ಡಿವೈಎಸ್ಪಿ ಗಣಪತಿ ಆತ್ಮಹತ್ಯೆ, ಇದು ಸಿದ್ದರಾಮಯ್ಯ ಸರ್ಕಾರದ ಕವರ್ ಅಪ್ ಸ್ಟೋರಿ

 

ಡಿಜಿಟಲ್ ಕನ್ನಡ ಟೀಮ್:

ಸಾಮಾನ್ಯ ಜನ ಮತ್ತು ಪೊಲೀಸ್ ವ್ಯವಸ್ಥೆಯ ಹಿರಿಯರು ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ.

‘ಅಲ್ಲಾರೀ, ಆತ್ಮಹತ್ಯೆಗೆ ಮೊದಲು ತನ್ನ ಸಾವಿಗೆ ಇಂಥಿಂಥವರು ಕಾರಣ ಅಂತ ಹೇಳಿಹೋದ ಸಂದರ್ಭದಲ್ಲಿ, ಸಾಮಾನ್ಯರ ವಿಷಯದಲ್ಲಿ ಮೃತನು ಹೆಸರಿಸಿದವನನ್ನು ಮೊದಲು ಒಳಗೆ ಹಾಕುತ್ತಿದ್ದರು. ವಿಚಾರಣೆ ನಂತರದ್ದು. ಆದರೆ ಸರ್ಕಾರದ ಸಚಿವರ ವಿಚಾರದಲ್ಲಿಮಾತ್ರ ಬೇರೆ ನ್ಯಾಯವೇ?’

ಇದು ಕೇವಲ ಜನಸಾಮಾನ್ಯರ ಆಕ್ರೋಶ ಎನ್ನುವುದಾದರೆ, ಫೇಸ್ಬುಕ್ ಹಾಗೂ ಮಾಧ್ಯಮಗಳಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ ಬಿದರಿ ಅವರು ವ್ಯಕ್ತಪಡಿಸಿರುವ ನಿಖರ ಅಭಿಪ್ರಾಯ ಹೀಗಿದೆ- ‘ತನ್ನ ಸಾವಿಗೂ ಕೆಲವು ಗಂಟೆಗಳ ಮೊದಲು ಖಾಸಗಿ ವಾಹಿನಿಗೆ ಕಾರಣವಾಗುವ ವ್ಯಕ್ತಿಗಳನ್ನು ಹೆಸರಿಸಿರುವುದನ್ನು ಮರಣದ ಘೋಷಣೆ ಅಂತ ಪರಿಗಣಿಸಿ ಸಾಕ್ಷ್ಯವನ್ನಾಗಿ ಪರಿಗಣಿಸುವುದಕ್ಕೆ 1872ರ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅನುವು ಮಾಡಿಕೊಡುತ್ತದೆ. ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ ದಾಖಲಿಸುವುದಕ್ಕೆ ಸೂಕ್ತ ಪ್ರಕರಣ ಇದು.’

ಯಾರೇನು ಹೇಳಿದರೇನಂತೆ? ಸಿದ್ದರಾಮಯ್ಯ ಸರ್ಕಾರ ಈ ವಿಷಯದಲ್ಲಿ ಸಚಿವ ಜಾರ್ಜ್ ರಕ್ಷಣೆಗೆ ಅದಾಗಲೇ ಟೊಂಕ ಕಟ್ಟಿ ನಿಂತಿದೆ. ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆಯ ಕವರ್ ಅಪ್ ಸ್ಟೋರಿ ಹೀಗೆ ಸಿದ್ಧವಾಗುತ್ತಿದೆ.

