ಡಿವೈಎಸ್ಪಿ ಗಣಪತಿ ಆತ್ಮಹತ್ಯೆ: ಸರ್ಕಾರದ ಪ್ರತಿಕ್ರಿಯೆ ಏನು?, ಡಲ್ಲಾಸ್ ಹಿಂಸಾಚಾರ, ಜಾಕಿರ್ ಕುರಿತು ದಿಗ್ವಿಜಯ್…

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಮಾಜಿ ಗೃಹಸಚಿವ ಕೆ.ಜೆ.ಜಾರ್ಜ್ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ಬಿಜೆಪಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

ನಗರದ ಮೈಸೂರು ಸರ್ಕಲ್ ಬಳಿ ಸಂಸದೆ ಶೋಭ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಪಿ.ಸಿ.ಮೋಹನ್, ಅಶ್ವಥ್ ನಾರಾಯಣ್ ಮತ್ತಿತರ ನೇತೃತ್ವದಲ್ಲಿ ಡಿಜಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ರವಿ ಪ್ರಕರಣದಲ್ಲೂ ಕೆ.ಜೆ.ಜಾರ್ಜ್ ಅವರ ಹೆಸರು ಕೇಳಿಬಂದಿತ್ತು. ಈಗಲೂ ಕೊನೆ ವಿಡಿಯೋದಲ್ಲಿ ಗಣಪತಿ ಜಾರ್ಜ್ ಅವರನ್ನು ದೂರಿರುವುದರಿಂದ ಇಂಥವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಆಗ್ರಹ ಬಿಜೆಪಿಯದ್ದು.

ಆದರೆ ಬೆಳಗ್ಗೆ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆಗೂ ಮೊದಲು ಯಾರ ರಾಜೀನಾಮೆಯನ್ನೂ ಪಡೆಯುವುದಿಲ್ಲ ಎಂದರು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸುವ ನೈತಿಕತೆ ಬಿಜೆಪಿಗಿಲ್ಲ ಅಂತ ಹರಿಹಾಯ್ದರು.

ಮೂಲಗಳ ಪ್ರಕಾರ ಮುಖ್ಯಮಂತ್ರಿಯವರು ಪೊಲೀಸ್ ಇಲಾಖೆಯಲ್ಲಿ ಪದೇ ಪದೆ ಸಮಸ್ಯೆಗಳು ತಲೆದೋರುತ್ತಿರುವುದಕ್ಕೆ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಗೃಹ ಸಚಿವ ಪರಮೇಶ್ವರ್ ಅವರು ಮುಖ್ಯಮಂತ್ರಿಯವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ತಾವು ಭಾಗಿಯಾಗಿಲ್ಲದ ವರ್ಗಾವಣೆ ಪ್ರಕರಣಗಳಲ್ಲಿ ಉತ್ತರದಾಯಿಯಾಗಬೇಕಾಗಿ ಬಂದಿರುವುದಕ್ಕೆ ಅಲವತ್ತುಕೊಂಡರೆನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಪ್ರಕರಣದ ಸಿಐಡಿ ತನಿಖೆ ನಡೆಸಲಾಗುವುದು. ಯಾವ ಅಧಿಕಾರಿಗಳೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಮುಂದಾಗಬಾರದು. ಪೊಲೀಸ್ ಅಧಿಕಾರಿಗಳ ಸಮಸ್ಯೆ ಸ್ಪಂದನೆಗೆ ನಾನು ಯಾವತ್ತೂ ಸಿದ್ಧ’ ಎಂದು ಹೇಳಿದರು.

