ಸೂತಕದ ಮನೆಯಲ್ಲಿ ನಿಂತು ಗಣಪತಿ ತಂದೆ ಮೇಲೂ ಒತ್ತಡ ಹೇರುತ್ತಿದ್ದಾರಾ ಪೊಲೀಸರು?

 

ಡಿಜಿಟಲ್ ಕನ್ನಡ ಟೀಮ್:

 ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ಕವರ್ ಅಪ್ ಪ್ರಯತ್ನ ಮತ್ತೂ ಮತ್ತೂ ಗೋಚರವಾಗುತ್ತಿದೆ.

ಶುಕ್ರವಾರ ರಾತ್ರಿಯ ವೇಳೆಗೆ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಾರಣಗಳಿವೆ ಎಂಬ ಸಂದೇಶವೊಂದನ್ನು ರವಾನಿಸುವ ಪ್ರಯತ್ನ ನಡೆಯಿತು. ‘ಗಣಪತಿಗೆ ಹೆಂಡತಿ ಜತೆ ವೈಮನಸ್ಸು ಬಂದಿತ್ತು. ತಮ್ಮ ಸೊಸೆಯ ಕಿರುಕುಳದಿಂದಲೇ ಖಿನ್ನತೆ ಆವರಿಸಿ ಮಗ ಆತ್ಮಹತ್ಯೆಗೆ ಶರಣಾಗುವಂತೆ ಆಯಿತು’ ಎಂದು ಗಣಪತಿ ತಂದೆಯೇ ದೂರು ನೀಡಿರುವುದಾಗಿ ಐಜಿ ಪ್ರಕಟಿಸಿದರು.

ಆದರೆ ಶನಿವಾರ ಬೆಳಗ್ಗೆ ಸುದ್ದಿವಾಹಿನಿ ಜತೆ ಮಾತನಾಡಿದ ಗಣಪತಿ ತಂದೆಯವರು ತಾವು ದೂರು ಕೊಟ್ಟಿರುವುದನ್ನೇ ನಿರಾಕರಿಸಿದ್ದಾರೆ. ‘ಅದೇನೋ ಮಹಜರಿಗೆ ಸಹಿ ಬೇಕೆಂದು ಕೇಳಿದಾಗ ಕೆಲವು ಕಾಗದಗಳ ಮೇಲೆ ಸಹಿ ಹಾಕಿದ್ದೆ’ ಎಂದಿದ್ದಾರೆ ಗಣಪತಿ ತಂದೆ. ಅರ್ಥಾತ್, ದುಃಖತಪ್ತ ಮನೆಯ ದಿಕ್ಕೆಟ್ಟ ಸನ್ನಿವೇಶವನ್ನೇ ಉಪಯೋಗಿಸಿಕೊಂಡು ಪ್ರಕರಣ ತಿರುಚುವುದಕ್ಕೆ ಪೋಲೀಸರು ಮುಂದಾಗಿದ್ದಾರಾ ಎಂಬ ಸಂಶಯ ಸಹಜವಾಗಿಯೇ ಏಳುತ್ತದೆ. ಗಣಪತಿ ತಂದೆಯವರೇ ಮಾಧ್ಯಮಗಳೊಂದಿಗೆ ಮಾತಾಡುತ್ತ ಹೇಳಿದ ಪ್ರಕಾರ- ‘ಆತ ಮನೆಗೆ ಬರುತ್ತಿದ್ದದ್ದೇ ವರ್ಷಕ್ಕೊಮ್ಮೆ. ಹೆಂಡತಿ ಜತೆ ಹೇಗಿದ್ದ ಎಂಬುದು ಗೊತ್ತಿಲ್ಲ.’ ಅಂದಮೇಲೆ, ಗಣಪತಿಯವರಿಗೆ ಖಿನ್ನತೆ ಇತ್ತು ಹಾಗೂ ಆ ಖಿನ್ನತೆಗೆ ಹೆಂಡತಿಯೇ ಕಾರಣ ಅಂತ ಅದ್ಯಾವ ಆಧಾರದಲ್ಲಿ ಆರೋಪ ಸೃಷ್ಟಿಯಾಗಿರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಏಳುತ್ತಿದೆ.

ದುಃಖತಪ್ತ ಗಣಪತಿ ಮಡದಿ ಅಭಿಪ್ರಾಯವನ್ನು ಟಿವಿ ವಾಹಿನಿಗಳು ಕೇಳುತ್ತಿದ್ದಾಗ, ಅಳು ಕಟ್ಟಿಕೊಂಡೇ ಅವರು ಹೇಳಿರುವ ಮಾತುಗಳು- ‘ಇಲ್ಲ ಸರ್.. ಖಿನ್ನತೆಗೆ ಚಿಕಿತ್ಸೆ ಅಂತೆಲ್ಲ ಏನೂ ಒಳಪಟ್ಟಿಲ್ಲ. ಆದರೆ ಅವರಿಗೆ ಡಿಪಾರ್ಟ್’ಮೆಂಟ್ ನಿಂದ ಕಿರುಕುಳ ಆಗುತ್ತಿರುವ ಬಗ್ಗೆ ನೊಂದಿದ್ದರು. ಅವರ ಬಾಯಿಂದಲೇ ಆ ಮಾತುಗಳು ಬಂದಿವೆಯಲ್ಲ ಸರ್..’

ಇಷ್ಟೆಲ್ಲದರ ನಡುವೆ ಸೂತಕದ ಮನೆಯಲ್ಲೂ ಪೊಲೀಸರು ನುಗ್ಗಿ, ತಮಗೆ ಬೇಕಾದಂತೆ ಹೇಳಿಕೆ ಪಡೆದು, ಅದರಲ್ಲೂ ಕುಟುಂಬದ ನಡುವೆಯೇ ತಂದುಹಾಕುವ ಮಟ್ಟಿಗೆ ಈ ಸರ್ಕಾರ ರಾಜಾರೋಷವಾಗಿ ಪ್ರಯತ್ನಿಸುತ್ತಿರುವುದು ನಿಚ್ಚಳವಾಗುತ್ತಿದೆಯಲ್ಲ?

ಇದಕ್ಕಿಂತ ಸರ್ಕಾರ ಪಾತಾಳಕ್ಕಿಳಿಯುವುದಕ್ಕೆ ಜಾಗವಿದೆಯಾ?

Leave a Reply