ಶಾಂತಿಯ ನಿಜ ಮಾದರಿ ಮಲಾಲಾ ಅಲ್ಲ.. ಬದಲಿಗೆ ಪಾಕಿಸ್ತಾನದವರೇ ಆದ ಅಬ್ದುಲ್ ಸತ್ತರ್ ಈಧಿ!

ಡಿಜಿಟಲ್ ಕನ್ನಡ ವಿಶೇಷ:

ಪಾಕಿಸ್ತಾನ ಅಂದ್ರೆ ನಮ್ಮೆಲ್ಲರಿಗೆ ತಟ್ಟನೆ ನೆನಪಾಗೋದು ಕಟ್ಟರ್ ಮುಸ್ಲಿಂವಾದ.. ಭಯೋತ್ಪಾನೆಯ ಕರಿ ನೆರಳು.. ಹಿಂಸಾಚಾರ.. ಅಸ್ಥಿರತೆ. ಆದ್ರೆ ಪಾಕಿಸ್ತಾನದಲ್ಲೂ ಮಾನವಿಯತೆ, ಪರೋಪಕಾರ ಉಸಿರಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲೋದು ಅಬ್ದುಲ್ ಸತ್ತರ್ ಈಧಿ. ಪಾಕಿಸ್ತಾನದ ರಾಷ್ಟ್ರೀಯ ಐಕಾನ್ ಅಂತಲೇ ಪ್ರಸಿದ್ಧಿ ಪಡೆದಿದ್ದ ಈಧಿ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಆದರೆ ತಮ್ಮ ಹೆಜ್ಜೆ ಗುರುತುಗಳಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿದ್ದಾರೆ.

‘ಅನೇಕ ಜನ ನನ್ನನ್ನು ಕೇಳಿದ್ದರು. ದೇಶ ವಿಭಜನೆ ಆಗಿ ಇಷ್ಟು ವರ್ಷಗಳ ನಂತರವೂ ನೀವ್ಯಾಕೆ ಆಂಬುಲೆನ್ಸ್ ನಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಮಕ್ಕಳಿಗೆ ಚಿಕಿತ್ಸೆ ನೀಡುತ್ತೀರಾ ಅಂತಾ. ಅದಕ್ಕೆ ನಾನು ಹೇಳಿದ್ದು, ನಿಮ್ಮೆಲ್ಲರಿಗಿಂತ ಈ ಆಂಬುಲೆನ್ಸೇ ನಿಜವಾದ ಮುಸ್ಲಿಂ ಎಂದು.’ ಈಧಿ ಅವರಾಡಿದ್ದ ಈ ಮಾತಲ್ಲಿ ಜನಸೇವೆಗೆ ಜಾತಿ, ಧರ್ಮದ ಚೌಕಟ್ಟು ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಶಾಂತಿ ಅಂದ ಕೂಡಲೇ ಎಲ್ಲರು ಹೇಳೋದು ಮಲಾಲಾ ಯುಸುಫೈ ಅವರ ಹೆಸರನ್ನು. ಗುಂಡೇಟು ಘಟನೆ ನಂತರ ಅವರು ಬ್ರಿಟನ್ ನಲ್ಲಿ ನೆಲೆಸಿದ್ದಾರೆ. ಅಲ್ಲಿದ್ದುಕೊಂಡೇ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ ಎಂಬುದು ಒಪ್ಪಿಕೊಳ್ಳುವ ವಿಷಯ. ಆದ್ರೆ, ಆಕೆ ಒಂದು ಸಂಘರ್ಷದ ಪ್ರದೇಶದಲ್ಲಿ ನಿಂತು ಹೋರಾಟ ನಡೆಸುತ್ತಿಲ್ಲ ಎಂಬುದು ಅಷ್ಟೇ ವಾಸ್ತವ. ಅವರು ಬ್ರಿಟನ್ ನಲ್ಲಿ ಕುಳಿತು ಮಾತನಾಡುತ್ತಿರುವುದರಿಂದ ಪಾಕಿಸ್ತಾನ, ಅಫ್ಘಾನಿಸ್ತಾನದ ಶಾಲಾ ಮಕ್ಕಳ ಪರಿಸ್ಥಿತಿಯೇನೂ ಯಾವುದೇ ರೀತಿಯಲ್ಲಿ ಸುಧಾರಿಸುತ್ತಿಲ್ಲ. ಈ ಕಾರಣಕ್ಕೇ ಅಬ್ದುಲ್ ಸತ್ತರ್ ಈಧಿ ನಮ್ಮ ಮುಂದೆ ವಿಶೇಷ ವ್ಯಕ್ತಿಯಾಗಿ ನಿಲ್ಲೋದು. ಅನ್ಯ ಧರ್ಮಿಯರಿಗೆ ಮಾಡುವ ಸೇವೆಗೆ ವಿರೋಧ ಇದ್ದರೂ ಈಧಿ ಅವರು ಪಾಕಿಸ್ತಾನದ ಸಂತ್ರಸ್ತ ಜನರ ಮಧ್ಯೆ ನಿಂತು ಅವರ ಏಳ್ಗೆಗೆ ಶ್ರಮಿಸಿದವರು. ಹೀಗಾಗಿ ಶಾಂತಿ ಪಾಲನೆಯಲ್ಲೂ ಈಧಿ ಮಿಕ್ಕವರಿಗಿಂತ ಒಂದು ಕೈ ಮೇಲು ಅಂತಲೇ ಹೇಳಬಹುದು.