– ಮಡಿಕೇರಿ ಪೋಲಿಸರು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ 174ನೇ ವಿಧಿಯಲ್ಲಿ. ಅಂದರೆ ಅಸಹಜ ಸಾವು ಪ್ರಕರಣವನ್ನು ದಾಖಲಿಸಿದ್ದಾರೆಯೇ ಹೊರತು, ಆತ್ಮಹತ್ಯೆಗೆ ಪ್ರಚೋದನೆ ಎಂಬ ಇಂಡಿಯನ್ ಪಿನಲ್ ಕೋಡಿನ 306ನೇ ವಿಧಿ ಬಳಸಿಲ್ಲ. ಇಷ್ಟಕ್ಕೂ ಗಣಪತಿ ಸಂದರ್ಶನ ನೀಡಿದ್ದಿದ್ದು ಮಡಿಕೇರಿ ವ್ಯಾಪ್ತಿಯ ಸ್ಥಳೀಯ ಚಾನೆಲ್ ಆದ ಟಿವಿ ಒನ್ ಗೆ. ಆ ಸಂದರ್ಶನದಲ್ಲಿಯೇ ಅವರು ತಮಗೇನಾದರೂ ಆದರೆ ಅದಕ್ಕೆ ಮಾಜಿ ಗೃಹ ಸಚಿವ ಕೆ. ಜೆ. ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿ ಎ. ಎಂ. ಪ್ರಸಾದ್ ಹಾಗೂ ಐಜಿಪಿ ಪ್ರಣಬ್ ಮೊಹಾಂತಿ ಕಾರಣ ಎಂದು ದೂಷಿಸಿದ್ದು. ಇವರಿಂದ ತನ್ನ ಮೇಲೆ ಶೋಷಣೆ ಆಗಿದೆ ಎಂದಿದ್ದರು.

– ಶವಪರೀಕ್ಷೆಗೂ ಮುನ್ನವೇ ಐಜಿಪಿ ಬಿ. ಕೆ. ಸಿಂಗ್ ಮಡಿಕೇರಿಯಲ್ಲಿಹೇಳಿಕೆ ಕೊಡುತ್ತಾರೆ- ‘ಕೆಲವು ವೈದ್ಯಕೀಯ ಚೀಟಿಗಳು ಪತ್ತೆಯಾಗಿವೆ. ಆ ಪ್ರಕಾರ ಗಣಪತಿ ಖಿನ್ನತೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಗೊತ್ತಾಗುತ್ತಿದೆ. ಈ ಕುರಿತು ವೈದ್ಯರನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆಯಲಾಗುವುದು.’ ಇಲ್ಲಿಂದಲೇ ಗಣಪತಿ ಸಾವಿಗೆ ಸರ್ಕಾರವನ್ನು ಬಯ್ಯುವಂತಿಲ್ಲ ಎಂಬ ಪ್ರತಿರೋಧದ ಕತೆ ನೇಯ್ಗೆಯಾಗುತ್ತದೆ.

– ಇದನ್ನು ಮುಂದುವರಿಸಿದ್ದು ಪೊಲೀಸ್ ಇಲಾಖೆಯಲ್ಲೇ ಅಧಿಕಾರಿ ಆಗಿರುವ ಮೃತ ಗಣಪತಿ ಅವರ ಸಹೋದರ. ಶುಕ್ರವಾರ ಮಾಧ್ಯಮಗಳ ಮುಂದೆ ಅವರು ಹೇಳಿದ್ದು- ‘ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಗೊತ್ತು. ಆತನಿಗೆ ಖಿನ್ನತೆ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಇಲಾಖೆಯಿಂದ- ಸರ್ಕಾರದಿಂದ ಏನೇನೂ ತೊಂದರೆ ಆಗಿಲ್ಲ. ಆತ ಮಾಡಿಹೋಗಿರುವ ಆರೋಪಗಳೆಲ್ಲ ಇಮ್ಯಾಜಿನರಿ, ಅರ್ಥಾತ್ ಕಾಲ್ಪನಿಕ!’

– ಇವಕ್ಕೆಲ್ಲ ಕಲಶವಿಟ್ಟಂತೆ, ಸಿಐಡಿ ತನಿಖೆ ಸಾಕು- ಸಿಬಿಐಗೆ ವಹಿಸಲ್ಲ ಎಂಬ ಸರ್ಕಾರದ ನಿಲುವು. ಖಂಡಿತ, ಸಿಬಿಐ ಪರಮೋಚ್ಛವೇನಲ್ಲ. ಆದರೆ, ಸರ್ಕಾರದಲ್ಲಿರುವವರ ಹೆಸರುಗಳೇ ಕೇಳಿಬಂದಿರುವಾಗ ಇಲ್ಲಿನ ಸಿಒಡಿಗೆ ಎಷ್ಟು ಸ್ವಾತಂತ್ರ್ಯ ಸಿಕ್ಕೀತು ಎಂಬುದು ಜನಸಾಮಾನ್ಯನಿಗೂ ಗೊತ್ತು.

