ಗಣಪತಿ ಸಹೋದರ ಮತ್ತು ಪತ್ನಿಯ ಮಾತುಗಳಲ್ಲಿ ಮತ್ತಷ್ಟು ಬಣ್ಣಗೆಡುತ್ತಿದೆ ಭಂಡ ಸರ್ಕಾರದ ಮುಖ

ಡಿಜಿಟಲ್ ಕನ್ನಡ ಟೀಮ್ :

ಅತ್ತ ಗೃಹ ಸಚಿವ ಪರಮೇಶ್ವರ್ ಅವರು ಗಣಪತಿ ತಂದೆ ಮತ್ತು ಸಹೋದರರ ದೂರಿನ ಪ್ರಕಾರ ಕೌಟುಂಬಿಕ ಒತ್ತಡವೇ ಸಾವಿಗೆ ಕಾರಣವಾಗಿದ್ದಿರಬಹುದು ಎಂಬ ಸಂಶಯ ತೇಲಿಬಿಡುತ್ತಿದ್ದರೆ, ಇತ್ತ ಮೃತ ಡಿವೈಎಸ್ಪಿ ಗಣಪತಿ ಅವರ ಸಹೋದರ ಎಂ. ಮಾಚಯ್ಯ, ಸೋಮವಾರ ನ್ಯಾಯ ಕೇಳಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಅಲ್ಲಿಗೆ ಸರ್ಕಾರ ಪ್ರತಿಪಾದಿಸುವುದಕ್ಕೂ ಮೃತರ ಕುಟುಂಬ ಹೇಳುತ್ತಿರುವುದಕ್ಕೂ ನಿಖರ ವ್ಯತ್ಯಾಸಗಳಿರುವುದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಮೂವರು ಪ್ರಭಾವಿ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಇರುವುದನ್ನೂ ಗಮನಿಸಿ ಎಫ್ ಐ ಆರ್ ದಾಖಲಿಸಬೇಕು ಎನ್ನುವುದೇ ದೂರಿನ ಪ್ರಮುಖಾಂಶ.

‘ಭಾನುವಾರ ರಾತ್ರಿ ಪೊಲೀಸರಿಗೆ ಸಲ್ಲಿಸಿದ ದೂರೇ ನಿಜವಾದದ್ದು. ಏಕೆಂದರೆ ಈ ಹಿಂದೆ ಪೊಲೀಸರು ಏನೇ ಬರೆದುಕೊಂಡಿದ್ದರೂ ಅದನ್ನು ದೂರು ಅಂತ ಪರಿಗಣಿಸುವುದು ಸರಿಯೇ? ಏಕೆಂದರೆ ನಾವೆಲ್ಲ ತುಂಬ ಶಾಕ್’ನಲ್ಲಿ ಇದ್ದ ಸಂದರ್ಭವದು. ನನ್ನ ಅಪ್ಪ ಹೇಳಿದ್ದನ್ನೆಲ್ಲ ಪೊಲೀಸರು ಬರೆದುಕೊಂಡು ಸಹಿ ಹಾಕಿಸಿಕೊಂಡರು. ಆದರೆ ಅಪ್ಪನಿಗೆ ಅವರೇನು ಹೇಳಿದ್ದಾರೆ ಅಂತ ಅವರಿಗೇ ಗೊತ್ತಿಲ್ಲದ ಆಘಾತಕಾರಿ ಸನ್ನಿವೇಶದಲ್ಲಿದ್ದರು. ಇದನ್ನೇ ದೂರು ಎಂದು ದಾಖಲಿಸಿಕೊಳ್ಳುವುದು ನ್ಯಾಯವೇ?’

