ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಾಂತಿ ವಿರುದ್ಧ ಡಿವೈಎಸ್ಪಿ ಗಣಪತಿ ಪತ್ನಿ, ಪುತ್ರನ ದೂರು

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಪತ್ನಿ ಮತ್ತು ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಈ ಮೂವರು ಇದೀಗ ಸಂಕಷ್ಟಕ್ಕೆ ಸಿಕ್ಕಿದ್ದಾರೆ.

ತಮ್ಮ ಪತಿ ಆತ್ಮಹತ್ಯೆಗೆ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ಅವರು ನೀಡುತ್ತಿದ್ದ ಮಾನಸಿಕ ಹಿಂಸೆ ಮತ್ತು ಕಿರುಕುಳವೇ ಕಾರಣ ಎಂದು ಪತ್ನಿ ಪಾವನಾ ಹಾಗೂ ಪುತ್ರ ನೇಹಲ್ ಮಡಿಕೇರಿಯ ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲಿಗೆ ದೂರು ದಾಖಲಿಸಲು ನಿರಾಕರಿಸಿದ ಸಬ್ ಇನ್ಸ್ ಪೆಕ್ಟರ್ ಅವರು ಗಣಪತಿ ಅವರ ಪತ್ನಿ, ಪುತ್ರ ಬೆಂಬಲಿಗರ ಜತೆ ಠಾಣೆ ಎದಿರು ತೀವ್ರ ಪ್ರತಿಭಟನೆಗೆ ಇಳಿದ ನಂತರ ಕೇಸು ದಾಖಲಿಸಿದ್ದಾರೆ.

ಗಣಪತಿ ಅವರ ಪತ್ನಿ ಪಾವನಾ ಆರು ಪುಟಗಳ ಹಾಗೂ ಪುತ್ರ ನೇಹಲ್ ಎರಡು ಪುಟಗಳ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಗಣಪತಿ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ ದೂರು ನೀಡಲು ವಿಳಂಬವಾಯಿತು ಎಂದೂ ತಿಳಿಸಿದ್ದಾರೆ.

ಪತಿಯ ಸಾವಿಗೆ ಕಾರಣರಾದ ಜಾರ್ಜ್, ಪ್ರಸಾದ್, ಮೊಹಾಂತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇವರೆಲ್ಲರ ಒತ್ತಡದಿಂದ ಗಣಪತಿ ಹರಕೆಯ ಕುರಿಯಂತಾಗಿದ್ದರು. ಒತ್ತಡ ತಾಳಲಾರದೆ ಅವರು ಖಿನ್ನತೆಗೆ ಒಳಗಾಗಿದ್ದರು. ತಮ್ಮ ಪತಿಯನ್ನು ವಿನಾಕಾರಣ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಾವನಾ ದೂರಿನಲ್ಲಿ ತಿಳಿಸಿದ್ದಾರೆ. ಪುತ್ರ ನೇಹಲ್ ದೂರಿನಲ್ಲೂ ಈ ಕಾರಣಗಳು ಸಂಕ್ಷಿಪ್ತವಾಗಿ ದಾಖಲಾಗಿವೆ.

ಪೆನ್ ಡ್ರೈವ್ ಮಾಯ; ಸಾಕ್ಷ್ಯ ನಾಶ ಯತ್ನ

ಈ ಮಧ್ಯೆ, ಗಣಪತಿ ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿ ವಿನಾಯಕ ಲಾಡ್ಜ್ ಕೊಠಡಿಯಲ್ಲಿ ಪಾರ್ಥೀವ ಶರೀರ ಸಮೀಪದ ಟೇಬಲ್ ಮೇಲೆ ಡೆತ್ ನೋಟ್ ಹಾಗೂ ಎರಡು ಪೆನ್ ಡ್ರೈವ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅವುಗಳನ್ನು ನಾಶ ಮಾಡಿರುವ ಸಾಧ್ಯತೆ ಇದೆ ಎಂದು ಮೃತರ ಮತ್ತೊಬ್ಬ ಸಹೋದರ ಮಾಚಯ್ಯ ಆರೋಪಿಸಿದ್ದಾರೆ.

ಈ ಪ್ರಕರಣ ತಿರುಚುವಲ್ಲಿ ತಮ್ಮ ಸಹೋದರ ಡಿವೈಎಸ್ಪಿ ತಮ್ಮಯ್ಯ ಅವರ ಮೇಲೆ ಸರಕಾರ ಒತ್ತಡ ಹೇರಿರುವ ಸಾಧ್ಯತೆ ಇದೆ. ಗಣಪತಿ ಮಂಗಳೂರಿನಿಂದ ನಾಪತ್ತೆಯಾದ ದಿನದಿಂದ ಅವರನ್ನು ಟ್ರಾಕ್ ಮಾಡುವ ಜವಾಬ್ದಾರಿಯನ್ನು ತಮ್ಮಯ್ಯ ಅವರಿಗೆ ವಹಿಸಲಾಗಿತ್ತು. ಏಕೆಂದರೆ ಮಂಗಳೂರು ಬಿಡುವ ಮುನ್ನ ಗಣಪತಿ ಕೆಲವರೊಂದಿಗೆ ಮಾತಾಡುವ ಸಂದರ್ಭದಲ್ಲಿ ಸಚಿವ ಜಾರ್ಜ್ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಧ್ಯಮದವರ ಜತೆ ಮಾತಾಡುವ ಸುಳಿವು ನೀಡಿದ್ದರು. ಇದನ್ನು ಆಧರಿಸಿ ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಸಹೋದರ ತಮ್ಮಯ್ಯ ಅವರಿಗೆ ವಹಿಸಲಾಗಿತ್ತು. ಮೊಬೈಲ್ ಫೋನ್ ಕರೆ ಟವರ್ ಸಂಕೇತಗಳನ್ನು ಆಧರಿಸಿ ಮಡಿಕೇರಿಗೆ ಬಂದಿದ್ದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ ಗಳಲ್ಲಿ ತಪಾಸಣೆ ನಡೆಸಿದ್ದರು. ಆದರೆ ಇದನ್ನು ಊಹಿಸಿದ್ದ ಗಣಪತಿ ದಿನಕ್ಕೆ 350 ರುಪಾಯಿ ಬಾಡಿಗೆಯ ತೀರಾ ಸಾಧಾರಣ ಹೋಟೆಲ್ ವಿನಾಯಕ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಬೇರೆಲ್ಲ ಹೋಟೆಲ್ ತಪಾಸಣೆ ನಡೆಸಿದ ನಂತರ ಕೊನೆಗೆ ಪೊಲೀಸರು ವಿನಾಯಕ ಲಾಡ್ಜ್ ಗೆ ಬಂದು ವಿಚಾರಣೆ ನಡೆಸುವಷ್ಟರಲ್ಲಿ ಗಣಪತಿ ಟಿವಿ ಮಾಧ್ಯಮದವರಿಗೆ ಸಂದರ್ಶನ ಕೊಟ್ಟು, ಹೋಟೆಲ್ ಗೇ ಮರಳಿ ಆತ್ಮಹತ್ಯೆ ಮಾಡಿಕೊಂಡಾಗಿತ್ತು.

Leave a Reply