ಆಫ್ರಿಕಾದಲ್ಲಿ ಮೋದಿ, ಮರಳಿದ ಮಧುಕರ ಶೆಟ್ಟಿ, ಸರ್ಕಾರದ ವಿರುದ್ಧ ಮುಂದುವರಿದ ಪ್ರತಿಭಟನೆ, ಹೆಲ್ಮೆಟ್ ಇಲ್ದೆ ಪೆಟ್ರೋಲ್ ಇಲ್ಲ…

ಡಿಜಿಟಲ್ ಕನ್ನಡ ಟೀಮ್:

ಗಾಂಧಿಯನ್ನು ಹೊರದಬ್ಬಿದ್ದ ರೈಲಲ್ಲಿ ಮೋದಿ ಪ್ರಯಾಣ

ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಯನ್ನು ಹೊರದಬ್ಬಲಾಗಿದ್ದ ರೈಲಿನಲ್ಲಿ ಶನಿವಾರ ಪ್ರಯಾಣ ಮಾಡಿದ್ದು ಭಾರತ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಭೇಟಿಯ ಪ್ರಮುಖ ಹೈಲೆಟ್.

ವರ್ಣಭೇದ ವಿರುದ್ಧ ಮಹಾತ್ಮ ಗಾಂಧಿ ಅವರ ಹೋರಾಟಕ್ಕೆ ನಮನ ಸಲ್ಲಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಪೆಂಟ್ರಿಚ್ ನಿಂದ ಪಿಟರ್ಮರಿಚ್ಬರ್ಗ್ ವರೆಗೂ ಸುಮಾರು 15 ಕಿ.ಮೀ. ದೂರದಷ್ಟು ಪ್ರಯಾಣ ಮಾಡುವ ಮಾಡಿದರು.

ಈ ಪ್ರಯಾಣದ ನಂತರ ಪ್ರಧಾನಿ ಮೋದಿ ಹೇಳಿದಿಷ್ಟು:

‘ಈ ಪ್ರವಾಸ ನನಗೆ ತೀರ್ಥಯಾತ್ರೆಯಂತಾಗಿದೆ. ಭಾರತದ ಸ್ವತಂತ್ರ ಹೋರಾಟದ ಯಾತ್ರೆ ಹಾಗೂ ಮಹಾತ್ಮ ಗಾಂಧಿ ಅವರ ಜೀವನದ ಭಾಗವಾಗಿದ್ದ ಪ್ರಮುಖ ಸ್ಥಳಗಳಿಗೆ ನಾನು ಭೇಟಿ ಮಾಡುವ ಸೌಭಾಗ್ಯ ಈ ಪ್ರವಾಸ ಕಲ್ಪಿಸಿಕೊಟ್ಟಿದೆ. 1893 ನಲ್ಲಿ ವಕೀಲರಾಗಿದ್ದ ಮೋಹನ್ ದಾಸ್ ಅವರನ್ನು ರೈಲಿನಿಂದ ಹೊರದಬ್ಬಿದ್ದರು. ಅಂದು ಅವರ ರೈಲು ಪ್ರಯಾಣ ಅಂತ್ಯವಾಗಿ ಮಹಾತ್ಮರಾಗುವತ್ತ ತಮ್ಮ ಯಾತ್ರೆ ಆರಂಭಿಸಿದರು. ಮೋಹನ್ ದಾಸ್ ಅವರನ್ನು ಮಹಾತ್ಮರಾಗಿ ಬೆಳೆಯಲು ಮುನ್ನುಡಿ ಬರೆದ ಸ್ಥಳ ಇದಾಗಿದೆ.’

ಇನ್ನು ಗಾಂಧಿ ಅವರು 1904 ರಲ್ಲಿ ಡರ್ಬನ್ ನಿಂದ 15 ಕಿ.ಮೀ ದೂರದಲ್ಲಿರುವ ಇನಾಂದ ಪ್ರದೇಶದಲ್ಲಿ ಸ್ಥಾಪಿಸಿದ ಫೋನೆಕ್ಸ್ ಸೆಟಲ್ಮೆಂಟ್ ಗೂ ಭೇಟಿ ನೀಡಲಿದ್ದಾರೆ. ಸಂಜೆ ಡರ್ಬನ್ ಸಿಟಿ ಹಾಲ್ ನಲ್ಲಿ ಡರ್ಬನ್ ನ ಹೈ ಕಮಿಷನರ್ ಮತ್ತು ಮೇಯರ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರೆ ಎಳೆಯಲಿದ್ದಾರೆ.