ಚಿಕ್ಕ ವಯಸ್ಸಿನಿಂದಲೂ ನೋವನ್ನುಂಡೇ ಬೆಳೆದ ಈಧಿ, ಅನುಭವದ ಜತೆಗೆ ಮಾನವೀಯ ಗುಣ ಹಾಗೂ ಮೌಲ್ಯ ಬೆಳೆಸಿಕೊಂಡವರು. ಸಂತ್ರಸ್ತರು, ನೊಂದವರ ಪಾಲಿಗೆ ಆಶಾಕಿರಣವಾಗಿರುವ ಈಧಿ ಫೌಂಡೇಷನ್ ಸಂಸ್ಥಾಪಕರವರು. ಅವರು ಬರೀ ಸಂಸ್ಥೆ ಕಟ್ಟಲಿಲ್ಲ. ಸುದೀರ್ಘ ಆರು ದಶಕಗಳ ಕಾಲ ಅದನ್ನು ಏಕಾಂಗಿಯಾಗಿಯೇ ಮುನ್ನಡೆಸಿದ ಮಹಾನ್ ಚೇತನ. ಪಾಕಿಸ್ತಾನ ಕಂಡ ಮಾದರಿ ವ್ಯಕ್ತಿ.

EDI1

ಹಿಂಸೆ.. ಉಗ್ರರ ಆಶ್ರಯ ತಾಣ.. ಎಂದೇ ಕುಖ್ಯಾತಿ ಪಡೆದ ಪಾಕಿಸ್ತಾನದಲ್ಲಿ ಈಧಿ ಜೀವನ, ನಿಜಕ್ಕೂ ಕೆಸರಿನಲ್ಲಿ ಅರಳಿ ನಿಂತ ಕಮಲಕ್ಕೆ ಸಮ. ಅವರ ಜೀವನದ ಹಾದಿ ನೆನೆಯಲಷ್ಟೇ ಅಲ್ಲ ಅನುಕರಣಯೋಗ್ಯ. ಅವರು ಹುಟ್ಟಿದ್ದು 1928 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದ ಗುಜರಾತಿನ ಬಂಟ್ವಾ ಪ್ರದೇಶದಲ್ಲಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ತಾಯಿ ನೀಡುತ್ತಿದ್ದ 2 ಪೈಸೆಯಲ್ಲಿ 1 ಪೈಸೆ ಅವರ ಊಟಕ್ಕಾದರೆ, ಮತ್ತೊಂದು ಪೈಸೆ ಭಿಕ್ಷುಕರಿಗೆ. ಅವರಿಗೆ ಎಳೇ ವಯಸ್ಸಿನಲ್ಲೇ ಪರೋಪಕಾರ ಗುಣ ಮೂಡಿತ್ತು. 11ನೇ ವಯಸ್ಸಿನಲ್ಲಿರುವಾಗ ತಾಯಿ ಪಾರ್ಶ್ವವಾಯು ಪೀಡಿತರಾದರು. ತಾಯಿಯ ಪ್ರೀತಿ ಅನುಭವಿಸುವ ಹೊತ್ತಲ್ಲೇ ಅವರ ಆರೈಕೆ ಜವಾಬ್ದಾರಿ ಹೆಗಲಿಗೇರಿತ್ತು.

