ವಿಧಾನ ಮಂಡಲದಲ್ಲೂ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸರಕಾರದ ಯತ್ನ, ಪ್ರತಿಪಕ್ಷಗಳ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸಿದ್ದರಾಮಯ್ಯನವರ ಸರಕಾರ ಸೋಮವಾರ ಆರಂಭವಾದ ವಿಧಾನ ಮಂಡಲ ಅಧಿವೇಶನವನ್ನೂ ವೇದಿಕೆ ಮಾಡಿಕೊಂಡಿತು. ಆದರೆ ಇದನ್ನು ಪ್ರತಿಭಟಿಸಿದ ಪ್ರತಿಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿದ್ದರಿಂದ ಉಭಯ ಸದನಗಳು ಗೌಜು-ಗದ್ದಲ, ವಾದ-ವಾಗ್ವಾದ, ಧರಣಿಗೆ ಸಾಕ್ಷಿಯಾದವು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಗಣಪತಿ ಆತ್ಮಹತ್ಯೆ ಕುರಿತು ನಿಲುವಳಿ ಸೂಚನೆ ಮಂಡನೆ ಪ್ರಸ್ತಾಪಕ್ಕೆ ಮುಂದಾದಾಗ ಗೃಹ ಸಚಿವ ಪರಮೇಶ್ವರ್ ಪ್ರಕರಣ ಕುರಿತು ಸ್ವಯಂ ಹೇಳಿಕೆ ನೀಡಲು ಮುಂದಾದದ್ದು ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿತು. ಚರ್ಚೆ ಆರಂಭಕ್ಕೆ ಮೊದಲೇ ಕೌಟುಂಬಿಕ ಸಮಸ್ಯೆಯಿಂದ, ಪತ್ನಿ ಕಿರುಕುಳದಿಂದ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಹೇಳಿಬಿಡುವ ಧಾವಂತ ಅವರದಾಗಿತ್ತು. ಗಣಪತಿ ಸಹೋದರ ತಮ್ಮಯ್ಯ, ತಂದೆ ಕುಶಾಲಪ್ಪ ಅವರ ಹೇಳಿಕೆ ಮುಂದಿಟ್ಟು ಗಣಪತಿ ಅವರ ಪತ್ನಿ ಪಾವನಾ ಅವರ ಮೇಲೆ ಗೂಬೆ ಕೂರಿಸುವುದು ಸ್ವಯಂ ಹೇಳಿಕೆ ಹಿಂದಿನ ಉದ್ದೇಶವಾಗಿತ್ತು. ಪ್ರತಿಪಕ್ಷ ಧರಣಿ ನಡುವೆಯೂ ಎರಡು ಪುಟಗಳ ಹೇಳಿಕೆಯನ್ನು ಓದಿ ಮುಗಿಸಿದ ಪರಮೇಶ್ವರ್ ಗೆ ಯಾವುದೋ ಒತ್ತಡ ನಿವಾರಿಸಿಕೊಳ್ಳುವ ಹಪಾಹಪಿ ಇತ್ತು.

ತನಿಖೆ ವಿಚಾರಕ್ಕೆ ಬರುವುದಾದರೆ ಇದೊಂದು ಅಸ್ವಾಭಾವಿಕ ಸಾವು ಎಂದು ಸಿಆರ್ ಪಿಸಿ ಕಾಲಂ 174 ರಡಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಪತಿ ಕರ್ತವ್ಯ ಸಂಬಂಧಿ ಒತ್ತಡದಲ್ಲಿದ್ದಾರೆ ಎಂದು ಪಾವನಾ ಅವರು ಹೇಳಿರುವ ಹಿನ್ನೆಲೆಯಲ್ಲಿ 174 ಕಲಮಿನಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಸಂದರ್ಭ ಇದೊಂದು ಶಿಕ್ಷಾರ್ಹ ಅಪರಾಧ ಎಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಕಲಂ 154 ರ ಅಡಿ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಗಣಪತಿ ಪತ್ನಿ, ಪುತ್ರನ ದೂರನ್ನೂ ಅವರಿಗೆ ವರ್ಗಾಯಿಸಲಾಗುವುದು ಎಂದು ವಿವರಿಸಿದರು.

ಆದರೆ ಇದನ್ನು ಒಪ್ಪದ ಪ್ರತಿಪಕ್ಷಗಳು ಪರಮೇಶ್ವರ್ ಧಾವಂತದಲ್ಲಿ ಪ್ರಕರಣ ಮುಚ್ಚಿಹಾಕುವುದರ ಹುನ್ನಾರ ಅರಸಿದವು. ಧರಣಿಗೆ ಇಳಿದವು. ವಿಧಾನಸಭಾಧ್ಯಕ್ಷರಾದ ಕೆ.ಬಿ. ಕೋಳಿವಾಡ ಅವರು ಮೇಲಿಂದ ಮೇಲೆ ಮಾಡಿಕೊಂಡ ಮನವಿ ಹಾಗೂ ನಿಯಮ 69 ರ ಅಡಿ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ ನಂತರ ಧರಣಿ ಕೈಬಿಟ್ಟವು.

ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೊಡಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಮೊಬೈಲ್ ಮೆಸೇಜ್, ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡ ಯುವ ದಂಪತಿಯೇ ಯವತಿಯ ತಂದೆ-ತಾಯಿ ಆತ್ಮಹತ್ಯೆಗೆ ಕಾರಣ ಎಂದು ಅವರ ವಿರುದ್ಧ ಕೇಸು ದಾಖಲಿಸಿದ ಸರಕಾರಕ್ಕೆ ಇಲ್ಲಿ ಸ್ಪಷ್ಟವಾಗಿ ಗಣಪತಿ ಅವರೇ ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದರೂ ಜಾರ್ಜ್, ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದು ಪಕ್ಷಪಾತ ಮತ್ತು ಅನ್ಯಾಯದ ಪರಮಾವಧಿಯದ್ದಾಗಿದೆ. ಆತ್ಮಹತ್ಯೆ ನಡೆದ ಸ್ಥಳದಲ್ಲಿ ಮ್ಯಾಜಿಸ್ಟ್ರೇಟ್ ಅವರಿಂದ ಪಂಚನಾಮೆ ಮಾಡಿಸುವ ಬದಲು ಪೊಲೀಸ್ ಅಧಿಕಾರಿಗಳನ್ನು ಬಳಸಿ, ಸಾಕ್ಷ್ಯ ನಾಶ ಮಾಡಲಾಗಿದೆ. ಮರಣಪೂರ್ವ ಲಿಖಿತ ಹೇಳಿಕೆ, ಎರಡು ಪೆನ್ ಡ್ರೈವ್ ಗಳು ಸ್ಥಳದಿಂದ ಮಾಯವಾಗಿವೆ. ಈ ಎಲ್ಲದರ ಹಿಂದೆ ಪ್ರಕರಣ ಮುಚ್ಚಿಹಾಕುವ ವ್ಯವಸ್ಥಿತ ಕುತಂತ್ರ ಅಡಗಿದೆ ಎಂದು ದೂರಿದರು.