ಮಧುಕರಶೆಟ್ಟಿ ಮರಳಿ ಸೇವೆಗೆ

ಲೋಕಾಯುಕ್ತ ಸಂಸ್ಥೆಯಲ್ಲಿನ ಬೆಳವಣಿಗೆಗಳಿಂದ ಬೇಸರಗೊಂಡು, ವ್ಯಾಸಂಗದ ಕಾರಣ ಒಡ್ಡಿ ವಿದೇಶಕ್ಕೆ ತೆರಳಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಮತ್ತೆ ಸರ್ಕಾರಿ ಸೇವೆಗೆ ಮರಳಿದ್ದಾರೆ. ರಾಜ್ಯ ಸರ್ಕಾರ ಇಂದು ಎಂಟು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಶೆಟ್ಟಿ ಅವರಿಗೆ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯನ್ನಾಗಿ ನೇಮಿಸಿದೆ.

ಈ ಮೊದಲು ಬೆಂಗಳೂರಿನ ಸಂಚಾರಿ ವಿಭಾಗದಲ್ಲಿ ಡಿಸಿಪಿಯಾಗಿ ಮತ್ತು ಲೋಕಾಯುಕ್ತ ಎಸ್‍ಪಿಯಾಗಿ ಕೆ.ಮಧುಕರ್ ಶೆಟ್ಟಿ ಕೆಲಸ ಮಾಡಿದ್ದರು.

ಲೋಕಾಯುಕ್ತ ಎಸ್‍ಪಿಯಾಗಿದ್ದ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಮತ್ತು ಅವರ ಪುತ್ರ ಸೇರಿದಂತೆ ಹಲವು ನಾಯಕರು ಸಂಕಷ್ಟಕ್ಕೆ ಸಿಲುಕಿದ್ದರು.

ಲಂಚ ಹಗರಣದಲ್ಲಿ ಆಗಿನ ಆಡಳಿತಾ ರೂಢ ಬಿಜೆಪಿ ಶಾಸಕ ವೈ.ಸಂಪಗಿ ಅವರನ್ನು ಬಂಧಿಸುವ ಮೂಲಕ ಮಧುಕರ್ ಶೆಟ್ಟಿ ಚರ್ಚೆಗೆ ಗ್ರಾಸವಾಗಿದ್ದರು. ಅನಂತರ ಭ್ರಷ್ಟಾಚಾರದ ವಿರುದ್ಧ ಅವರ ಹೋರಾಟ ಗಮನ ಸೆಳೆದಿತ್ತು. ಆದರೆ, ಲೋಕಾಯುಕ್ತದೊಳಗಿನ ರಾಜಕಾರಣದಿಂದ ಬೇಸರಗೊಂಡಿದ್ದ ಅವರು ಸುದೀರ್ಘ ಅವಧಿಯವರೆಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದರು.

sports kiss

ರಿಯೊ ಒಲಿಂಪಿಕ್ಸ್’ನ 100 ಮೀಟರ್ ಓಟ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಲಿರುವ ದ್ಯುತಿ ಚಾಂದ್ ಅವರನ್ನು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಳಿಂಗ ಇನ್ಸ್’ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಅಚ್ಯುತ ಸಮಂತ ಅವರನ್ನು ನೆನಪಿಸಿಕೊಂಡ ದ್ಯುತಿ, ‘ನನ್ನ ಕ್ರೀಡಾ ಜೀವನದ ಪ್ರತಿ ಹಂತದಲ್ಲೂ ಅಚ್ಯುತ ಸಮಂತ ಅವರು ಸಂಸ್ಥೆಯ ಮೂಲಕ ಶೈಕ್ಷಣಿಕವಾಗಿ ಹಾಗೂ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡಿದ್ದಾರೆ’ ಎಂದು ನೆನೆದರು. ಕಳಿಂಗ ಇನ್ಸ್’ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯ ದಕ್ಷಿಣ ವಲಯ ಮುಖ್ಯಸ್ಥ ಗುರುಪ್ರಸಾದ್ ಉಪಸ್ಥಿತರಿದ್ದರು.