ಇನ್ನು ಪ್ರಮುಖ ಆರೋಪ ಎದುರಿಸುತ್ತಿರುವ ಸಚಿವ ಕೆ. ಜಿ. ಜಾರ್ಜ್ ತಮ್ಮ ರಾಜೀನಾಮೆ ಸಾಧ್ಯತೆ ತಳ್ಳಿಹಾಕುತ್ತ ಹೇಳಿದ್ದಿಷ್ಟು-

‘ಆತ್ಮಹತ್ಯೆಗೆ ಶರಣಾಗಿರುವ ಗಣಪತಿ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಗಣಪತಿಯವರು ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇನಿಸ್ಪೆಕ್ಟರ್ ಆಗಿದ್ದಾಗ ಸೇವೆಯಿಂದ ಅಮಾನತುಗೊಂಡಿದ್ದರು. ಅಮಾನತು ವಾಪಸ್ ಪಡೆಯುವಂತೆ ಗಣಪತಿ ತಮ್ಮನ್ನು ಕೇಳಿಕೊಂಡಿದ್ದರು. ಆದರೆ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ತನಿಖೆಗೆ ಅಡ್ಡಿ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ ಅಷ್ಟೆ.’ ಎಂದಿದ್ದಾರೆ.

Members of Karnataka Rakshana Vedike stage protest against Congr

ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಹಿಂಸಾತ್ಮಕ ರೂಪ ಪಡೀತು ಡಲ್ಲಾಸ್ ಪ್ರತಿಭಟನೆ

ಇತ್ತೀಚೆಗೆ ಲೂಸಿಯಾನ ಮತ್ತು ಮಿನೆಸೊಟಾದಲ್ಲಿ ಪೊಲೀಸರು ಇಬ್ಬರು ಕರಿಯ ವ್ಯಕ್ತಿಗಳನ್ನು ಗುಂಡಿಕ್ಕಿ ಕೊಂದ ಪ್ರಕರಣವನ್ನು ವಿರೋಧಿಸಿ ಡಲ್ಲಾಸ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ಶುಕ್ರವಾರ ಟೆಕ್ಸಸ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. ಸ್ಥಳೀಯ ಕಾಲಮಾನ 9 ಗಂಟೆ ಸುಮಾರಿಗೆ ಇನ್ನೇನು ಪ್ರತಿಭಟನೆ ಮುಕ್ತಾಯವಾಯ್ತು ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಗುಂಡುಗಳು ಹಾರಿಸಿದರು. ಅಲ್ಲದೆ ನಗರದ ಹಲವೆಡೆ ಬಾಂಬ್ ಇಡಲಾಗಿದೆ ಎಂದು ಎಚ್ಚರಿಕೆ ನೀಡಿದರು. ಈ ಬೆನ್ನಲ್ಲೆ ಪೊಲೀಸರು ಇಡೀ ನಗರವನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಇದು ಪ್ರತಿಭಟನಾಕಾರರಲ್ಲಿ ಗಾಬರಿ ಹುಟ್ಟಿಸಿತು. ನಂತರ ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಗಲಭೆಯಲ್ಲಿ 5 ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದ್ದು 6 ಅಧಿಕಾರಿಗಳಿಗೆ ಗಾಯಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ಸಂದೇಹಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಜಾಕಿರ್ ಸಂಘಟನೆಯ ಆಮೂಲಾಗ್ರ ತನಿಖೆ- ರಾಜನಾಥ್ ಸಿಂಗ್

ಇಸ್ಲಾಂ ಭೋದಕ ಜಾಕಿರ್ ನಾಯಕ್ ಮಾತುಗಳು ಬಾಂಗ್ಲಾದೇಶ ದಾಳಿಯ ಉಗ್ರರಿಗೆ ಸ್ಫೂರ್ತಿ ಎಂಬ ಆರೋಪದ ಪ್ರಕರಣ ಕುರಿತಂತೆ ತನಿಖಾ ಅಧಿಕಾರಿಗಳು ಅವರ ಭಾಷಣದ ಸಿಡಿಗಳನ್ನು ಪರಾಮರ್ಶಿಸುತ್ತಿರುವುದಾಗಿ ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.

ಈ ಬಗ್ಗೆ ಗೃಹ ಸಚಿವ ರಾಜನಾಥ ಸಿಂಗ್ ಪ್ರತಿಕ್ರಿಯೆ ನೀಡಿರುವುದು ಹೀಗೆ:

‘ಯಾವುದೇ ಕಾರಣಕ್ಕೂ ನಾವು ಉಗ್ರವಾದದ ಜತೆ ರಾಜಿಯಾಗುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದ್ದು, ಜಾಕಿರ್ ವಿರುದ್ಧ ಸಮಗ್ರವಾಗಿ ತನಿಖೆ ನಡೆಯಲಿದೆ.’