ಚಿಕ್ಕ ವಯಸ್ಸಿನಲ್ಲೇ ತಾಯಿ ಜತೆ ವಯಸ್ಸಾದವರು, ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರು. 19ನೇ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರು. ಮತ್ತೊಂದೆಡೆ 1947 ರಲ್ಲಿ ಭಾರತ ವಿಭಜನೆಯಾದಾಗ ಈಧಿ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗುತದೆ. ಈ ವೇಳೆ ಕರಾಚಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಪಾಕಿಸ್ತಾನ ವಿಭಜನೆ, ಆಗಿನ ಪರಿಸ್ಥಿತಿ, ತಮ್ಮ ಸೇವೆ ಆರಂಭದ ಬಗ್ಗೆ ಕೆಲ ವರ್ಷಗಳ ಹಿಂದೆ ಅವರು ಮೆಲಕು ಹಾಕಿರುವುದು ಹೀಗೆ:

‘ಸೂರಿಲ್ಲದ ಜನ ಬೀದಿ ಕಲ್ಲಿನ ಮೇಲೆಯೇ ಮಲಗುತ್ತಿದ್ದರು. ಅದೇ ಸಂದರ್ಭದಲ್ಲಿ ಇಲಿಜ್ವರ ಎಲ್ಲೆಡೆ ಹರಡಲು ಆರಂಭವಾಯಿತು. ಆಗ ಅಲ್ಲಿನ ವೈದ್ಯ ವಿದ್ಯಾರ್ಥಿಗಳನ್ನೇ ಸ್ವಯಂ ಸೇವಕರಾಗಿ ಚಿಕಿತ್ಸೆ ನೀಡುವಂತೆ ಮಾಡಿದೆ. ಕೈಯಲ್ಲಿ ಬಿಡಿಗಾಸು ಇಲ್ಲದಿದ್ದಾಗ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿದೆ. ಅವರು ಕೊಟ್ಟ ಹಣದಿಂದಲೇ ಸೇವೆ ಆರಂಭಿಸಿದೆ.’

ಈಧಿ ಫೌಂಡೇಷನ್ ಸೇವೆ ನಮಗೆ ಆಪ್ತವಾಗುವುದು ಪಾಕಿಸ್ತಾನದಲ್ಲಿ ದಿಕ್ಕೆಟ್ಟು ನಿಂತ ಭಾರತದ ಹೆಣ್ಣು ಮಗಳನ್ನು ರಕ್ಷಿಸಿ 15 ವರ್ಷಗಳ ಕಾಲ ಆಶ್ರಯ ನೀಡಿ ತಾಯ್ನಾಡು ಸೇರಿಸಿದ್ದು. ಆ ಕಥೆ ಹೀಗಿದೆ..

ಸುಮಾರು ಒಂದುವರೆ ದಶಕದ ಹಿಂದೆ 7-8 ವರ್ಷದ ಗೀತಾ ಪಾಕಿಸ್ತಾನದ ಲಾಹೋರ್ ರೈಲ್ವೇ ನಿಲ್ದಾಣದಲ್ಲಿ ತನ್ನವರನ್ನು ಕಳೆದುಕೊಂಡು ಏಕಾಂಗಿಯಾಗಿ ನಿಂತಿದ್ದಳು. ಮೂಕ, ಕಿವುಡಿಯಾಗಿದ್ದ ಆಕೆಗೆ ತನ್ನ ಬಗ್ಗೆ ಏನನ್ನು ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಆಕೆಗೆ ಆಶ್ರಯ ನೀಡಿದ್ದು ಇದೇ ಈಧಿ ಫೌಂಡೇಷನ್. ಆಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಈಧಿ ಕುಟುಂಬ ಆಕೆಯನ್ನು ತಮ್ಮ ಮಗಳಂತೆಯೇ ಬೆಳೆಸಿದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಕೆ ಭಾರತದವಳು ಎಂದು ತಿಳಿದ ಮೇಲೆ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸಿ, ಮತ್ತೆ ತವರಿಗೆ ಸೇರಿಸುವಲ್ಲಿ  ಯಶಸ್ವಿಯಾಯಿತು. ಈಧಿ ಫೌಂಡೇಷನ್ ನ ಈ ಸಹಾಯವನ್ನು ಇಡೀ ಭಾರತ ಮುಕ್ತಕಂಠದಿಂದ ಪ್ರಶಂಶಿಸಿತ್ತು.