ಜಾಕಿರ್ ವಿರುದ್ಧದ ನನ್ನ ಆಕ್ಷೇಪವನ್ನು ಐಐಸಿಸಿ ತಿರಸ್ಕರಿಸಿತ್ತು: ಅರಿಫ್ ಮೊಹಮದ್

ವಿವಾದಿತ ಇಸ್ಲಾಂ ಭೋದಕ ಜಾಕಿರ್ ನಾಯಕ್ ಉಗ್ರರಿಗೆ ಪ್ರಚೋದನೆ ನೀಡುತ್ತಿರುವ ಬಗ್ಗೆ ಸ್ವತಃ ಮುಸ್ಲಿಂ ನಾಯಕರೇ ಆಕ್ಷೇಪ ಹೊಂದಿದ್ದಾರೆ. ‘ಜಾಕಿರ್ ನಾಯಕ್ ಅವರ ಕುರಿತು ಕಳೆದ ವರ್ಷ ಜನವರಿಯಲ್ಲೇ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ (ಐಐಸಿಸಿ) ಮುಖ್ಯಸ್ಥ ಸಿರಾಜ್ ಖುರೇಶಿ ಅವರಿಗೆ ಪತ್ರ ಬರೆದಿದ್ದೆ. ಆದರೆ ಐಐಸಿಸಿ ಅದನ್ನು ಪರಿಗಣಿಸದೆ ನಿರ್ಲಕ್ಷಿಸಿತ್ತು’ ಎಂದಿದ್ದಾರೆ ಮಾಜಿ ಸಂಸದ ಹಾಗೂ ಕೇಂದ್ರ ಸಚಿವ ಅರಿಫ್ ಮೊಹಮದ್ ಖಾನ್.

ಈ ಬಗ್ಗೆ ಅರಿಫ್ ಮೊಹಮದ್ ವಿವರಿಸಿರುವುದು ಹೀಗೆ:

ಐಐಸಿಸಿ ಭಾರತದಲ್ಲಿ ಮುಸ್ಲಿಮರ ಸಂಸ್ಕೃತಿ ಕಾಪಾಡುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ. ಆದರೆ, 2015ರ ಮೇ ನಲ್ಲಿ ನಡೆಯಲಿದ್ದ ಚರ್ಚೆಯಲ್ಲಿ ಜಾಕಿರ್ ಭಾಗವಹಿಸುತ್ತಿರುವುದು ಸರಿಯಲ್ಲ ಎಂದು ನಾನು ಬರೆದ ಪತ್ರದಲ್ಲಿ ಆಕ್ಷೇಪಿಸಿದ್ದೆ. ಜಾಕಿರ್ ಉಗ್ರವಾದದ ಕುರಿತು ನೀಡಿದ್ದ ಹೇಳಿಕೆಗಳನ್ನು ಪತ್ರದಲ್ಲಿ ನಮೂದಿಸಿದ್ದೆ. ಆದರೆ ಇದಕ್ಕೆ ಐಐಸಿಸಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಂದ ಆಹ್ವಾನವನ್ನು ಜಾಕಿರ್ ಅವರ ಉಪಸ್ಥಿತಿಯ ಕಾರಣ ಕೊಟ್ಟು ನಿರಾಕರಿಸಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಐಐಸಿಸಿ, ಜಾಕಿರ್ ನಾಯಕ್ ಓರ್ವ ಅತ್ಯುತ್ತಮ ಇಸ್ಲಾಂ ಭೋದಕ, ಚಿಂತಕ. ಕುರಾನ್ ಮತ್ತು ಆಧುನಿಕ ವಿಜ್ಞಾನಗಳ ಬಗ್ಗೆ ಅತ್ಯುತ್ತಮವಾಗಿ ಮಾತಾಡಬಲ್ಲ ವ್ಯಕ್ತಿ. ಸಾಮಾನ್ಯ ಜನರೇ ಅವರನ್ನು ಕರೆಸುವಂತೆ ಒತ್ತಾಯ ಮಾಡಿದ್ದಾರೆ ಎಂದು ತಿಳಿಸಿತ್ತು. ಈ ಮೂಲಕ ನನ್ನ ಆಕ್ಷೇಪವನ್ನು ಐಐಸಿಸಿ ಗಂಭೀರವಾಗಿ ಪರಿಗಣಿಸಲಿಲ್ಲ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು

  • ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೋಲ್ಕತಾದಲ್ಲಿ ವಿಭಿನ್ನ ಕಾನೂನು ಪ್ರಯೋಗ ಮಾಡಲಾಗಿದೆ. ಅದೇನಂದ್ರೆ, ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡುವವರಿಗೆ ಪೆಟ್ರೋಲ್ ಮಾರಾಟ ಮಾಡಬಾರದು ಎಂಬ ಕಾನೂನು ಹೊರಡಿಸಿದೆ. ಇದರೊಂದಿಗೆ ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ ಎಂಬ ಸಂದೇಶ ರವಾನಿಸಿದೆ.

BJP Protest

jds protest

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಜಾರ್ಜ್ ಹಾಕು ಇನ್ನಿಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರಿದಿದೆ. ಬಿಜೆಪಿ ಯುವಮೋರ್ಚಾ ಬೆಂಗಳೂರಿನಲ್ಲಿ ಪ್ರತಿಭಟಿಸಿತು. ಜೆಡಿಎಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದರು. ತನಿಖೆ ದಿಕ್ಕುತಪ್ಪುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮ ಜರುಗಿಸುವವರೆಗೂ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಬಿಜೆಪಿ ಯುವಮೋರ್ಚಾ ಹೇಳಿದೆ.

Leave a Reply