ಇವೆಲ್ಲ ಸರ್ಕಾರದ ಕವರ್ ಅಪ್ ಕತೆಯ ಹಂತಗಳು.

ಪ್ರಶ್ನೆಗಳು ಸ್ಪಷ್ಟವಾಗಿವೆ.

ಗಣಪತಿಯವರಿಗೆ ಖಿನ್ನತೆ ಇದ್ದಿರಬಹುದು ಎಂಬುದನ್ನು ಒಪ್ಪಿಕೊಂಡರೂ, ಆ ಖಿನ್ನತೆಗೆ ಮೂಲ ಯಾವುದು? ಅವರು ಕೆಲಸ ಮಾಡುತ್ತಿದ್ದ ಕಡೆಯಿಂದ ಆದ ಒತ್ತಡವೇ ಎಂಬುದನ್ನು ಮೃತನ ಹೇಳಿಕೆ ದೃಢೀಕರಿಸುತ್ತಿದೆ. ಹೀಗಿರುವಾಗ ಡಿವೈಎಸ್ಪಿ ಆಗಿರುವ ಇವರ ಸಹೋದರ ಮಾಧ್ಯಮದೆದುರು ಬಂದು, ಆರೋಪಗಳೆಲ್ಲ ಇಮ್ಯಾಜಿನರಿ ಎಂದರೆ ಏನರ್ಥ? ಇವರೇನು ಜನಕ್ಕೆ ಲೂಸಿಯಾ, ಇನ್ಸೆಪ್ಶನ್ ಕತೆ ಹೇಳುವುದಕ್ಕೆ ಹೊರಟಿದ್ದಾರಾ? ಗಣಪತಿ ಖಿನ್ನತೆಗೆ ಪೋಲಿಸ್ ಇಲಾಖೆ ಅಥವಾ ಜಾರ್ಜ್ ಹಾಗೂ ಸರ್ಕಾರದ ಒತ್ತಡ ಕಾರಣವೇ ಅಲ್ಲ ಅಂತ ಈ ಸಹೋದರ ಹೇಗೆ ತಾನೆ ಕ್ಲೀನ್ ಚಿಟ್ ಕೊಟ್ಟಾರು? ಸಹೋದರನ ಬಗ್ಗೆ ತಿಳಿದಿರಬಹುದಾಗಲೀ, ಆತನ ಪರಕಾಯ ಪ್ರವೇಶ ಮಾಡಿ, ಒತ್ತಡ- ಖಿನ್ನತೆಗೆ ಇದು ಕಾರಣವೇ ಅಲ್ಲ ಅಂತ ಪ್ರಮಾಣೀಕರಿಸುವುದು ಹೇಗೆ ಸಾಧ್ಯ? ಇಷ್ಟೆಲ್ಲ ಹೇಳಿಕೆ- ಸಮರ್ಥನೆಗಳನ್ನು ಕೊಡುವ ಬದಲು, ಸಹೋದರನನ್ನು ಇಷ್ಟೆಲ್ಲ ಅರಿತುಕೊಂಡು ಚಿಕಿತ್ಸೆ ಕೊಡಿಸುತ್ತಿರುವವರೇ ಆಗಿದ್ದರೆ, ಅದೇ ಕ್ಷಣದಲ್ಲಿ ವೈದ್ಯಕೀಯ ದಾಖಲೆ- ತೆಗೆದುಕೊಳ್ಳುತ್ತಿದ್ದ ಮಾತ್ರೆ-ಔಷಧ ಎಲ್ಲ ಎದುರಿಗಿಟ್ಟುಬಿಡಬಹುದಿತ್ತಲ್ಲ?

ಓಹ್… ಪಾಪ. ಇಂಥ ದಾಖಲೆಗಳನ್ನೆಲ್ಲ ‘ತರುವುದಕ್ಕೆ’ ಸಮಯ ಹಿಡಿಯುತ್ತದೆ ಅಲ್ಲವೇ?

