ಭಾರತದ ಮೊದಲ ಹಡಗು ಮಹಿಳಾ ಕ್ಯಾಪ್ಟನ್ ರಾಧಿಕಾ ಮಾಡಿರುವ ಮತ್ತೊಂದು ಸಾಧನೆ ಏನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಅವಾನಿ ಚತುರ್ವೇದಿ.. ಭಾವನಾ ಕಾಂತ್.. ಮೋಹನಾ ಸಿಂಗ್.. ಇತ್ತೀಚೆಗಷ್ಟೇ ಈ ಮೂವರು ಭಾರತೀಯ ಯುದ್ಧ ವಿಮಾನ ಮಹಿಳಾ ಪೈಲೆಟ್ ಗಳಾಗಿ ಆಯ್ಕೆಯಾದಾಗ ಇಡೀ ದೇಶವೇ ಹೆಮ್ಮೆಪಟ್ಟಿತ್ತು. ಈಗ ಇಂತಹುದೇ ಕೀರ್ತಿ ತಂದುಕೊಟ್ಟಿರೋದು ಕ್ಯಾಪ್ಟನ್ ರಾಧಿಕಾ ಮೆನನ್. ಯಾರು ಈ ರಾಧಿಕಾ ಮೆನನ್? ಅವರು ದೇಶಕ್ಕೆ ತಂದಿರುವ ಕೀರ್ತಿ ಏನು? ಎಂಬುದು ಈ ವಾರಾಂತ್ಯದ ವಿಶೇಷ ಓದು.

ರಾಧಿಕಾ ಮೆನನ್.. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ತೈಲ ಟ್ಯಾಂಕರ್ ಗಳನ್ನು ಸಾಗಿಸುವ ‘ಸಂಪೂರ್ಣ ಸ್ವರಾಜ್ಯ’ ಹಡಗಿನ ಕ್ಯಾಪ್ಟನ್. ಐದು ವರ್ಷಗಳ ಹಿಂದೆ ಭಾರತೀಯ ವ್ಯಾಪಾರಿ ಹಡಗಿನ (ಇಂಡಿಯನ್ ಮರ್ಚೆಂಟ್ ನೇವಿ) ಕ್ಯಾಪ್ಟನ್ ಆದ ಮೊಟ್ಟ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದರು. ಈಗ ಮತ್ತೊಂದು ಗರಿ ಅವರ ಮುಡಿಗೆ. ಅದೂ ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಅದೇನಂದ್ರೆ, ಅಂತಾರಾಷ್ಟ್ರೀಯ ಕಡಲತೀರ ಸಂಸ್ಥೆ (ಐಎಂಒ) ನ ಅತ್ಯುತ್ತಮ ಸಾಗರ ಸಾಹಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಪಡೆಯುತ್ತಿರುವ ವಿಶ್ವದ ಮೊಟ್ಟ ಮೊದಲ ಮಹಿಳೆ ಎಂಬುದು ಇಲ್ಲಿ ಗಮನಾರ್ಹ. ಲಂಡನ್ ನಲ್ಲಿ ಶನಿವಾರ 116ನೇ ವಾರ್ಷಿಕ ಸಭೆ ನಡೆಸಿದ ಐಎಂಒ ಈ ಪ್ರಶಸ್ತಿಗೆ ರಾಧಿಕಾ ಅವರನ್ನು ಆಯ್ಕೆ ಮಾಡಿದೆ.

ಕಳೆದ ವರ್ಷ ಇವರು ಮೆರೆದ ಸಾಹಸ ಗಮನಾರ್ಹವಾದದ್ದು. ಅದೇನಂದರೇ..

ಅಂದು 2015 ರ ಜೂನ್ 22. ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ‘ದುರ್ಗಮ್ಮ’ ಎಂಬ ಬೋಟ್ ನಲ್ಲಿ ಏಳು ಮೀನುಗಾರರು ತೆರಳಿದ್ದರು. ಇದರಲ್ಲಿ 15 ವರ್ಷದ ಹುಡುಗನಿಂದ 50 ವರ್ಷದವರೆಗಿನವರು ಇದ್ದರು. ಹವಾಮಾನ ಹದಗೆಟ್ಟ ಪರಿಣಾಮ ಬೋಟ್ ನಿಯಂತ್ರಣ ತಪ್ಪಿತ್ತು. ಬೋಟ್ ನ ಹಿಡಿಗೂಟ (ಅ್ಯಂಕರ್) ಸಹ ಕಳಚಿತ್ತು.

