ಅರೆರೆ ಹೀಲಿಯಂ ! ತಾಂಜೇನಿಯದಲ್ಲಿ ನಿಕ್ಷೇಪ ಸಿಕ್ಕರೆ ಜಗತ್ತೇಕೆ ಕುಣಿಯುತ್ತಿದೆ?

author-ananthramuಯಾವ ದೇಶದಲ್ಲೇ ಅತಿ ದೊಡ್ಡ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ನಿಕ್ಷೇಪ ಸಿಕ್ಕಿದ್ದರೂ ಜಗತ್ತು ಇಷ್ಟು ಸಂಭ್ರಮಿಸುತ್ತಿರಲಿಲ್ಲ. ಇವೇನೂ ಜೀವನಾವಶ್ಯಕ ವಸ್ತುಗಳಲ್ಲವಲ್ಲ. ಆದರೆ ತಾಂಜೇನಿಯದಂಥ ಬಡ ರಾಷ್ಟ್ರದಲ್ಲಿ ಹೀಲಿಯಂ ನಿಕ್ಷೇಪವನ್ನು ಇಯಾಸಿ ಎಂಬ ಸರೋವರದ ಬಳಿ ನಿಸರ್ಗ ಹಲವು ಕೋಟಿ ವರ್ಷಗಳಿಂದ ಮುಚ್ಚಿಟ್ಟಿತ್ತು. ಈಗ ಇಂಗ್ಲೆಂಡಿನ ಆಕ್ಸ್’ಫರ್ಡ್ ಮತ್ತು ಡ್ಯುರ್’ಹ್ಯಾಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಾಲಿಟ್ಟೇಬಿಟ್ಟರು ಸರೋವರದ ಬಳಿಯ ಕೆಸರಿನ ಮಡುವಿಗೆ. ಕೇಕೆ ಹಾಕಿದರು, ಕೆಸರಿನಿಂದ ಹೊರಡುತ್ತಿದ್ದ ಗುಳ್ಳೆಗಳನ್ನು ಬಾಟಲಿಯಲ್ಲಿ ಸಂಗ್ರಹಿಸಿದರು. ಅದೇ ಉತ್ಸಾಹದಲ್ಲಿ ಜಗತ್ತಿಗೆ ಸಾರಿದರು ‘ಇಲ್ಲಿದೆ ಜಗತ್ತಿನ ಅತಿ ದೊಡ್ಡ ಹೀಲಿಯಂ ನಿಕ್ಷೇಪ. ಕೊನೆಯಪಕ್ಷ ಏಳು ವರ್ಷಗಳವರೆಗೆ ಜಗತ್ತೇ ಬಳಸಬಹುದು. ಇದೊಂದೇ ನಿಕ್ಷೇಪದಲ್ಲಿ 54 ಬಿಲಿಯನ್ ಘನ ಅಡಿ (1.53 ಬಿಲಿಯನ್ ಘನ ಮೀಟರ್) ಹೀಲಿಯಂ ಇದೆ’ -ಎಂದು ಲೆಕ್ಕಕೊಟ್ಟಿದ್ದಾರೆ. ಹಾಗೆಯೇ ಇಲ್ಲಿಂದ ಸೋರುವ ಅನಿಲವನ್ನು ಸಂಗ್ರಹಿಸಿದರೆ 12 ಲಕ್ಷ ಎಂ.ಆರ್.ಐ. ಸ್ಕ್ಯಾನರ್‍ಗಳಿಗೆ ತುಂಬಬಹುದು ಅಥವಾ ಆರು ಲಕ್ಷ ಒಲಂಪಿಕ್ ಈಜುಕೊಳದ ಗಾತ್ರದಷ್ಟು ಜಾಗವನ್ನು ಇದೊಂದೇ ತುಂಬಬಲ್ಲದು ಎಂಬ ಸುದ್ದಿ ಸ್ಫೋಟಿಸಿದ್ದಾರೆ.