ಇಷ್ಟಕ್ಕೂ ಈ ಸರ್ಕಾರವನ್ನು ಜನ ನಂಬದೇ ಇರುವುದಕ್ಕೆ ಈವರೆಗೆ ಅದು ಅಧಿಕಾರಿಗಳ ಜತೆ ನಡೆದುಕೊಂಡಿರುವ ಟ್ರ್ಯಾಕ್ ರೆಕಾರ್ಡ್ ಕಾರಣ. ಪೊಲೀಸ್ ಇಲಾಖೆ ಅಂದಮೇಲೆ ಒತ್ತಡ ಇದ್ದೇ ಇರುತ್ತದೆ ಎಂದು ತಿಪ್ಪೆ ಸಾರಿಸುವ ಸ್ಥಿತಿ ಇಲ್ಲಿಲ್ಲ. ಏಕೆಂದರೆ ಲಾಗಾಯ್ತಿನಿಂದ ಒತ್ತಡ ಇದ್ದರೂ ಯಾರೂ ಹೀಗೆಲ್ಲ ಸಾಯುವ ಮಟ್ಟಕ್ಕೆ ಬಂದಿರಲಿಲ್ಲ. ಡಿವೈಎಸ್ಪಿ ಹಂಡಿಭಾಗ್ ನೇಣಿಗೆ ಶರಣಾದರು, ಅದರ ಬೆನ್ನಲ್ಲೇ ಸಚಿವ ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಡಿವೈಎಸ್ಪಿ ಗಣಪತಿ.

ಅಧಿಕಾರಿಗಳ ಮೇಲಿನ ಒತ್ತಡವನ್ನು ಕೇವಲ ಸಾವುಗಳ ಮೇಲೆ ಅಳೆಯಬೇಕಿಲ್ಲ. ಮೈಸೂರಿನ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿಯ ಆಪ್ತ ಸಿಎಂ ಎದುರೇ ಅವಾಜು ಹಾಕುತ್ತಾನೆ. ಇದೀಗ ತಲೆಮರೆಸಿಕೊಂಡಿರುವ ಆತನ ವಿರುದ್ಧ ದೂರು ಹಿಂಪಡೆಯುವ ಒತ್ತಡ ತರುವುದಕ್ಕೆ ಮಂತ್ರಿ ಮಹದೇವಪ್ಪರ ಮಗ ರಾಜಾರೋಷವಾಗಿ, ಸರ್ಕಾರಿ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿಬರುತ್ತಾರೆ. ಈ ಬಗ್ಗೆ ಒಂದು ನೈತಿಕ ನಿಲುವು ತಳೆಯಬೇಕು ಎಂಬ ಮನಸ್ಸು ಮುಖ್ಯಮಂತ್ರಿಗೆ ಬರುವುದೇ ಇಲ್ಲ. ಲಂಚ ಸ್ವೀಕರಿಸುವುದಕ್ಕೆ ಪ್ರಭಾವಿಸಿದ ಆರೋಪ ಹೊತ್ತ ಸಿದ್ದು ಸಂಪುಟ ಸಚಿವರ ಪುತ್ರ, ಭ್ರಷ್ಟಾಚಾರ ನಿಗ್ರಹ ದಳದ ಪೋಲಿಸ್ ಅಧಿಕಾರಿಗಳ ಹೆಗಲ ಮೇಲೆ ಕುಳಿತು ಪಾರ್ಟಿ ಮಾಡುತ್ತಾನೆ. ಅಧಿಕಾರಿಗಳ ಅಮಾನತಾದರೂ ಸುನಿಲ್ ಬೋಸ್ ರಾಜ್ಯಭಾರಕ್ಕೇನೂ ಕುಂದಾಗಿಲ್ಲ.

ಇಷ್ಟನ್ನೆಲ್ಲ ಎದುರಿಗಿಟ್ಟುಕೊಂಡು, ಅಧಿಕಾರಿಗಳ ಆತ್ಮಹತ್ಯೆಗೂ ತಮಗೂ ಸಂಬಂಧವೇ ಇಲ್ಲ ಅಂದರೆ ಯಾರು ಕೇಳುತ್ತಾರೆ? ಈ ಸರ್ಕಾರದ ನಿರ್ಲಜ್ಜತೆಗೆ ಎಲ್ಲಿದೆ ಮಿತಿ?

Leave a Reply