‘ಶಾಕ್’ನಿಂದ ಹೊರಬಂದು ನಾವು ದೂರು ಕೊಟ್ಟಿದ್ದು ನಿನ್ನೆಯೇ ಪೊಲೀಸ್ ಠಾಣೆಯಲ್ಲಿ. ಆದರೆ ಅಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ದೂರನ್ನು ಪಡೆದರೂ ಸಹ ಅದನ್ನು ಸಿಒಡಿಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಅದರಿಂದೇನು ಪ್ರಯೋಜನ? ಸಿಒಡಿ ಮೇಲೆ ನಂಬಿಕೆ ಇಲ್ಲ ಎಂದಲ್ಲ. ಆದರೆ ಈ ಮೂವರ ವಿರುದ್ಧ ಎಫ್ ಐ ಆರ್ ದಾಖಲಿಗೆ ಒಪ್ಪುತ್ತಿಲ್ಲ. ಹೀಗಿರುವಾಗ ಸಿಬಿಐ ಅಲ್ಲದೇ ಬೇರೆ ಯಾರಿಂದಲೂ ನ್ಯಾಯ ಸಿಗುವುದು ಸಾಧ್ಯವಿಲ್ಲ.’ ಎಂದು ಮಾಚಯ್ಯ ಹೇಳಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಎಸ್ಪಿ ಇಲ್ಲದಿದ್ದದ್ದು, ಪ್ರತಿಭಟನಾರ್ಥವಾಗಿ ಜನ ಸೇರಿದ ನಂತರವಷ್ಟೇ ಸಮಾಧಾನಕ್ಕೆ ಮುಂದಾಗಿದ್ದನ್ನೂ ಮಾಚಯ್ಯ ನೆನೆದರು. ಅಲ್ಲದೇ ಮಾಚಯ್ಯ ಪ್ರಸ್ತಾಪಿಸಿರುವ ಇನ್ನೊಂದು ಬಹುಮುಖ್ಯ ಅಂಶ- ಗಣಪತಿಯವರದ್ದು ಆತ್ಮಹತ್ಯೆಯೇ ಹೌದೇ ಎಂಬ ಕುರಿತೇ ಅವರಿಗೆ ಅನುಮಾನಗಳಿವೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಎರಡು ಬಾರಿ ಹಾಸಿಗೆಗೆ ಗುಂಡು ಹಾಕಿದ್ದೇಕೆ? ಆ ಲಾಡ್ಜಿನಲ್ಲಿ ಅವರು ನೇಣು ಹಾಕಿಕೊಂಡ ರೂಮಿನಲ್ಲಿ ದೊಡ್ಡ ಕಿಟಕಿ ಇದ್ದು, ಯಾರಾದರೂ ಪ್ರವೇಶಿಸಬಹುದಾದ ಸಾಧ್ಯತೆ ಇದೆ. ನನ್ನೊಂದಿಗೆ ಬೆಳೆದ ಗಣಪತಿ ಬಗ್ಗೆ ನನಗನಿಸುವುದೇನೆಂದರೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಅನ್ನೋದು ಮಾಚಯ್ಯ ಪ್ರತಿಪಾದನೆ.

ಗಣಪತಿಯವರಿಗೆ ನ್ಯಾಯ ಕೊಡಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಾಗುತ್ತಿರುವ ಇಂಥ ಶೋಷಣೆ, ಅನಪೇಕ್ಷಿತ ಪ್ರಕರಣಗಳೆಲ್ಲ ಕೊನೆಗೊಳ್ಳಲಿ ಎಂದು ಹೇಳುತ್ತಿದ್ದಾರೆ ಮಾಚಯ್ಯ.