ಈಗ ಹೀಲಿಯಂ ಕೊರತೆಯನ್ನು ಪ್ರಪಂಚವೇ ಅನುಭವಿಸುತ್ತಿದೆ. ‘ಬಲೂನಿನಲ್ಲಿ ಹೀಲಿಯಂ ತುಂಬಿ ಜನರನ್ನು ರಂಜಿಸುತ್ತಿರುವುದನ್ನು ಸ್ಟಾಪ್ ಮಾಡಿ’ ಎನ್ನುತ್ತಿದೆ ಟೋಕಿಯೋ ಆ ದೇಶದಲ್ಲಿರುವ ಡಿಸ್ನಿಲ್ಯಾಂಡಿಗೆ. ಈಗಲೂ ಪಾರ್ಟಿ ಹಾಲ್‍ಗಳಲ್ಲಿ ಹೀಲಿಯಂ ತುಂಬಿದ ಬಲೂನುಗಳನ್ನು ನಮ್ಮಲ್ಲೂ ನೋಡಬಹುದು. ಹವಾಮಾನ ಅಧ್ಯಯನ ಮಾಡಲು ಹೀಲಿಯಂ ತುಂಬಿದ ದೊಡ್ಡ ಬಲೂನುಗಳೂ ಆಕಾಶಕ್ಕೇರುತ್ತಿರುವುದನ್ನು ನೋಡುವುದೇ ಚಂದ.

OLYMPUS DIGITAL CAMERA

ಹೀಲಿಯಂ ಏಕೆ ಇಷ್ಟೊಂದು ದೊಡ್ಡ ಸುದ್ದಿ ಮಾಡಿದೆ? ಏಕೆಂದರೆ ಅದಕ್ಕೆ ನಿಜವಾದ ಉಪಯೋಗ ಇರುವುದರಿಂದ. ನಿಮ್ಮ ಅನುಭವಕ್ಕೂ ಬಂದಿರಬಹುದು. ತಲೆಗೋ, ಶರೀರದ ಬೇರೆ ಯಾವದೋ ಭಾಗಕ್ಕೆ ಏಟು ಬಿದ್ದಿದ್ದರೆ ತಕ್ಷಣವೇ ವೈದ್ಯರು ಎಂ.ಆರ್.ಐ. ಮಾಡಿಸಿ ಎಂದು ಹೇಳುತ್ತಾರೆ. ರೋಗಿಗಳಿಗಿಂತ ಅವರ ಮನೆಯವರಿಗೆ ಬಾಯಿಪಾಠವಾದಂತಿದೆ ಈ ಮೆಷಿನ್ ಹೆಸರು. ಏಕೆಂದರೆ ಎಂಟರಿಂದ ಹತ್ತುಸಾವಿರ ರೂಪಾಯಿ ಕಕ್ಕಬೇಕಲ್ಲ! ಎಂ.ಆರ್.ಐ. ಎಂಬುದು ‘ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್’ ಎನ್ನುವುದರ ಸಂಕ್ಷಿಪ್ತ ರೂಪ. ಇಲ್ಲಿ ರೇಡಿಯೋ ಅಲೆಗಳ ಜೊತೆಗೆ ಅತಿವಾಹಕ ಮ್ಯಾಗ್ನೆಟ್ ಬಳಸಿ, ದೊಡ್ಡ ಕಾಂತಕ್ಷೇತ್ರ ಉಂಟುಮಾಡಲಾಗುವುದು. ಅದರ ಸುತ್ತ ಇರುವ ಕಾಯಿಲ್‍ಗಳ ಮೂಲಕ ಕರೆಂಟ್ ಪ್ರವಹಿಸುತ್ತದೆ. ಈ ಕಾಯಿಲ್‍ಗಳಲ್ಲಿ ನಿರೋಧಕ ಶಕ್ತಿ ಇಲ್ಲವಾಗಿಸಬೇಕು. ಅಂದರೆ ‘0’ ಗೆ ತರಬೇಕು. ಇದು ಸಾಧ್ಯವಾಗಬೇಕಾದರೆ ದ್ರವರೂಪದ ಹೀಲಿಯಂಗೆ ಅದ್ದಬೇಕು. -269 ಡಿಗ್ರಿ ಸೆ.ಗೆ ಉಷ್ಣತೆ ಇಳಿಯುತ್ತದೆ. ಒಂದೊಂದು ಎಂ.ಆರ್.ಐ. ಸ್ಕ್ಯಾನರ್ ಅಂದಾಜು 1,700 ಲೀಟರ್ ದ್ರವರೂಪದ ಹೀಲಿಯಂ ಬಳಸುತ್ತದೆ. ಆಗಾಗ ಅದನ್ನು ಬದಲಿಸುತ್ತಿರಬೇಕು.