ಪರಿಸ್ಥಿತಿ ಎಷ್ಟು ಕೆಟ್ಟಿತ್ತು ಅಂದ್ರೆ ಬಿರುಗಾಳಿ ಮತ್ತು ಧಾರಾಕಾರ ಮಳೆಯ ನಡುವೆ 25 ಅಡಿಗೂ ಮೇಲಕ್ಕೆದ್ದ ಸಮುದ್ರದ ಬೋಟ್ ಮುಗುಚಿ ಹಾಕುವ ಯತ್ನದಲ್ಲಿದ್ದವು. ಅಲೆಗಳ ಅಬ್ಬರದ ಹೊಡೆತ ತಿಂದ ಬೋಟ್ ಹಾನಿಗೊಳಗಾಗಿ ಸೋರಿಕೆ ಶುರುವಾಯ್ತು. ಬದುಕುಳಿಯಲು ಯಾವುದೇ ದಾರಿ ಇಲ್ಲ ಎಂದು ಏಳು ಮೀನುಗಾರರು ತಮ್ಮ ಎಲ್ಲ ಪ್ರಯತ್ನ ಕೈಚೆಲ್ಲಿದಾಗ, ಇವರಿಗೆ ಆಪದ್ಬಾಂಧವರಂತೆ ಆಸರೆಯಾಗಿ ಬಂದದ್ದು ರಾಧಿಕಾ ಮೆನನ್.

ಒಡಿಶಾ ಕಡಲತೀರದಿಂದ 2.5 ಕಿ.ಮೀ ದೂರದಲ್ಲಿ ಈ ಬೋಟ್ ಅಪಾಯದಲ್ಲಿರುವುದನ್ನು ‘ಸಂಪೂರ್ಣ ಸ್ವರಾಜ್ಯ’ ಹಡಗಿನ ಅಧಿಕಾರಿಯೊಬ್ಬರು ಪತ್ತೆ ಹಚ್ಚಿದರು. ಅವರಿಂದ ಮಾಹಿತಿ ಪಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಿದರು ರಾಧಿಕಾ ಮೆನನ್. ರಾಧಿಕಾ ಅವರಿದ್ದ ಹಡಗು ಪ್ರತಿಕೂಲ ವಾತಾವರಣದ ನಡುವೆಯೂ ಏಣಿ, ಜೀವರಕ್ಷಕ ಕವಚಗಳ ಜತೆ ಬೋಟ್ ಸಮೀಪ ಧಾವಿಸಿತು. ಅಲೆಗಳ ಜತೆ ಸೆಣಸುತ್ತಿದ್ದ ಮೀನುಗಾರರ ಜೀವ ರಕ್ಷಿಸಿತು.

ಈ ಸಾಹಸಕ್ಕಾಗಿ ಭಾರತ ಸರ್ಕಾರನು ರಾಧಿಕಾ ಅವರ ಹೆಸರನ್ನು ಪ್ರಶಸ್ತಿಗೆ ಅಧಿಕೃತವಾಗಿ ಶಿಫಾರಸ್ಸು ಮಾಡಿತ್ತು. ತೀರ್ಪುಗಾರರು ಈಕೆಯ ಸಾಹಸ ಮೆಚ್ಚಿ, ಪ್ರಶಸ್ತಿಗೆ ಅವರನ್ನೇ ಪರಿಗಣಿಸಿದ್ದಾರೆ.

ಹೆಣ್ಮಕ್ಕಳು ನಾಲ್ಕು ಗೋಡೆಗೆ ಸೀಮೀತ ಎಂಬುದನ್ನು ಮೇಲಿಂದ ಮೇಲೆ ಸುಳ್ಳು ಮಾಡುತ್ತಿರುವ ಸಾಧಕಿಯರ ಸಾಲಿಗೆ ರಾಧಿಕಾ ಮೋಹನ್ ಸೇರ್ಪಡೆ ಭಾರತದ ಹೆಮ್ಮೆಯನ್ನು ನೂರ್ಮಡಿ ಮಾಡಿದೆ.

1 COMMENT

Leave a Reply