ಇನ್ನೊಂದು ಹಂತದಲ್ಲಿ, ಸರ್ಕಾರವು ಕೌಟುಂಬಿಕ ಸಮಸ್ಯೆ ಎಂದು ಮೃತ ಗಣಪತಿ ಪತ್ನಿಯತ್ತ ಬೊಟ್ಟು ತೋರಿ ಬಚಾವಾಗಲು ಯತ್ನಿಸುತ್ತಿದೆ. ಈ ಬಗ್ಗೆ ಟಿವಿ9 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಣಪತಿಯವರ ಪತ್ನಿ ಹೀಗೆ ಹೇಳಿದ್ದಾರೆ-

ನನ್ನ ಪತಿ ಸಾವಿನ ಬಗ್ಗೆ ರಾತ್ರಿಯವರೆಗೂ ನನಗೆ ಯಾರೂ ಮಾಹಿತಿ ನೀಡಿರಲಿಲ್ಲ. ನನ್ನ ಸೋದರ ಸಂಬಂಧಿ ಕರೆ ಮಾಡಿ ಹೇಳಿದಾಗಲೇ ನನಗೆ ವಿಷಯ ತಿಳಿಯಿತು. ಅವರಿಗೂ (ಗಣಪತಿ) 2008ರ ಚರ್ಚ್ ಮೇಲಿನ ದಾಳಿಗೂ ಯಾವುದೇ ಸಂಬಂಧ ಇರಲಿಲ್ಲ. ಆದರೂ ಅವರನ್ನು ಸಿಲುಕಿಸಲಾಗಿತ್ತು. ತಪ್ಪು ತಿಳುವಳಿಕೆಯಿಂದ ಅವರ ಪೊಸ್ಟಿಂಗ್ ಗೆ ಸಂಬಂಧಿಸಿದಂತೆ ತಕರಾರು ತೆಗೆಯಲಾಗಿತ್ತು. ಇನ್ನು ಎನ್ ಕೌಂಟರ್ ಪ್ರಕರಣದಲ್ಲಿ ಅವರನ್ನು ಸಿಲುಕಿಸಿದ ನಂತರ ಅವರು ತೀವ್ರ ಒತ್ತಡಕ್ಕೆ ಸಿಲುಕಿದ್ರು. ‘ನಾನು ನಿಜವಾಗಿಯೂ ಎನ್ ಕೌಂಟರ್ ಮಾಡಿದ್ರು, ಅದನ್ನು ನಕಲಿ ಎಂದು ನನ್ನ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ’ ಅಂತಾ ನನ್ನ ಬಳಿ ಹೇಳಿಕೊಂಡಿದ್ದರು. ಅಲ್ಲದೆ ಯಾವ ರೀತಿ ತನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ ಅಂತಾ ನನಗೆ ಮತ್ತು ಮಕ್ಕಳಿಗೆ ವಿವರಿಸುತ್ತಿದ್ರು. ಈ ಎಲ್ಲದರಿಂದ ಅವರು ತೀವ್ರ ಬೇಸರಕ್ಕೆ ಒಳಗಾಗಿದ್ರು. ಎರಡು ತಿಂಗಳ ಹಿಂದೆ ಅವರಿಗೆ ಪ್ರಮೋಷನ್ ಸಿಕ್ಕರೂ ಸಹ ಅವರಿಗೆ ನೆಮ್ಮದಿ ಇರಲಿಲ್ಲ. ಕೆಲಸದಲ್ಲಿ ತೀವ್ರವಾದ ಒತ್ತಡ ಅವರ ಮೇಲಿತ್ತು.

ಇನ್ನು ಶವ ಪರೀಕ್ಷೆ ಸಮಯದಲ್ಲಿ ನಾನು ಆಸ್ಪತ್ರೆಗೆ ತೆರಳಿದ್ದೆ. ಆಗ ಪೊಲೀಸರು ನನ್ನ ಬಳಿ ಈ ಎಲ್ಲ ಮಾಹಿತಿಗಳನ್ನು ಸ್ವೀಕರಿಸಿದ್ರು. ಆದರೆ ಈಗ ನಾನು ಯಾವುದೇ ಹೇಳಿಕೆ ನೀಡಿಲ್ಲ ಅಂತಾ ಹೇಳ್ತಿದ್ದಾರೆ.

Leave a Reply