ಗೃಹ ಇಲಾಖೆಯಲ್ಲಿ ಸಿದ್ದರಾಮಯ್ಯ ಬಳಗದ ಹಸ್ತಕ್ಷೇಪಕ್ಕೆ ಸಚಿವ ಪರಮೇಶ್ವರ್ ಆಕ್ಷೇಪ!

G Parameshwara speaks during celebration of his 4 years completion as KPCC President at KPCC Office in Bangalore on Wednesday. Chief Minister Siddaramaia, Minister DK Shivakumar and others are seen. –KPN ### Parameshwara completed 4 years as KPCC president

(ಸಂಗ್ರಹ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಅಂತೂ-ಇಂತೂ ಡಾ. ಜಿ. ಪರಮೇಶ್ವರ್ ನಿಜಕ್ಕೂ ತಾವೇ ಗೃಹ ಸಚಿವರು ಅನ್ನೋದನ್ನ ನೆನಪಿಸಿಕೊಂಡಿದ್ದಾರೆ!

ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬಳಗದ ಮಿತಿಮೀರಿದ ಹಸ್ತಕ್ಷೇಪದ ಬಗ್ಗೆ ಖುದ್ದು ಸಿದ್ದರಾಮಯ್ಯ ಎದಿರೇ ಅಸಮಾಧಾನ ದಾಖಲಿಸಿದ್ದಾರೆ. ಇನ್ನು ಮುಂದೆ ಇಂಥದ್ದನ್ನೆಲ್ಲ ಸಹಿಸುವುದಿಲ್ಲ ಎಂಬ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ಆ ಮೂಲಕ ತಾವೇ ಗೃಹ ಮಂತ್ರಿ ಎಂಬುದನ್ನು ನಿರೂಪಿಸಿದ್ದಾರೆ.

ಪರಮೇಶ್ವರ್ ಅವರಿಗೆ ಇಂಥದೊಂದು ಜ್ಞಾನೋದಯ ಆಗಲು ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಆಗಬೇಕಿತ್ತೇನೋ. ಅವರ ಆತ್ಮಹತ್ಯೆ ರಾಜ್ಯಾದ್ಯಂತ ಸ್ಫೋಟಿಸಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಓಂಪ್ರಕಾಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಶುಕ್ರವಾರ ಕರೆದಿದ್ದರು. ಈ ಸಂದರ್ಭದಲ್ಲಿ ಸಿಎಂ ಬಳಿ ಪರಮೇಶ್ವರ್ ತಮ್ಮ ಈ ಅಸಮಾಧಾನ ದಾಖಲಿಸಿದ್ದಾರೆ.

ತಮ್ಮ ಇಲಾಖೆಯಲ್ಲಿ ಸಿಎಂ ಮತ್ತು ಅವರ ಆಪ್ತೇಷ್ಟರ ಹಸ್ತಕ್ಷೇಪ ಅತಿಯಾಗಿದೆ. ವರ್ಗಾವಣೆಯಿಂದ ಹಿಡಿದು ಅನೇಕ ವಿಚಾರಗಳು ಅಂತಿಮ ಕ್ಷಣದಲ್ಲಷ್ಟೇ ತಮ್ಮ ಗಮನಕ್ಕೆ ಬರುತ್ತಿವೆ. ಈ ಯಾವುದೇ ವಿಚಾರಗಳ ಬಗ್ಗೆ ತಮ್ಮ ಜತೆ ಸಮಾಲೋಚನೆ ನಡೆಯುತ್ತಿಲ್ಲ. ತಮ್ಮನ್ನು ಕತ್ತಲಲ್ಲಿಟ್ಟು ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ತಾವು ಗೃಹ ಮಂತ್ರಿ ಹೌದೋ, ಅಲ್ಲವೋ ಎನ್ನುವಷ್ಟರ ಮಟ್ಟಿಗೆ ಈ ತೀರ್ಮಾನಗಳು ಒಳಗೊಳಗೇ ಆಗುತ್ತಿವೆ. ಇದು ತಮಗೆ ಅತೀವ ನೋವು ತಂದಿದ್ದು, ಮುಂದೆ ಇದನ್ನು ಸಹಿಸಿಕೊಳ್ಳಲು ಆಗದು ಎಂದು ಅವರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವಾಲಯದ ಸಲಹೆಗಾರ ನೆಪದಲ್ಲಿ ಮುಖ್ಯಮಂತ್ರಿಯವರು ತಮ್ಮ ಮೇಲೆ ಹೇರಿರುವ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರು ಪರಮೇಶ್ವರ್ ಅವರ ಪ್ರಮುಖ ಗುರಿಯಾಗಿದ್ದರು.

ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಖಾಸಗಿ ಟಿವಿ ಚಾನೆಲ್ಲಿಗೆ ನೀಡಿರೋ ಸಂದರ್ಶನದಲ್ಲಿ ಹಿಂದೆ ಗೃಹ ಖಾತೆ ನಿಭಾಯಿಸುತ್ತಿದ್ದ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಅವರ ಕಿರುಕುಳದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದು ಬರೀ ರಾಜ್ಯದಲ್ಲಷ್ಟೇ ಅಲ್ಲದೇ ದೇಶಾದ್ಯಂತ ಜನರ ಗಮನ ಸೆಳೆದಿದೆ. ಟಿವಿ ಚಾನೆಲ್ ಗಳ ಮೂಲಕ ಖುದ್ದು ಗಣಪತಿ ಅವರ ಬಾಯಿಂದಲೇ ಸರಕಾರದ ಪ್ರತಿನಿಧಿಗಳ ವಿರುದ್ಧ ಆರೋಪಗಳನ್ನು ಆಲಿಸಿದ ಜನ ವ್ಯಗ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಮುಂದೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಲು ಸಿದ್ದರಾಮಯ್ಯ ಈ ಸಭೆ ಕರೆದಿದ್ದರು. ಅಲ್ಲಿ ಪರಮೇಶ್ವರ್ ಈ ಅನಿರೀಕ್ಷಿತ ಪ್ರತಿಕ್ರಿಯೆ ದಾಖಲಿಸಿದ್ದು, ಇದನ್ನು ನಿರೀಕ್ಷೆ ಮಾಡದಿದ್ದ ಮುಖ್ಯಮಂತ್ರಿಯವರು ಮುಜುಗರ ಅನುಭವಿಸಿದ್ದಾರೆ.

ಆದರೆ ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಸಿದ್ದರಾಮಯ್ಯನವರು ತಕ್ಷಣವೇ ತಮ್ಮ ಕೋಪವನ್ನು ಡಿಜಿಪಿ ಓಂಪ್ರಕಾಶ್ ವಿರುದ್ಧ ತಿರುಗಿಸಿದ್ದಾರೆ. ಅವರ ಮೇಲೆ ಹರಿಹಾಯ್ದಿದ್ದಾರೆ.  ಪೊಲೀಸ್ ಇಲಾಖೆಯಲ್ಲಿ ಏನು ನಡೆಯುತ್ತಿದೆ, ಕೆಲವು ಹಿರಿಯ ಅಧಿಕಾರಿಗಳ ವರ್ತನೆಯಿಂದ ಜನರಿಗೆ ನಾವು ಉತ್ತರ ಕೊಡಬೇಕಾಗಿ ಬಂದಿದೆ.  ಗಣಪತಿ ಪ್ರಕರಣ ನಿರ್ವಹಣೆಯಲ್ಲಿ ಆಗಿರುವ ಲೋಪವೇ ಇದಕ್ಕೆಲ್ಲ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಪರಮೇಶ್ವರ್ ಗೆ ಸಮಾಧಾನ ಮಾಡಲು ಯತ್ನಿಸಿದ್ದಾರೆ.

ಇದಾದ ನಂತರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಗಣಪತಿ ಆತ್ಮಹತ್ಯೆ ಸೃಷ್ಟಿಸಿರುವ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿ, ಆರೋಪಿ ಸ್ಥಾನದಲ್ಲಿ ನಿಂತಿರುವ ಸಚಿವ ಜಾರ್ಜ್ ಪರ ಎಲ್ಲ ಸಹೋದ್ಯೋಗಿಗಳು ಸಹಕರಿಸಬೇಕು ಎಂದು ಸೂಚನೆ ನೀಡಿದರು.

ಅಂದಹಾಗೆ ಶುಕ್ರವಾರ ಸಂಜೆ 76 ಮಂದಿ ಪೊಲೀಸ್ ಇನ್ಸಪೆಕ್ಟರ್ ಗಳು ಹಾಗೂ 11 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಇದು ಪರಮೇಶ್ವರ್ ಗಮನಕ್ಕೆ ಬಂದು ಆಗಿದೆಯೋ, ಅಂತಿಮ ಕ್ಷಣದಲ್ಲಿ ಅವರ ಗಮನಕ್ಕೆ ತರಲಾಗಿದೆಯೋ ಅಥವಾ ಅವರ ಗಮನಕ್ಕೆ ಬಾರದೆಯೇ ಆಗಿದೆಯೋ ಎಂಬುದು ಗೊತ್ತಾಗಿಲ್ಲ.

Leave a Reply