನೂ ಚಿತ್ರಮಂದಿರ ಸಿಕ್ಕರೆ ಸಾಕು ಎನ್ನುವ ಪೈಪೋಟಿಗೆ ಸೀಮಿತವಾಗಿದ್ದೇವೆ. ‘ಡಿಜಿಟಲ್ ಸಿನಿಮಾ’ ಎನ್ನುವ ಚಲನಚಿತ್ರದ ಭವಿಷ್ಯ ಇದನ್ನು ಗುರುತಿಸಿಕೊಳ್ಳದೆ ಹೋದರೆ ಕನ್ನಡ ಚಿತ್ರರಂಗದ ಅಸ್ತಿತ್ವಕ್ಕೇ ಪೆಟ್ಟು ಬೀಳುವ ಸಾಧ್ಯತೆ ಇದೆ.

ಅಷ್ಟೇ ಅಲ್ಲ ಲಭ್ಯವಿರುವ ಚಿತ್ರಗಳನ್ನೂ ಡಿಜಿಟಲ್ ಮಾದರಿಗೆ ಪರಿವರ್ತಿಸುವ ಕೆಲಸ ಆದಷ್ಟು ತುರ್ತಾಗಿ ಆಗಬೇಕು. ಮುಂದೆ ಅನಾಲೋಗ್ ಮಾದರಿ ಚಿತ್ರ ಪ್ರದರ್ಶಿಸುವದಕ್ಕೆ ಅವಕಾಶವೇ ಇಲ್ಲದಂತಾಗುವ ಸಾಧ್ಯತೆ ಗಾಢವಾಗಿದೆ.

Leave a Reply