ಗಣಪತಿ ಸ್ಪಷ್ಟವಾಗಿ ಹೆಸರಿಸಿರುವ ಸಚಿವ ಜಾರ್ಜ್, ಎ.ಎಂ. ಪ್ರಸಾದ್, ಪ್ರಣವ್ ಮೊಹಾಂತಿ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಾರ್ಜ್ ನನ್ನ ಹೆಸರು ಪ್ರಸ್ತಾಪಿಸುವ ಮುನ್ನ ನೋಟಿಸ್ ನೀಡಬೇಕು ಎಂದದ್ದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಕೆರಳಿಸಿತು. ಇಷ್ಟೊತ್ತಿಗೆ ಜಾರ್ಜ್ ಜೈಲಲ್ಲಿ ಇರಬೇಕಿತ್ತು. ಅಂತವರ ಹೆಸರೇಳಲು ನೋಟಿಸ್ ಬೇರೆ ಕೇಡು ಎಂದದ್ದು ಜಾರ್ಜ್ ಅವರನ್ನು ಕೆರಳಿಸಿತು. ನಿಮ್ಮ ಬಳಿ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದಾಗ ಅಪ್ಪಚ್ಚು ರಂಜನ್, ಸಿಡಿ ಪ್ರದರ್ಶನ ಮಾಡಿ, ಇದರಲ್ಲಿ ಎಲ್ಲಾ ಇದೆ. ಸದನದಲ್ಲೇ ಪ್ರದರ್ಶನ ಮಾಡಿ, ಎಲ್ಲ ಸದಸ್ಯರು ವೀಕ್ಷಿಸಲಿ . . ಸಿಡಿ ಪ್ರದರ್ಶನ ಮಾಡೋಣ ಎಂದು ಮನವಿ ಮಾಡಿದರು. ಆಗ ನಿಮ್ಮ ಮೇಲೂ ಕ್ರಿಮಿನಲ್ ಕೇಸ್ ಇದೆ ಎಂದ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಏಕವಚನ ಬೈಗುಳ ವಿನಿಮಯ ಆಯಿತು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಆರ್.ಆಶೋಕ್, ತನಿಖೆ ಕಲಮುಗಳನ್ನೇ ಬದಲಿಸಿ ಪ್ರಕರಣ ಹಳ್ಳ ಹಿಡಿಸುವ ಕೆಲಸ ನಡೆದಿದೆ. ಗಣಪತಿ ಆರೋಗ್ಯ ಸ್ಥಿರವಾಗಿತ್ತು, ಅವರು ಫಿಟ್ ಇದ್ದರು ಎಂಬುದು ಸರಕಾರದ ಬಳಿ ಇರುವ ಸೇವಾ ದಾಖಲೆಯಿಂದ ರುಜುವಾತಾಗಿದೆ. ಗುಪ್ತದಳದ ಡಿಸಿಪಿಯವರು ಅವರ ಪ್ರತಿಯೊಂದು ನಡವಳಿಕೆಗಳನ್ನು ಶ್ಲಾಘಿಸಿದ್ದಾರೆ. ಕಮೀಷನರ್ ಆಗಿದ್ದ ಬಿ.ಎನ್.ಎಸ್.ರೆಡ್ಡಿ ಕೂಡ ಪ್ರಶಂಸಿದ್ದಾರೆ. ಆದರೂ ಗಣಪತಿ ಒಬ್ಬ ಹುಚ್ಚ ಎಂಬಂತೆ ಪ್ರತಿಬಿಂಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಜತೆಗೆ ಸಾಕ್ಷ್ಯಗಳನ್ನು ನಾಶಪಡಿಸುವ ಕೆಲಸ ನಡೆದಿದೆ
ಎಂದರು. ಇದಕ್ಕೆ ಧ್ವನಿಗೂಡಿಸಿದ ಸಿ.ಟಿ. ರವಿ, ಗಣಪತಿ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದೇ ಇಟ್ಟುಕೊಳ್ಳಿ. ಅವರೇಕೆ ಸಿಎಂ ಹೆಸರು ಹೇಳಲಿಲ್ಲ, ರಮಾನಾಥ ರೈ ಹೆಸರು ಹೇಳಲಿಲ್ಲ. ಜಾರ್ಜ್ ಹೆಸರನ್ನೇ ಏಕೆ ಹೇಳಿದರು. ಹಾಗಾದರೆ ಖಿನ್ನತೆ ಅವರಿಂದಲೇ ಬಂದಿತ್ತು ಎಂದರ್ಥವಲ್ಲವೇ ಎಂದು ಪ್ರಶ್ನಿಸಿದಾಗ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಸುಮ್ಮನಾಗಿಸಿದರು.

ಮತ್ತೆ ಮಾತು ಮುಂದವರಿಸಿದ ಶೆಟ್ಟರ್, ಗಣಪತಿ ಅವರು ನೇರವಾಗಿ ಟಿವಿ ಜತೆ ಮಾತನಾಡಿ ತಾವು ಆತ್ಮಹತ್ಯೆ ಮಾಡಿಕೊಳ್ಳಲು ಯಾರು ಕಾರಣ ಎಂದು ನೇರವಾಗಿ ಹೇಳಿದ್ದಾರೆ. ಆದರೆ ಸರಕಾರ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಲು ತಯಾರಿಲ್ಲ. ಜಾರ್ಜ್ ಮೇಲೆ ಸಿಎಂಗೆ ಅದೇನು ಪ್ರೀತಿಯೋ. ಈ ಸರ್ಕಾರ ನಡೆಯುತ್ತಿರುವುದೇ ಅವರಿಂದ ಎಂಬ ಭಾವ ಪ್ರತಿಬಿಂಬಿತವಾಗುತ್ತಿದೆ. ಹೀಗಾಗಿ ಸಂಪುಟ ಪುನಾರಚನೆಯಾಗಿ  ಡಜನ್‍ಗೂ ಹೆಚ್ಚು ಮಂತ್ರಿಗಳನ್ನು ಕೈ ಬಿಟ್ಟರೂ ಜಾರ್ಜ್ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ದೂರಿದರು.

ಇಡೀ ಪ್ರಕರಣವನ್ನು ಗಮನಿಸಿದರೆ ಸರ್ಕಾರ ತರಾತುರಿಯಿಂದ ಇದನ್ನು ಮುಚ್ಚಿ ಹಾಕಲು ಹೊರಟಿದೆ ಎಂದು ಭಾಸವಾಗುತ್ತದೆ.ಹೀಗಾಗಿ ಇಡೀ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

ವಿಧಾನ ಪರಿಷತ್ತಿನಲ್ಲೂ ಆಕ್ರೋಶ

ಸಚಿವ ಜಾರ್ಜ್ ರಾಜೀನಾಮೆ ಪಡೆಯಬೇಕು. ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಈಶ್ವರಪ್ಪ ಮೇಲ್ಮನೆಯಲ್ಲಿ ಆಗ್ರಹಿಸಿದರು.

