ಸೈಕಲ್ ಸಚಿವ, ಬಲಪಂಥೀಯ ಪರಿಸರವಾದಿ, ಅಮ್ಮನ ಎದುರಿಸಿದ ಅನುಪ್ರಿಯಾ- ಮೋದಿ ಸಂಪುಟದ 3 ಮುಖಗಳು

ಡಿಜಿಟಲ್ ಕನ್ನಡ ಟೀಮ್:

ಮೋದಿ ಸಂಪುಟ ಪುನಾರಚನೆ ವಿಷಯದಲ್ಲಿ ಸ್ಮೃತಿ ಇರಾನಿ ಸುತ್ತಲೇ ಸಾಕು ಸಾಕೆನಿಸುವಷ್ಟು ಚರ್ಚೆಗಳಾದವು. ಈ ಗದ್ದಲದ ನಡುವೆ, ಮೋದಿ ಸಂಪುಟ ಸೇರಿರುವ ಹಲವು ಮುಖಗಳ ಬಗ್ಗೆ ಮಾಹಿತಿಗಳೇ ಬಿಚ್ಚಿಕೊಳ್ಳಲಿಲ್ಲ. ಆ ಪೈಕಿ ಮೂರು ಆಸಕ್ತಿಕರ ಮುಖಗಳ ಪರಿಚಯ ಇಲ್ಲಿದೆ.

ಅಮ್ಮನೊಂದಿಗೆ ಕಿತ್ತಾಡಿದ ಅನುಪ್ರಿಯಾ

ಕೇಂದ್ರ ಸಚಿವ ಸಂಪುಟಕ್ಕೆ ಅನುಪ್ರಿಯಾ ಪಟೇಲ್ ಸೇರ್ಪಡೆ ಸ್ವಲ್ಪ ಗಮನಾರ್ಹವೇ ಸರಿ. ಕಾರಣ, ಕುಟುಂಬ ರಾಜಕೀಯದ ಲಾಬಿಯೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅನುಪ್ರಿಯಾ ತನ್ನ ತಾಯಿಯಿಂದಲೇ ಅಪ್ನಾ ದಳ ಪಕ್ಷದಿಂದ ಹೊರದಬ್ಬಿಸಿಕೊಂಡವರು. ಇದಾದ ಒಂದು ವರ್ಷಗಳ ಬಳಿಕ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದ ಬಿಜೆಪಿಯ ಹೊರತಾದ ಇಬ್ಬರು ಅಭ್ಯರ್ಥಿಗಳ ಪೈಕಿ ಅನುಪ್ರಿಯಾ ಒಬ್ಬರು. ಅಲ್ಲದೇ ಕಿರಿಯ ಸಚಿವರ ಸಾಲಿನಲ್ಲಿ ಸೇರ್ಪಡೆಯಾದ ಖ್ಯಾತಿಯೂ ಬಂತು.

ಎಂಬಿಎ ಹಾಗೂ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನುಪ್ರಿಯಾಗೆ ಈ ಸಚಿವ ಸ್ಥಾನ ದೊಡ್ಡ ಸಾಧನೆ. ಕಾರಣ, 2009ರಲ್ಲಿ ತಂದೆ ಸೊನೆ ಲಾಲ್ ಪಟೇಲ್ ದಿಢೀರನೆ ವಿಧಿವಶರಾದ ನಂತರ ಅನುಪ್ರಿಯಾ ತಮ್ಮ ತಂದೆಯೇ ಸ್ಥಾಪಿಸಿದ ಅಪ್ನಾ ದಳ ಪಕ್ಷದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಹೊತ್ತರು. ಅಲ್ಲಿಂದ 7 ವರ್ಷಗಳ ಅಂತರದಲ್ಲಿ ಅನುಪ್ರಿಯಾ ಕೇಂದ್ರ ಸಚಿವೆಯಾಗಿ ಬೆಳೆದಿದ್ದಾರೆ.