geeta-edhi

ಗೀತಾ ಹಾಗೂ ಅಬ್ದುಲ್ ಸತ್ತರ್  ಈಧಿ

ಗೀತಾ ಪ್ರಕರಣ ನಮಗೊಂದು ತಾಜಾ ಉದಾಹರಣೆಯಷ್ಟೇ. ಇಂತಹ ಅನೇಕ ನಿರಾಶ್ರಿತರಿಗೆ ಆಶ್ರಯವಾಗಿರೋ ಫೌಂಡೇಶನ್ ನ ಸೇವಾ ಹಾದಿ ಹೀಗಿದೆ:

ಸುಮಾರು 60 ವರ್ಷಗಳ ಕಾಲ ಪಾಕಿಸ್ತಾನ, ಬಡವರ ಕಲ್ಯಾಣಕ್ಕೆ ಮುಡಿಪಾಗಿದ್ದ ಈಧಿ ಕಾಲ ಕ್ರಮೇಣ ದೇಣಿಗೆಗಳು ಹೆಚ್ಚಾದಂತೆ ಸೇವಾ ವ್ಯಾಪ್ತಿ ವಿಸ್ತರಿಸಿದರು. ಈವರೆಗೂ ಸುಮಾರು 20 ಸಾವಿರ ಅನಾಥ ಶಿಶುಗಳು ಮತ್ತು 50 ಸಾವಿರ ಅನಾಥ ಮಕ್ಕಳಿಗೆ ಆಶ್ರಯ, 40 ಸಾವಿರಕ್ಕೂ ಹೆಚ್ಚು ನರ್ಸ್ ಗಳಿಗೆ ತರಬೇತಿ, ಪಾಕಿಸ್ತಾನದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 330 ಕ್ಕೂ ಹೆಚ್ಚು ಕಲ್ಯಾಣ ಕೇಂದ್ರಗಳು, ಗೊತ್ತುಗುರಿ ಇಲ್ಲದ ಹೆಣ್ಣು ಮಕ್ಕಳಿಗೆ ಮತ್ತು ಮಾನಸಿಕ ಅಸ್ವಸ್ತರಿಗೆ ಸೂರು ಅವರ ಕೈಂಕರ್ಯದ ಸ್ಯಾಂಪಲ್ ಗಳು. ಸುಮಾರು 1500 ಆಂಬುಲೆನ್ಸ್ ಗಳನ್ನು ಹೊಂದಿದ್ದು, ವಿಶ್ವದ ಅತ್ಯಂತ ದೊಡ್ಡ ಆಂಬುಲೆನ್ಸ್ ಸೇವೆ ಎಂಬ ಖ್ಯಾತಿ ಸಂಸ್ಥೆಯದು. ಇವರ ಸೇವೆ ಬರೀ ಪಾಕಿಸ್ತಾನಕ್ಕಷ್ಟೇ ಅಲ್ಲದೇ ಆದರಾಚೆಗೂ ಆಫ್ರಿಕಾ, ಮಧ್ಯ ಪ್ರಾಚ್ಯ, ಪೂರ್ವ ಯುರೋಪ್ ರಾಷ್ಟ್ರಗಳಿಗೂ ವಿಸ್ತರಿಸಿದೆ.

ತಮ್ಮ ಜೀವನವನ್ನು ಜನರ ಸೇವೆಗೆ ಮುಡಿಪಿಟ್ಟ ಈಧಿ ‘ಪಾಕಿಸ್ತಾನದ ಫಾದರ್ ತೆರೇಸಾ’, ‘ಏಂಜಲ್ ಆಫ್ ಮರ್ಸಿ’, ‘ಪ್ರಪಂಚದ ಅತ್ಯಂತ ಮಹಾನ್ ಮಾನವತಾವಾದಿ’ ಎಂಬೆಲ್ಲಾ ಬಿರುದುಗಳಿಂದ ಗುರುತಿಸಲ್ಪಟ್ಟಿದ್ದಾರೆ. ದೇಣಿಗೆಯಿಂದಲೇ ಇಷ್ಟೆಲ್ಲ ಸೇವೆ ಮಾಡಿದ ಈಧಿ ಸ್ವಂತಕ್ಕೆಂದು ಇಟ್ಟುಕೊಂಡದ್ದು 2 ಜೊತೆ ಬಟ್ಟೆ, ಕಿಟಕಿ ಇಲ್ಲದ ಮನೆ ಮಾತ್ರ. ಅವರ ನಿಸ್ವಾರ್ಥ ಸೇವೆ ಇತರರಿಗೆ ಮಾದರಿಯಾಗುವುದೊಂದೇ ಅವರಿಗೆ ಸಲ್ಲಿಸಬಹುದಾದ ದೊಡ್ಡ ನಮನ.

Leave a Reply