ಕಲಾಪ ಆರಂಭಗೊಳ್ಳುತ್ತಿದ್ದಂತೆ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿ, ಮಾತನಾಡಿದ ಅವರು ರಾಜ್ಯದಲ್ಲಿ ಜನಸಾಮಾನ್ಯರ ಎದೆ ಝಲ್ ಎನ್ನುವಂತಹ ಘಟನೆಗಳು ನಡೆಯುತ್ತಿವೆ. ಶ್ರೀಸಾಮಾನ್ಯರ ರಕ್ಷಣೆ ಮಾಡುವ ಪೊಲೀಸರಿಗೆ ರಕ್ಷಣೆ ಇಲ್ಲ. ಒಬ್ಬರಾದ ಮೇಲೆ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ಮೇಲೆ ಸಿಎಂ ಆಪ್ತ ಮರಿಗೌಡ ಧಮಕಿ ಹಾಕಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದ್ದರೂ ಅವರನ್ನು ಬಂಧಿಸಿಲ್ಲ. ಜಿಲ್ಲಾಧಿಕಾರಿಗೇ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರಿಗೆ ಮತ್ತೆಲ್ಲಿಂದ ಸಿಗುತ್ತದೆ ಎಂದು ಪ್ರಶ್ನಿಸಿದರು.

ಆತ್ಮಹತ್ಯೆಗೆ ಮುನ್ನ ಗಣಪತಿ ಹೇಳಿಕೆ ಕೊಟ್ಟಿದ್ದರೂ, ಅವರ ಪತ್ನಿ-ಪುತ್ರ ದೂರು ನೀಡಿದ್ದರೂ ಈವರೆಗೆ ಸಚಿವರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ. ಒಬ್ಬ ವ್ಯಕ್ತಿ ಸಾವಿಗೆ ಮೊದಲು ನೀಡುವ ಹೇಳಿಕೆ ಆಧರಿಸಿ ದೂರು ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ, ಯಾರ ವಿರುದ್ದವೂ ದೂರು ದಾಖಲಿಸಿಲ್ಲ. ಸರ್ಕಾರ ಬದುಕಿದೆಯೇ ಎಂಬ ಅನುಮಾನ ಕಾಡುತ್ತಿದೆ. ಗಣಪತಿ  ರೌಡಿಗಳಿಗೆ ಸಿಂಹಸ್ವಪ್ನರಾಗಿದ್ದರು. ಗಂಡುಗಲಿಗಳ ನಾಡು ಕೊಡಗಲ್ಲಿ ಹುಟ್ಟಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ಅವರ ಮನಸ್ಸಿಗೆ ಎಷ್ಟು ನೋವಾಗಿರಬೇಡ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಜಾರ್ಜ್ ಕೈವಾಡವಿಲ್ಲ ಎಂದು ಗೃಹ ಸಚಿವರು ಸರ್ಟಿಫಿಕೆಟ್ ಕೊಡುತ್ತಾರೆ. ಆತ್ಮಹತ್ಯೆಗೆ ಬೇರೆ ಕಾರಣಗಳನ್ನು ಮುಖ್ಯಮಂತ್ರಿ ಹುಡುಕುತ್ತಾರೆ. ಅವರ ಸರ್ಕಾರ ತಪ್ಪಿತಸ್ಥರ ಬೆಂಬಲಕ್ಕೆ ನಿಂತಿದೆ. ಹೀಗಿರುವಾಗ ಗಣಪತಿ ಕುಟುಂಬಕ್ಕೆ ನ್ಯಾಯ ಎಲ್ಲಿಂದ ಸಿಗಬೇಕು ಎಂದು ಕೇಳಿದರು.

ಈ ಸಂದರ್ಭದಲ್ಲಿ ಸದನಕ್ಕೆ ಆಗಮಿಸಿದ ಗೃಹ ಸಚಿವರೂ ಆದ ಸಭಾನಾಯಕ ಜಿ.ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಮಾಡಿದಂತೆ ಘಟನೆ ಕುರಿತು ಹೇಳಿಕೆ ನೀಡಲು ಮುಂದಾದರು. ಇದಕ್ಕೆ ಪ್ರತಿಪಕ್ಷಗಳು ಆಸ್ಪದ ನೀಡಲಿಲ್ಲ. ಈಗಾಗಲೇ ನಿಲುವಳಿ ಪ್ರಸ್ತಾಪ ಮಂಡಿಸಲಾಗಿದೆ. ಚರ್ಚೆ ನಂತರ ಹೇಳಿಕೆ ನೀಡಲಿ ಎಂದಾಗ ಪರಮೇಶ್ವರ್ ಸುಮ್ಮನಾದರು.

Leave a Reply