ಇತ್ತ ಮಹಾರಾಷ್ಟ್ರ ಸರ್ಕಾರ ಪ್ರತ್ಯೆಕವಾಗಿ ಜಾಕಿರ್ ನಾಯಕ್ ಅವರ ಭಾಷಣಗಳನ್ನು ಹಾಗೂ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಕಾರ್ಯವನ್ನು ಪರಿಶೀಲಿಸಲು ಆದೇಶ ನೀಡಿದೆ.

ಈ ಮಧ್ಯೆ ಮುಂಬೈನಲ್ಲಿ ಈ ಸಂಸ್ಥೆಗೆ ಮೆಕ್ಕಾದಿಂದ ಜಾಕಿರ್ ನಾಯಕ್ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಜಾಕಿರ್ ಸಮರ್ಥನೆ ಹೀಗಿದೆ:

‘ಬಾಂಗ್ಲಾದೇಶದಲ್ಲಿ ಶೇ.90 ರಷ್ಟು ಮಂದಿಗೆ ನನ್ನ ಪರಿಚಯವಿದೆ. ಅದರಲ್ಲಿ ಶೇ.50 ರಷ್ಟು ಜನರು ನನ್ನ ಅಭಿಮಾನಿಗಳು. ಢಾಕಾದಲ್ಲಿ ಮಗ್ಧ ಜನರನ್ನು ಕೊಲ್ಲಲು ನಾನೇ ಸ್ಫೂರ್ತಿ ಎಂಬುದನ್ನು ಒಪ್ಪುವುದಿಲ್ಲ.’

 

ದಿಗ್ವಿಜಯ್ ಸಿಂಗ್ ಪ್ರತಿ ದಾಳಿ

ವಿವಾದಿತ ಇಸ್ಲಾಂ ಭೋದಕ ಜಾಕಿರ್ ನಾಯಕ್ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಟೀಕೆ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಬಿಜೆಪಿ ವಿರುದ್ಧ ಪ್ರತಿದಾಳಿ ಮಾಡಿದ್ದಾರೆ. 2008 ರಲ್ಲಿ ಬಿಜೆಪಿ ಮುಖಂಡ ರಾಜನಾಥ ಸಿಂಗ್, ಮಾಲೆಗಾವ್ ಸ್ಫೋಟದ ಆರೋಪಿ ಪ್ರಗ್ಯಾ ಠಾಕೂರ್ ಅವರನ್ನು ಭೇಟಿ ಮಾಡಿದ್ದನ್ನು ದಿಗ್ವಿಜಯ್ ಸಿಂಗ್ ತಮ್ಮ ಪ್ರತಿದಾಳಿಯಲ್ಲಿ ಅಸ್ತ್ರವಾಗಿ ಪ್ರಯೋಗಿಸಿದ್ದಾರೆ. ಈ ಬಗ್ಗೆ ದಿಗ್ವಿಜಯ್ ಸಿಂಗ್ ಟ್ವೀಟ್ ಗಳ ಮೂಲಕ ಹೇಳಿರೋದಿಷ್ಟು:

‘ಜಾಕಿರ್ ನಾಯಕ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ನನ್ನ ವಿರುದ್ಧ ಟೀಕೆ ಮಾಡಲಾಗುತ್ತಿದೆ. ಆದರೆ ರಾಜನಾಥ್ ಸಿಂಗ್ ಅವರು ಮಾಲೆಗಾವ್ ಬಾಂಬ್ ಸ್ಫೋಟದ ಆರೋಪಿ ಪ್ರಗ್ಯಾ ಠಾಕೂರ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಯಾರು ಪ್ರಶ್ನಿಸಲಿಲ್ಲ. ಪ್ರಗ್ಯಾ ಅವರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ರು. ಆದರೆ ಜಾಕಿರ್ ವಿರುದ್ಧ ಯಾವುದಾದರು ಪ್ರಕರಣ ದಾಖಲಾಗಿದೆಯೇ? ಜಾಕಿರ್ ನಾಯಕ್ ಜತೆ ಶ್ರೀ ಶ್ರೀ ರವಿಶಂಕರ್ ಸಹ ವೇದಿಕೆ ಹಂಚಿಕೊಂಡಿದ್ದರಲ್ಲವೇ?’