ಈ ಸಣ್ಣ ಅವಧಿಯಲ್ಲಿ ಅನುಪ್ರಿಯಾ ಸಾಗಿ ಬಂದಿರುವ ಹಾದಿ ಗಮನ ಸೆಳೆದಿದೆ. 2012 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು ಅನುಪ್ರಿಯಾ. 2014ರಲ್ಲಿ ಬಿಜೆಪಿಯ ಜತೆಗಿನ ಮೈತ್ರಿಯೊಂದಿಗೆ ಲೋಕಸಭೆಗೆ ಸ್ಪರ್ಧಿಸಿ ಅಲ್ಲಿಯೂ ಜಯ ಬಾರಿಸಿದ್ರು. 2014ರಲ್ಲೇ ಅನುಪ್ರಿಯಾ ಸಚಿವ ಸ್ಥಾನ ಅಲಂಕರಿಸುವ ಸಾಧ್ಯತೆ ಇತ್ತು. ಆದರೆ, ಅಪ್ನಾ ದಳವನ್ನು ತನ್ನ ಜತೆ ವಿಲೀನ ಮಾಡಿಕೊಳ್ಳುವ ಬಿಜೆಪಿ ಪ್ರಯತ್ನಕ್ಕೆ ಪಕ್ಷದ ಅಧ್ಯಕ್ಷೆಯಾಗಿದ್ದ ಅನುಪ್ರಿಯಾ ತಾಯಿ ಕೃಷ್ಣಾ ಪಟೇಲ್ ಒಪ್ಪಲಿಲ್ಲ. ಅನುಪ್ರಿಯಾ ಲೋಕಸಭೆಗೆ ಸ್ಪರ್ಧಿಸಿದ ಕಾರಣ ವಿಧಾನಸಭೆ ಕ್ಷೇತ್ರಕ್ಕೆ ಮರು ಚುನಾವಣೆ ಅನಿವಾರ್ಯವಾಯಿತು. ಈ ಕ್ಷೇತ್ರಕ್ಕೆ ಅನುಪ್ರಿಯಾ ತಮ್ಮ ಪತಿ ಆಶೀಶ್ ಸಿಂಗ್ ರನ್ನು ಕಣಕ್ಕಿಳಿಸಲು ಇಚ್ಛಿಸಿದ್ರು. ಆದ್ರೆ ಇದಕ್ಕೆ ಒಪ್ಪದ ಕೃಷ್ಣಾ ಪಟೇಲ್ ಸ್ವತಃ ತಾವೇ ಸ್ಪರ್ಧಿಸಿದ್ರು.

ಕುಟುಂಬ ಹಾಗೂ ಪಕ್ಷದಲ್ಲಿನ ಬಿಕ್ಕಟ್ಟು ಹೆಚ್ಚಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅನುಪ್ರಿಯಾ ಸೇರಿದಂತೆ 6 ಸದಸ್ಯರನ್ನು ಕೃಷ್ಣಾ ಪಟೇಲ್ ಪಕ್ಷದಿಂದ ಉಚ್ಚಾಟಿಸಿದ್ದರು. ಈ ಎಲ್ಲ ಸವಾಲುಗಳ ಮಧ್ಯೆ ಬಿಜೆಪಿ ಜತೆಗಿನ ಸಂಬಂಧ ಗಟ್ಟಿ ಮಾಡಿಕೊಂಡಿದ್ದ ಅನುಪ್ರಿಯಾ ಸಚಿವೆಯಾಗಿದ್ದಾರೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಟ್ರಂಪ್ ಕಾರ್ಡ್ ಆಗಿಯೂ ಬಿಂಬಿತವಾಗಿದ್ದಾರೆ.

ಕೌತುಕ ಹೊದ್ದಿರುವ ಮೆಘ್ವಾಲರ ಸೈಕಲ್ ಹಾದಿ

meghwalಕೇಂದ್ರ ಸಚಿವ ಸಂಪುಟದಲ್ಲಿ ಅರ್ಜುನ್ ರಾಮ್ ಮೆಘ್ವಾಲ್ ಅವರದ್ದು ಸ್ಫೂರ್ತಿದಾಯಕ ಕತೆ. ಆರಂಭದಲ್ಲಿ ನೇಕಾರನಾಗಿದ್ದ ಮೆಘ್ವಾಲ್ ನಂತರ ಐಎಎಸ್ ಪಾಸ್ ಮಾಡಿ ಎಲ್ಲರ ಗಮನ ಸೆಳೆದ್ರು. ಈಗ ಕೇಂದ್ರ ಸಚಿವರಾಗಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಇದರೊಂದಿಗೆ ಮೆಘ್ವಾಲ್ ಅವರ ಜೀವನ ಹಾದಿ ಇತರರಿಗೆ ಮಾದರಿಯೇ ಸರಿ.

ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇವರು ಸೈಕಲ್ ನಲ್ಲಿ ತೆರಳುವ ಮೂಲಕ ಗಮನ ಸೆಳೆದರು. ಸೈಕಲ್ ಜತೆಗಿನ ಇವರ ನಂಟು ಕೇವಲ ಒಂದು ದಿನಕ್ಕೆ ಸೀಮಿತವಾದುದಲ್ಲ. ದೆಹಲಿಯ ಆಪ್ ಸರ್ಕಾರ ಟ್ರಾಫಿಕ್ ನಿಯಂತ್ರಣಕ್ಕೆ ಆಡ್- ಈವನ್ ಯೋಜನೆ ಜಾರಿಗೆ ತಂದ ನಂತರ ಸೈಕಲ್ ನಲ್ಲೇ ಓಡಾಡಲು ಮುಂದಾದ ಮೊದಲ ರಾಜಕಾರಣೆ ಅರ್ಜುನ್ ರಾಮ್ ಮೆಘ್ವಾಲ್. ಸೋಮವಾರ ಸಚಿವ ಸ್ಥಾನದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಲು ಹೋಗಿದ್ದು ಸೈಕಲ್ ನಲ್ಲೇ.

ಇವರ ಜೀವನ ಹಾದಿ ಹೀಗಿದೆ… ರಾಜಸ್ಥಾನದ ಬಿಕನರ್ ನ ಕಿಸ್ಮಿದೆಸಾರ್ ಹಳ್ಳಿಯಲ್ಲಿ ನೇಕಾರ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಲ್ಲಿಯೇ ನೇಕಾರಿಯೆ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿದವರು ಮೆಘ್ವಾಲ್. 13ನೇ ಪ್ರಾಯದಲ್ಲೇ ಮದುವೆಯಾದರು. ಆದರೆ, ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಳೆದುಕೊಳ್ಳದ ಇವರು ಬಿಎ, ಎಲ್ಎಲ್ಬಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ್ರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡ ಇವರು, ಭಾರತೀಯ ಅಂಚೆಯಲ್ಲಿ ನೌಕರಿ ಗಿಟ್ಟಿಸಿದರು. ಅಷ್ಟಕ್ಕೆ ತೃಪ್ತರಾಗದ ಅರ್ಜುನ್, ನಂತರ ಐಎಎಸ್ ಪಾಸ್ ಮಾಡಿ ಚುರು ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದರು. 2009ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಅರ್ಜುನ್ ಮೆಘ್ವಾಲ್, 2014 ರಲ್ಲಿ ಮತ್ತೆ ಮರು ಆಯ್ಕೆಯಾದರು. ಈಗ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ಬಲಪಂಥೀಯರಲ್ಲೊಬ್ಬ ಪರಿಸರವಾದಿ ದವೆ

ಸದ್ಯ ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಟೀಕೆಗಳನ್ನು ಎದುರಿಸಿದೆ. ರಾಷ್ಟ್ರೀಯ ಅರಣ್ಯ ನೀತಿ ರಚನೆಯಲ್ಲಿನ ಗೊಂದಲ ಸರ್ಕಾರಕ್ಕೆ ಮುಜುಗರವನ್ನು ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರವಾದಿ ಅನಿಲ್ ಮಾಧವ್ ದವೆ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸ್ವತಂತ್ರ ಖಾತೆ ಜವಾಬ್ದಾರಿ ನೀಡಿರೋದು ಮೋದಿಯ ಜಾಣ ನಡೆ ಎಂದೇ ಪ್ರಶಂಸೆ ಗಿಟ್ಟಿಸಿದೆ.