MRI image

ಹೀಲಿಯಂ `ದೇವಕಣ’ ಉತ್ಪಾದಿಸಿದ ಲಾರ್ಜ್ ಹೆಡ್ರಾನ್ ಕೊಲೈಡರ್‍ಗೂ ಬೇಕು. ಇಲ್ಲಿ ಅಯಸ್ಕಾಂತವನ್ನು -271 ಡಿಗ್ರಿ ಸೆ.ಗೆ ಇಳಿಸಲು 120 ಟನ್ನು ದ್ರವಹೀಲಿಯಂ ಬಳಸಲಾಗುತ್ತದೆ. ಹೀಲಿಯಂಗೆ ಕೆಲವು ವಿಶಿಷ್ಟ ಗುಣಗಳಿವೆ. ಅದು ಹೈಡ್ರೋಜನ್ ನಂತರ ಅತಿ ಹಗುರ ಅನಿಲ. ಬಣ್ಣವಿಲ್ಲ, ರುಚಿಯಿಲ್ಲ, ವಾಸನೆ ಇಲ್ಲ. ಅಷ್ಟೇಕೆ ಬೇರೆ ಧಾತುಗಳೊಂದಿಗೆ ವರ್ತಿಸುವುದೂ ಇಲ್ಲ. ಇಂಥದ್ದೊಂದು ದೊಡ್ಡ ಜಡಗುಂಪೇ ಇದೆ. ನಿಯಾನ್, ಆರ್ಗಾನ್, ಕ್ರಿಪ್ಟಾನ್, ರಾಡಾನ್-ಇವುಗಳ ಅಧ್ಯಕ್ಷಪೀಠ ಹೀಲಿಯಂಗೆ. ಇದು ಅತಿ ವಿರಳವೆಂದು ಅದಕ್ಕೆ ನೋಬೆಲ್ ಪಟ್ಟ ಕಟ್ಟಿದ್ದೂ ಉಂಟು.

ಭೂಮಿ ಘನೀಭವಿಸುವ ಕಾಲಕ್ಕೆ ಬಹಳಷ್ಟು ಹೀಲಿಯಂ ಇತ್ತು. ಆದರೆ ಭೂಮಿ ಅದನ್ನು ಸೆರೆಹಿಡಿಯಲಾಗದೆ ಅಂತರಿಕ್ಷಕ್ಕೆ ಬಿಟ್ಟುಕೊಟ್ಟಿತು. ಈಗಲೂ ಜ್ವಾಲಾಮುಖಿಗಳ ಮಾರ್ಗದಲ್ಲಿ ಭೂಮಿಯೊಳಗಿಂದ ಹೊರಬರಲು ಅದು ಹವಣಿಸುತ್ತದೆ. ಹೈಡ್ರೋಜನ್ ನಂತರ ಅತಿ ಹಗುರ ಅಂದರೆ ಗಾಳಿಗಿಂತಲೂ ಹಗುರ, ನೇರವಾಗಿ ಈ ಅನಿಲವನ್ನು ಪಡೆಯುವುದು ಅಪರೂಪ. ತೈಲ ಮತ್ತು ನೈಸರ್ಗಿಕ ಅನಿಲಗಳೊಡನೆ ಸಂಘಮಾಡಿ ಅದು ಹೊರಬೀಳುತ್ತದೆ. ಯುರೇನಿಯಂ ಖನಿಜ ವಿಕಿರಣಸೂಸಿ ಕೊನೆಗೆ ಹೀಲಿಯಂ ಆಗುತ್ತದೆ.