ಮಹಿಳೆ ಮೇಲೆ ದೌರ್ಜನ್ಯ ಆರೋಪದಲ್ಲಿ ಆಪ್ ಶಾಸಕ

ಭ್ರಷ್ಟಾಚಾರ, ಧಾರ್ಮಿಕ ಭಾವನೆಗೆ ಧಕ್ಕೆಯ ವಿವಾದಕ್ಕೆ ಸಿಲುಕಿದ್ದ ಆಮ್ ಆದ್ಮಿ ಪಕ್ಷಕ್ಕೆ ಹೊಸದಾಗಿ ಎದುರಾಗಿರುವ ಸಮಸ್ಯೆ ಅಂದ್ರೆ ಮಹಿಳೆ ಮೇಲಿನ ದೌರ್ಜನ್ಯ ಆರೋಪ… ಎಎಪಿ ನಾಯಕ ದಿನೇಶ್ ಮೊಹಾನಿಯಾ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಬಂಧನವಾದ ಮರುದಿನವೇ ಮತ್ತೊಬ್ಬ ಎಎಪಿ ಶಾಸಕನ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಜೂನ್ ಆರಂಭದಲ್ಲಿ ಶಾಸಕ ಪ್ರಕಾಶ್ ಜರ್ವಾಲ್ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ್ದಾಗಿ ಹೇಳಲಾಗಿದೆ. ದೆಹಲಿ ಜಲ ಮಂಡಳಿಯ ಕಚೇರಿಯಲ್ಲಿ ಮಹಿಳೆಯೊಬ್ಬಳು ನೀರಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ದೂರು ನೀಡಲು ತೆರಳಿದಾಗ ಜರ್ವಾಲ್ ಬೆಂಬಲಿಗರು ಆಕೆ ಮತ್ತು ಆಕೆಯ ಪೊಷಕರನ್ನು ನಿಂದಿಸಿದ್ದಾರೆ. ನಂತರ ಆಗಮಿಸಿದ ಜರ್ವಾಲ್ ಆಕೆಯನ್ನು ಬೈದು ತಳ್ಳಾಡಿದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಜರ್ವಾಲ್ ಸ್ಪಷ್ಟನೆ ಹೀಗಿದೆ: ‘ಈ ಆರೋಪ ಸುಳ್ಳು. ಅಂದು ಜಲ ಮಂಡಳಿ ಕಚೇರಿಯ ಉದ್ಘಾಟನೆ ಇತ್ತು. ಆ ಮಹಿಳೆ ಹೆಚ್ಚಿನ ನೀರಿನ ಟ್ಯಾಂಕರ್ ವ್ಯವ್ಯಸ್ಥೆ ಮಾಡಲು ಮನವಿ ಸಲ್ಲಿಸಿದ್ರು. ನಾನು ನನ್ನ ಕೈಯಲ್ಲಾದ ಪ್ರಯತ್ನ ಮಾಡ್ತೀನಿ ಎಂದು ಭರವಸೆ ನೀಡಿದೆ. ನಂತರ ಅಲ್ಲಿಂದ ಕಾರಿನಲ್ಲಿ ಹೊರಟೆ. ಈ ದೌರ್ಜನ್ಯ ನಡೆದಿದ್ದರೆ, ಅಲ್ಲಿದ್ದ ಮಾಧ್ಯಮಗಳು ಇದನ್ನು ಪ್ರಕಟಿಸುತ್ತಿದ್ದವು. ಈ ಆರೋಪ ನಿರಾಧಾರವಾಗಿದ್ದು, ರಾಜಕೀಯ ಪಿತೂರಿ.’

Leave a Reply