ನಮ್ಮಲ್ಲಿ ಪರಿಸರವಾದಿ, ಪರಿಸರ ಸಂಬಂಧಿ ಹೋರಾಟಗಳೆಂದರೆ ಅವು ಎಡಪಂಥದ್ದೇ ಆಗಿರಬೇಕು ಎನ್ನುವ ಚಿತ್ರಣವಿದೆ.  ಆದ್ರೆ ಅದಕ್ಕೆ ತದ್ವಿರುದ್ಧ ಅನಿಲ್ ಮಾಧವ್ ದವೆ.  ಕಾರಣ, ಆರೆಸ್ಸೆಸ್ ನ ಪ್ರಚಾರಕರಾಗಿದ್ದ ದವೆ ಪರಿಸರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ನರ್ಮದಾ ಸಂರಕ್ಷಣೆ ವಿಷಯದಲ್ಲಿ ಕೆಲಸ ಮಾಡಿರುವ ಇವರ ಸ್ವದೇಶಿ ವಿಚಾರಗಳು ಇವತ್ತಿನ ಮಹಾತ್ವಾಕಾಂಕ್ಷಿ ದೊಡ್ಡ ಯೋಜನೆಗಳ ಸರ್ಕಾರದಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಎಂಬ ಕುತೂಹಲ ಇದ್ದೇ ಇದೆ. ಏಕೆಂದರೆ ದವೆ ಅವರು ದೊಡ್ಡ ಅಣೆಕಟ್ಟುಗಳ ವಿರೋಧಿ. 20 ವರ್ಷ ದಾಟಿರುವ ದೊಡ್ಡ ಅಣೆಕಟ್ಟುಗಳ ಆರ್ಥಿಕ- ಸಾಮಾಜಿಕ ಅಡಿಟ್ ಮಾಡಿ ನಿಜಕ್ಕೂ ಅವುಗಳಿಂದ ಪಡೆದಿದ್ದೇನು, ಕಳೆದುಕೊಂಡಿದ್ದೇನು ಎಂಬುದರ ಚರ್ಚೆಯಾಗಬೇಕು ಎನ್ನುತ್ತಾರವರು. ಒಳಚರಂಡಿ ನೀರನ್ನು ಪರಿಷ್ಕರಿಸಿ ನದಿಗೆ ಬಿಡುವುದು ಎಂಬ ಪರಿಕಲ್ಪನೆಯನ್ನು ಅವರು ಒಪ್ಪುವುದಿಲ್ಲ. ರಾಸಾಯನಿಕ ಬಳಕೆ ವಿರೋಧಿಸುವ ದವೆ ನೈಸರ್ಗಿಕ ಕೃಷಿ ಪ್ರತಿಪಾದಕರು. ಸರಳತೆ ಮತ್ತು ಉತ್ತಮ ಆಡಳಿತಕ್ಕೆ ದವೆ ತಮ್ಮ ಸೈದ್ಧಾಂತಿಕ ವಿರೋಧಿ ಪಾಳೆಯದ ಕಮ್ಯುನಿಸ್ಟ್ ಮುಖ್ಯಮಂತ್ರಿ ತ್ರಿಪುರಾದ ಮಾಣಿಕ್ ಸರ್ಕಾರ್ ಅವರನ್ನು ಪ್ರಶಂಸಿಸುತ್ತಾರೆ!  ‘ಸಮಾಲ್ ಕೆ ರೆಹ್ನಾ ಘರ್ ಮೆ ಚುಪೆ ಹುವೇ ಗದ್ದಾರೋಂಸೆ’ (ಮನೆ ಒಳಗೆ ಇರುವ ದ್ರೋಹಿಗಳ ಬಗ್ಗೆ ಎಚ್ಚರವಾಗಿರಿ) ಅನ್ನೋದು ದವೆ ಅವರ ಪುಸ್ತಕವೊಂದರ ಹೆಸರು.

ಮಧ್ಯಪ್ರದೇಶದಿಂದ ಮೂರನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿ ಈಗ ಸಚಿವ ಸ್ಥಾನ ಅಲಂಕರಿಸಿದ್ದಾರೆ. ದಾವೆ ಈ ಹಿಂದೆ ಜಲಸಂಪನ್ಮೂಲಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯಯಲ್ಲಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಶಿಫಾರಸ್ಸು ಸಮಿತಿಯಲ್ಲಿದ್ದ ಅನುಭವಹೊಂದಿದ್ದಾರೆ. ಅಲ್ಲದೆ, ಕಲ್ಲಿದ್ದಲು ಗಣಿಗಾರಿಕೆ (ವಿಶೇಷ ಪ್ರಾತಿನಿಧ್ಯ) ಬಿಲ್ 2015, ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಬಿಲ್ 2013, ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಬಿಲ್ 2013ರ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Leave a Reply