ವಿಚಿತ್ರವೆಂದರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಧಾತುಗಳಲ್ಲಿ ಹೈಡ್ರೋಜನ್’ಗೆ ಮೊದಲ ಸ್ಥಾನ, ಹೀಲಿಯಂಗೆ ಎರಡನೇ ಸ್ಥಾನ. ಆದರೆ ಭೂಮಿಯ ವಾಯುಗೋಳದಲ್ಲಿ ಇದರ ಪ್ರಮಾಣ ದಶಲಕ್ಷದಲ್ಲಿ 5.2 ಭಾಗ ಅಷ್ಟೇ. ಸೂರ್ಯನ ಗರ್ಭದಲ್ಲಿ ಪ್ರತಿ ಸೆಕೆಂಡಿಗೆ 620 ಮಿಲಿಯನ್ ಟನ್ನು ಹೈಡ್ರೋಜನ್ ಹೀಲಿಯಂ ಆಗಿ ಪರಿವರ್ತನೆ ಆಗುತ್ತದೆ. ಆದರೆ ನಮಗೆ ಸಿಕ್ಕಬೇಕಲ್ಲ? -269 ಸೆ. ಉಷ್ಣತೆಯಲ್ಲಿ ಹೀಲಿಯಂ ದ್ರವವಾಗುತ್ತದೆ. -272 ಡಿಗ್ರಿ. ಸೆ. ನಲ್ಲಿ ಘನವಾಗಿಬಿಡುತ್ತದೆ. ಈ ಗುಣವೇ ಪರಮ ಶೈತ್ಯದಲ್ಲಿ ಕೆಲಸ ಮಾಡಲು ಹೀಲಿಯಂಗೆ ರಾಜಪಟ್ಟವನ್ನು ಕೊಟ್ಟಿದೆ. ಅಪೋಲೋ ಶ್ರೇಣಿಯ ಅಂತರಿಕ್ಷ ನೌಕೆಗಳಲ್ಲಿ ದ್ರವರೂಪದ ಆಕ್ಸಿಜನ್ ಮತ್ತು ಹೈಡ್ರೋಜನ್ನನ್ನು ಇಂಧನವಾಗಿ ಬಳಸಿದಾಗ, ಅವನ್ನು ತಣ್ಣಗಿಟ್ಟಿದ್ದು ಹೀಲಿಯಂ. ಹೀಲಿಯಂ, ನಿಯಾನ್ ಬಳಸಿದ ಸ್ಕ್ಯಾನರ್’ನಿಂದ ಬಾರ್ ಕೋಡ್ ಓದಬಹುದು, ಬೆಲೆ ತಿಳಿಯಬಹುದು.

ಸಮುದ್ರದಲ್ಲಿ ಆಳಕ್ಕೆ ಮುಳುಗುವವರು ಆಕ್ಸಿಜನ್ ಮತ್ತು ನೈಟ್ರೋಜನ್‍ಗಳ ಸಿಲಿಂಡರ್ ಒಯ್ಯುತ್ತಾರೆ. ಆಳಕ್ಕೆ ಹೋದಂತೆ ಅವೇ ಭಾರವಾಗಿಬಿಡುತ್ತವೆ. ಅವನ್ನು ಹಗುರಗೊಳಿಸಲು ಹೀಲಿಯಂ ಬೇಕೇಬೇಕು. ಜೆರ್ಮೇನಿಯಂ ಮತ್ತು ಸಿಲಿಕಾನ್ ಉತ್ಪಾದನೆಯಲ್ಲಿ ಅವು ಬೇರೆಯ ಧಾತುಗಳೊಂದಿಗೆ ಪ್ರತಿಕ್ರಿಯಿಸಬಾರದು ಎಂದು ರಕ್ಷಕವಾಗಿ ಹೀಲಿಯಂ ಇರಿಸುವುದುಂಟು. ಸ್ವಲ್ಪ ಹೆಚ್ಚು ಹೀಲಿಯಂ ಮೂಸಿದರೂ ಸಾಕು, ನಿಮ್ಮ ಮನೆಯವರೇ ಬೆಚ್ಚಿಬೀಳುವಷ್ಟು ನಿಮ್ಮ ಧ್ವನಿ ಬದಲಾಗಿರುತ್ತದೆ, ಥೇಟ್ ಬಾತುಕೋಳಿ ಹೊರಡಿಸುವ ಧ್ವನಿಯಂತೆ. ಹೀಲಿಯಂ ಬಳಸುವ ಕ್ಷೇತ್ರಗಳು ನೂರಾರಿವೆ.

ಸದ್ಯ ತಾಂಜೇನಿಯದ ನಿವ್ವಳ ದೇಶೀಯ ಉತ್ಪನ್ನ (ಜಿ.ಡಿ.ಪಿ) 46.8 ಬಿಲಿಯನ್ ಡಾಲರ್‍ನಷ್ಟಿದೆ. ಹೀಲಿಯಂ ನಿಕ್ಷೇಪ ಇದಕ್ಕೆ ಇನ್ನೂ 3.5 ಬಿಲಿಯನ್ ಡಾಲರ್ ಕೊಡುತ್ತದೆ ಎಂದು ಊಹಿಸಿದೆ. ಈ ಅನಿಲಕ್ಕಿರುವ ತಾಕತ್ತು ಅದು. ಆದರೆ ಸ್ಥಳಿಯರಿಗೆ ಹೀಲಿಯಂ ನಿಕ್ಷೇಪ ಪಜೀತಿ ತಂದಿದೆ. ಇದು ದೊರೆಯುತ್ತಿರುವುದು ತಾಂಜೇನಿಯದ ನೈಋತ್ಯದಲ್ಲಿರುವ ಕುಸಿದುಹೋದ ಕಮರಿಯೊಂದರಲ್ಲಿ. ಈಗಾಗಲೇ ಅಲ್ಲಿ ಸ್ಥಳೀಯರು ದೊಡ್ಡ ಪ್ರಮಾಣದ ಕೃಷಿ ಮಾಡುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸಬೇಕು. ಇದು ಮೊದಲಿನಿಂದಲೂ ಸಂಘರ್ಷಕ್ಕೆ ಎಡೆಕೊಟ್ಟಿದೆ. 2010ರಲ್ಲೇ ವಿಶ್ವಸಂಸ್ಥೆ ತಾಂಜೇನಿಯ ವಿರುದ್ಧ ಗರಂ ಆಗಿತ್ತು. ತಾಂಜೇನಿಯದ ಅಧ್ಯಕ್ಷ ಮ್ಯಾಗುಫುಲಿ `ಬುಲ್‍ಡೋಜರ್’ ಎಂಬ ಅಪಖ್ಯಾತಿಗೆ ಒಳಗಾಗಿದ್ದಾನೆ. ಹೀಲಿಯಂ ಕೊಟ್ಟಿರುವ ಸದವಕಾಶವನ್ನು ಜಿ.ಡಿ.ಪಿ. ವರ್ಧಿಸಲು ಬಿಟ್ಟುಕೊಡುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಜೊತೆಗೆ ಇಡೀ ಜಗತ್ತು ದ್ರವ ಹೀಲಿಯಂಗಾಗಿ ಅಮೆರಿಕ, ಪೋಲೆಂಡ್, ರಷ್ಯ, ಕ್ವತಾರ್, ಚೈನಾ ಮತ್ತು ಆಸ್ಟ್ರೇಲಿಯದಲ್ಲಿರುವ ಒಟ್ಟು 20 ಸ್ಥಾವರಗಳ ಮೇಲೆ ಅವಲಂಬಿಸಿದೆ. ಭಾರತವೂ ಕೂಡ ತನಗೆ ಬೇಕಾದ ಹತ್ತು ಸಾವಿರ ಘನ ಮೀಟರ್ ಹೀಲಿಯಂಗೆ ಅಮೆರಿಕದತ್ತಲೇ ಮುಖಮಾಡಬೇಕಾಗಿದೆ. ಒಂದು ಲೀಟರ್ ದ್ರವ ಹೀಲಿಯಂ ಬೆಲೆ ಸದ್ಯ ಐದು ಅಮೆರಿಕನ್ ಡಾಲರ್. ಈ ಹಿನ್ನೆಲೆಯಲ್ಲಿ ಹೀಲಿಯಂ ಈಗ ತಾಂಜೇನಿಯಕ್ಕೆ `ಗೇಮ್ ಚೇಂಜರ್’ ಆಗಲಿದೆ.

Leave a Reply